Friday, 27th December 2024

Vishweshwar Bhat Column: ಇಂಥ ಸಣ್ಣ ಪುಟ್ಟ ಸಂಗತಿಗಳೇ ಜಪಾನನ್ನು ದೊಡ್ಡ ದೇಶವನ್ನಾಗಿ ಮಾಡಿದೆ !

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

ಜಪಾನಿನ ಕೆಲವು ನಗರಗಳಲ್ಲಿ 8 ದಿನ ತಿರುಗಾಡುವಾಗ ನನಗೆ ಕಂಡಿzಲ್ಲವೂ ಹೊಸತೇ. ಯಾವುದನ್ನೇ ನೋಡಿದರೂ ನಾನು ಅದಕ್ಕೂ ಮುನ್ನ ನೋಡಿರಲಿಲ್ಲ ಎನಿಸುತ್ತಿತ್ತು.

ಹೀಗಾಗಿ ಬಸ್ಸಿನಲ್ಲಿ, ಬುಲೆಟ್ ಟ್ರೇನಿನಲ್ಲಿ, ಹಡಗಿನಲ್ಲಿ ಸಂಚರಿಸುವಾಗ ಒಂದು ನಿಮಿಷವೂ ಕಣ್ಣು ಮುಚ್ಚುವ ಪ್ರಶ್ನೆಯೇ ಇರಲಿಲ್ಲ. ಒಂದು ಕ್ಷಣ ಕಣ್ಮುಚ್ಚಿದರೆ, ಅದ್ಯಾವುದೋ ಅಮೂಲ್ಯ ಸಂಗತಿ ತಪ್ಪಿ ಹೋಗಬಹುದೆಂದು ಪುಟ್ಟ ಮಗುವಿನ ಕುತೂಹಲದಿಂದ ಕಣ್ಣಗಲಿಸಿ ನೋಡುತ್ತಾ ಇರುತ್ತಿದ್ದೆ.

ಜಪಾನ್ ಒಂದು ಬಯಲು ವಿಶ್ವವಿದ್ಯಾಲಯವೇ. ಕಣ್ಣುಬಿಟ್ಟು ಏನನ್ನೇ ನೋಡಿದರೂ ಏನಾದರೂ ಹೊಸ ವಿಷಯ ಕಲಿತುಳ್ಳಬಹುದು. ನಾವು ಟೋಕಿಯೋದಿಂದ ಮೌಂಟ್ ಫುಜಿಗೆ ಬಸ್ಸಿನಲ್ಲಿ ಹೋಗುವಾಗ ಅಲ್ಲಲ್ಲಿ ರಸ್ತೆಯ ಇಕ್ಕೆಲ ಗಳಲ್ಲಿ ಉದ್ದಕ್ಕೂ ಅಲ್ಯೂಮಿನಿಯಂ ಶೀಟಿನ ತಡೆಗೋಡೆ ನಿರ್ಮಿಸಿರುವುದನ್ನು ನೋಡಬಹುದು. ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸದ್ದಿನಿಂದ ರಸ್ತೆಯ ಪಕ್ಕದಲ್ಲಿರುವ ನಿವಾಸಿಗಳಿಗೆ ತೊಂದರೆಯಾಗಬಾರದು ಮತ್ತು ಅಷ್ಟರಮಟ್ಟಿಗೆ ಸದ್ದು ಕಮ್ಮಿಯಾಗಲೆಂದು ಅಂಥ ತಡೆಗೋಡೆ ನಿರ್ಮಿಸಿರುವುದನ್ನು ಕಾಣಬಹುದು.

ಪ್ರಾಯಶಃ ಅಂಥ ತಡೆಗೋಡೆಗಳು ಬೇರೆ ದೇಶಗಳಲ್ಲಿ ಅಪರೂಪ. ಜಪಾನಿನಲ್ಲಿ ಓಡಾಡುವಾಗ ಇಡೀ ವ್ಯವಸ್ಥೆ ಅತ್ಯಂತ ಶಿಸ್ತುಬದ್ಧ ಮತ್ತು ಕರಾರುವಾಕ್ಕಾಗಿ ನಡೆಯುತ್ತಿರುವುದು ಅನುಭವಕ್ಕೆ ಬರುತ್ತದೆ. ರಸ್ತೆಯ ಪಕ್ಕದಲ್ಲಿರುವ ಫಲಕಗಳು ಕಿತ್ತುಹೋಗಿರುವುದು, ಕರೆಂಟ್ ಕಂಬಗಳು ವಾಲಿರುವುದು, ಬೇಲಿ ಮುರಿದುಹೋಗಿರುವುದು, ಜಾಹೀ ರಾತು ಫಲಕಗಳನ್ನು ನೆಟ್ಟು ಗಬ್ಬೆಬ್ಬಿಸಿರುವುದು.. ಹೀಗೆ ಯಾವ ಅಪಸವ್ಯಗಳನ್ನೂ ನೋಡಲು ಸಾಧ್ಯವಿಲ್ಲ. ಒಮ್ಮೆ ದೃಷ್ಟಿ ಹಾಯಿಸಿದರೆ, ಅಲ್ಲಿ ಯಾವ ದೋಷವನ್ನೂ ಕಾಣಲು ಸಾಧ್ಯವಿಲ್ಲ. ರಸ್ತೆಯ ಪಕ್ಕದಲ್ಲಿ ನೆಟ್ಟ ಮರಗಳು ಎಲೆಗಳನ್ನು ಚೆಲ್ಲಿ ಕಸವನ್ನುಂಟು ಮಾಡುವುದಿಲ್ಲ.

