ಪ್ರಶಾಂತ್ ಟಿ.ಆರ್
ಕೆಲವು ವರ್ಷಗಳ ಹಿಂದೆಯೇ ‘ರನ್’ ಚಿತ್ರ ತೆರೆಗೆ ಬಂದಿತ್ತು. ಆ್ಯಕ್ಷನ್, ಥ್ರಿಲ್ಲರ್ ಕಥಾಹಂದರ ಹೊಂದಿದ್ದ ಆ ಚಿತ್ರ ಸಿನಿಪ್ರಿಯರನ್ನು ಸೆಳೆದಿತ್ತು. ಆ ಚಿತ್ರವನ್ನು ನಿರ್ದೇಶಿಸಿ ಸೈ ಎನಿಸಿಕೊಂಡ ನಿರ್ದೇಶಕ ಸಂಜಯ್, ಅದೇ ಯಶಸ್ಸಿನಲ್ಲಿ ‘ರನ್ 2’ ಚಿತ್ರವನ್ನು ತೆರೆಗೆ
ತಂದಿದ್ದಾರೆ.
‘ರನ್ 2’ ಚಿತ್ರೀಕರಣ ಮುಗಿಸಿ ವರ್ಷಗಳೇ ಕಳೆದಿದ್ದು, ಚಿತ್ರ ಬಿಡುಗಡಗೆ ಕರೋನಾ ಅಡ್ಡಿಯಾಗಿತ್ತು. ಅಂತು ಈಗ ಎಲ್ಲಾ ಅಡೆ ತಡೆಗಳನ್ನು ದಾಟಿ ‘ರನ್ 2’ ತೆರೆಯಲ್ಲಿ ಯಶಸ್ವಿ ಓಟ ಆರಂಭಿಸಿದೆ. ಈ ಹಿಂದೆಯೇ ಬಿಡುಗಡೆಯಾಗಿದ್ದ ಚಿತ್ರದ ಆ್ಯಕ್ಷನ್ ಟ್ರೇಲರ್ ಸಿನಿಪ್ರಿಯರಲ್ಲಿ ಕಾತರತೆ ಹೆಚ್ಚುವಂತೆ ಮಾಡಿತ್ತು.
‘ರನ್ 2’ ಟ್ರೇಲರ್ನಲ್ಲಿ ಆ್ಯಕ್ಷನ್ ಸನ್ನಿವೇಶಗಳೇ ಹೆಚ್ಚಾಗಿ ಕಂಡರೂ, ಸುಂದರ, ನವಿರಾದ ಲವ್ಸ್ಟೋರಿ ಚಿತ್ರದ ಕಥೆುಲ್ಲಿದೆ. ಆದರೆ ಆ ಬಗ್ಗೆ ನಿರ್ದೇಕರು ಎಲ್ಲಿಯೂ ಸುಳಿವು ಬಿಟ್ಟು ಕೊಟ್ಟಿಲ್ಲ. ಟ್ರೇಲರ್ ನಡುವೆ ಸುಳಿಯುವ ಸಂಗೀತ ಕೇಳಲು ಇಂಪಾಗಿದ್ದು, ಪ್ರೇಮಕಥೆಯ ಸುಳಿವು ನೀಡುತ್ತದೆ. ದಟ್ಟ ಕಾನನದ ನಡುವೆ ನಡೆಯುವ ಫೈಟಿಂಗ್, ಥ್ರಿಲ್ ನೀಡುತ್ತದೆ.
ಗ್ರಾಫಿಕ್ಸ್ ಕೈಚಳಕ ಸಿನಿಮಾಕ್ಕೆೆ ಮೆರುಗು ನೀಡುತ್ತದೆ. ಚಿತ್ರವನ್ನು ನೋಡುತ್ತಿದ್ದರೆ ನಮ್ಮ ಕಾಲೇಜು ದಿನಗಳು ತೆರೆಯಲ್ಲಿ ಹಾದು ಹೋಗುತ್ತವೆ ಎನ್ನುತ್ತಾರೆ ನಿರ್ದೇಶಕ ಸಂಜಯ್.
ಪರೋಪಕಾರಿ
‘ರನ್ 2’ ಜರ್ನಿಯಲ್ಲೇ ಸಾಗುವ ಕಥೆ. ಚಿತ್ರದ ನಾಯಕ ಬಲು ಮೃದು ಸ್ವಭಾವದವನು. ಕಷ್ಟದಲ್ಲಿದ್ದವರನ್ನು ಕಂಡರೆ ಕೂಡಲೇ ಸಹಾಯಕ್ಕೆ ಧಾವಿಸುವ ಮನಸು ಆತನದು. ಹೀಗಿರುವಾಗಲೇ ಯುವ ಪ್ರೇಮಿಗಳಿಬ್ಬರು. ಮನೆ ಬಿಟ್ಟು ಬಂದಿರುತ್ತಾರೆ. ಮನೆಯವ ರಿಂದ ಅವರಿಗೆ ಪ್ರಾಣಭಯವೂ ಎದುರಾಗಿರುತ್ತದೆ. ನಾಯಕ ಈ ಪ್ರೇಮಿಗಳ ಸಹಾಯಕ್ಕೆ ಧಾವಿಸುತ್ತಾನೆ. ಅವರಿಬ್ಬರಿಗೂ ಮದುವೆ ಮಾಡಿಸಿ, ಸುರಕ್ಷಿತ ಜಾಗಕ್ಕೆೆ ತಲುಪಿಸುವ ಶಪತ ಮಾಡುತ್ತಾನೆ. ಅದಕ್ಕಾಗಿ ಶತಾಯಗತಾಯ ಪ್ರಯತ್ನ ಪಡುತ್ತಾನೆ. ಆದರೆ ಅವರು ಎಲ್ಲೇ ಹೋದರು ಮನೆಯವರು ಹಿಂದಿನಿಂದಲೇ ಅರಸಿ ಬರುತ್ತಿರುತ್ತಾರೆ.
