Friday, 20th September 2024

ಅಭಿರುಚಿಹೀನ ಪತ್ರಿಕೋದ್ಯಮಕ್ಕೆ ನಿದರ್ಶನವಾದ ಆ ಶೀರ್ಷಿಕೆ !

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

GOTCHA!
ಹೀಗಂದ್ರೆ ಏನು ಅಂತ ಕೇಳಬಹುದು. ಲಂಡನ್ನಿನ ಅತ್ಯಂತ ಜನಪ್ರಿಯ ಟ್ಯಾಬ್ಲಾಯ್ಡ್ ದೈನಿಕ ‘ದಿ ಸನ್’, 1982ರ ಮೇ 4ರಂದು ಮುಖಪುಟದ ಲೀಡ್ ಸುದ್ದಿಗೆ ನೀಡಿದ ಶೀರ್ಷಿಕೆಯಿದು. ಸುಮಾರು 1138 ಮಂದಿ ಸೈನಿಕರನ್ನೊಳಗೊಂಡ ಅರ್ಜೆಂಟೀನಾದ ಯುದ್ಧ ನೌಕೆ ‘ಜನರಲ್ ಬೆಲ್ಗ್ರೇನೋ’ವನ್ನು ಬ್ರಿಟಿಷ್ ನೌಕಾಪಡೆ ಹಡಗು ಮುಳುಗಿಸಿದಾಗ, ಆ ಪತ್ರಿಕೆ Gotcha ಎಂಬ ಶೀರ್ಷಿಕೆ
ನೀಡಿತ್ತು.

ಆ ಪತ್ರಿಕೆ ಸಂಪಾದಕ ಕೆಲ್ವಿನ್ ಮೆಕೆಂಜಿಗೆ ಈ ಶೀರ್ಷಿಕೆಯನ್ನೇನೋ ನೀಡಿದ. ಆದರೆ ಆತನಿಗೆ ಒಳಮನಸ್ಸು ಬೇರೆಯದನ್ನೇ ಹೇಳುತ್ತಿತ್ತು, ಇಂಥ ದೊಡ್ಡ ಮಾನವ ದುರಂತ ಸಂಭವಿಸಿದ ಸುದ್ದಿಗೆ ಇಂಥ ಹೆಡ್ ಲೈನ್ ನೀಡುವುದು ಎಷ್ಟು ಸರಿ, ಓದುಗರು ಏನೆಂದು ಭಾವಿಸಬಹುದು, ಪತ್ರಿಕೆ ಇಷ್ಟು ನಿಷ್ಕರುಣೆಯಿಂದ ಸಂವೇದನಾರಹಿತವಾಗಿ ವರ್ತಿಸ ಬಾರದಿತ್ತು ಎಂದು ಓದುಗರು ಅಂದುಕೊಂಡರೆ ಎಂದು ಆತನಿಗೆ ಅನಿಸಲಾರಂಭಿಸಿತು. ಆದರೆ ಅಷ್ಟರೊಳಗೆ ಪತ್ರಿಕೆಯ ಮೊದಲ ಆವೃತ್ತಿ ಮುದ್ರಣಕ್ಕೆ ಹೋಗಿಬಿಟ್ಟಿತ್ತು.

ಮೆಕೆಂಜಿ ತನ್ನ ಸಹಾಯಕ ಸಂಪಾದಕರನ್ನು ಕರೆದು, ಶೀರ್ಷಿಕೆಯೇನೋ ಚೆನ್ನಾಗಿದೆ, ಆದರೆ ಇಷ್ಟು ದೊಡ್ಡ ದುರಂತ ಸಂಭ ವಿಸಿದ ಸಂದರ್ಭಕ್ಕೆ ಈ ಶೀರ್ಷಿಕೆ ಸರಿ ಹೊಂದುವು ದಿಲ್ಲ ವೇನೋ ಎಂದು ತನ್ನ ಅನುಮಾನ ವ್ಯಕ್ತಪಡಿಸಿದ. ಕೆಲವರು ಅವನ ಮಾತನ್ನು ಪುರಸ್ಕರಿಸಿದರು. ಇನ್ನು ಕೆಲವರು ಈ ಶೀರ್ಷಿಕೆ ಚೆನ್ನಾಗಿದೆ, ಆದರೆ ಕೆಲವರಿಗೆ ಅಪಥ್ಯ ವಾಗಬಹುದು, ನೋಡೋಣ ಏನಾಗುವುದೆಂದು ಎಂದು ಹೇಳಿದರು.