ನಿತ್ಯವೂ ಎಲೆಗಳನ್ನು ಚೆಲ್ಲದ ಜಾತಿಯ ಮರಗಳನ್ನೇ ಅಲ್ಲಿ ರಸ್ತೆಯ ಪಕ್ಕದಲ್ಲಿ ನೆಡುತ್ತಾರೆ. ಅಷ್ಟು ಸಣ್ಣ ಸಣ್ಣ ಸಂಗತಿಗಳ ಬಗ್ಗೆ ಸಹ ಅವರು ಗಮನನೀಡುತ್ತಾರೆ. ನೀವು ಕೆಲವು ಶೌಚಾಲಯಗಳಿಗೆ ಹೋದರೆ ವಾಷ್ ಬೇಸಿನ್
ನಲ್ಲಿ ಕೈ-ಮುಖ ತೊಳೆದರೆ, ಆ ನೀರು ಟಾಯ್ಲೆಟ್‌ನ ಸಿಂಕ್‌ಗೆ ಹೋಗುತ್ತದೆ. ಫ್ಲಶ್ ಮಾಡಿದಾಗ ನಾವು ಬಳಸಿದ ನೀರೇ
ಕಮೋಡ್ ಅನ್ನು ಸ್ವಚ್ಛಗೊಳಿಸುತ್ತದೆ. ಆ ರೀತಿ ವಾಷ್ ಬೇಸಿನ್ ಮತ್ತು ಕಮೋಡ್ ಅನ್ನು ವಿನ್ಯಾಸಗೊಳಿಸಿದ್ದಾರೆ. ಈ ರೀತಿಯ ವಾಷ್ ಬೇಸಿನ್ ಅನ್ನು ನಾನು ಮತ್ತೆಲ್ಲೂ ನೋಡಿಲ್ಲ. (ಮೇಲಿನ ಚಿತ್ರ ನೋಡಿ). ಇದು ತೀರಾ ಸಣ್ಣ ಸಂಗತಿ. ಅದರಿಂದ ಸಾಕಷ್ಟು ನೀರನ್ನು ಉಳಿತಾಯ ಮಾಡಬಹುದು.

ಫ್ಲಶ್ ಮಾಡಿದಾಗ ಬೀಳುವ ನೀರು ಶುದ್ಧವಾಗಿಯೇ ಇರಬೇಕೆಂದೇನೂ ಇಲ್ಲ. ಅದಕ್ಕೆ ಬಳಸಿದ ನೀರೂ ಆಗಬಹುದು. ಜಪಾನಿಯರು ಅಂಥ ಸಣ್ಣ ಪುಟ್ಟ ಅಂಶಗಳ ಬಗ್ಗೆಯೂ ಗಮನ ನೀಡುತ್ತಾರೆ. ಜಪಾನಿನಲ್ಲಿ ಆಗಾಗ ಭೂಕಂಪ ಸಂಭವಿಸುತ್ತದೆ. ಇದಕ್ಕಾಗಿಯೇ ವಿಶೇಷ ಹೆಲ್ಮೆಟ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಹೆಲ್ಮೆಟ್ ಧರಿಸಿದರೆ, ತಲೆ, ಭುಜ ಮತ್ತು ಬೆನ್ನಿಗೆ ರಕ್ಷಣೆ ಸಿಗುತ್ತದೆ. ಈ ಹೆಲ್ಮೆಟ್ ಅನ್ನು ಸದಾ ಹೊತ್ತುಕೊಂಡು ಹೋಗಬೇಕಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿರುವ ಬೆಂಚಿನ ಅಡಿಯಲ್ಲಿ ಈ ಹೆಲ್ಮೆಟ್ ಗಳು ಲಭ್ಯ. ಭೂಕಂಪ ಸಂಭವಿಸಿದಾಗ ತಕ್ಷಣ ಈ ಹೆಲ್ಮೆಟ್ ಅನ್ನು
ಧರಿಸಲು ಇದು ಸಹಾಯಕ. ಉಳಿದ ಸಂದರ್ಭಗಳಲ್ಲಿ, ಬೆನ್ನನ್ನು ಆತುಕೊಳ್ಳುವ ಬೆಂಚಿನ ಹಿಂಬದಿ, ಹೆಲ್ಮೆಟ್ ಜತೆಗೆ ಬೆನ್ನು ಮತ್ತು ಭುಜ ಕವಚವಾಗಿ ಕೆಲಸ ಮಾಡುತ್ತದೆ.

ತುರ್ತುಸ್ಥಿತಿಯಲ್ಲಿ ಅಷ್ಟು ಸಣ್ಣಸಂಗತಿ ಕೂಡ ಜೀವರಕ್ಷಣೆಗೆ ಸಹಾಯಕವಾಗಬಲ್ಲುದು. ನಿಮ್ಮ ಮನೆಯಗಲಿ, ಅಂಗಡಿಯಲ್ಲಾಗಲಿ ಕಸ ಅಥವಾ ಅನುಪಯುಕ್ತ ವಸ್ತುಗಳ ಶೇಖರಣೆ ಜಾಸ್ತಿಯಾದಾಗ, ಅವನ್ನು ಹೊರಕ್ಕೆ ಸಾಗಿಸುವುದು ದೊಡ್ಡ ಸಮಸ್ಯೆಯೇ. ಆಗ ಸಾರ್ವಜನಿಕರು ಕಸವನ್ನು ಬೇಕಾಬಿಟ್ಟಿ ಎಸೆಯಬಹುದು. ಅದಕ್ಕಾಗಿ ಜಪಾನಿಯರು ತಲೆ ಖರ್ಚು ಮಾಡಿzರೆ. ಬೀದಿಯಲ್ಲಿರುವ ವೆಂಡಿಂಗ್ ಮಶಿನ್‌ನಂತಿರುವ ಯಂತ್ರದಲ್ಲಿ ಕಸವನ್ನು ಹಾಕಿದರೆ, ನಿಮಗೆ ಆ ಮಶಿನ್ ಹಣ ನೀಡುತ್ತದೆ. ಹಣದ ಆಸೆಗಾಗಿ ಜನ ಮನೆಯಿಂದ ಅಥವಾ ಅಂಗಡಿಯಿಂದ ಕಸವನ್ನು ತಂದು ಅಲ್ಲಿಯೇ ಸುರಿಯುತ್ತಾರೆ. ನಾವು ಎಸೆದ ಕಸದ ತೂಕದ ಪ್ರಮಾಣಕ್ಕೆ ಅನುಗುಣವಾಗಿ ಆ ಮಶಿನ್ ಹಣ ನೀಡುತ್ತದೆ.

