ಬೆಂಗಳೂರು: ಮಕ್ಕಳನ್ನು ಮನೆಯ ಹೊರಗೆ ಆಟಕ್ಕೆ ಬಿಡುವುದರಿಂದ ಕ್ರಿಯಾಶೀಲತೆ ಅರಳುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅಭಿಪ್ರಾಯಪಟ್ಟರು. (Bengaluru News) ಬಾಲ ಭವನ ಸೊಸೈಟಿ ಆಯೋಜಿಸಿದ್ದ ಕಲಾಶ್ರೀ ಆಯ್ಕೆ ಶಿಬಿರವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಮಕ್ಕಳ ಮನಸ್ಸು ಯಾವಾಗಲೂ ಓಡಾಟ-ಕುಣಿದಾಟದೊಂದಿಗೆ ಅತ್ಯಂತ ಫಲವತ್ತಾಗಿ ಅರಳುತ್ತವೆ. ಹೀಗಾಗಿ ಮಕ್ಕಳನ್ನು ನಿರಂತರ ಚಟುವಟಿಕೆಯಿಂದಿಡಬೇಕು. ಮಣ್ಣಲ್ಲಿ ಆಡೋದು, ಕೆರೆಯಲ್ಲಿ ಈಜುತ್ತಾ ನಾವೆಲ್ಲಾ ಬೆಳೆದೆವು. ಈಗ ಸಿಟಿ ಮಕ್ಕಳಿಗೆ ಈ ಅವಕಾಶ ಇಲ್ಲದಂತಾಗಿದೆ. ಹಳ್ಳಿಗಳಲ್ಲಿ ಈ ಅವಕಾಶಗಳು ಇವೆ ಎಂದರು.
ಈ ಸುದ್ದಿಯನ್ನೂ ಓದಿ | My Hero Movie: ಅವಿನಾಶ್ ವಿಜಯಕುಮಾರ್ ನಿರ್ದೇಶನದ ʼಮೈ ಹೀರೋʼ ಚಿತ್ರಕ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಮೆಚ್ಚುಗೆ
ಮಕ್ಕಳು ಸ್ವಾಭಾವಿಕವಾಗಿಯೇ ಚಟುವಟಿಕೆಯಿಂದ ಇರುತ್ತಾರೆ. ರೆಡಿ ಮೇಡ್ ಪ್ಲಾಸ್ಟಿಕ್ ಆಟದ ಸಾಮಾನುಗಳು ಮತ್ತು ಮೊಬೈಲ್ ಫೋನ್ ಮಕ್ಕಳ ಕ್ರಿಯಾಶೀಲತೆಯ ಶತ್ರುಗಳಾಗಿವೆ ಎಂದು ಅವರು ತಿಳಿಸಿದರು.
ಮಕ್ಕಳನ್ನು ಪರಿಸರಕ್ಕೆ, ಆಟದ ಬಯಲಿಗೆ ಬಿಟ್ಟರೆ ಸಾಕು. ತಮಗೆ ಬೇಕಾದ ಆಟದ ಸಾಮಾಗ್ರಿಗಳನ್ನು ಕ್ರಿಯಾಶೀಲವಾಗಿ ಸೃಷ್ಟಿಸಿಕೊಳ್ಳುತ್ತಾರೆ. ಪೋಷಕರು ತಮ್ಮ ಕೆಲಸದ ಒತ್ತಡ, ತಮ್ಮ ಹವ್ಯಾಸಗಳ ಒತ್ತಡವನ್ನು ಮಕ್ಕಳ ಮೇಲೆ ಹೇರುವುದರಿಂದ ಮಕ್ಕಳ ಕ್ರಿಯಾಶೀಲತೆ ಚಿವುಟಿದಂಗಾಗುತ್ತದೆ ಎನ್ನುವ ಎಚ್ಚರಿಕೆ ನೀಡಿದರು.
ಇವತ್ತು ಜಗತ್ತು ತುಂಬಾ ಫಾಸ್ಟ್ ಆಗಿದೆ. ವೇಗವಾಗಿ ಬೆಳೆಯುತ್ತಿರುವ ಇಂದಿನ ಪ್ರಪಂಚದಲ್ಲಿ ಚಿಗುರೊಡೆಯುತ್ತಿರುವ ಮಕ್ಕಳನ್ನು ಕ್ರಿಯಾಶೀಲತೆ ಹಾಗೂ ಏಕಾಗೃತೆ ಮೂಡಿಸಲು ನಾವು ಪ್ರಯತ್ನಿಸಬೇಕು. ಬಾಲ್ಯದ ದಿನಗಳಲ್ಲೇ ಕ್ರಿಯಾಶೀಲತೆ ಕುರಿತು ನಾವು ಪೋಷಕರು ಅರಿವು ಬೆಳೆಸಿಕೊಳ್ಳಬೇಕು. ಬಳಿಕ ಮಕ್ಕಳಲ್ಲಿ ಮೂಡಿಸಬೇಕಾಗಿದೆ ಎಂದರು. ಮಕ್ಕಳ ಕಲ್ಪನಾಶಕ್ತಿ ಗರಿಗೆದರುವುದಕ್ಕಾಗಿ, ಅವರನ್ನು ಹೇಗೆ ಕ್ರಿಯಾಶೀಲರಾಗುವಂತೆ ಪ್ರೋತ್ಸಾಹಿಸಲು ಪಾಲಕರಿಗೆ ಮಾರ್ಗದರ್ಶನ ನೀಡಲು ಬಾಲ ಭವನ ಇದೆ. ಬಾಲ ಭವನದ ಅಧ್ಯಕ್ಷರಾದ ನಾಯ್ಡು ಅವರಿದ್ದಾರೆ ಎಂದರು.
ಈ ಸುದ್ದಿಯನ್ನೂ ಓದಿ | December 2024: ಡಿಸೆಂಬರ್‌ನಲ್ಲಿ ಪ್ರತಿ ದಿನವೂ ವಿಶೇಷ; ಯಾವಾಗ, ಏನಿದೆ?
ಈ ಸಂದರ್ಭದಲ್ಲಿ ಬಾಲ ಭವನದ ಅಧ್ಯಕ್ಷ ಬಿ.ಆರ್.ನಾಯ್ಡು, ಕಾರ್ಯದರ್ಶಿ ನಿಶ್ಚಿಲ್, ಆಡಳಿತಾಧಿಕಾರಿ ವಿಜಯಲಕ್ಷ್ಮಿ ಅವರು ಉಪಸ್ಥಿತರಿದ್ದರು.