ಯಾವುದೇ ವಿಷಯದಲ್ಲಿ ಸಂಪಾದಕೀಯ ವಿಭಾಗ ಈ ರೀತಿ ವಿಭಜನೆ ಆದಾಗ, ಯಾವ ಸಂಪಾದಕನೂ ರಿಸ್ಕ್ ತೆಗೆದುಕೊಳ್ಳಲು ಮುಂದಾಗುವುದಿಲ್ಲ. ಅಲ್ಲದೇ ಅವನ ಒಳಮನಸ್ಸು ಈ ಶೀರ್ಷಿಕೆ ಬಗ್ಗೆ ಸಂಪೂರ್ಣ ಸಹಮತ ನೀಡಿರಲಿಲ್ಲ. ಅಷ್ಟರೊಳಗೆ ಮೊದಲ ಆವೃತ್ತಿ ಪ್ರಿಂಟ್ ಆಗಿ ಬಂದಿತು. ಅದನ್ನು ನೋಡುತ್ತಿದ್ದಂತೆ, ಮೆಕೆಂಜಿಗೆ ಈ ಶೀರ್ಷಿಕೆ, ಈ ಸಂದರ್ಭಕ್ಕೆ ಸರಿ ಹೊಂದು ವುದಿಲ್ಲ ಎಂಬುದು ಮನವರಿಕೆಯಾಯಿತು. ನಂತರದ ಆವೃತ್ತಿಗೆ ಮಾಮೂಲು ಹೆಡ್ ಲೈನ್ ಬದಲಿಸಿಲು ನಿರ್ಧರಿಸಿದ. Did 1,200 Argies Drown? ಎಂಬ ಇಂದಿನ ಸಹಜ ಹೆಡ್ ಲೈನ್ ನೀಡಿದ. ಆ ದುರ್ಘಟನೆಯಲ್ಲಿ 323 ಮಂದಿ ಸತ್ತಿದ್ದರು.

ಮರುದಿನ ಬೆಳಗ್ಗೆ ಮೊದಲ ಆವೃತ್ತಿಯಲ್ಲಿ ಪ್ರಿಂಟಾದ ಈ ಶೀರ್ಷಿಕೆಯನ್ನು ನೋಡಿದ ಓದುಗರು, ‘ಇದೇನು ಇಂಥ ದೊಡ್ಡ ದುರಂತವನ್ನು ಲೇವಡಿ ಮಾಡುವುದಾ? ಸಾವಿನ ಸುದ್ದಿಗೆ ಇಂಥ ಶೀರ್ಷಿಕೆ ಕೊಡುವುದು ಎಷ್ಟು ಸರಿ? ಪತ್ರಿಕೆ ಘನತೆಯಿಂದ
ವರ್ತಿಸಬೇಕಿತ್ತು, ಇಂಥ ಶೀರ್ಷಿಕೆಯನ್ನು ಸಮ್ಮತಿಸಲು ಸಾಧ್ಯವಿಲ್ಲ’ ಎಂದು ಪ್ರತಿಕ್ರಿಯಿಸಿದರು. ಅನೇಕರು ಪತ್ರಿಕಾ ಕಚೇರಿಗೆ ಫೋನ್ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಕೆಲವರು ಪತ್ರಿಕೆಯ ಧೈರ್ಯವನ್ನು ಮೆಚ್ಚಿದರು. ಆದರೆ ಬಹುತೇಕ ಜನರಿಗೆ ಈ ಶೀರ್ಷಿಕೆ ಇಷ್ಟವಾಗಿರಲಿಲ್ಲ.

ಮರುದಿನ ಈ ಶೀರ್ಷಿಕೆ ಬಗ್ಗೆ ಚರ್ಚೆಯಾಗುತ್ತಿರುವ ವಿಷಯ, ಪತ್ರಿಕೆಯ ಮಾಲೀಕನಾದ ರುಪರ್ಟ್ ಮುರ್ಡೋಕ್ ಕಿವಿಗೂ ಬಿತ್ತು. ಆತ ಪತ್ರಿಕೆಯ ಮುಖಪುಟವನ್ನೊಮ್ಮೆ ನೋಡಿ ಜೋರಾಗಿ Gotcha ಎಂದು ಓದಿದ. ಆತನಿಗೆ ಆ ಶೀರ್ಷಿಕೆಯಲ್ಲಿ ಅದೇನೋ ಆಗಬಾರದ ಪ್ರಮಾದ ಆಗಿದೆ ಎಂದು ಅನಿಸಲಿಲ್ಲ. It seemed like a bloody good headline to me ಎಂದು ಉದ್ಗರಿಸಿದ.

ಆದರೆ ಈ ಹೆಡ್ ಲೈನ್ ತೀವ್ರ ಟೀಕೆಗೆ ಗುರಿಯಾಯಿತು. ‘ಇದು ಮಾನವ ದುರಂತದ ಕ್ರೂರ ಅಣಕ’ ಎಂದೇ ಅನೇಕರು ಇಂದಿಗೂ ಅಭಿಪ್ರಾಯಪಡುತ್ತಾರೆ. ಈ ಶೀರ್ಷಿಕೆ ಪ್ರಕಟವಾಗಿ ಮೂವತ್ತೆಂಟು ವರ್ಷಗಳ ನಂತರ ಇಂದಿಗೂ, ಇದು ಆಗಾಗ ಚರ್ಚೆಯ ಮುನ್ನೆಲೆಗೆ ಬರುತ್ತದೆ. ಅಷ್ಟೇ ಅಲ್ಲ, ಕೆಟ್ಟ, ಅಭಿರುಚಿಹೀನ ಪತ್ರಿಕೋದ್ಯಮಕ್ಕೆ Gotcha Journalism ಎಂದು ಕರೆಯುವಂತಾಗಿದೆ.