ಹೀಗಾಗಿ ಎಲ್ಲಿಯೇ, ಯಾರಾದರೂ ಕಸ ಚೆಲ್ಲಿದರೂ (ಹಾಗೆ ಯಾರೂ ಕಸ ಚೆಲ್ಲುವುದಿಲ್ಲ ಎಂಬುದು ಬೇರೆ ಮಾತು) ಅವನ್ನು ಆಯ್ದು ಆ ಮಶಿನ್‌ಗೆ ಸುರಿಯುತ್ತಾರೆ. ಜಪಾನಿನಲ್ಲಿ ಕಸ ನಿಯಂತ್ರಣಕ್ಕೆ ಈ ಮಶಿನ್ ಕೂಡ ಸಹಾಯಕ ವಾಗಿದೆ (ಇದೇನು ರಾಕೆಟ್ ತಂತ್ರಜ್ಞಾನವಲ್ಲ. ಇದನ್ನು ನಮ್ಮ ದೇಶದಲ್ಲಿಯೂ ಮಾಡಬಹುದು. ಆದರೆ
ನಾವು ಮಾಡುವುದಿಲ್ಲ).

ಜಪಾನಿಯರು ಮಹಾ ‘ಗುಂಡು’ಪ್ರಿಯರು. ಚೆನ್ನಾಗಿ ಎಣ್ಣೆ ಹಾಕುತ್ತಾರೆ. ಜಪಾನಿನ ಬಾರ್‌ಗೆ ಹೋದರೆ, ಎಲ್ಲೂ ಕಾಣದ ವಿಶೇಷ ಗ್ಲಾಸ್ ಕಣ್ಣಿಗೆ ಬೀಳುತ್ತದೆ. Hour Glass (ಮರಳು ಗಡಿಯಾರ) ನಂತೆ ಕಾಣುವ ಗ್ಲಾಸಿನಲ್ಲಿ ಬಿಯರನ್ನು ಸುರಿದು ಕುಡಿಯುತ್ತಾರೆ. ಇದರಿಂದ ಗಟಗಟನೆ, ಬೇಗನೆ ಕುಡಿಯುವುದು ಸಾಧ್ಯವಿಲ್ಲ. ಒಂದು ಗ್ಲಾಸ್ ಬಿಯರ್ ಕುಡಿಯಲು, ಎಷ್ಟೇ ಬೇಗ ಅಂದರೂ, ಕನಿಷ್ಠ ಹದಿನೈದಿಪ್ಪತ್ತು ನಿಮಿಷಗಳಾದರೂ ಬೇಕು.

ಬಿಯರ್ ಕುಡಿಯಬೇಡಿ ಅಂದರೆ ಯಾರೂ ಕುಡಿಯುವುದಿಲ್ಲ. ಆದರೆ ಆ ವಿನ್ಯಾಸದ ಗ್ಲಾಸ್ ಸಹಜವಾಗಿ ಬಿಯರ್‌ನ intake ಪ್ರಮಾಣಕ್ಕೆ ಕಡಿವಾಣ ಹಾಕುತ್ತದೆ. ಟೋಕಿಯೋದಂಥ ನಗರಗಳಲ್ಲಿರುವ ಎಲ್ಲ ಮಾಲ್‌ಗಳಲ್ಲಿ
ಶಾಪಿಂಗ್ ಮಾಡುವಾಗ ತೊಂದರೆಯಾಗಬಾರದೆಂದು ಮಶಿನ್ ಟ್ರಾನ್ಸ್ಲೇಟರ್’ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ನಮಗೆ ಬೇಕಾದ ವಸ್ತುಗಳು ಎಲ್ಲಿವೆ, ಅವುಗಳ ಬೆಲೆ ಎಷ್ಟು… ಇತ್ಯಾದಿ ಯಾವುದೇ ಮಾಹಿತಿಯನ್ನು ಕೇಳಿದರೆ, ನಮ್ಮ ಭಾಷೆಯಲ್ಲಿ ಉತ್ತರ ಸಿಗುತ್ತದೆ. ಇದರಿಂದ ಯಾರ ಸಹಾಯವಿಲ್ಲದೇ, ಸ್ವಲ್ಪವೂ ಕಿರಿಕಿರಿಯಿಲ್ಲದೇ, ಸುಲಭವಾಗಿ ಶಾಪಿಂಗ್ ಮಾಡಬಹುದು. ಟೋಕಿಯೋದಲ್ಲಿ ನಾನು ಗಮನಿಸಿದ ಇನ್ನೊಂದು ಸಂಗತಿಯೆಂದರೆ, ಅಲ್ಲಿನ ವಾಕಿಂಗ್ ಪಾತ್‌ಗಳು. ಜಗತ್ತಿನ ಅತ್ಯಂತ ಬಿಜಿ ಮತ್ತು ಜನನಿಬಿಡ ನಗರಗಳಲ್ಲಿ ಒಂದಾಗಿರುವ ಟೋಕಿಯೋದಲ್ಲಿ ಸಾವಿರಾರು ಜನ ನಡೆದಾಡುವ ದಾರಿಯಲ್ಲಿ ಕಪ್ಪು ಟೈಲ್‌ಗಳನ್ನು ಹಾಕಲಾಗಿದೆ. ಸೋಜಿಗವೆಂದರೆ, ಯಾರಾದರೂ ಆ ಟೈಲ್ ಮೇಲೆ ಒಂದು ಹೆಜ್ಜೆಯನ್ನಿಟ್ಟರೆ, ಅದರ ಕೆಳಗಿರುವ ಕೋಶವು ಅದನ್ನು ಕೈನೆಟಿಕ್ ಎನರ್ಜಿಯಿಂದ ಎಲೆಕ್ಟ್ರಿಸಿಟಿ ಯಾಗಿ ಪರಿವರ್ತನೆಗೊಳಿಸುತ್ತದೆ.

ಜನ ನಡೆದಾಡಿದರೂ ಆ ದೇಶದಲ್ಲಿ ವಿದ್ಯುಚ್ಛಕ್ತಿ ಉತ್ಪಾದನೆಯಾಗುತ್ತದೆ. Piezoelectricity ತಂತ್ರಜ್ಞಾನದಿಂದ ಇದು ಸಾಧ್ಯ. ಒಂದು ಹೆಜ್ಜೆ ಇಟ್ಟರೆ, ಹತ್ತು ಬಲ್ಬುಗಳು ಇಪ್ಪತ್ತು ಸೆಕೆಂಡ್ ಉರಿಯುವಷ್ಟು ವಿದ್ಯುಚ್ಛಕ್ತಿ ಉತ್ಪಾದನೆ ಯಾಗುತ್ತದೆ. ಜಪಾನಿನ ಈ ತಂತ್ರಜ್ಞಾನದಿಂದ ಪ್ರೇರಣೆ ಪಡೆದ ಯುರೋಪಿನ ಹಲವು ದೇಶಗಳು ತಮ್ಮ ನಗರ ಗಳಲ್ಲೂ ಈ ಟೈಲ್‌ಗಳನ್ನು ಅಳವಡಿಸಿವೆ.

