ಸಂಪಾದಕರ ಸದ್ಯಶೋಧನೆ
ವಿಶ್ವೇಶ್ವರ ಭಟ್
ನೀವು ಯಾವುದೇ ದೇಶಕ್ಕೆ ಹೋದರೂ ನಿಮಗೆ ಸಾಂಸ್ಕೃತಿಕ ಅಥವಾ ಸಾಮಾಜಿಕ ಆಘಾತ ಆಗುವುದು ಸಹಜ. ಇದನ್ನು ಇಂಗ್ಲಿಷಿನಲ್ಲಿ
culture shock ಅಥವಾ social shock ಎಂದು ಕರೆಯುತ್ತಾರೆ. ಅಲ್ಲಿನ ರೀತಿ-ರಿವಾಜು, ಜೀವನ ವಿಧಾನ, ಆಚರಣೆಗಳನ್ನು ನೋಡಿ ನಮಗೆ
ವಿಸ್ಮಯವಾಗುತ್ತದೆ. ಇದನ್ನು ‘ಹಿತವಾದ ಆಘಾತ’ ಎಂದೂ ಕರೆಯಬಹುದು. ಉದಾಹರಣೆಗೆ, ಭಾರತೀಯರಿಗೆ ಮೊದಲ ಸಲ ವಿದೇಶಗಳಿಗೆ
ಹೋದಾಗ ಅಲ್ಲಿನ ಅತಿಯಾದ ಸ್ವಚ್ಛತೆ, ವಿಶಾಲ ರಸ್ತೆ, ವಾಹನಗಳನ್ನು ನೋಡಿ ಅತೀವ ಅಚ್ಚರಿಯಾಗುತ್ತದೆ.
ಇದು ಇನ್ನು ಕೆಲವರಲ್ಲಿ ಆಘಾತವನ್ನುಂಟುಮಾಡಬಹುದು. ಅದರಲ್ಲೂ ಭಾರತೀಯರು ಮೊದಲ ಬಾರಿಗೆ ಜಪಾನಿಗೆ ಹೋದಾಗ ಈ ಅನುಭವ ಸಹಜ. ಜಪಾನ್ ತಂತ್ರಜ್ಞಾನದಲ್ಲಿ ಬಹಳ ಮುಂದುವರಿದ ದೇಶ. ಆದರೂ ಆ ದೇಶ ಇಂದಿಗೂ ನಗದು ಆಧರಿತ (cash based) ವ್ಯಾವಹಾರಿಕ ವ್ಯವಸ್ಥೆಯನ್ನೇ ಹೊಂದಿದೆ. ಜಪಾನಿನಲ್ಲಿ ಎಲ್ಲ ವ್ಯವಹಾರಗಳೂ cashless ಎಂದು ಭಾವಿಸಿದವರಿಗೆ ಅಚ್ಚರಿಯಾಗಬಹುದು.
ಬಿಲ್ ಪಾವತಿಸಲು ಯಾವುದೇ ಕೌಂಟರಿಗೆ ಹೋದರೂ ಪುಟ್ಟ ಟ್ರೇ ಇರುವುದನ್ನು ಗಮನಿಸಬಹುದು. ನಾವು ನೋಟನ್ನು ಆ ಟ್ರೇಯಲ್ಲಿ ಇಟ್ಟರೆ, ಚಿಲ್ಲರೆ ಹಣವನ್ನು ಟ್ರೇಯಲ್ಲಿಯೇ ಇಟ್ಟು ಕೊಡುತ್ತಾರೆ. ಕೆಲವು ಮಾಲ್‌ಗಳಲ್ಲಿ ಹಣವನ್ನು ಕೈಯಲ್ಲಿ ಮುಟ್ಟುವುದಿಲ್ಲ. ಹಣವನ್ನು ಇಟ್ಟ ತಕ್ಷಣ
ಯಂತ್ರವೇ ಅದನ್ನು ಸೆಳೆದುಕೊಂಡು, ಸರಿಯಾದ ಚಿಲ್ಲರೆ ಹಣವನ್ನು ನೀಡುತ್ತದೆ. ಕೌಂಟರಿನಲ್ಲಿ ಇದ್ದವರಿಗೆ ಅದನ್ನು ನೋಡುವುದಷ್ಟೇ ಕೆಲಸ. ಇನ್ನು ಕೆಲವು ಮಾಲ್‌ಗಳಲ್ಲಿ ಹತ್ತು ಡ್ರೆಸ್‌ಗಳನ್ನು ಖರೀದಿಸಿದರೆ, ಎಲ್ಲವನ್ನೂ ಬಾರ್ ಕೋಡ್ ಸ್ಕ್ಯಾನಿಂಗ್‌ಗೆ ಹೊರಗೆ ತೆಗೆಯಬೇಕೆಂದಿಲ್ಲ.