ಅಂದ ಹಾಗೆ Gotcha ಅಂದರೆ ಇಂಗ್ಲಿಷ್ ಡಿಕ್ಷನರಿಯಲ್ಲಿ  I have got you (used to express satisfaction at having captured or defeated someone or uncovered their faults)  ಎಂಬ ಅರ್ಥ ನೀಡಲಾಗಿದೆ. ಇಂಗ್ಲಿಷಿನ Gotcha ವನ್ನು ಕನ್ನಡದಲ್ಲಿ ಪ್ರಾಸ ಬದ್ಧವಾಗಿ ‘ಪಡ್ಚಾ’ ಎಂದು ಹೇಳಬಹುದು. ಕ್ಕಿಗಳ ಗಣತಿ ಆರಂಭವಾಗಿದ್ದು ಹೇಗೆ ? ಕ್ರಿಸ್ಮಸ್ ಸಮಯದಲ್ಲಿ ಹಕ್ಕಿಗಳು ದೊಡ್ಡ ಸಂಖ್ಯೆಯಲ್ಲಿ ವಲಸೆ ಹೋಗಲಾರಂಭಿಸುತ್ತವೆ. ಒಮ್ಮೊಮ್ಮೆ ಒಂದೊಂದು ಗುಂಪಿನಲ್ಲಿ ಲಕ್ಷಾಂತರ ಹಕ್ಕಿಗಳು ‘ಗುಳೆ’ ಹೋಗುತ್ತವೆ. ಯೂರೋಪಿನ ಚಳಿಯನ್ನು ತಪ್ಪಿಸಿಕೊಳ್ಳಲು ಬೆಚ್ಚಗಿನ ದೇಶಗಳೆಡೆಗೆ ಪಯಣ ಬೆಳೆಸುವುದು ಸಹಜ.

ಹದಿನೆಂಟನೇ ಶತಮಾನದಲ್ಲಿ ಕ್ರಿಸ್ಮಸ್ ಕಾಲದಲ್ಲಿ ವಲಸೆ ಹಕ್ಕಿಗಳನ್ನು ಸಾಯಿಸುವ ಸ್ಪರ್ಧೆ ನಡೆಯುತ್ತಿತ್ತು. ಯಾರು ಹೆಚ್ಚು
ಹಕ್ಕಿಗಳನ್ನು ಸಾಯಿಸಿzರೋ ಅವರು ‘ಮಹಾನ್ ಶೂಟರ್’ ಎಂದು ಗೌರವಿಸಲಾಗುತ್ತಿತ್ತು. ಈ ಸ್ಪರ್ಧೆಯಲ್ಲಿ ಸಾವಿರಾರು ಹಕ್ಕಿ ಗಳನ್ನು ಸಾಯಿಸಲಾಗುತ್ತಿತ್ತು. ಸುಮಾರು ಒಂದು ನೂರಕ್ಕೂ ಹೆಚ್ಚು ವರ್ಷಗಳ ಕಾಲ ಈ ಸ್ಪರ್ಧೆ ಅವ್ಯಾಹತವಾಗಿ ನಡೆದು ಕೊಂಡು ಬಂದಿತು.

1900ರಲ್ಲಿ ಅಮೆರಿಕದ ಪ್ರಸಿದ್ಧ ಪಕ್ಷಿ ತಜ್ಞ ಫ್ರಾಕ್ ಚಾಪ್ಮನ್ ಇದನ್ನು ಗಮನಿಸಿದ. ಪ್ರತಿವರ್ಷ ಇಷ್ಟೊಂದು ದೊಡ್ಡ ಸಂಖ್ಯೆ ಯಲ್ಲಿ ಪಕ್ಷಿಗಳ ಮಾರಣಹೋಮವಾಗುತ್ತಿರುವುದನ್ನು ಗಮನಿಸಿದ ಆತ, ಜನರ ಮನಸ್ಸನ್ನು ಪರಿವರ್ತಿಸಲು ನಿರ್ಧರಿಸಿದ. ಪಕ್ಷಿಗಳನ್ನು ಸಾಯಿಸುವ ಬದಲು, ಅವುಗಳನ್ನು ಗುರುತಿಸಲು, ಚಲನೆಯ ಮಾರ್ಗದ ಮೇಲೆ ನಿಗಾ ಇಡಲು, ಅವುಗಳನ್ನು ಲೆಕ್ಕ ಹಾಕಲು ಹೇಳಿದ. ಅದನ್ನು ಕರಾರುವಾಕ್ಕಾಗಿ ಮಾಡುವುದು ಹೇಗೆ ಎಂದು ಹೇಳಿಕೊಟ್ಟ. Bird Life, The  Autobiography of a Bird-Lover, What Bird is That?, Birds of Eastern North America ಮತ್ತು Life in an Air Castle ಮುಂತಾದ ಪುಸ್ತಕಗಳನ್ನು
ಬರೆದ ಚಾಪ್ಮನ್, ಈ ಉದ್ದೇಶಕ್ಕಾಗಿ ‘ಆಡುಬಾನ್ ಸೊಸೈಟಿಸ್ ಕ್ರಿಸ್ಮಸ್ ಬರ್ಡ್ ಸೆನ್ಸಸ್’ ಎಂಬ ಸಂಸ್ಥೆಯನ್ನೇ ಹುಟ್ಟು ಹಾಕಿದ.

