ನಮ್ಮ ಜೀವನ ಸಾರ್ಥಕತೆ ಪಡೆಯಬೇಕಾದರೆ ಮಾನವೀಯ ಮೌಲ್ಯ ರೂಢಿಸಿಕೊಂಡು, ಆದರ್ಶ ವ್ಯಕ್ತಿಯಾಗಿ ನಿರ್ದಿಷ್ಟ
ಗುರಿ ಹೊಂದಿ ಯಾವುದಾದರೂ ಕ್ಷೇತ್ರದಲ್ಲಿ ಸಾಧನೆಯತ್ತ ಮುಖ ಮಾಡಬೇಕು. ಆ ಸಾಧನೆ ಇತರರಿಗೆ ಪ್ರೇರಣೆ ಆಗಬೇಕು. ನಮ್ಮ ಸಾಧನೆ ಕಂಡು ಇತರರೂ ಸಂತಸ ಪಡಬೇಕು. ನಾವೂ ಹಾಗೆ ಸಾಧಿಸಬೇಕು ಎಂಬ ಛಲ ಅವರಲ್ಲಿ ಹುಟ್ಟಬೇಕು.
ರಂಗನಾಥ ಎನ್ ವಾಲ್ಮೀಕಿ
ಇದು ಸ್ಪರ್ಧಾತ್ಮಕ ಯುಗ. ಇಲ್ಲಿ ನಾವೂ ಬದುಕಬೇಕಾದರೆ ಸ್ಪರ್ಧೆಯಲ್ಲಿ ಭಾಗಿಯಾಗುವುದು ಅಗತ್ಯ. ಸ್ಪರ್ಧೆ ಅಂದ ಮೇಲೆ ಸೋಲು ಗೆಲುವು ಸಹಜ. ಸೋಲಿನ ಅನುಭವ ಪಡೆದವರೂ ಮಾತ್ರ ಗೆಲುವಿನ ಮಹತ್ವ ತಿಳಿಯಲು ಸಾಧ್ಯ. ಯಾವುದೇ ಕ್ಷೇತ್ರ ವಿರಲಿ ಸೋಲು ಗೆಲುವು ಸಾಮಾನ್ಯ. ಸೋಲಿಗೆ ಅಳುಕಬಾರದು, ಅಂಜಬಾರದು, ಕುಗ್ಗಬಾರದು.
ಸೋಲೇ ಗೆಲುವಿಗೆ ಮೆಟ್ಟಿಲು ಎಂಬ ಭಾವ ತಾಳಬೇಕು. ಗೆಲುವು ಮರಿಚೀಕೆ ಎನಿಸಬಹುದು. ಆದರೂ ಪ್ರಯತ್ನ ಬಿಡಬಾರದು. ಆಶಾವಾದಿಗಳಾಗಿ ಯಾವು ದೋ ನಿರ್ದೀಷ್ಟ ಗುರಿಯಿಟ್ಟುಕೊಂಡು ಅದನ್ನು ಸಾಧಿಸುವದರಲ್ಲಿಯೆ ಬದುಕಿನ ಥ್ರಿಲ್ ಅಡಗಿರುತ್ತದೆ. ಅಲ್ಲಿ ಗೆಲುವು ಎಲ್ಲರಿಗೂ ಸಿಗುವುದು. ಒಂದು ಓಟದ ಸ್ಪರ್ಧೆಯಲ್ಲಿ ಅದೆಷ್ಟೂ ಜನ ಭಾಗವಹಿಸಿದರೂ, ಪ್ರಥಮ ಸ್ಥಾನ ಪಡೆಯುವನು ಒಬ್ಬನೇ. ಪ್ರಥಮ ಸ್ಥಾನ ಬರಲಿಲ್ಲ ಎಂದು ಸ್ಪರ್ಧೆಯಿಂದ ದೂರ ಉಳಿಯುವುದು ಉತ್ತಮ ಲಕ್ಷಣವಲ್ಲ. ಇಂದು ಗೆಲುವು ಬೇರೆಯವರ ಪಾಲಾಗಿದ್ದರೂ, ನಾಳೆ ಅದು ನಮ್ಮ ಪಾಲು ಆಗಬಹುದು.