ಅಮೆರಿಕದಲ್ಲಿ ಕೆಲವೆಡೆ ಫುಟ್ಬಾಲ್ ಮೈದಾನದಲ್ಲೂ ಈ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಜನ ಹೆಚ್ಚೆಚ್ಚು ಓಡಾಡಿದಷ್ಟೂ ವಿದ್ಯುಚ್ಛಕ್ತಿ ಉತ್ಪಾದನೆ ಜಾಸ್ತಿಯಾಗುತ್ತದೆ. ಜಪಾನಿಯರು ಸಮಯಪಾಲನೆಯಲ್ಲಿ ಜಗತ್ತಿನಲ್ಲಿಯೇ
ಅಗ್ರಗಣ್ಯರು ಎಂಬುದು ಗೊತ್ತಿರುವ ಸಂಗತಿಯಷ್ಟೇ.

ನಾನು ಜಪಾನಿಗೆ ಹೋಗಲು ಒಂದು ವಾರವಿರುವಾಗ, ನನ್ನ ಪರಿಚಯದವರೊಬ್ಬರು, ‘ಭಟ್ರೇ, ಜಪಾನಿನ ಟ್ರೇನ್ ಟೈಮ್ ಟೇಬಲ್‌ನಲ್ಲಿ ಟ್ರೇನ್ ಬರುವ ಸಮಯವನ್ನು ಸೆಕೆಂಡುಗಳಲ್ಲಿ (ಉದಾಹರಣೆಗೆ, ಹತ್ತು ಗಂಟೆ ಹದಿಮೂರು ನಿಮಿಷ ಇಪ್ಪತ್ನಾಲ್ಕು ಸೆಕೆಂಡು) ನಮೂದಿಸಿದ್ದಾರೆ ಎಂದು ಕೇಳಿದ್ದೇನೆ. ದಯವಿಟ್ಟು ಇದನ್ನು ನೀವು ಅಲ್ಲಿಗೆ ಹೋದಾಗ ಗಮನಿಸಿ’ ಎಂದು ಹೇಳಿದ್ದರು.

ಆದರೆ ನನಗೆ ಅಲ್ಲಿನ ಟೈಮ್ ಟೇಬಲ್ ಅನ್ನು ನೋಡಲು ಆಗಲಿಲ್ಲ. ಆದರೆ ನಾನು ಈ ವಿಷಯವನ್ನು ಗಮನವಿಟ್ಟು ನಮ್ಮ ಗೈಡ್‌ಗೆ ಕೇಳಿದೆ. ‘ನಿಜ, ಅದರನೂ ಉತ್ಪ್ರೇಕ್ಷೆ ಇಲ್ಲ. ಟೈಮ್ ಟೇಬಲ್‌ನಲ್ಲಿ ಟ್ರೇನ್ ಆಗಮನ-ನಿರ್ಗಮನ ಸಮಯವನ್ನು ಸೆಕೆಂಡುಗಳಲ್ಲೂ ನಮೂದಿಸಿರುತ್ತಾರೆ’ ಎಂದು ಹೇಳಿದಳು. ಒಮ್ಮೆ ಬುಲೆಟ್ ಟ್ರೇನ್ ಇಪ್ಪತ್ತು ನಿಮಿಷ ತಡವಾಗಿ ಆಗಮಿಸಿದಾಗ, ರೈಲ್ವೆ ಇಲಾಖೆ ಕ್ಷಮೆಯಾಚಿಸಿದ್ದು ಅಂತಾರಾಷ್ಟ್ರೀಯ ಹೆಡ್‌ಲೈನ್ ಆಗಿತ್ತು. ಈ ಪ್ರಮಾಣದ ಸಮಯ ಪರಿಪಾಲನೆಯನ್ನು ಬೇರೆ ಯಾವ ದೇಶದಲ್ಲೂ ನೋಡಲು ಸಾಧ್ಯವಿಲ್ಲ.

ಪ್ರಾಯಶಃ ಸಾರ್ವಜನಿಕ ಛತ್ರಿ ವ್ಯವಸ್ಥೆ ಇರುವುದು ಜಪಾನಿನಂದೇ. ಸಾರ್ವಜನಿಕ ಸ್ಥಳಗಳಲ್ಲಿ ಅಲ್ಲಲ್ಲಿ ಛತ್ರಿಗಳನ್ನುಇಟ್ಟಿರುವುದನ್ನು ಗಮನಿಸಬಹುದು. ಇವನ್ನು ಯಾರು ಬೇಕಾದರೂ ಎತ್ತಿಕೊಂಡು ಹೋಗಬಹುದು. ಅದನ್ನು ಬಳಸಿದ ನಂತರ ನಿರ್ದಿಷ್ಟ ಸ್ಥಳದಲ್ಲಿಟ್ಟಿರುವ rack ನಲ್ಲಿಡಬೇಕು. ಕೆಲವೊಮ್ಮೆ ಛತ್ರಿಯನ್ನು ಹಿಡಿದು ಕೊಂಡು ಶಾಪಿಂಗ್ ಮಾಲ್‌ ಅಥವಾ ಅಂಗಡಿಯೊಳಗೆ ಹೋಗುವಾಗ, ನೀರಿನ ಹನಿಗಳು ತೊಟ್ಟಿಕ್ಕಿ ಗಲೀಜಾಗುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಛತ್ರಿಗಳಿಗೆ ಲ್ಯಾಮಿನೇಟ್ ಮಾಡುವ ವ್ಯವಸ್ಥೆಯಿದೆ. ಇದರಿಂದ ಮಳೆಯಲ್ಲಿ ಬಳಸಿದ ಛತ್ರಿ ಕೂಡ ಗರಿಗರಿಯಾಗಿರುವುದು ಸಾಧ್ಯ. ಜಪಾನಿನ ಯಾವುದೇ ಹೋಟೆಲ್ ಅಥವಾ ದರ್ಶಿನಿಯಂಥ ಹೋಟೆಲುಗಳಿಗೆ ಹೋದಾಗ, ಅವು ನೀಡುವ ಆಹಾರ ಪದಾರ್ಥಗಳನ್ನು ಹೋಲುವ ಮಾದರಿಗಳನ್ನು ಪ್ರವೇಶ ದ್ವಾರದಲ್ಲಿಯೇ display ಮಾಡಿರುವುದನ್ನುಗಮನಿಸಬಹುದು.

