Thursday, 28th November 2024

Vishwavani Editorial: ಜಾಲತಾಣಗಳ ನಿಯಂತ್ರಣ ಅಗತ್ಯ

ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯ ಪೋಸ್ಟ್‌ಗಳನ್ನು ತಡೆಯಲು ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಇನ್ನಷ್ಟು ಕಠಿಣಗೊಳಿಸುವ
ಅಗತ್ಯವಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಗೆ ತಿಳಿಸಿದ್ದಾರೆ. ಇದು ನಿಜಕ್ಕೂ ಜರೂರಿನ ವಿಚಾರ. ಸಾಮಾಜಿಕ ಮಾಧ್ಯಮ ಸಾಂಪ್ರದಾಯಿಕ ಮಾಧ್ಯಮಗಳಿಗಿಂತ ಭಿನ್ನ. ಇಲ್ಲಿನ ಸ್ವಾತಂತ್ರ್ಯ ಅನಿಯಂತ್ರಿತವಾಗಿದೆ.

ಇಲ್ಲಿ ಯಾರು ಬೇಕಾದರೂ ತಮಗೆ ತೋಚಿದ ಪೋಸ್ಟ್‌ಗಳನ್ನು ಹಾಕಬಹುದು. ಮೊಬೈಲ್ ಎಂಬ ಸಾಧನದ ಮೂಲಕ ಸಾಮಾಜಿಕ ಮಾಧ್ಯಮಗಳು ಪ್ರತಿಯೊಬ್ಬರನ್ನು ತಲುಪುತ್ತಿವೆ. ಇದನ್ನು ಸದುಪಯೋಗ ಪಡಿಸಿಕೊಂಡು ಯಾರು ಬೇಕಾದರೂ ಕ್ಷಣಾರ್ಧದಲ್ಲಿ ತಮ್ಮ ವಿಚಾರ, ಕೌಶಲ, ಪ್ರತಿಭೆಯನ್ನು ಜಗತ್ತಿಗೆ ತಿಳಿಸಲು ಸಾಧ್ಯ. ಆದರೆ ಕೆಲವರು ಈ ಮಾಧ್ಯಮವನ್ನು ದುರ್ಬಳಕೆ ಮಾಡಿಕೊಂಡು ಅಶ್ಲೀಲ, ಅಸಭ್ಯ ಮತ್ತು ಸಮಾಜಕ್ಕೆ ಮಾರಕವಾದ ಸಂದೇಶಗಳನ್ನು ಹರಡುತ್ತಿರು ವುದು ದುರದೃಷ್ಟ ಕರ. ಈ ನಿಟ್ಟಿನಲ್ಲಿ ಕೇಂದ್ರ ಸಚಿವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಅಸಭ್ಯ ಮತ್ತು ಲೈಂಗಿಕ ವಿಷಯಗಳ ಪ್ರಸಾರವನ್ನು ಪರಿಶೀಲಿಸಲು ಅಸ್ತಿತ್ವದಲ್ಲಿರುವ ಕಾನೂನುಗಳ ಕುರಿತು ಬಿಜೆಪಿ ಸದಸ್ಯ ಅರುಣ್ ಗೋವಿಲ್
ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಅಶ್ವಿನಿ ವೈಷ್ಣವ್, ಅಸ್ತಿತ್ವದಲ್ಲಿರುವ ಕಾನೂನು ಗಳನ್ನು ಇನ್ನಷ್ಟು ಕಠಿಣಗೊಳಿಸಲು ಸರಕಾರ ಉದ್ದೇಶಿಸಿದೆ
ಎಂದಿದ್ದಾರೆ. ಈ ತಿದ್ದುಪಡಿ ಕೇವಲ ಲೈಂಗಿಕ ವಿಷಯಗಳಿಗೆ ಸಂಬಂಧಿಸಿದ ಪೋಸ್ಟ್ ಮೇಲೆ ಸೀಮಿತವಾಗಬಾರದು. ಸಾಮಾಜಿಕ ಜಾಲತಾಣ ಬಳಸಿ ದೇಶದ್ರೋಹಿ ಕೃತ್ಯ ಗಳಿಗೆ ಪ್ರೇರಣೆ ನೀಡುವವರು, ಆನ್‌ಲೈನ್ ವಂಚನೆ ಎಸಗುವವರು, ಸುಳ್ಳು ಜಾಹೀರಾತು ನೀಡಿ ವಂಚಿಸುವವರ ವಿರುದ್ಧವೂ ಕ್ರಮ ತೆಗೆದುಕೊಳ್ಳ ಬೇಕಾಗಿದೆ.

ಸಾಮಾಜಿಕ ಮಾಧ್ಯಮಗಳನ್ನು ಬಳಸಿ ವಿಮಾನಯಾನ ಸಂಸ್ಥೆಗಳಿಗೆ ಹುಸಿ ಬಾಂಬ್ ಬೆದರಿಕೆ ಹಾಕುವ ಕೃತ್ಯಗಳು ವರದಿಯಾಗುತ್ತಿವೆ. ‘ಎಕ್ಸ್’, ಫೇಸ್‌ಬುಕ್‌ನಂಥ ಜಾಲತಾಣಗಳು ಇವುಗಳ ಮೂಲ ಪತ್ತೆ ಮಾಡು ವಲ್ಲಿ ಸರಕಾರ ದೊಂದಿಗೆ ಸ್ಪಂದಿಸಿಲ್ಲ. ಅಂತಾರಾಷ್ಟ್ರೀಯ ಸಂದೇಶವಾಹಕ ಜಾಲತಾಣಗಳು ನೆಲದ ಕಾನೂನಿಗೆ ಬದ್ಧರಾಗಿರಬೇಕು. ಈ ಸಂಬಂಧವೂ ಸ್ಪಷ್ಟ ನೀತಿ ಮತ್ತು ಕಾನೂನು ಅಗತ್ಯವಿದೆ.

ಇದನ್ನೂ ಓದಿ: Vishwavani Editorial: ತಮಸೋಮಾ ಜ್ಯೋತಿರ್ಗಮಯ