Thursday, 28th November 2024

Actor Darshan: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

Actor Darshan

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renuka Swamy Murder Case) ಸಂಬಂಧಿಸಿ ನಟ ದರ್ಶನ್‌ (Actor Darshan) ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಶುಕ್ರವಾರ (ನ. 29)ಕ್ಕೆ ಮುಂದೂಡಲಾಗಿದೆ. ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ವಿಶ್ವಜಿತ್‌ ಶೆಟ್ಟಿ ಅವರು ವಿಚಾರಣೆಯನ್ನು ನಾಳೆಗೆ ಮುಂದೂಡಿದ್ದಾರೆ.

ದರ್ಶನ್‌ ಪರ ವಕೀಲ ಸಿ.ವಿ.ನಾಗೇಶ್‌ ಪ್ರಬಲ ವಾದ ಮಂಡಿಸಿದರು. ಈ ಹಿಂದೆ ಆರೋಪಿ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕಳುಹಿಸಿದ್ದ ಸಂದೇಶಗಳನ್ನು ಓದಿದ್ದ ವಕೀಲರು, ಆತನಿಗೆ ಮಹಿಳೆಯರ ಬಗ್ಗೆ ಯಾವುದೇ ಗೌರವವಿಲ್ಲ. ಪವಿತ್ರಾ ಗೌಡಗೆ ಅಶ್ಲೀಲ ಫೊಟೊ, ಮೆಸೇಜ್‌ ಮಾಡಿದವರನ್ನು ಹೀರೋ ಮಾಡಲಾಗಿದೆ ಎಂದು ಕೋರ್ಟ್‌ಗೆ ತಿಳಿಸಿದ್ದರು.

ಮಧ್ಯಂತರ ಜಾಮೀನಿನ ಮೇಲೆ ಹೊರ ಬಂದಿರುವ ದರ್ಶನ್‌

ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಅನಾರೋಗ್ಯದ ಕಾರಣದಿಂದ ಜಾಮೀನು ಪಡೆದಿರುವ ದಾಸ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ದರ್ಶನ್‌ ಗೆಳತಿ. ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಅನಾರೋಗ್ಯ ಕಾರಣಕ್ಕೆ ಮಧ್ಯಂತರ ಜಾಮೀನು ಪಡೆದಿರುವ ದರ್ಶನ್, ಈವರೆಗೂ ಸರ್ಜರಿ ಮಾಡಿಸಿಲ್ಲ. ಈ ಬಗ್ಗೆ ಎಸ್​ಪಿಪಿ ಪ್ರಸನ್ನಕುಮಾರ್ ಆಕ್ಷೇಪಿಸಿದ್ದರು. ದರ್ಶನ್ ಅನಾರೋಗ್ಯ ಸಂಬಂಧ ಹೈಕೋರ್ಟ್​ಗೆ ಮೆಡಿಕಲ್ ರಿಪೋರ್ಟ್ ಸಲ್ಲಿಸಲಾಗಿದೆ.

ಕೊಲೆ ಪ್ರಕರಣದಲ್ಲಿ 131 ದಿನ ಜೈಲಿನಲ್ಲಿದ್ದ ನಟ ದರ್ಶನ್ ಅವರಿಗೆ ವೈದ್ಯಕೀಯ ಕಾರಣಗಳಿಗಾಗಿ ಹೈಕೋರ್ಟ್ 6 ವಾರಗಳ ಕಾಲ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಜಾಮೀನಿನ ಅವಧಿ ಕೂಡ ಅರ್ಧದಷ್ಟು ಮುಗಿಯುತ್ತಾ ಬಂದಿದೆ. ನಟ ದರ್ಶನ್ ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಸದ್ಯ ಅವರಿಗೆ ಬೆಂಗಳೂರಿನ ಅಪೋಲೋ ಬಿಜಿಎಸ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ದರ್ಶನ್‌ಗೆ ಹೊಸ ತಲೆನೋವು

ಪಟ್ಟಣಗೆರೆ ಶೆಡ್​ನಲ್ಲಿ ರೇಣುಕಾ ಸ್ವಾಮಿ ನಿಧನ ಹೊಂದಿದಾಗ ದರ್ಶನ್ ಆ ಸ್ಥಳದಲ್ಲಿ ಇರಲಿಲ್ಲ ಎಂಬ ವಾದ ಈ ಹಿಂದೆ ಮಂಡಿಸಲಾಗಿತ್ತು. ದರ್ಶನ್, ರೇಣುಕಾ ಸ್ವಾಮಿಗೆ ಕೋಪದಲ್ಲಿ ನಾಲ್ಕೇಟು ಹೊಡೆದು ಅಲ್ಲಿಂದ ಹೊರಟು ಹೋದರು ಎನ್ನಲಾಗಿತ್ತು. ಆದರೆ ಈಗ ಪೊಲೀಸರಿಗೆ ಲಭ್ಯವಾಗಿರುವ ಫೋಟೊದಲ್ಲಿ ರೇಣುಕಾ ಸ್ವಾಮಿ ಶವದ ಮುಂದೆ ದರ್ಶನ್ ಹಾಗೂ ಇತರ ಆರೋಪಿಗಳು ನಿಂತಿರುವ ಕಂಡು ಬಂದಿದೆ. ಪ್ರಕರಣದ ಆರೋಪಿಯೊಬ್ಬರ ಮೊಬೈಲ್​ನಿಂದ ಈ ಫೋಟೊಗಳನ್ನು ರಿಟ್ರೀವ್ ಮಾಡಲಾಗಿದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ದೊರೆತ ಸಾಕ್ಷ್ಯಗಳನ್ನು ಪರೀಕ್ಷೆಗಾಗಿ ಹೈದರಾಬಾದ್ ಹಾಗೂ ಬೆಂಗಳೂರಿನ ಎಫ್​ಎಸ್​ಎಲ್ ಕೇಂದ್ರಗಳಿಗೆ ಕಳಿಸಿದ್ದರು. ಹೈದರಾಬಾದ್​ನಿಂದ ಕೆಲವು ವರದಿಗಳು ತಡವಾಗಿ ಬಂದಿದ್ದು, ಆರೋಪಿ ಪವನ್​ ಎಂಬಾತನ ಮೊಬೈಲ್​ನಿಂದ ಕ್ಲಿಕ್ಕಿಸಲಾದ 2 ಫೋಟೋಗಳನ್ನು ರಿಕವರಿ ಮಾಡಲಾಗಿದೆ. ರೇಣುಕಾ ಸ್ವಾಮಿ ಶವದ ಮುಂದೆ ದರ್ಶನ್ ಹಾಗೂ ಇತರೆ ಆರೋಪಿಗಳು ನಿಂತಿರುವ ಚಿತ್ರವನ್ನು ಪವನ್ ಕ್ಲಿಕ್ಕಿಸಿದ್ದ. ನಂತರ ಅವನ್ನು ಡಿಲೀಟ್ ಮಾಡಿದ್ದ. ಆದರೆ ಎಫ್​ಎಸ್​ಎಲ್​ ಕೇಂದ್ರದವರು ತಂತ್ರಜ್ಞಾನ ಬಳಸಿ ಆ ಫೋಟೊಗಳನ್ನು ರಿಟ್ರೀವ್ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Actor Darshan: ಜೀವ ಇರೋವರೆಗೂ ನಟ ದರ್ಶನ್ ನನ್ನ ಮಗನೇ ಎಂದ ಸುಮಲತಾ ಅಂಬರೀಶ್‌