ಇದರಿಂದ ಹೋಟೆಲಿನಲ್ಲಿ ಆಹಾರಗಳನ್ನು ಆರ್ಡರ್ ಮಾಡುವಾಗ, ಜಪಾನಿಗೆ ಹೊಸದಾಗಿ ಹೋದವರಿಗೂ ಅನುಕೂಲವಾಗುತ್ತದೆ. ಟೋಕಿಯೋದಂಥ ಬಿಜಿ ನಗರದಲ್ಲಿ ಮೊದಲ ಬಾರಿಗೆ ಆಗಮಿಸಿದ, ಸ್ಥಳೀಯ ಭಾಷೆ ಗೊತ್ತಿಲ್ಲದ 15-20 ವರ್ಷದ ಹೆಣ್ಣು ಮಕ್ಕಳು ಸಹ ಸುರಕ್ಷಿತವಾಗಿ ಓಡಾಡಬಹುದು, ಜೀವನ ಸಾಗಿಸಬಹುದು. ಟೋಕಿಯೋ ನಗರ ಅಷ್ಟು ಸುರಕ್ಷಿತ ಮತ್ತು ಸರಾಗ. ಅವರ ಬದುಕು ಅಷ್ಟರಮಟ್ಟಿಗೆ ಸುರಳೀತ.

ಜಪಾನಿನಲ್ಲಿ ಯಾರಾದರೂ ಆಫೀಸ್ ಅವಧಿಯಲ್ಲಿ ಮೇಜಿನ ಮೇಲೆ ತಲೆಯಿಟ್ಟು ಮಲಗಿದರೆ ಅಪರಾಧವಲ್ಲ. ಅಸಲಿಗೆ ಸಿಬ್ಬಂದಿ ಆ ರೀತಿ ನಿದ್ದೆ ಮಾಡಿದರೆ ಅದನ್ನು ತಪ್ಪಾಗಿಯೂ ಭಾವಿಸುವುದಿಲ್ಲ. ಇದನ್ನು ಜಪಾನಿ ಭಾಷೆಯಲ್ಲಿ ‘ಇನೋಮುರಿ’ ಎಂದು ಕರೆಯುತ್ತಾರೆ. ಯಾರಾದರೂ ಆಫೀಸಿನಲ್ಲಿ ಮಲಗಿದರೆ, ಅದನ್ನು ಕಾರ್ಯ ಶ್ರದ್ಧೆಯ ಪ್ರತೀಕ ಎಂದು ಭಾವಿಸಲಾಗುತ್ತದೆ. ಇಂಥ ಸಣ್ಣ-ಪುಟ್ಟ ಸಂಗತಿಗಳೇ ಜಪಾನ್ ಅನ್ನು ದೊಡ್ಡ,
ವೈಶಿಷ್ಟ್ಯಪೂರ್ಣ ಮತ್ತು ಮಹಾನ್ ದೇಶವಾಗಿ ಮಾಡಿದೆ.

ಕೈಜೆನ್ ಅಂದರೆ ಏನು?
ಜಪಾನಿಯರ ಜೀವನ ವಿಧಾನದಲ್ಲಿ ಕೈಜೆನ್‌ಗೆ ಅತ್ಯಂತ ಮಹತ್ವ. ಇದು ಅವರ ಜೀವನಶೈಲಿಯ ಪ್ರಮುಖ ಅಂಗವೇ ಆಗಿದೆ. ಜಪಾನಿನಲ್ಲಿ ಕೆಲವು ವರ್ಷಗಳ ಕಾಲ ಇದ್ದವರು ಸಹ ಕೈಜೆನ್ ಜೀವನ ಪದ್ಧತಿಯನ್ನು ಅನುಸರಿಸಲು ಬಯಸುತ್ತಾರೆ. ಅಷ್ಟಕ್ಕೂ ಕೈಜೆನ್ ಅಂದ್ರೆ ಏನು? ವಿವರಣೆ ಸರಳ. ಕೈಜೆನ್ ಅಂದ್ರೆ ನಿರಂತರ ಕಲಿಕೆ ಅಥವಾ ನಿರಂತರ ಸುಧಾರಣೆ. ಜಪಾನಿಯರಿಗೆ ನಿರಂತರ ಸುಧಾರಣೆಯಲ್ಲಿ ಅಪರಿಮಿತ ನಂಬಿಕೆ. ಮನೆಯಲ್ಲಿರಬಹುದು, ಆಫೀಸಿನಲ್ಲಿರಬಹುದು, ಕೈಜೆನ್ ಅನ್ನು ಅಳವಡಿಸಲು ಅವರು ಬಯಸುತ್ತಾರೆ. ಹೊಸ ಕಾರ್ಯವಿಧಾನವನ್ನು ಜಾರಿಗೆ ತಂದರೆ, ಅದರಲ್ಲಿ ಏನೆಲ್ಲ ಸುಧಾರಣೆ ತರಬಹುದು ಎಂಬ ಬಗ್ಗೆ ಅವರು ಯೋಚಿಸುತ್ತಲೇ ಇರುತ್ತಾರೆ.
ಮಾರುಕಟ್ಟೆಗೆ ಹೊಸ ಪ್ರಾಡP ಅನ್ನು ಕೊಟ್ಟರೆ, ಅದನ್ನು ಸುಧಾರಿಸುವುದು ಹೇಗೆ, ಹೊಸ ಮಾದರಿಯನ್ನು ಕೊಡುವುದು ಹೇಗೆ, ಈ ಮಾಡೆಲ್ ಅನ್ನು ಅಭಿವೃದ್ಧಿಪಡಿಸುವುದು ಹೇಗೆ, ಅದರಲ್ಲಿ ಏನೇನು ನ್ಯೂನತೆಗಳಿವೆ, ಅವುಗಳನ್ನು ಪರಿಹರಿಸಿ ಆ ಪ್ರಾಡP ಅನ್ನು ಉನ್ನತೀಕರಿಸುವುದು ಹೇಗೆ ಎಂದು ಅವರು ನಿರಂತರ ಯೋಚಿಸುತ್ತಲೇ ಇರುತ್ತಾರೆ.

