Friday, 27th December 2024

Vishwavani Editorial: ಬಣ ಬಡಿದಾಟವೋ, ಮಕ್ಕಳಾಟವೋ?

ಇದು ನಿಜಕ್ಕೂ ಬೇಸರದ ಸಂಗತಿ. ದಿನಗಳೆದಂತೆ ತಿಳಿಯಾಗಬೇಕಿದ್ದ ರಾಜ್ಯ ಬಿಜೆಪಿ ಘಟಕದೊಳಗಿನ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿ ರಾಡಿಯಾಗುತ್ತಿರುವುದು ಅನಪೇಕ್ಷಿತ ಬೆಳವಣಿಗೆಯೇ ಸರಿ. ರಸಭರಿತ ಮತ್ತು ಆರೋಗ್ಯಕರ ಹಣ್ಣುಗಳಿರುವ ಬುಟ್ಟಿಯಲ್ಲಿ ಒಂದೇ ಒಂದು ಕೊಳೆತ ಹಣ್ಣು ಸೇರಿಕೊಂಡಿದ್ದು ಅದನ್ನು ಹೊರತೆಗೆಯುವಲ್ಲಿ ನಿರ್ಲಕ್ಷಿಸಿದರೆ, ಬುಟ್ಟಿಯಲ್ಲಿರುವ ಎಲ್ಲ ಹಣ್ಣುಗಳಿಗೂ ಕೆಲ ಕಾಲದ ನಂತರ ಅದೇ ಗತಿ ಒದಗುತ್ತದೆ ಎಂಬುದು ಸಾಮಾನ್ಯಜ್ಞಾನ.

ಆದರೆ, ಇದು ಪಕ್ಷದ ತಥಾಕಥಿತ ವರಿಷ್ಠರಿಗೆ ತಡವಾಗಿ ಅರ್ಥವಾಗಿದ್ದು ವಿಪರ್ಯಾಸದ ಸಂಗತಿ. ಈ ವಿಷಯದ ರಾಜಿ-ಪಂಚಾಯ್ತಿಗೆಂದು ಆಗಮಿಸಿರುವ ಪಕ್ಷದ ರಾಜ್ಯ ಉಸ್ತುವಾರಿ ಡಾ. ರಾಧಾಮೋಹನ್ ದಾಸ್ ಅಗರವಾಲ್ ಅವರು, ‘ಪಕ್ಷದೊಳಗಿನ ಕಚ್ಚಾಟದಿಂದಾಗಿ ಆಡಳಿತ ಪಕ್ಷಕ್ಕೆ ನಾವೇ ಅಸ್ತ್ರಗಳ ಮೇಲೆ ಅಸ್ತ್ರವನ್ನು ನೀಡುವಂತಾಗಿದೆ, ಇದರಿಂದಾಗಿ ಪಕ್ಷ ಸಂಘಟನೆಗೆ ಹಿನ್ನಡೆಯಾಗಿದೆ’ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಹಾಗೆ ನೋಡಿದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಜನರಿಂದ ತಿರಸ್ಕಾರಕ್ಕೆ ಒಳಗಾದಾಗಲೇ, ‘ತಪ್ಪಾಗಿರುವುದೆಲ್ಲಿ?’ ಎಂಬ ಅಂಶವನ್ನು ಮುಂದಿಟ್ಟುಕೊಂಡು ಪಕ್ಷದ ವರಿಷ್ಠರು ರಾಜ್ಯ ನಾಯಕರೊಡನೆ ಸಮಾ
ಲೋಚನೆ ನಡೆಸಬೇಕಿತ್ತು ಹಾಗೂ ಅಗತ್ಯವಿರುವೆಡೆ ಶಿಸ್ತುಕ್ರಮದ ‘ಚುಚ್ಚುಮದ್ದು’ ನೀಡಬೇಕಿತ್ತು. ಆದರೆ ಹಾಗಾಗ ಲಿಲ್ಲ. ಪರಿಣಾಮ, ಬರೋಬ್ಬರಿ ಒಂದು ವರ್ಷದಿಂದ ಬೆಳೆಯುತ್ತಲೇ ಬಂದ ಭಿನ್ನಮತದ ಕುದಿತವು ಸ್ಫೋಟದ ಹಂತಕ್ಕೆ ಮುಟ್ಟುವಂತಾಗಿದೆ.

‘ಇದು ಪಕ್ಷದೊಳಗಿನ ವಿಷಯ, ಸಮಾಜದ ಅಂಗಭಾಗಗಳು ಈ ಕುರಿತು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ’ ಎಂದು ತಳ್ಳಿಹಾಕಲಾಗದು. ಏಕೆಂದರೆ, ಅಧಿಕಾರ ಗದ್ದುಗೆಯಲ್ಲಿ ಪ್ರತಿಷ್ಠಾಪನೆಗೊಂಡಿರುವ ಆಡಳಿತ ಪಕ್ಷದಂತೆಯೇ, ಅದಕ್ಕೆ ಸಮನಾದ ಮತ್ತು ಸರಕಾರ ತಪ್ಪುಗಳನ್ನು ಕಾಲಾನುಕಾಲಕ್ಕೆ ಎತ್ತಿತೋರಿಸಿ ಸರಿದಾರಿಯಲ್ಲಿ ನಡೆಸಬೇಕಾದ ಸಮರ್ಥ ವಿಪಕ್ಷವೂ ಇರಬೇಕಾದ್ದು ಈ ಪ್ರಜಾಪ್ರಭುತ್ವದ ಅಗತ್ಯಗಳಲ್ಲೊಂದು. ಆದರೆ ಒಳಜಗಳದ ಕಾರಣದಿಂದಾಗಿ ಕರ್ನಾಟಕದ ಮಟ್ಟಿಗೆ ಈ ಪಾತ್ರದ ಪರಿಪೂರ್ಣ ನಿರ್ವಹಣೆ ಆಗುತ್ತಿಲ್ಲ ಎಂಬುದು ಬಹಿರಂಗ ಸತ್ಯ. ಈ ಲೋಪವನ್ನು ಇನ್ನಾದರೂ ಸರಿಪಡಿಸಿಕೊಳ್ಳದಿದ್ದರೆ ಬಿಜೆಪಿಯು ಭಾರಿ ಬೆಲೆಯನ್ನೇ ತೆರಬೇಕಾಗುತ್ತದೆ.

ಇದನ್ನೂ ಓದಿ: Vishwavani Editorial: ಗತವೈಭವಕ್ಕೆ ಮರಳಲಿ ಚಂದನವನ