ಆರಿಸಿದ ಸಾಮಾನುಗಳನ್ನು ಬ್ಯಾಗ್ ಸಹಿತ ಒಂದು ಯಂತ್ರದ ಮೇಲೆ ಇಟ್ಟರಾಯಿತು. ಅದೇ ಕ್ಷಣಾರ್ಧದಲ್ಲಿ ಸ್ಕ್ಯಾನ್ ಮಾಡಿ, ಪಾವತಿಸ ಬೇಕಾದ ಹಣವನ್ನು ತಿಳಿಸುತ್ತದೆ. ಅಲ್ಲಿಯೇ ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿ ಮಾಡಬಹುದು. ಅನೇಕ ಸಲ ಸಾಮಾನುಗಳನ್ನು ಆಯ್ಕೆ ಮಾಡುವಷ್ಟೇ, ಕ್ಯೂದಲ್ಲಿ ನಿಂತು ಹಣ ಪಾವತಿಸಲು ಸಮಯ ಹಿಡಿಯುತ್ತದೆ.
ಅದನ್ನು ತಪ್ಪಿಸಲು ಈ ಕ್ರಮ. ಜಪಾನಿನಲ್ಲಿ ಮೇಕಪ್ ಮಾಡಿಕೊಂಡು ಬಟ್ಟೆ ಖರೀದಿಸುವ ಹೆಂಗಸರಿಗೆ ಸಣ್ಣ ಆಘಾತವಾಗುವುದು ಸಹಜ. ಬಟ್ಟೆಯನ್ನು ಆಯ್ಕೆ ಮಾಡಿ ಟ್ರಯಲ್ ಮಾಡುವಾಗ, ಒಂದೋ ಮೇಕಪ್ ಅನ್ನು ಅಳಿಸಬೇಕು, ಇಲ್ಲವೇ ಪಾರದರ್ಶಕ ಮುಖವಾಡ ಧರಿಸಬೇಕು. ಹೊಸ ಬಟ್ಟೆಗೆ ಮೇಕಪ್ ಅಂಟುವುದನ್ನು ತಪ್ಪಿಸಲು ಈ ಕ್ರಮ. ಜಪಾನಿನಲ್ಲಿ ‘ರಿಸೈಕ್ಲಿಂಗ್’ ಅನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಬಿಸಾಡುವ ವಸ್ತುಗಳನ್ನು ನಿರ್ದಿಷ್ಟ ವಿಧಾನದಲ್ಲಿಯೇ ವರ್ಗೀಕರಿಸಬೇಕು.