ಯಾವುದೇ ವಸ್ತುವನ್ನು ತಯಾರಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡಿ ಸುಮ್ಮನಾಗುವುದಿಲ್ಲ. ಕೈಜೆನ್ ಅನ್ನು ಅಳವಡಿಸಿಕೊಂಡು, ಪರಿಪೂರ್ಣತೆಯನ್ನು ಸಾಽಸುವುದುದು ಹೇಗೆ ಎಂಬ ನಿಟ್ಟಿನಲ್ಲಿ ಯೋಚಿಸುತ್ತಿರುತ್ತಾರೆ.
ಜಪಾನ್ ಮೂಲದ ಟೊಯೋಟಾದಂಥ ದೊಡ್ಡ ಅಂತಾರಾಷ್ಟ್ರೀಯ ಸಂಸ್ಥೆ ಸಹ ಕೈಜೆನ್ ಅನ್ನು ತನ್ನ ಕಾಯಕವನ್ನಾಗಿ ಮಾಡಿಕೊಂಡಿದೆ. ತನ್ನ ಕಾರ್ಪೊರೇಟ್ ಸಂಸ್ಕೃತಿಯಲ್ಲಿ ಕೈಜೆನ್ ತತ್ವಗಳನ್ನು ಅದು ನೂರಕ್ಕೆ ನೂರು ಅಳವಡಿಸಿಕೊಂಡಿದೆ. ಒಂದು ಸಂಸ್ಥೆ ನಿರಂತರವಾಗಿ ಬೆಳವಣಿಗೆಯತ್ತ ಮುಖ ಮಾಡಿದರೆ, ಅದು
ಬದಲಾವಣೆಗೆ ಮತ್ತು ಸುಧಾರಣೆಗೆ ಹೆಣಗುತ್ತಿದೆ ಎಂದರ್ಥ.

ಯಾವ ಸಂಸ್ಥೆಯೂ ಈ ಸ್ಪರ್ಧಾತ್ಮಕ ದಿನಗಳಲ್ಲಿ ಸ್ವಲ್ಪವೂ ಮರೆಯುವಂತಿಲ್ಲ. ಕೈಜೆನ್ ತತ್ವ ಅಳವಡಿಸಿಕೊಳ್ಳಲು ಮನಸ್ಸು ಮಾಡದಿದ್ದರೆ, ಯಾವ ಸಂಸ್ಥೆಯೂ ಉದ್ಧಾರವಾಗವುದಿಲ್ಲ. ಜಪಾನಿಯರ ಜೀವನದಲ್ಲಿ, ಚಿಂತನೆಯಲ್ಲಿ ಕೈಜೆನ್ ಅಂತರ್ಗತವಾಗಿದೆ. ಯಾವುದಾದರೂ ಆಫೀಸಿನಲ್ಲಿ ಅಥವಾ ಸಂಸ್ಥೆಯಲ್ಲಿ ಕೈಜೆನ್ ತತ್ವಗಳನ್ನು ಅಳವಡಿಸಿದರೆ, ಗ್ರಾಹಕರನ್ನು ಅರ್ಥ ಮಾಡಿಕೊಳ್ಳಲು, ತಮ್ಮ ಸಂಸ್ಥೆಯ ಸಿಬ್ಬಂದಿಯನ್ನು ಸದಾ ಹೊಸ
ಚಿಂತನೆಗೆ ತೆರೆದುಕೊಳ್ಳಲು, ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗಲು ಮತ್ತು ಪಾರದರ್ಶಕವಾಗಿರಲು ಅದು ಸಹಾಯಕ ವಾಗುತ್ತದೆ.

ಒಂದು ಸಂಸ್ಥೆ ಸದಾ ಕ್ರಿಯಾಶೀಲವಾಗಿರಲಿ, ವಾಸ್ತವಕ್ಕೆ ಹತ್ತಿರವಾಗಿರಲು ಕೂಡ ಸಹಾಯಕ. ಯಾರು ಹೊಸತನಕಕ್ಕೆ
ತೆರೆದುಕೊಳ್ಳುತ್ತಾರೋ, ಅವರು ಎಂದೂ outdated ಆಗುವುದಿಲ್ಲ. ಜಪಾನಿಯರ ನಿತ್ಯ ಜೀವನದಲ್ಲಿ ಕೈಜೆನ್
(improvement or change for better) ಮಹತ್ವದ ಪಾತ್ರವಹಿಸಿರುವುದು ಸುಳ್ಳೇನಲ್ಲ.

ಜಪಾನಿಯರು ಮತ್ತು ಬೊಜ್ಜು
ನಾನು ಜಪಾನಿಗೆ ಹೋಗುವ ಮುನ್ನ ಬೆಂಗಳೂರಿನ ಟೊಯೋಟಾ ಕಂಪನಿಯಲ್ಲಿ ಡಿಸೈನ್ ವಿಭಾಗದಲ್ಲಿ ಕೆಲಸ ಮಾಡುವ, ಸ್ನೇಹಿತರಾದ ಹರುಟು ರಿಕು ಒಂದು ಮಾತು ಹೇಳಿದ್ದರು- ‘ನೀವು ಜಪಾನಿನಲ್ಲಿ ತಿರುಗಾಡುವಾಗ, ಬೊಜ್ಜು ದೇಹಿಗಳನ್ನು ನೋಡಲು ಸಾಧ್ಯವಿಲ್ಲ. ಅದರಲ್ಲೂ ಜಪಾನಿನ ಗ್ರಾಮೀಣ ಪ್ರದೇಶಗಳಲ್ಲಿ ಅಂಥವರನ್ನು ನೋಡಲು ಸಾಧ್ಯವಿಲ್ಲ. ಟೋಕಿಯೋ ನಗರದಲ್ಲಿ ಓಡಾಡುವಾಗ, ಅಲ್ಲಲ್ಲಿ ಅಂಥವರನ್ನು ಕಾಣಬಹುದು. ಆದರೆ
ಅವರು ಜಪಾನಿಯರಲ್ಲ, ಕೊರಿಯನ್ ಮಂದಿ’.