ಇನ್ನೊಬ್ಬರ ಪಾಲು ಆಗಬಹುದು. ಈ ಬದುಕಿನಲ್ಲಿ ಯಾವುದು ಶಾಶ್ವತವಲ್ಲ . ಹೀಗಿರುವಾಗ ಜಯ, ಗೆಲುವು ಅದು ಹೇಗೆ ಶಾಶ್ವತ ಆಗಲು ಸಾಧ್ಯ. ಎಲ್ಲಾ ಕ್ಷೇತ್ರಗಳಲ್ಲಿ ಅಸಾಧ್ಯ ಎನ್ನುವಂತಹ ದಾಖಲೆಗಳು ಪುಡಿ ಪುಡಿಯಾಗುತ್ತವೆ. ಈ ಸತ್ಯ ಅರಿಯಬೇಕು.
ಸೋಲು ಒಂದು ಅನುಭವವಾದರೆ, ಗೆಲುವು ಅದೊಂದು ಅನುಭವ. ಸೋಲು ಬದುಕಿನಲ್ಲಿ ಅನುಭವ, ಸ್ಥಿತಪ್ರಜ್ಞೆ ತಂದರೆ
ಗೆಲುವು ಆನಂದ ಸಂಭ್ರಮ ತರುವುದು. ಎರಡೂ ಬದುಕಿಗೆ ಅಗತ್ಯ ಅನಿವಾರ್ಯ. ಎರಡನ್ನೂ ಮುಕ್ತವಾಗಿ ಸ್ವೀಕರಿಸಿರುವ
ಗುಣ ನಮ್ಮಲ್ಲಿ ಬೆಳೆದರೆ ಜೀವನ ಆನಂದಮಯ. ಗೆಲುವಿನ ಅಮಲು ಏರಿಸಿಕೊಂಡರೆ ಅದು ನಮ್ಮಿಂದ ದೂರವಾದಾಗ ಜೀವನ ಅಯೋಮಯ.
ನಮ್ಮ ಸಾಮರ್ಥ್ಯದ ಮಿತಿ ಅರಿತು ನಾವೂ ಸ್ಪರ್ಧೆಗೆ ಇಳಿಯಬೇಕು. ಅದು ಆರೋಗ್ಯಕರ ಸ್ಪರ್ಧೆ ಆಗಿರಬೇಕು. ಅಲ್ಲಿ ಯಾವುದೇ ಸ್ವಾರ್ಥ, ದ್ವೇಷ, ಅಸೂಯೆ, ಮತ್ಸರಕ್ಕೆ ಅವಕಾಶ ಇರಬಾರದು.
ಸ್ಪರ್ಧೆ ಬದುಕಿನ ಭಾಗ ಅಷ್ಟೇ
ಸ್ಪರ್ಧೆ ಬದುಕಿನ ಒಂದು ಭಾಗವಷ್ಟೇ. ಸ್ಪರ್ಧೆಯೇ ಬದುಕಲ್ಲ. ಸ್ಪಷ್ಟವಾಗಿ ಇದನ್ನು ಅರಿತು ಮುನ್ನಡೆಯಬೇಕು. ಸೋಲು ಯಾರಿಗಿಲ್ಲ.! ನೋವು , ಅವಮಾನ , ಸನ್ಮಾನ ಸಹಜ. ಇವೆಲ್ಲಗಳನ್ನು ಮುಕ್ತವಾಗಿ ಸ್ವಿಕರಿಸಿ ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆ
ಇಟ್ಟು ಮುನ್ನಡೆಬೇಕು. ಸೋತವರೂ ನಿರಾಶೆರಾಗದೇ ಗೆದ್ದವರನ್ನು ಅಭಿನಂದಿಸುವ ವಿಶಾಲ ಹೃದಯ ನಮ್ಮದಾಗಿರಬೇಕು. ನಮ್ಮ ಹೋರಾಟ ಜನಪರ ಕಾಳಜಿ ಹೊಂದಿರಬೇಕು. ಸೋಲೇ ಗೆಲುವಿನ ಸೋಪಾನ ಎಂಬ ಮಾತು ವಾಸ್ತವ ಸತ್ಯ.