ಅಂದಿನಿಂದ ಹಕ್ಕಿಗಳ ಗಣತಿ ಕಾರ್ಯ ಆರಂಭವಾಯಿತು. ಆತ ಮಾಡಿದ ಈ ಒಂದು ಮಹತ್ಕಾರ್ಯದಿಂದ ಅವೆಷ್ಟೋ ಲಕ್ಷ ಹಕ್ಕಿ ಗಳು ಉಳಿದುಕೊಂಡವು. ಆತನ ಈ ಕಾರ್ಯದ ಪರಿಣಾಮವನ್ನು ಲೆಕ್ಕ ಹಾಕುವುದು ಸಾಧ್ಯವಿಲ್ಲ. ಚಾಪ್ಮನ್ ನಿಧನನಾದಾಗ ಅವನ ಸಮಾಽಯ ಮೇಲೆ ಏನು ಬರೆಯಬೇಕು ಎಂದು ಚರ್ಚಿಸಲಾಯಿತು. ಕೊನೆಗೆ æ “He taught men to know birds; children to love them’ ಎಂದು ಬರೆಯಲಾಯಿತು. ಹಕ್ಕಿಗಳ ಬಗ್ಗೆ ಮಕ್ಕಳಲ್ಲಿ ಪ್ರೀತಿ ಮತ್ತು ಜಾಗೃತಿ ಮೂಡಿಸದೇ, ಅವುಗಳನ್ನು ಸಂರಕ್ಷಿಸಲು ಸಾಧ್ಯವಿಲ್ಲ ಎಂಬುದು ಚಾಪ್ಮನ್ ಅಚಲ ನಂಬಿಕೆಯಾಗಿತ್ತು.

ಯಾರದ್ದೇ ಮಾತು, ಯಾರಿಗೋ ಕ್ರೆಡಿಟ್ಟು ಯಾವ ಮಾತನ್ನು ಯಾರು ಹೇಳಿದ್ದಾರೆ ಎಂಬುದು ಮುಖ್ಯ. ಎಷ್ಟೋ ಸಲ ಮಾತಿಗಿಂತ, ಅದನ್ನು ಹೇಳಿದವರು ಯಾರು ಎಂಬುದನ್ನು ಆಧರಿಸಿ, ಅದರ ಮಹತ್ವ, ಪ್ರಾಮುಖ್ಯ ನಿರ್ಧಾರವಾಗುತ್ತದೆ. ಆದರೆ ಮಾತಿನ ಸಂತೆಯಲ್ಲಿ, ಅಕ್ಷರಗಳ ಸಾಗರದಲ್ಲಿ ಯಾರೋ ಹೇಳಿದ ಮಾತನ್ನು ಇನ್ಯಾರೋ ಹೇಳಿದ್ದು ಎಂದು, ಮೂಲಕ್ಕೆ ಅಪಚಾರವಾಗು ತ್ತದೆ. ಒಂದು ಪಾರ್ಟಿಯಲ್ಲಿ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಒಂದು ವಚನ ಹೇಳುತ್ತಾ, ‘ನೋಡಿ ವೈಎನ್ಕೆ, ಸವಣ್ಣನ ಈ ವಚನ ಎಷ್ಟು ಸೊಗಸಾಗಿದೆ’ ಎಂದು ಹೇಳಿದರು.