ಹರುಟು ರಿಕು ಅವರು ಹೇಳಿದ್ದರಲ್ಲಿ ಉತ್ಪ್ರೇಕ್ಷೆ ಇರಲಿಲ್ಲ. ಒಂದು ವಾರ ಕಾಲ ಅಲ್ಲಿ ಓಡಾಡುವಾಗ ದಢೂತಿ ಅಥವಾ ಬೊಜ್ಜು ದೇಹಿಗಳ ದರ್ಶನವಾಗಲಿಲ್ಲ. ಎರಡು ವರ್ಷಗಳ ಹಿಂದೆ, ಅಮೆರಿಕದ ಲಾಸ್ ಎಂಜಲೀಸ್ ನಗರ ದಲ್ಲಿ ಓಡಾಡುವಾಗ ಬರೀ ಬೊಜ್ಜು ದೇಹದವರೇ ಕಣ್ಣಿಗೆ ಕಾಣುತ್ತಿದ್ದರು. ಅದರಲ್ಲೂ ಕೋವಿಡ್ ನಂತರ ಬೊಜ್ಜು ತನ ಹೆಚ್ಚಾಗಿದೆ. ಹದಿನೈದರಿಂದ ನಲವತ್ತು ವರ್ಷದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಬೊಜ್ಜುತನ, ಅಮೆರಿಕದ ಗಂಭೀರ ಸಮಸ್ಯೆಗಳಂದು. ಕೆಲವರನ್ನು ನೋಡಿದರೆ, ಮಾಂಸದ ಪರ್ವತವೇ ಚಲಿಸುತ್ತಿರುವಂತೆ ಭಾಸವಾಗುತ್ತದೆ.

ಅಮೆರಿಕದಲ್ಲಿ ಶೇ. 40ರಷ್ಟು ಮಂದಿಗೆ ಬೊಜ್ಜು. ಅವರಿಗೆ ಹೋಲಿಸಿದರೆ, ಜಪಾನಿನಲ್ಲಿ ಶೇ. 3ರಷ್ಟು ಮಂದಿ ಮಾತ್ರ ಬೊಜ್ಜು ದೇಹಿಗಳು! ಹಾಗಂತ ಜಪಾನಿಯರು ಕೆಟೊ, ಪ್ಯಾಲೆಯೋ, ವೆಗಾನ್ ಅಥವಾ ಕಾರ್ನಿವೋರ್ (ಮಾಂಸಾ ಹಾರಿ)ಗಳಲ್ಲ. ಹಾಗಾದರೆ ಅವರು ಉಳಿದವರಿಗಿಂತ ಹೇಗೆ ಭಿನ್ನ? ಜಪಾನಿಯರು ಸಹಜ ಮತ್ತು ಸಾತ್ವಿಕ ಆಹಾರ (Real Food) ಗಳನ್ನು ಸೇವಿಸುತ್ತಾರಷ್ಟೆ. ಅವರು ಮೀನು, ಚಿಕನ್, ಮಟನ್, ಬೀಫ್ (ದನದ ಮಾಂಸ), ಮೊಟ್ಟೆಗಳನ್ನು ಸೇವಿಸುತ್ತಾರೆ. ಆದರೆ ಸಂಸ್ಕರಿತ ಅಥವಾ processed food ಸೇವಿಸುವುದಿಲ್ಲ. ಕ್ಯಾನಿನಲ್ಲಿಟ್ಟ ಆಹಾರ ಪದಾರ್ಥಗಳನ್ನು ಮುಟ್ಟುವುದಿಲ್ಲ.

ಜಪಾನಿಯರ ಜೀವನಶೈಲಿಯೂ ಅವರ ಫಿಟ್ನೆಸ್‌ಗೆ ಸಾಥ್ ನೀಡುತ್ತದೆ. ಅವರು ಉಪವಾಸ ಮಾಡುವುದಿಲ್ಲ. ಬೇಕಾಬಿಟ್ಟಿ ಡಯಟ್ ಮಾಡುವುದಿಲ್ಲ. ಆದರೆ ಆಹಾರ ಸೇವಿಸಬೇಕಾದ ಸಮಯದಲ್ಲಿ, ಹಿತಮಿತವಾಗಿ ತೆಗೆದುಕೊಳ್ಳುತ್ತಾರೆ. ಜಂಕ್ ಫುಡ್ ಗಳನ್ನು ಸೇವಿಸುವುದಿಲ್ಲ. ಸಾಮಾನ್ಯವಾಗಿ ಹೆಚ್ಚಿನವರು ದಿನದಲ್ಲಿ ಹತ್ತು ಸಾವಿರ ಹೆಜ್ಜೆಗಳನ್ನಾದರೂ ನಡೆಯುತ್ತಾರೆ. ಕಾರಿದ್ದವರೂ ಅಲ್ಲಿ ವಾಕ್ ಮಾಡುವುದನ್ನು ತಪ್ಪಿಸಿಕೊಳ್ಳುವುದಿಲ್ಲ. ಹೆಚ್ಚಿನವರು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ. ಆಫೀಸಿನಲ್ಲಿ ಯಾರೂ ಕುರ್ಚಿಗೆ ಅಂಟಿಕೊಳ್ಳುವು‌ ದಿಲ್ಲ.

ಜಪಾನಿನಲ್ಲಿ ಅರವತ್ತು ವರ್ಷ ದಾಟಿದ ಬೊಜ್ಜು ದೇಹಿಗಳನ್ನು ಕಾಣಲು ಸಾಧ್ಯವೇ ಇಲ್ಲ. ಎಂಬತ್ತು-ತೊಂಬತ್ತು ವರ್ಷದವರು ಸಹ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಅಂಥವರು ಪ್ರತಿದಿನ ಐದಾರು ಗಂಟೆ ಕೆಲಸ ಮಾಡುತ್ತಾರೆ. ಐದಾರು ಕಿ.ಮೀ. ನಡೆಯುತ್ತಾರೆ.