ಇನ್ನೊಂದು ಸತ್ಯ ಎಂದರೆ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಈ ಸೋಲು ಗೆಲುವು ಚಕ್ರಗಳಂತೆ ಸದಾ ತಿರುಗುತ್ತಿರುತ್ತವೆ. ಹಗಲು ರಾತ್ರಿಗಳಂತೆ ಬಂದು ಹೋಗುತ್ತಿರುವೆ. ನನ್ನ ಬದುಕಿನ ಉದ್ದಕ್ಕೂ ಗೆಲುವೇ ಕಂಡಿರುವೆ, ನಾನೆಂದೂ ಸೋತೆ ಇಲ್ಲ ಎನ್ನುವ ಯಾವ ಒಬ್ಬ ವ್ಯಕ್ತಿಯನ್ನು ಈ ಜಗತ್ತಿನಲ್ಲಿ ಕಾಣಲಾರೆವು. ಸೋಲು ಗೆಲುವಿನ ಪ್ರಮಾಣದಲ್ಲಿ ವ್ಯತ್ಯಾಸ ಇರಬಹುದಷ್ಟೇ. ಅದೇನೆ ಇರಲಿ, ನಮ್ಮ ಜೀವನ ಸಾರ್ಥಕತೆ ಪಡೆಯಬೇಕಾದರೆ ಮಾನವೀಯ ಮೌಲ್ಯ ರೂಢಿಸಿಕೊಂಡು, ಆದರ್ಶ ವ್ಯಕ್ತಿಯಾಗಿ ನಿರ್ದಿಷ್ಟ ಗುರಿ ಹೊಂದಿ ಯಾವುದಾದರೂ ಕ್ಷೇತ್ರದಲ್ಲಿ ಸಾಧನೆಯತ್ತ ಮುಖ ಮಾಡಬೇಕು. ಆ ಸಾಧನೆ ಇತರರಿಗೆ ಪ್ರೇರಣೆ ಆಗಬೇಕು.
ನಮ್ಮ ಸಾಧನೆ ಕಂಡು ಇತರರೂ ಸಂತಸ ಪಡಬೇಕು. ನಾವೂ ಹಾಗೆ ಸಾಧಿಸಬೇಕು ಎಂಬ ಛಲ ಅವರಲ್ಲಿ ಹುಟ್ಟಬೇಕು. ಗೆಲುವು ಸುಮ್ಮನೆ ದೊರೆಯುವುದಿಲ್ಲ ಪ್ರಯತ್ನ ಪಡದೇ ಪ್ರತಿಫಲ ನಿರೀಕ್ಷೆ ಮಾಡಬಾರದು. ಪ್ರಯತ್ನ ಪಟ್ಟರೂ ಒಮ್ಮೊಮ್ಮೆ ನಿರೀಕ್ಷಿತ ಪ್ರತಿಫಲ ಸಿಗದು. ಅಂತಹದರಲ್ಲಿ ಪ್ರಯತ್ನಿಸದೇ ಫಲ ನಿರೀಕ್ಷೆ ಮಾಡುವುದು ಮೂರ್ಖತನ.
ಒಂದು ದಿನವೂ ಪುಸ್ತಕ ಸರಿಯಾಗಿ ಓದದ ವಿದ್ಯಾರ್ಥಿ ಪರೀ ಯಲ್ಲಿ ಅತ್ಯುನ್ನತ ದರ್ಜೆಯಲ್ಲಿ ಪಾಸಾಗಬೇಕು ಎಂಬುದು ಹಾಸ್ಯ ಸ್ಪದವಲ್ಲವೇ? ಹೀಗಾಗಿ ಗೆಲುವಿನ ಮಾರ್ಗ ಹಿಡಿದಾಗ ನಮಗೆ ಮುಖ್ಯವಾಗಿ ನಿರ್ದಿಷ್ಟ ಗುರಿ ಇರಬೇಕು. ಆ ಗುರಿ ಸಾಧನೆಗೆ ಸತತ ಪ್ರಯತ್ನ ಇರಬೇಕು. ಅದಕ್ಕಿಂತ ಮುಖ್ಯವಾಗಿ ಸಾಧಿಸುವ ಮನಸ್ಸು, ಇಚ್ಚೆ ಬಲು ಮುಖ್ಯ. ಸಾಧನೆ ಎನ್ನುವುದು ಒಂದೇ ದಿನ ಸಿಗುವಂತದಲ್ಲ. ಅದು ಶ್ರದ್ಧೆ, ಪ್ರಯತ್ನ, ಆಸಕ್ತಿಯನ್ನು ನಿರೀಕ್ಷೆ ಮಾಡುತ್ತದೆ. ಗೆದ್ದವನು ಬೀಗಬಾರದು.
