Friday, 27th December 2024

Vishwavani Editorial: ಸಂಸತ್‌ನಲ್ಲಿ ಕಲಾಪ ನಡೆಯಲಿ

ಸಂಸತ್ತಿನಲ್ಲಿ ಗೌತಮ್ ಅದಾನಿ ಲಂಚ ಪ್ರಕರಣ ಮತ್ತು ಸಂಭಾಲ್ ಹಿಂಸಾಚಾರ ಪ್ರಕರಣದ ಗದ್ದಲ ಕೊನೆಗೊಳ್ಳುವ ಸೂಚನೆ ದೊರೆತಿರುವುದು
ಸಮಾಧಾನದ ವಿಷಯ. ಕಳೆದ ಸೋಮವಾರ ಅಧಿವೇಶನ ಆರಂಭವಾದ ದಿನದಿಂದ ಈ ತನಕ ಯಾವುದೇ ಕಲಾಪ ನಡೆದಿಲ್ಲ. ದೇಶದ ಪ್ರಜಾಸತ್ತೆಯ ಆತ್ಮವೆನಿಸಿದ ಸಂಸತ್ತು ಈ ರೀತಿ ಯಾವುದೇ ಚರ್ಚೆಗಳಿಲ್ಲದೆ, ಶಾಸನಾತ್ಮಕ ಕೆಲಸಗಳನ್ನು ನಿರ್ವಹಿಸದೆ ಮುಂದೂಡಿಕೆಯಾಗಿದ್ದು ದುರದೃಷ್ಟಕರ ವಿದ್ಯಮಾನ.

ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಸದಸ್ಯರು ಯಾವುದೇ ವಿಷಯಗಳನ್ನು ಮಂಡಿಸಲು ಇರುವ ಸೂಕ್ತ ವೇದಿಕೆ ಸಂಸತ್ತು. ಆದರೆ ಇಲ್ಲಿ ಯಾವುದೇ ಚರ್ಚೆ ನಡೆಯುದೆ, ಪ್ರತಿದಿನವೂ ಗದ್ದಲದಲ್ಲಿಯೇ ಕಲಾಪ ಕೊನೆಗೊಳ್ಳುತ್ತಿರುವುದು ದೇಶದ ನಾಗರಿಕರಿಗೆ ಮಾಡುವ ಅಪಚಾರ ಎಂದರೆ ತಪ್ಪಾಗಲಾರದು. ಆಡಳಿತಮತ್ತು ಪ್ರತಿಪಕ್ಷ ಸಂಸತ್ತು ಎಂಬ ರಥದ ಎರಡು ಚಕ್ರಗಳ ರೀತಿಯಲ್ಲಿ ಕಾರ‍್ಯ ನಿರ್ವಹಿಸಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಎಂದರೆ ಪರಸ್ಪರ ವೈರಿಗಳು ಎಂಬ ಧೋರಣೆ ಕಂಡು ಬರುತ್ತಿದೆ. ಆಡಳಿತ ಪಕ್ಷದ ಪ್ರತಿಯೊಂದು ನಡೆಯಲ್ಲೂ ಹುಳುಕು ಕಾಣುವುದು ಪ್ರತಿಪಕ್ಷದ ಕಾಯಕವಾಗಬಾರದು.

ಅದೇ ರೀತಿ ಪ್ರತಿಪಕ್ಷವನ್ನು ಕಡೆಗಣಿಸಿ, ಹಠಮಾರಿ ವರ್ತನೆ ತೋರಿಸುವುದು ಆಡಳಿತ ಪಕ್ಷಕ್ಕೆ ಶೋಭೆಯಲ್ಲ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದು ನೆಹರೂ, ಲೋಹಿಯಾ, ವಾಜಪೇಯಿ ಮುಂತಾದ ನಾಯಕರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ಸಂಸತ್ತು ಕಾರ‍್ಯಾಚರಿಸಿದರೆ ಅದು
ನಿಜಕ್ಕೂ ದೇಶದ ಪ್ರಗತಿಗೆ ಬುನಾದಿಯಾಗಲಿದೆ. ಲಂಚ ಪ್ರಕರಣದಲ್ಲಿ ಅಮೆರಿಕಾ ನ್ಯಾಯಾಲಯದಿಂದ ಉದ್ಯಮಿ ಗೌತಮ್ ಅದಾನಿಗೆ ಬಂಧನದ
ವಾರಂಟ್ ಸಂಸತ್ತಿನಲ್ಲಿ ಚರ್ಚಿಸಲೇಬೇಕಾದ ವಿಚಾರ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇದೇ ವಿಷಯ ಮೊದಲು ಚರ್ಚೆಯಾಗ ಬೇಕೆನ್ನುವುದರಲ್ಲಿ ಅರ್ಥ ವಿಲ್ಲ.

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ, ಮಣಿಪುರ, ಕಾಶ್ಮೀರ ಹಿಂಸಾಚಾರ, ಅನುದಾನ, ತೆರಿಗೆ ಮತ್ತು ಪ್ರಕೃತಿ ವಿಕೋಪ ನೆರವು
ವಿಚಾರದಲ್ಲಿ ದಕ್ಷಿಣ ರಾಜ್ಯಗಳತ್ತ ತಾರತಮ್ಯ ಧೋರಣೆ, ಪಾಕಿಸ್ತಾನದ ಬೆಳವಣಿಗೆ, ನಕ್ಸಲ್ ಸಮಸ್ಯೆ, ಇವಿಎಂ ಕುರಿತ ಸಂದೇಹಗಳು ಸೇರಿದಂತೆ
ಸಂಸತ್ತಿನಲ್ಲಿ ಪ್ರಸ್ತಾಪಿಸಲೇಬೇಕಾದ ಹಲವು ವಿಷಯಗಳಿವೆ. ಇದನ್ನಾವುದೂ ಚರ್ಚಿಸದೆ ಪ್ರತಿಪಕ್ಷ ಅದಾನಿ, ಸಂಭಾಲ್ ಹಿಂಸಾಚಾರಗಳನ್ನೇ ಪ್ರಧಾನ ಅಸ್ತ್ರವಾಗಿ ಝಳಪಿಸುವುದರಲ್ಲಿ ಅರ್ಥವಿಲ್ಲ.

ಈ ವಿಚಾರದಲ್ಲಿ ಚರ್ಚೆಗೆ ಹಿಂದೇಟು ಹಾಕುವ ಆಡಳಿತ ಪಕ್ಷದ ನಿಲುವು ಕೂಡ ಸಂದೇಹಾಸ್ಪದವಾಗಿದೆ. ಇದೀಗ ಇಂಡಿಯ ಒಕ್ಕೂಟದ ಸಭೆ ಮಂಗಳವಾರದಿಂದ ಕಲಾಪಕ್ಕೆ ಹಾಜರಾಗುವ ತೀರ್ಮಾನ ತೆಗೆದುಕೊಂಡಿರುವುದು ಸ್ವಾಗತಾರ್ಹ ಬೆಳವಣಿಗೆ.

ಇದನ್ನೂ ಓದಿ: Vishwavani Editorial: ಗತವೈಭವಕ್ಕೆ ಮರಳಲಿ ಚಂದನವನ