ಬಾಗೇಪಲ್ಲಿ: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು ಬದ್ಧವನು ಜೀವನ ಅನುಸರಿಸುವ ಮೂಲಕ ಆತ್ಮವಿಶ್ವಾಸವನ್ನ ಹೆಚ್ಚಿಸಿಕೊಳ್ಳ ಬಹುದು ಎಂದು ತಹಶೀಲ್ದಾರ್ ಮನಿಷಾ ಮಹೇಶ್ ಎಸ್.ಪತ್ರಿ ತಿಳಿಸಿದರು.
ಪಟ್ಟಣದ ಹೊರವಲಯದಲ್ಲಿನ ನಾರೇಪಲ್ಲಿ ಟೋಲ್ ಪ್ಲಾಜಾ ಸಮೀಪ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಅಂತರ ಕಾಲೇಜು ನಾಯಕತ್ವ ತರಭೇತಿ ಶಿಬಿರದ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮಕ್ಕೆ ಒತ್ತು ನೀಡಿ, ಗುರಿಯನ್ನು ತಲುಪಲು ನಿರಂತರ ಅಭ್ಯಾಸ ಮಾಡುವುದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನನ್ನಿಂದ ಇದು ಅಸಾಧ್ಯ ಎಂಬ ಋಣಾತ್ಮಕ ಯೋಚನೆಗಳನ್ನು ಮಾಡದೇ, ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಶಿಸ್ತನ್ನು ಮೈಗೂಡಿಸಿ ಕೊಳ್ಳಬೇಕು. ಹಾಗೇಯೆ ಯಶಸ್ಸು ಎಂಬುದು ಕೆಲವೊಮ್ಮೆ ತಡವಾಗಬಹುದು, ಹಲವು ಪ್ರಯತ್ನಗಳು ವಿಫಲವಾಗಬಹುದು. ಆದರೆ ನಂಬಿಕೆ ಕಳೆದುಕೊಳ್ಳಬಾರದು. ಪರಿಶ್ರಮ ಪಡುವುದನ್ನು ಮುಂದುವರೆಸಿದಾಗ ಖಂಡಿತ ಯಶಸ್ಸು ಸಿಗುತ್ತದೆ. ಈ ನಿಟ್ಟಿನಲ್ಲಿ ನೀವೆಲ್ಲ ಉತ್ತಮ ನಾಯಕತ್ವ ಪಡೆಯಲು ಪರಿಶ್ರಮ,ಆತ್ಮವಿಶ್ವಾಸಗಳಿಗೆ ಶಿಸ್ತುಬದ್ಧ ಬದುಕು ಮುಖ್ಯವಾಗಿದೆ ಎಂದು ತಿಳಿಸಿದರು.
ನಾಯಕತ್ವ ಗುಣಗಳಿಲ್ಲ
ಇದೇ ವೇಳೆ ಗುಡಿಬಂಡೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ನಯಾಜ್ ಅಹಮ್ಮದ್ ರವರು ಮಾತನಾಡಿ, ದೇಶ ದಲ್ಲಾಗಲಿ ಆಥವಾ ನಮ್ಮ ಸುತ್ತಮುತ್ತಲಾಗಲಿ, ಬಹಳಷ್ಟು ಮಂದಿ ನಾಯಕರು ಎಂದು ಕರೆಸಿಕೊಂಡವರಲ್ಲಿ ನಿಜವಾದ ನಾಯಕತ್ವದ ಗುಣಗಳಿಲ್ಲ. ನಾಯಕತ್ವವೆಂದರೆ ಮುಂದೆ ನಿಂತು ಹೋರಾಟಗಳು ಮಾಡುವುದಲ್ಲ, ಕೆಟ್ಟದನ್ನು ತೊಲಗಿಸಿ, ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಳತ್ವ ವಹಿಸುವುದಾಗಿದೆ. ಬುದ್ಧ,ಬಸವ,ಅಂಬೇಡ್ಕರ್ ರವರು ಸಮುದಾಯವನ್ನು ಉತ್ತಮ ಮಾರ್ಗದ ಕಡೆಗೆ ಕರೆದುಕೊಂಡು ಹೋಗಲು ಪರಿತಪಿಸಿ ದವರು. ಅಂತಹ ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಸುಸ್ಥಿರ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನೊಳಗೊಂಡ ನಾಯಕರಾಗಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ವೈ.ನಾರಾಯಣ, ಡಾ.ಸತ್ಯನಾರಾಯಣ ರೆಡ್ಡಿ,ಗುಡಿಬಂಡೆ ಪದವಿ ಕಾಲೇಜು ಪ್ರಾಂಶುಪಾಲರಾದ ಅಫ್ಜಲ್ ಬಿಜಲಿ,ಗ್ರಂಥಪಾಲಕರಾದ ವೆಂಕಟರಾಮ ರೆಡ್ಡಿ, ಪತ್ರಕರ್ತರಾದ ಪಿ.ಎಸ್. ರಾಜೇಶ್, ಹೆಚ್.ಆರ್.ನಾಗರಾಜು ಹಾಗೂ ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.