ಗೆಲುವು ಪಡೆಯಲು ಯಶಸ್ವಿ ಜೀವನವನ್ನು ಸಾಧಿಸಿದವರ ಕಥೆಗಳನ್ನು ಓದಬೇಕು. ಸಾಧನೆಯ ಹಾದಿಯಲ್ಲಿ ಬರುವ ಅಡ್ಡಿ
ಆತಂಕಗಳನ್ನು ಎದುರಿಸುವ ಶಕ್ತಿ ಸಾಮರ್ಥ್ಯ ಹೊಂದಬೇಕು. ಬಾಹ್ಯ ಅಪೇಕ್ಷೆಗಳ ಕಡೆ ಗಮನ ಹರಿಸಬಾರದು. ಅಂದಾಗ ಗೆಲು ವಿನ ಕಡೆ ಮುಖ ಮಾಡಲು ಸಾಧ್ಯ. ಅದೇನೆ ಇರಲಿ ಆಧುನಿಕ ಬದುಕಿನಲ್ಲಿ ಓದು, ಉದ್ಯೋಗ, ಕೃಷಿ, ತಂತ್ರಜ್ಞಾನ, ವಿಜ್ಞಾನ ಎಲ್ಲಾ ಕ್ಷೇತ್ರದಲ್ಲಿ ಸ್ಪರ್ಧೆಯಿದೆ.
ನಾವೂ ಅದರ ಒಂದು ಭಾಗವೇ. ಸ್ಪರ್ಧೆಯನ್ನು ಮುಕ್ತ ಮನದಿಂದ ಒಪ್ಪಿ ನಮ್ಮ ಶಕ್ತಿಯಾನುಸಾರ ಪ್ರಾಮಾಣಿಕ ಪ್ರಯತ್ನ ಮಾಡೋಣ. ಪ್ರಯತ್ನದ ಹೊರತಾಗಿಯೂ ಫಲಿತಾಂಶ ಏನೇ ಬರಲಿ ಅದನ್ನು ಮುಕ್ತವಾಗಿ ಸ್ವೀಕರಿಸೋಣ. ಆಹಾ ಸಾಧನೆ, ಗೆಲುವು ಎಂದರೆ ದೊಡ್ಡದು ಆಗಿರಬೇಕಿಂದಿಲ್ಲ. ಜಸ್ಟ್ ಪಾಸ್ ಆಗುವ ವಿದ್ಯಾರ್ಥಿ ಪ್ರಥಮ ದರ್ಜೆಯಲ್ಲಿ ಪಾಸಾದರೆ ಅದು ಸಾಧನೆ. ಒಂದು ಪುಟ ಬರೆಯುವಾತ ಒಂದು ಪುಸ್ತಕ ಬರೆದರೂ ಅದು ಸಾಧನೆ. ಒಂದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜಯ ಸಾಧಿಸಿದರೆ ಅದೂ ಸಾಧನೆಯೆ. ವ್ಯಕ್ತಿ ವ್ಯಕ್ತಿಗೆ ಸಾಧನೆ ಆಳ ಭಿನ್ನವಾಗುವುದು.
ಕೊನೆಯಲ್ಲಿ ನೆನಪಿಡಬೇಕಾದದು ಒಂದೇ : ಸೋಲು ಮತ್ತು ಗೆಲುವುಗಳನ್ನು ಸಮಾನ ಮನಸ್ಥಿತಿಯಿಂದ ಸ್ವೀಕರಿಸೋಣ.
ಸಾಧನೆಯ ಹಾದಿ ಕಡೆ ಸಾಗೋಣ.