ತಕ್ಷಣ ವೈಎನ್ಕೆ, ‘ಹೆಗಡೆಯವರೇ, ಆ ವಚನ ಬಸವಣ್ಣನವರದ್ದಲ್ಲ, ಅದು ಅಲ್ಲಮನ ವಚನ. ನೀವು ಈ ರಾಜ್ಯದ ಮುಖ್ಯಮಂತ್ರಿ ಯಾಗಿದ್ದವರು. ಸರಿಯಾಗಿ quote ಮಾಡಬೇಕು. ಯಾರೋ ಹೇಳಿದ್ದನ್ನು ಇನ್ಯಾರೋ ಹೇಳಿದ್ದಾರೆಂದು ಹೇಳಬಾರದು’ ಎಂದು ಮುಖಕ್ಕೆ ಹೊಡೆಯುವಂತೆ ಹೇಳಿದ್ದರು. ಯಾರೋ ಹೇಳಿದ ಒಳ್ಳೆಯ ಮಾತನ್ನು ಇನ್ಯಾರೋ ಹೇಳಿದ್ದಾರೆಂದು ನಾವು ಉಲ್ಲೇಖಿ ಸುವುದುಂಟು. ಆ ಸಂದರ್ಭದಲ್ಲಿ ತಕ್ಷಣ ನಮಗೆ ನೆನಪಿಗೆ ಬರುವವರು ಪ್ಲೇಟೋ, ಬರ್ನಾರ್ಡ್ ಷಾ, ಷೇಕ್ಸ್ ಪಿಯರ್, ಸಾಕ್ರಟಿಸ್ …ಈ ಮಹನೀಯರ ಬಾಯಲ್ಲಿ ಎಂಥ ಮಾತುಗಳನ್ನಾದರೂ ಹಾಕಿ, ಅದಕ್ಕೆ ಶ್ರೇಷ್ಠತೆಯನ್ನು ಪಡೆಯಬಹುದು ಎಂಬುದು ಅನೇಕರ ಲೆಕ್ಕಾಚಾರ. ಇದು ಶುದ್ಧ ಬೇಜವಾಬ್ದಾರಿತನ ಮತ್ತು ಆಲಸ್ಯದ ಪ್ರತೀಕವಷ್ಟೇ.

“I am sorry I wrote you such a long letter ; I didn’t have time to write a short one’ ಎಂಬ ಈ ಜನಪ್ರಿಯ ಸಾಲನ್ನು ಮೂಲತಃ ಯಾರು ಹೇಳಿದ್ದಾರೋ, ಬರೆದಿzರೋ ಗೊತ್ತಿಲ್ಲ. ಸಂಕ್ಷಿಪ್ತ ಬರವಣಿಗೆ ಮಹತ್ವವನ್ನು ಒತ್ತಿ ಹೇಳುವಾಗ, ತಮಾಷೆ ಯಿಂದ ಪ್ರಸ್ತಾಪವಾಗುವ ‘ವಕ್ರತುಂಡೋಕ್ತಿ’ ಮಾದರಿಯ ಈ ಸಾಲನ್ನು ಹೇಳಿದವರು ಯಾರೆಂಬುದು ಗೊತ್ತಿಲ್ಲ. ಆದರೆ ಮಾರ್ಕ್
ಟ್ವೆ ನ್, ಜಾರ್ಜ್ ಬರ್ನಾರ್ಡ್ ಷಾ, ವೋಲ್ಟೇರ್, ಬ್ಲೇಸ್ ಪಾಸ್ಕಲ, ಜೋಹಾನ್ ವಲಗಾಂಗ್ ವೊನ್ ಗೊತೆ, ವಿನ್ಸ್ಟನ್ ಚರ್ಚಿಲ್‌, ಪ್ಲಿನಿ ದಿ ಯಂಗರ್, ಕ್ಯಾಟೋ, ಸಿಸೆರೊ, ಬಿಲ್ ಕ್ಲಿಂಟನ್, ಬೆಂಜಮಿನ್ ಫ್ರಾಂಕ್ಲಿನ್.. ಹೀಗೆ ಅನೇಕರಿಗೆ ಈ ಮಾತಿನ ಪ್ರಶಂಸೆ ಸಂದಿದೆ.

ಎಷ್ಟೋ ವರ್ಷಗಳ ನಂತರ, ಈ ಮಾತನ್ನು ಹೇಳಿದವರು ವಿಶ್ವೇಶ್ವರ ಭಟ್ ಎಂದು ಯಾರಾದರೂ ಬರೆದರೂ ಆಶ್ಚರ್ಯವಿಲ್ಲ.
ಯಾರz ಮಾತು, ಯಾರಿಗೋ ಕ್ರೆಡಿಟ್ಟು. ಹೀಗೊಂದು ಪ್ರಶ್ನೆ ಮತ್ತು ಉತ್ತರ ‘ಟೈಮ್ಸ ಆಫ್ ಇಂಡಿಯಾ’ ಸಮೂಹಕ್ಕೆ ಸೇರಿದ ‘ಮುಂಬೈ ಮಿರರ್’ ಪತ್ರಿಕೆ ಕಣ್ಮುಚ್ಚಿದೆ. ಅದು ಇನ್ನು ಮುಂದೆ ವಾರಕ್ಕೊಮ್ಮೆ ಮುದ್ರಣ ಮತ್ತು ಡಿಜಿಟಲ್ ಸ್ವರೂಪದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲಿದೆ. ಯಾವುದೇ ಪತ್ರಿಕೆ ಪ್ರಕಟಣೆ ನಿಲ್ಲಿಸುತ್ತದೆ ಎಂದಾಗ ಬೇಸರವಾಗುವುದು ಸಹಜ.

