Wednesday, 27th November 2024

Physical Abuse: ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ; ಅಪರಾಧಿಗಳಿಗೆ 17 ವರ್ಷ ಜೈಲು ಶಿಕ್ಷೆ

Physical abuse

ತುಮಕೂರು: ಡ್ರಾಪ್‌ ಕೊಡುವ ನೆಪದಲ್ಲಿ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಹತ್ತಿಸಿಕೊಂಡು ಲೈಂಗಿಕ ದೌರ್ಜನ್ಯ (Physical Abuse) ಎಸಗಿದ್ದ ಅಪರಾಧಿಗಳಿಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಲೈಂಗಿಕ ದೌರ್ಜನ್ಯ ಸೇರಿ ವಿವಿಧ ಪ್ರಕರಣಗಳಲ್ಲಿ ತಲಾ 17 ವರ್ಷ ಶಿಕ್ಷೆ, 1.62 ಲಕ್ಷ ದಂಡ ವಿಧಿಸಿದೆ.

ಮಹಾಂತೇಶ, ಶ್ರೀನಿವಾಸ್‌ ಶಿಕ್ಷೆಗೆ‌ ಗುರಿಯಾದ ಅಪರಾಧಿಗಳು. ಜಿಲ್ಲೆಯ ಶಿರಾ ಪೊಲೀಸ್ ಠಾಣೆಯ ವ್ಯಾಪ್ತಿಯ ಭೂವನ ಹಳ್ಳಿ ಗೇಟ್ ಬಳಿ 2012ರ ಜುಲೈ 9ರಂದು ಕಾಲೇಜಿಗೆ ಹೋಗಲು ಬಸ್‌ಗಾಗಿ ಕಾಯುತ್ತಿದ್ದ ಮೂವರು ವಿದ್ಯಾರ್ಥಿನಿಯರನ್ನು ಅಪರಾಧಿಗಳು ಕಾರಿನಲ್ಲಿ ಹತ್ತಿಸಿಕೊಂಡಿದ್ದರು. ನಂತರ ಅಪಹರಿಸಿಕೊಂಡು ಹೋಗುವ ಉದ್ದೇಶದಿಂದ ಕಾರು ವೇಗವಾಗಿ ಓಡಿಸುತ್ತಿದ್ದರು. ವಿದ್ಯಾರ್ಥಿನಿಯರು ಜೋರಾಗಿ ಕೂಗಿಕೊಂಡಾಗ ಇಬ್ಬರನ್ನು ಕಾರಿನಿಂದ ಇಳಿಸಿ, ಮತ್ತೊಬ್ಬ ಬಾಲಕಿ ಜತೆ ಪರಾರಿಯಾಗಿದ್ದರು.

ಶಿರಾ ಸಮೀಪ ಕಾರು ನಿಲ್ಲಿಸಿ ವಿದ್ಯಾರ್ಥಿನಿ ಮೇಲೆ ಇಬ್ಬರು ಲೈಂಗಿಕ ದೌರ್ಜನ್ಯವೆಸಗಿದ್ದರು. ಇದನ್ನು ತಮ್ಮ ಮೊಬೈಲ್‌ನಲ್ಲಿ ವೀಡಿಯೊ ಮಾಡಿಕೊಂಡಿದ್ದರು. ಯಾರಿಗಾದರೂ ಹೇಳಿದರೆ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು.

ಈ ಘಟನೆಗೂ ಒಂದು ತಿಂಗಳು ಮುನ್ನ ಮಹಾಂತೇಶ್‌, ಶ್ರೀನಿವಾಸ್‌ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದರು. ಮಹಾಂತೇಶ್‌ ಬಾಲಕಿಯನ್ನು ಪ್ರೀತಿಯ ಹೆಸರಿನಲ್ಲಿ ಪುಸಲಾಯಿಸಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು. ಈ ವೇಳೆ ಇಬ್ಬರು ದೌರ್ಜನ್ಯ ನಡೆಸಿದ್ದರು. ಇದನ್ನು ಸಹ ವೀಡಿಯೊ ಮಾಡಿಕೊಂಡಿದ್ದರು. ಈ ಬಗ್ಗೆ ಶಿರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸರ್ಕಾರಿ ಅಭಿಯೋಜಕರಾದ ಕವಿತಾ ವಾದ ಮಂಡಿಸಿದ್ದರು.

ಈ ಸುದ್ದಿಯನ್ನೂ ಓದಿ | Bangladesh Unrest: ಬಾಂಗ್ಲಾದೇಶದಲ್ಲಿ ಹಿಂದೂ ಸಂತ ಚಿನ್ಮಯ್‌ ಕೃಷ್ಣ ದಾಸ್‌ ಅರೆಸ್ಟ್‌‌ ಆಗಿದ್ದೇಕೆ?

ದ್ವಿಚಕ್ರ ವಾಹನ ಕಳ್ಳರ ಬಂಧನ; 74 ಲಕ್ಷ ಮೌಲ್ಯದ 94 ಬೈಕ್ ವಶ

ತುಮಕೂರು : ಜಿಲ್ಲೆಯ ಪಾವಗಡ ಮತ್ತು ಶಿರಾ ನಗರ ಠಾಣೆ ಪೊಲೀಸರು ಮೂವರು, ಅಂತಾರಾಜ್ಯ ವಾಹನಗಳ್ಳರು ಸೇರಿ ಆರು ಮಂದಿಯನ್ನು ಬಂಧಿಸಿ, 74 ಲಕ್ಷ ಮೌಲ್ಯದ 94 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಆಂಧ್ರಪ್ರದೇಶ ರಾಜ್ಯದ ಮೂವರು ಕಳ್ಳರು ಪಾವಗಡ, ತುಮಕೂರು, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧೆಡೆ ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದ 42 ಲಕ್ಷ ಮೌಲ್ಯದ ಒಟ್ಟು 31 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಹರೀಶ್ (23), ಮನೋಹನರ್ (23) ಮತ್ತು ಸಾಯಿಪವನ್ (23) ಸೇರಿ ಮೂವರು ಬಂಧಿತರು.

ಶಿರಾ ಆಸ್ಪತ್ರೆ ಬಳಿ ಹಾಗೂ ವಾಹನ ನಿಲುಗಡೆ ಸ್ಥಳಗಳಲ್ಲಿ ನಿಲ್ಲಿಸಿದಂತಹ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಶಿರಾ ಠಾಣೆ ಪೊಲೀಸರು ಬಂಧಿಸಿ 32 ಲಕ್ಷ ಮೌಲ್ಯದ 63 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಶಿರಾ ತಾಲ್ಲೂಕಿನ ಪ್ರಸಾದ್ (30), ಆಂಧ್ರಪ್ರದೇಶದ ನವೀನ್‌ಕುಮಾರ್(29) ಮತ್ತು ನಾಗೇಶ್ವರ(35) ಬಂಧಿತರು. ತನಿಖಾ ತಂಡದ ಕಾರ್ಯವನ್ನು ಜಿಲ್ಲಾ ಎಸ್ಪಿ ಅಶೋಕ್ ಅವರು ಶ್ಲಾಘಿಸಿ ತಂಡಕ್ಕೆ ಸೂಕ್ತ ಬಹುಮಾನ ಘೋಷಿಸಿದ್ದಾರೆ.