ನವದೆಹಲಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿ ಹಲವು ದಿನಗಳೇ ಕಳೆದಿವೆ. ಆದರೆ, ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಯಾರೆಂದು ಇನ್ನೂ ಸ್ಪಷ್ಟವಾಗಿಲ್ಲ. ಇದರ ನಡುವೆ ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್ ಹಾಗೂ ಶಿವ ಸೇನಾ ನಾಯಕ ಏಕನಾಥ್ ಶಿಂಧೆ (Eknath Shinde) ಅವರು ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಸರತ್ತು ನಡೆಸುತ್ತಿದ್ದಾರೆ. ಇದರ ನಡುವೆ ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯಾವುದೇ ತೀರ್ಮಾನ ತೆಗೆದುಕೊಂಡು ತಾನು ಬದ್ಧನಾಗಿದ್ದೇನೆಂದು ಶಿವ ಸೇನಾ ನಾಯಕ ಏಕನಾಥ್ ಶಿಂಧೆ ತಿಳಿಸಿದ್ದಾರೆ.
ಮುಂಬೈನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪಿಎಂ ಮೋದಿ ನಮ್ಮ ಕುಟುಂಬಕ್ಕೆ ಯಜಮಾನರಾಗಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯನ್ನು ನೇಮಕ ಮಾಡುವ ವಿಚಾರದಲ್ಲಿ ನಾನು ಯಾವುದೇ ರೀತಿಯಲ್ಲಿ ಅಡ್ಡಿಯಾಗುವುದಿಲ್ಲ. ವರಿಷ್ಠರು ಯಾವುದೇ ತೀರ್ಮಾನ ತೆಗೆದುಕೊಂಡರೂ ನಾನು ಅದಕ್ಕೆ ಬದ್ದನಾಗಿದ್ದೇನೆಂದು ಅವರು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ನೂತನ ಸರ್ಕಾರಕ್ಕೆ ದಿನಗಣನೆ…
“ಮಹಾರಾಷ್ಟ್ರದಲ್ಲಿ ಸರ್ಕಾರವನ್ನು ರಚಿಸಲು ನನ್ನಿಂದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಅನುಮಾನ ಬೇಡ. ನೀವು ಯಾವುದೇ ತೀರ್ಮಾನ ತೆಗೆದುಕೊಂಡರೂ ನಾನು ಅದನ್ನು ಸ್ವೀಕರಿಸುತ್ತೇನೆ. ನಮ್ಮ ಕುಟುಂಬಕ್ಕೆ ನೀವೇ ಯಜಮಾನರು,” ಎಂದು ಪಿಎಂ ಮೋದಿಗೆ ಏಕನಾಥ್ ಶಿಂಧೆ ಮನವಿ ಮಾಡಿದ್ದಾರೆ.
“ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ನನ್ನಿಂದ ಆಡಚಣೆಯಾಗುತ್ತಿದೆ ಎಂಬ ನಿಟ್ಟಿನಲ್ಲಿ ನೀವು ನನ್ನನ್ನು ನೋಡಬೇಡಿ ಎಂದು ಈಗಾಗಲೇ ಪ್ರಧಾನಿ ಮೋದಿ ಹಾಗೂ ಅಮಿತ್ ಶಾಗೆ ತಿಳಿಸಿದ್ದೇನೆ. ನೀವು ಯಾವುದೇ ನಿರ್ಧಾರ ತೆಗೆದುಕೊಂಡರೂ ನಾನು ಅದರ ಪರ ನಿಲ್ಲುತ್ತೇನೆ,” ಎಂದು ಶಿವ ಸೇನಾ ನಾಯಕ ಹೇಳಿದ್ದಾರೆ.
ನಾನು ಬಡ ಕುಟುಂಬದಿಂದ ಬಂದಿದ್ದೇನೆ: ಏಕನಾಥ್ ಶಿಂಧೆ
“ನಾನು ಅಧಿಕಾರಲ್ಲಿ ಇದ್ದರೆ ಸಾರ್ವಜನಿಕರಿಗಾಗಿ ಉತ್ತಮ ಆಡಳಿತ ನೀಡುತ್ತೇನೆ ಹಾಗೂ ಉತ್ತಮ ಸೇವೆಯನ್ನು ಸಲ್ಲಿಸುತ್ತೇನೆ. ಸಮಾಜಕ್ಕೆ ಏನಾದರೂ ಹಿಂತಿರುಗಿಸುತ್ತೇನೆ. ಏಕೆಂದರೆ ನಾನು ಕೂಡ ಬಡ ಕುಟುಂಬದಿಂದ ಬಂದವನು. ರಾಜ್ಯದ ಜನರ ಕಷ್ಟ ಹಾಗೂ ಅವರ ನೋವು ನನಗೂ ಕೂಡ ಅರ್ಥವಾಗುತ್ತದೆ,” ಎಂದು ಏಕನಾಥ ಶಿಂಧೆ ತಿಳಿಸಿದ್ದಾರೆ.
G Parameshwara: ಮಹಾರಾಷ್ಟ್ರ ಸರ್ಕಾರದ ವಿರುದ್ಧ ಮಾನನಷ್ಟ ಮೊಕದ್ದಮೆ: ಸಚಿವ ಪರಮೇಶ್ವರ್
“ಕಳೆದ ಎರಡೂವರೆ ವರ್ಷಗಳಿಂದ ನಾನು ಮಾಡಿರುವ ಕೆಲಸಗಳ ಬಗ್ಗೆ ನನಗೆ ತೃಪ್ತಿ ಇದೆ. ನಾನು ಅಸಮಾಧಾನಗೊಳ್ಳುವ ವ್ಯಕ್ತಿಯಲ್ಲ, ಜನರಿಗಾಗಿ ಹಾಗೂ ಅವರ ಒಳತಿಗಾಗಿ ಸದಾ ಹೋರಾಟ ಮಾಡುವ ವ್ಯಕ್ತಿ. ನಾನು ಏನೇ ಕೆಲಸ ಮಾಡಿದರೂ ಮಹಾರಾಷ್ಟ್ರ ಜನರಿಗಾಗಿ ಮಾಡುತ್ತೇನೆ. ನನಗೆ ಏನು ಸಿಗುತ್ತದೆ ಎಂಬುದು ನನಗೆ ಮುಖ್ಯವಲ್ಲ, ನನ್ನಿಂದ ಜನರಿಗೆ ಏನು ಸಿಗುತ್ತದೆ ಎಂಬುದು ನನಗೆ ಮುಖ್ಯ,” ಎಂದು ಅವರು ಹೇಳಿದ್ದಾರೆ.