ಅದಕ್ಕಿಂತ ಮುಖ್ಯವಾಗಿ, ಪತ್ರಿಕೆಯೊಂದು ನಿಲ್ಲುವುದು ಆರೋಗ್ಯಕರ ಸಮಾಜಕ್ಕೆ ಶೋಭೆ ತರುವ ವಿಷಯವಲ್ಲ. ಒಂದು ಪತ್ರಿಕೆಯನ್ನು ಪೋಷಿಸದಷ್ಟು ಸಮಾಜ ನಿರ್ದಯವಾಗುವುದು ಒಳ್ಳೆಯದಲ್ಲ. ಇರಲಿ. ಆ ಪತ್ರಿಕೆಯಲ್ಲಿ ಪ್ರತಿದಿನ Ask The Sexpert ಎಂಬ ಅಂಕಣ ಪ್ರಕಟವಾಗುತ್ತಿತ್ತು. ಓದುಗರ ಲೈಂಗಿಕ ಸಂಬಂಧಿ ಪ್ರಶ್ನೆಗಳಿಗೆ ತೊಂಬತ್ತೆರಡು ವರ್ಷ ವಯಸ್ಸಿನ ಡಾ.ಮಹಿಂದರ್ ವತ್ಸ ಎನ್ನುವವರು ಉತ್ತರಿಸುತ್ತಿದ್ದರು. ಕಳೆದ ಹದಿನೈದು ವರ್ಷಗಳಿಂದ ಅವರು ಆ ಪತ್ರಿಕೆಗೆ ಈ ಅಂಕಣವನ್ನು
ನಿರ್ವಹಿಸಿಕೊಂಡು ಬರುತ್ತಿದ್ದುದು ವಿಶೇಷ. ಓದುಗರ ತರಹೇವಾರಿ ಲೈಂಗಿಕ ಸಮಸ್ಯೆಗಳಿಗೆ ಅವರು ನೀಡುತ್ತಿದ್ದ ಉತ್ತರಗಳು ಸೊಗಸಾಗಿರುತ್ತಿದ್ದವು.

ಮುಖಪುಟದ ಮೇಲೆ ಕಣ್ಣಾಡಿಸಿದ ನಂತರ ಅನೇಕರು ಡಾ.ವತ್ಸ ಅವರ ಅಂಕಣಕ್ಕೆ ಹೊರಳುತ್ತಿದ್ದರು. ಓದುಗರ ವಿಚಿತ್ರ ಪ್ರಶ್ನೆ ಗಳು, ಅದಕ್ಕೆ ಅವರು ನೀಡುತ್ತಿದ್ದ ಸಮಾಧಾನಕರ ಉತ್ತರಗಳು ಈ ಅಂಕಣಕ್ಕೆ ಮೆರುಗು ನೀಡಿದ್ದವು. ಜತೆಗೆ ಅವರ ವಯಸ್ಸು ಕೂಡ ಆ ಅಂಕಣಕ್ಕೆ ಹೆಚ್ಚುವರಿ ವೈಶಿಷ್ಟ್ಯವನ್ನು ತಂದುಕೊಟ್ಟಿತ್ತು. ಅವರು ಬೇರೆ ಬೇರೆ ಪತ್ರಿಕೆಗಳಿಗೆ ಕಳೆದ ಅರವತ್ತು ವರ್ಷ ಗಳಿಂದ ಲೈಂಕಿಕ ಸಂಬಂಧಿ ಅಂಕಣವನ್ನು ಬರೆಯುತ್ತಿರುವುದು ಗಮನಾರ್ಹ.

ಇತ್ತೀಚೆಗೆ ಆ ಅಂಕಣದಲ್ಲಿ ಪ್ರಕಟವಾದ ಒಂದು ಪ್ರಶ್ನೆ – ನನಗೆ 68 ವರ್ಷ ಮತ್ತು ನನ್ನ ಪತ್ನಿಗೆ 65. ಅವಳು ಕೆಲ ತಿಂಗಳುಗಳ
ಹಿಂದೆ, ಒಂದು ಧಾರ್ಮಿಕ ಪಂಥದ ಕಾರ್ಯಕ್ರಮಗಳಿಗೆ ಸೇರಿಕೊಂಡಿದ್ದಾಳೆ. ಪ್ರತಿ ಭಾನುವಾರ ಮತ್ತು ಗುರುವಾರ ತಪ್ಪದೇ
ಅಲ್ಲಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾಳೆ. ಕುಡಿಯುವುದು, ಸೇದುವುದು, ಮೊಟ್ಟೆ ಸೇವನೆ ಸೇರಿದಂತೆ ಮಾಂಸಾಹಾರ ಸೇವನೆ ಸಂಪೂರ್ಣ ವರ್ಜ್ಯ. ನಮ್ಮ ಮನೆಯಲ್ಲೂ ಇವೆಲ್ಲ ಬಂದ್. ಹೋಟೆಲಿಗೆ ಹೋಗಿ ಮಾಂಸ, ಮದ್ಯ ಸೇವನೆಯನ್ನೂ ಅವಳು ವಿರೋಧಿಸುತ್ತಾಳೆ.