ಕೆಲಸದ ನಿಮಿತ್ತ ಟೋಕಿಯೋಕ್ಕೆ ಹೋದ ನನ್ನ ಉದ್ಯಮಿ ಸ್ನೇಹಿತ ನಾಗರಾಜ್ ಶರ್ಮ ಅವರು ಹೇಳಿದ ಪ್ರಸಂಗ ವನ್ನು ಹೇಳಬೇಕು. ಶರ್ಮ ಅವರು ಯಂತ್ರದ ಬಿಡಿಭಾಗಗಳನ್ನು ಮಹಾರಾಷ್ಟ್ರದಲ್ಲಿರುವ ಜಪಾನಿನ ಒಂದು ಕಂಪನಿಗೆ ಪೂರೈಸುತ್ತಿದ್ದರು. ತಮ್ಮ ಒಪ್ಪಂದವನ್ನು ಮುಂದುವರಿಸಲೆಂದು ಮಾತುಕತೆಗೆ ಅವರು ಟೋಕಿಯೋಕ್ಕೆ ಹೋಗಿದ್ದರು. ಆ ಕಂಪನಿಯ ಮುಖ್ಯಸ್ಥ ಶರ್ಮರನ್ನು ತಮ್ಮ ಮನೆಗೆ ಆಹ್ವಾನಿಸಿದ್ದನಂತೆ. ಆ ದಿನದ ರಾತ್ರಿ ಊಟವನ್ನು, ಆತನ ಪತ್ನಿ ಊರಲ್ಲಿ ಇಲ್ಲದಿದ್ದರಿಂದ, ಕಂಪನಿಯ ಮುಖ್ಯಸ್ಥನೇ ಸ್ವತಃ ಸಿದ್ಧಪಡಿಸಿದ್ದನಂತೆ. ಅನ್ನದ ಜತೆಗೆ ಎರಡು ಐಟಂಗಳಿದ್ದುವಂತೆ. ‘ಅದು ನಾನು ಮಾಡಿದ ಮರೆಯಲಾಗದ ಊಟ. ಅಷ್ಟು ಚೆನ್ನಾಗಿತ್ತು’ ಎಂದು ಶರ್ಮ ಹೇಳಿದರು. ಅದಾದ ಬಳಿಕ ಶರ್ಮ ಅವರು ಮತ್ತೆರಡು ಬಾರಿ ಟೋಕಿಯೋಕ್ಕೆ ಹೋದಾಗ, ಕಂಪನಿಯ ಮುಖ್ಯಸ್ಥನ ಮನೆಗೆ ಊಟಕ್ಕೆ ಹೋಗಿ, ಅವರು ತಯಾರಿಸಿದ ಊಟವನ್ನು ಮಾಡಿ ಬಂದಿದ್ದಾಗಿ ಹೇಳಿದರು. ಕಂಪನಿಯ ಮುಖ್ಯಸ್ಥ ಶ್ರೀಮಂತನಾದರೂ, ಮನೆಯಲ್ಲಿ ಕೆಲಸದವರನ್ನೇ ಇಟ್ಟುಕೊಂಡಿರಲಿಲ್ಲವಂತೆ. ಆತನೇ ಮನೆಗೆಲಸವನ್ನು ಮಾಡಿಕೊಳ್ಳುತ್ತಿದ್ದನಂತೆ.

‘ನಾನೂ ಅದನ್ನು ಅನುಸರಿಸ ಹೋಗಿ ಫುಲ್ ಆದೆ’ ಎಂದು ಶರ್ಮ ಹೇಳಿದರು. ಜಪಾನಿಯರು ಊಟ ಮಾಡುವ ಪದ್ಧತಿ ಸಂಪೂರ್ಣ ಭಿನ್ನ. ಅವರು ತ್ರಿಕೋನ ಮಾದರಿಯನ್ನು ಅನುಸರಿಸುತ್ತಾರೆ. ನಾವು ಊಟ ಮಾಡುವಾಗ, ಮೊದಲು ಸೂಪ್ ಅನ್ನು ಸಂಪೂರ್ಣವಾಗಿ ಸೇವಿಸುತ್ತೇವೆ. ನಂತರ ಸಲಾಡ್ ಅನ್ನು ಪೂರ್ತಿ ಸೇವಿಸುತ್ತೇವೆ. ನಂತರ ಅನ್ನವನ್ನು ಸೇವಿಸುತ್ತೇವೆ. ಆದರೆ ಜಪಾನಿನಲ್ಲಿ ಹಾಗಲ್ಲ. ಅವರು ಒಂದು ಸ್ಪೂನ್ ಸೂಪ್ ಕುಡಿದು, ಒಂದು ತರಕಾರಿ ಸೇವಿಸಿ, ನಂತರ ಒಂದು ತುತ್ತು ಅನ್ನ ಸೇವಿಸಿ, ಬಳಿಕ ಸೂಪ್‌ಗೆ ಬರುತ್ತಾರೆ. ಅವರ ಪ್ರಕಾರ, ಇದರಿಂದ ಆಹಾರ ಸೇವನೆ ಪ್ರಮಾಣ ಕಮ್ಮಿಯಾಗುವುದಂತೆ. ಜಪಾನಿನಲ್ಲಿ ಸಣ್ಣವರಾಗಿರುವಾಗಲೇ, ಹೇಗೆ ಆಹಾರ ಸೇವಿಸಬೇಕು ಎಂಬ ಬಗ್ಗೆ ತಿಳಿವಳಿಕೆ ನೀಡುತ್ತಾರೆ. ಇನ್ನೂ ಬೇಕು ಎಂದು ಅನಿಸುವಾಗಲೇ, ಅಂದರೆ ಹೊಟ್ಟೆ ಶೇ.80ರಷ್ಟು ಭರ್ತಿಯಾದಾಗಲೇ ಎದ್ದು ಬಿಡುತ್ತಾರೆ. ಹೇಗೆ ಆಹಾರ ಸೇವಿಸಬೇಕು ಮತ್ತು ಎಷ್ಟು ಸೇವಿಸಬೇಕು ಎಂಬ
ವಿಷಯದಲ್ಲಿ ಜಪಾನಿಯರು ಮೇಲ್ಪಂಕ್ತಿ ಹಾಕಿಕೊಡಬಲ್ಲರು.

ಇದನ್ನೂ ಓದಿ: @vishweshwarbhat