Saturday, 21st September 2024

ದಿಢೀರನೆ ಅಸ್ವಸ್ಥರಾದ ಎಲ್ಲೂರಿನ 476 ಮಂದಿ ಗ್ರಾಮಸ್ಥರು

ವಿಜಯವಾಡ: ಆಂಧ್ರ ಪ್ರದೇಶದಲ್ಲಿ ಒಬ್ಬರು ಸಾವನ್ನಪ್ಪಿ ಬರೊಬ್ಬರಿ 476 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪಶ್ಚಿಮ ಗೋದಾವರಿಯ ಜಿಲ್ಲಾ ಕೇಂದ್ರ ಎಲೂರಿನಲ್ಲಿ ಈ ಘಟನೆ ನಡೆದಿದ್ದು, ಇಡೀ ಊರಿನ ನಿವಾಸಿಗಳು ದಿಢೀರನೇ ಅಸ್ವಸ್ಥ ರಾಗಿದ್ದಾರೆ. ವಾಂತಿ, ತೀವ್ರ ಚಳಿ ಮತ್ತು ತಲೆನೋವು ಕಾಣಿಸಿಕೊಂಡಿದೆ. ಅಸ್ವಸ್ಥರಾದ ಗ್ರಾಮಸ್ಥರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಸ್ತುತ ಅಸ್ವಸ್ಥರ ಪೈಕಿ 332 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದು, ಇನ್ನೂ 125ಕ್ಕೂ ಹೆಚ್ಚು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಸ್ವಸ್ಥರ ಪೈಕಿ 222 ಮಂದಿ ಮಹಿಳೆಯರು ಮತ್ತು 67 ಮಂದಿ ಮಕ್ಕಳು, 26 ಮಂದಿ ಯುವತಿಯರು ಸೇರಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಜನರ ಅಸ್ವಸ್ಥತೆಗೆ ಜಿಲ್ಲಾಡಳಿತ ಸರಬರಾಜು ಮಾಡಿದ್ದ ಕಲುಷಿತ ಕುಡಿಯುವ ನೀರು ಕಾರಣ ಎಂದು ಶಂಕಿಸ ಲಾಗಿದೆಯಾದರೂ, ಈ ಆರೋಪವನ್ನು ನಿರಾಕರಿಸಿರುವ ಜಿಲ್ಲಾಡಳಿತ ನೀರು ಕಲುಷಿತವಾಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದೆ. ಇನ್ನು ಅಸ್ವಸ್ಥರಿಗೆ ಚಿಕಿತ್ಸೆ ನೀಡುತ್ತಿದ್ದ ಓರ್ವ ನರ್ಸ್ ಕೂಡ ಅಸ್ವಸ್ಥರಾಗಿದ್ದು, ಈ ಅಸ್ವಸ್ಥತೆ ಮಾನವರಿಂದ ಮಾನವರಿಗೆ ತಗಲು ತ್ತದೆಯೇ ಎಂಬ ಆತಂಕ ಕೂಡ ವ್ಯಕ್ತವಾಗುತ್ತಿದೆ.

ಎಲೂರಿಗೆ ಕೇಂದ್ರ ತಂಡ ದೌಡಾಯಿಸಿದ್ದು ಪರಿಸ್ಥಿತಿ ಅವಲೋಕಿಸುತ್ತಿದೆ. ವಿಚಾರ ತಿಳಿಯುತ್ತಿದ್ದಂತೆಯೇ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಆಸ್ಪತ್ರೆಗೆ ದೌಡಾಯಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.