ಇಷ್ಟೂ ಸಾಲದೆಂಬಂತೆ, ಅವಳ ಜತೆ ಸೇರುವುದನ್ನೂ ಇಷ್ಟಪಡುವುದಿಲ್ಲ. ಸೋಮವಾರ, ಮಂಗಳವಾರ ಮತ್ತು ಗುರುವಾರ ವ್ರತವಿರುವುದರಿಂದ ಸೆಕ್ಸ್ ಬೇಡ ಎಂದು ಹೇಳುತ್ತಾಳೆ. ಹಬ್ಬ – ಹರಿದಿನ ಬಂದರೆ ಮತ್ತೆ ಇದೇ ನೆಪ ತೆಗೆದು ನನ್ನನ್ನು ದೂರ ಸರಿಸುತ್ತಾಳೆ. ಆಗೆಲ್ಲ ನನಗೆ ಬೇರೆ ಹೆಂಗಸಿನ ಸಹವಾಸ ಮಾಡಿದರೆ ಹೇಗೆ ಎಂಬ ಯೋಚನೆ ಬಂದಿದ್ದರೂ, ನನ್ನ ಭಾವನೆಯನ್ನು ಅದುಮಿಟ್ಟುಕೊಂಡಿದ್ದೇನೆ. ನಾನು ಇನ್ನೊಬ್ಬ ಸಂಗಾತಿಯನ್ನು ಹೊಂದಲಾ ಅಥವಾ ವೇಶ್ಯೆಯರ ಸಂಬಂಧ ಇಟ್ಟುಕೊಳ್ಳಲಾ?
ಅದಕ್ಕೆ ಡಾ.ವತ್ಸ ಅವರ ಉತ್ತರ – ವೇಶ್ಯೆಯರ ಸಹವಾಸ ಮಾಡುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಅದರ
ಬದಲು, ಅದರಿಂದ ಮತ್ತಷ್ಟು ಸಮಸ್ಯೆಗಳನ್ನು ಆಹ್ವಾನಿಸಿದಂತಾಗಬಹುದು.

ನಿಮ್ಮ ಸಮಸ್ಯೆ, ಬಯಕೆಗಳನ್ನು ನಿಮ್ಮ ಪತ್ನಿಯ ಜತೆ ಚರ್ಚಿಸಿ ಮತ್ತು ಅವಳಿಗೆ ಮನವರಿಕೆ ಮಾಡಿಕೊಡಿ. ಇದರಿಂದಲೂ ಪ್ರಯೋಜನವಾಗದಿದ್ದರೆ, ನೀವೂ ಸಹ ನಿಮ್ಮ ಪತ್ನಿಯ ಜತೆ ಪ್ರಾರ್ಥನೆ ಮತ್ತು ವ್ರತದಲ್ಲಿ ಪಾಲ್ಗೊಳ್ಳಿ.

ಗ್ರಾಹಕ ಸೇವೆ ಕುರಿತು..
ಅಮೆರಿಕಕ್ಕೆ ಹೋದಾಗ ಬಾನ್ಸ್ ಅಂಡ್ ನೊಬಲ್ಸ್ ಪುಸ್ತಕದ ಅಂಗಡಿಯಲ್ಲಿ ಒಂದು ದಿನ ಕಳೆಯುವುದು ಪ್ರವಾಸದ ಭಾಗವೇ ಆಗಿರುತ್ತಿತ್ತು. ಇಡೀ ದಿನ ಕಳೆದು, ಬರುವಾಗ ಪುಸ್ತಕ ಖರೀದಿಸಿಕೊಂಡು ಬರುವುದು ಅಭ್ಯಾಸ. ಒಂದು ವೇಳೆ ಇಡೀ ದಿನ ಅಲ್ಲಿ ಕುಳಿತು ಪುಸ್ತಕ ಓದಿ, ಹಾಗೇ ಎದ್ದು ಬಂದರೂ ಯಾರೂ ಕೇಳುತ್ತಿರಲಿಲ್ಲ. ನೀವು ಪುಸ್ತಕ ಖರೀದಿಸುವುದಕ್ಕಿಂತ ನಿಮ್ಮ ಸಂತೃಪ್ತಿಯೇ ಮುಖ್ಯ. ನೀವು ಸಂಪ್ರೀತರಾಗಿ ಪುಸ್ತಕ ಖರೀದಿಸುತ್ತೀರಿ ಎಂಬುದು ಅವರ ವ್ಯಾಪಾರಿ ಸಿದ್ಧಾಂತ. ಪುಸ್ತಕ ಖರೀದಿಸಿದ ನಂತರವೂ ಅದು ಇಷ್ಟವಾಗದಿದ್ದರೆ, ನಿಶ್ಚಿತ ದಿನಗಳೊಳಗೆ ಅದನ್ನು ವಾಪಸ್ ಮಾಡಬಹುದಿತ್ತು.