ಹಾಗಾಗಿ ಅವರೊಂದಿಗೆ ಸಂಘರ್ಷ ಅನಿವಾರ್ಯವಾಗುತ್ತದೆ. ನಾಯಕ , ಪ್ರೇಮಿಗಳಿಗೆ ಮೊದಲೇ ಮಾತುಕೊಟ್ಟಂತೆ ಅವರನ್ನು ದುರುಳರಿಂದ ಕಾಪಾಡುತ್ತಾನಾ? ಈ ಕಾರ್ಯದಲ್ಲಿ ಆತನಿಗೆ ಏನೆಲ್ಲಾ ಸವಾಲುಗಳು, ಸಮಸ್ಯೆೆಗಳು ಎದುರಾಗುತ್ತವೆ ಎಂಬುದನ್ನು ತೆರೆಯಲ್ಲಿಯೇ ನೋಡಬೇಕು ಎನ್ನುತ್ತಾರೆ ನಿರ್ದೇಶಕರು.
ಮನದಲ್ಲಿ ಉದಿಸಿದ ಪ್ರೀತಿ
ನಾಯಕ, ಆ ಇಬ್ಬರು ಪ್ರೇಮಿಗಳನ್ನು ಕಾಪಾಡುವ ದಾರಿಯಲ್ಲಿ ಸಾಗುತ್ತಿರುವಾಗಲೇ ನಾಯಕಿ ಇವರಿಗೆ ಜತೆಯಾಗುತ್ತಾಳೆ. ಆಕೆಯನ್ನೂ ಖಳರ ಗುಂಪೊಂದು ಬೆನ್ನತ್ತಿರುತ್ತದೆ. ಹಾಗಾಗಿ ಆಕೆಯನ್ನು ಕಾಪಾಡುವ ಅನಿವಾರ್ಯತೆ ನಾಯಕನ ಹೆಗಲೇರುತ್ತದೆ. ಈ ನಡುವೆಯೇ ದಾಂಡಿಗರು ಯಾಕೆ ನಾಯಕಿಯ ಬೆನ್ನುಬಿದ್ದರು ಎಂಬ ಪ್ರಶ್ನೆಯೂ ಕಾಡುತ್ತದಂತೆ. ಹೀಗೆ ಕಥೆ ಸಾಗುತ್ತಲೇ ನಾಯಕಿಗೆ ನಾಯಕನ ಮೇಲೆ ಪ್ರೀತಿ ಚಿಗುರುತ್ತದೆ. ಈ ಸಂಘರ್ಷದ ನಡುವೆ ತನ್ನ ಪ್ರೀತಿಯನ್ನು ನಿವೇದನೆ ಮಾಡಿಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಹಾಗಾದರೆ ನಾಯಕನಿಗೂ, ನಾಯಕಿಯ ಮೇಲೆ ಪ್ರೀತಿ ಹುಟ್ಟುತ್ತದೆಯೇ ದುರುಳರಿಂದ ಆಕೆಯನ್ನು ಹೇಗೆ ರಕ್ಷಿಸುತ್ತಾನೆ? ಎಂಬುದೇ ಚಿತ್ರದ ಸಸ್ಪೆನ್ಸ್.
ಪಂಚಿಂಗ್ ಪವನ್
2015ರ ಮಿಸ್ಟರ್ ವರ್ಲ್ಡ್ ಮತ್ತು ರಾಜ್ಯ ಸರ್ಕಾರದಿಂದ ಏಕಲವ್ಯ ಪ್ರಶಸ್ತಿ ಪಡೆದಿರುವ ಮಂಗಳೂರಿನ ಪವನ್ಶೆಟ್ಟಿ ನಾಯಕನಾಗಿ ನಟಿಸಿದ್ದಾರೆ.
‘ಪಂಟ’ ಚಿತ್ರದಲ್ಲಿ ಕುಲುಕು ಕುಲುಕು ಹಾಡಿಗೆ ಹೆಜ್ಜೆ ಹಾಕಿ, ಪಡ್ಡೆ ಹುಡುಗರ ನಿದ್ದೆ ಕದ್ದಿದ್ದ, ಬಾಂಬೆಯ ತಾರಾ ಶುಕ್ಲಾ ನಾಯಕಿ ಯಾಗಿ ಅಭಿನಯಿಸಿದ್ದಾರೆ. ಇವರೊಂದಿಗೆ ಕುರಿರಂಗ, ಜನಾರ್ಧನ್ ಮತ್ತು ಖಳನಾಗಿ ಮಹೇಶ್ಕುಮಾರ್ ಕುಮುಟ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ. ಛಾಯಾಗ್ರಹಣ ರಮೇಶ್, ನೃತ್ಯ ಅಕುಲ್, ಸಾಹಸ ಕೌರವ್ವೆಂಕಟೇಶ್ ಅವರದಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಎಂ.ಸಂಜೀವರಾವ್ ಸಂಗೀತ ಸಂಯೋಜಿಸಿದ್ದಾರೆ.
ಎಸ್.ಪಿ.ಆರ್ ಪ್ರೊಡಕ್ಷನ್ ಮೂಲಕ ಎಂ.ಸುಜಾತ ಚಿತ್ರಕ್ಕೆ ಬಂಡವಾಳ ಹೂಡಿದ್ದು, ನಿರ್ಮಾಣದ ಜವಾಬ್ದಾರಿ ಹೊತ್ತು
ಕೊಂಡಿದ್ದಾರೆ. ಕುಮುಟ, ಹೊನ್ನಾವರ, ಯಾಣದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.