ಪ್ಲಾಸ್ಟಿಕ್ ಬಾಟಲಿಯನ್ನು ಎಸೆಯುವಾಗ ಅದನ್ನು ಶುದ್ಧವಾಗಿ ತೊಳೆಯಬೇಕು. ಬಾಟಲಿಗೆ ಅಂಟಿಕೊಂಡಿರುವ ಲೇಬಲ್ ಅನ್ನು ಕೀಳಬೇಕು ಮತ್ತು ಬಾಟಲಿಯ ಮುಚ್ಚಳವನ್ನು ಪ್ರತ್ಯೇಕಿಸಬೇಕು. ನಂತರ ಬಾಟಲಿ, ಲೇಬಲ್ ಮತ್ತು ಮುಚ್ಚಳ ಆ ಮೂರನ್ನೂ ಬೇರೆ ಬೇರೆಯಾಗಿ ವಿಂಗಡಿಸಿ ಎಸೆಯಬೇಕು. ಪರಿಸರ ಕಾಳಜಿ ಮತ್ತು ಸ್ವಚ್ಛತೆಗೆ ಮಹತ್ವ ನೀಡುವ ಜಪಾನಿನಲ್ಲಿ ಪ್ಲಾಸ್ಟಿಕ್ ಅನ್ನು ಬಳಸಲಿಕ್ಕಿಲ್ಲ ಎಂದು ಭಾವಿಸಿದರೆ ನಮ್ಮ ಊಹೆ ತಪ್ಪು. ಜಪಾನಿಯರು ಯಥೇಚ್ಛ ಪ್ಲಾಸ್ಟಿಕ್ ಬಳಸುತ್ತಾರೆ. ಆದರೆ ಅದನ್ನು ಎಲ್ಲೂ ಎಸೆಯುವುದಿಲ್ಲ. ಬಳಸಿದ ಪ್ಲಾಸ್ಟಿಕ್ ಗಳೆಲ್ಲವೂ ರಿಸೈಕಲ್ ಆಗುತ್ತವೆ. ಹೀಗಾಗಿ ಪ್ಲಾಸ್ಟಿಕ್ ಬ್ಯಾಗ್ ವಿಚಾರದಲ್ಲಿ ಚೌಕಾಶಿ ಇಲ್ಲ.
ಜಗತ್ತಿನಲ್ಲಿಯೇ ಅತ್ಯಂತ ಸ್ವಚ್ಛ ನಗರ ಎಂದು ಕರೆಯಿಸಿಕೊಂಡಿರುವ ಟೋಕಿಯೋ ನಗರದ ಬೀದಿಗಳಲ್ಲಿ ಒಂದೇ ಒಂದು ಕಸದ ಬುಟ್ಟಿ
ಕಾಣುವುದಿಲ್ಲ. ಹಾಗಂತ ಜನ ಬಳಸಿದ ವಸ್ತುಗಳನ್ನು ಬೇಕಾಬಿಟ್ಟಿ ರಸ್ತೆ ಮೇಲೆ ಅಥವಾ ಕಂಡಕಂಡಲ್ಲಿ ಎಸೆಯುವುದಿಲ್ಲ. ಅನೇಕರು ಬಿಸಾಡ ಬೇಕೆಂದಿರುವ ವಸ್ತುಗಳನ್ನು ತಮ್ಮ ಜೇಬಿನೊಳಗೆ ದಿನವಿಡೀ ಇಟ್ಟುಕೊಂಡಿರುತ್ತಾರೆ. ಜನರು ಬೀದಿಯಲ್ಲಿ ನಿಂತು ತಿನ್ನುವುದಿಲ್ಲ ಅಥವಾ ಕುಡಿಯುವುದಿಲ್ಲ. ಅಲ್ಲಿನ ಕೆಲವು ನಿರ್ದಿಷ್ಟ ಅಂಗಡಿ ಮುಂದೆ ನಿಂತು ಹಾಗೆ ಮಾಡಬಹುದಷ್ಟೆ. ಟೋಕಿಯೋ ನಗರದ ಬೀದಿಗಳಲ್ಲಿ ಸಣ್ಣ ಕಾಗದದ ಚೂರು, ತುಣುಕುಗಳನ್ನು ನೋಡಲು ಸಾಧ್ಯವಿಲ್ಲ. ಇದು ಯಾರಿಗಾದರೂ ಹಿತವಾದ ಆಘಾತವನ್ನುಂಟು ಮಾಡಬಹುದು.
ಇದನ್ನೂ ಓದಿ: @vishweshwarbhat