ಇಂಥ ವ್ಯಾಪಾರವನ್ನು ಭಾರತದಲ್ಲಿ ಮಾಡಲು ಸಾಧ್ಯವೇ ಇಲ್ಲ. ಇಡೀ ದಿನ ಪುಸ್ತಕದ ಅಂಗಡಿಯಲ್ಲಿ ಕಳೆದು ಹಾಗೇ ಎದ್ದು ಬರುವವರೇ ಹೆಚ್ಚು. ಖರೀದಿಸಿದ ಪುಸ್ತಕವನ್ನು ವಾಪಸ್ ಪಡೆಯುವ ಸೌಲಭ್ಯ ಇದ್ದರೆ, ಎರಡು ದಿನಗಳಲ್ಲಿ ಓದಿ, ಈ ಪುಸ್ತಕ ಚೆನ್ನಾಗಿಲ್ಲ ಎಂದು ವಾಪಸ್ ಮಾಡುವವರಿಗೇನೂ ಕಮ್ಮಿಯಿಲ್ಲ. ಹೀಗಾಗಿ ನಮ್ಮಲ್ಲಿ ಯಾವ ಪುಸ್ತಕ ವ್ಯಾಪಾರಿಯೂ ಇಂಥ
ಸಾಹಸಕ್ಕೆ ಮುಂದಾಗಲಾರ. ಅಮೆರಿಕದಲ್ಲಿ ಗ್ರಾಹಕ ಸೇವೆ (Customer Service)ಗೆ ಕೊಡುವ ಮಹತ್ವ ವಿಶೇಷವಾದುದು.

ನಮ್ಮಲ್ಲಿ ಇತ್ತಿತ್ತಲಾಗಿ ಗ್ರಾಹಕರ ಸೇವೆಯ ಮಹತ್ವ ಅರಿವಿಗೆ ಬಂದಿರುವುದು ಸಮಾಧಾನಕರ ಸಂಗತಿ. ಆದರೂ ಬಹುತೇಕ ಸಂದರ್ಭಳಲ್ಲಿ ಕಸ್ಟಮರ್ ಕೇರ್‌ಗೆ ಕರೆ ಮಾಡಿದರೆ, ಯಾರೂ ಎತ್ತುವುದೇ ಇಲ್ಲ. ಅಂದರೆ ಕಸ್ಟಮರ್‌ಗೆ ಡೋಂಟ್ ಕೇರ್! ಯೋಗಿ ದುರ್ಲಭಜೀ ಅವರು ಗ್ರಾಹಕರ ಸೇವೆ ಕುರಿತು ಹೇಳಿದ ಕೆಲವು ಮಾತುಗಳನ್ನು ನೆನಪಿಸಿಕೊಳ್ಳುತ್ತೇನೆ. ಕಸ್ಟಮರ್ ಸರ್ವಿಸ್ ಎನ್ನು ವುದು ಪ್ರತ್ಯೇಕ ವಿಭಾಗವಲ್ಲ. ಅದು ವ್ಯಾಪಾರದ ಸಿದ್ಧಾಂತ.

ಮಾರಾಟ ಅಥವಾ ವ್ಯಾಪಾರ ಆದ ನಂತರವೂ ಗ್ರಾಹಕರ ಹಿತದ ಬಗ್ಗೆ ಯೋಚಿಸುವುದೇ ಗ್ರಾಹಕರ ಸೇವೆ. ಯಾರು ಇದನ್ನು ಶ್ರದ್ಧೆಯಿಂದ ಮಾಡುತ್ತಾರೋ, ಅವರು ಎಂಥ ವ್ಯವಹಾರದಲ್ಲೂ ಯಶಸ್ವಿ ಆಗಬಲ್ಲರು. ನಿಮಗಿಂತ ಗ್ರಾಹಕರಿಗೆ ನಿಮ್ಮ ಪ್ರಾಡಕ್ಟ್ ಬಗ್ಗೆ ಗೊತ್ತಿರುತ್ತದೆ ಎಂಬುದನ್ನು ಮರೆಯಬಾರದು. ನೀವು ಹೇಳಿzಲ್ಲವನ್ನೂ ಗ್ರಾಹಕರು ನಂಬುವುದಿಲ್ಲ. ನಿಮ್ಮನ್ನು ಪರೀಕ್ಷಿಸದೇ ನಿಮ್ಮನ್ನು ಒಪ್ಪಿಕೊಳ್ಳುವುದಿಲ್ಲ. ಇಂಟರ್ನೆಟ್ ಕಸ್ಟಮರ್ ಸೇವೆಯಲ್ಲಿ ನಿಮ್ಮ ಪ್ರತಿಸ್ಪರ್ಧಿ ನಿಮಗಿಂತ ಒಂದು ಮೌಸ್ ಕ್ಲಿಕ್ ಸನಿಹದಲ್ಲಿ (ದೂರ?) ಇದ್ದಾನೆ ಎಂಬುದನ್ನು ಮರೆಯಬೇಡಿ. ಒಮ್ಮೆ ಗ್ರಾಹಕನನ್ನು ಕಳೆದುಕೊಂಡರೆ ಮತ್ತೊಮ್ಮೆ ಗಳಿಸುವುದು ಕಷ್ಟ.