ನಿನ್ನ ನೋಟದ ಹೊಳಪಿಗೆ ಜಾತ್ರೆಯ ಅಂಗಣವೆಲ್ಲಾ ಬೆಳಗಿತ್ತು, ಹಾಲಿನ ನದಿಯಲ್ಲಿ ತೊಯ್ದು ಹೋಗಿತ್ತು.
ಬಸವರಾಜ ಎನ್. ಬೋದೂರು
ಇದ್ದಕ್ಕಿದ್ದ ಹಾಗೆ ಜಾತ್ರೆಯ ಜಂಗುಳಿಯಲ್ಲಿ ಪ್ರತ್ಯಕ್ಷಳಾದ ನೀನು ನನಗೆ ದೇವತೆಯಂತೆ ಕಂಡಿದ್ದು ಸುಳ್ಳಲ್ಲ. ಸಂಜೆಯ ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತಿರುವ ನಿನ್ನ ಮುಖವೂ ಇನ್ನೊಂದು ಪ್ರತಿಸೂರ್ಯನಂತೆ ಹೊಳೆಯುತ್ತಿತ್ತು. ಅದೆಂಥ ನೋಟ ನಿಂದು!
ಕಾಡಿಗೆಯ ಕಣ್ಣಿನಲ್ಲಿ ನನ್ನನ್ನೊಮ್ಮೆ ದಿಟ್ಟಿಸಿ ಮಂತ್ರಮುಗ್ಧಗೊಳಿಸಿಬಿಟ್ಟಿದ್ದೆ. ಒಂದೇ ನೋಟದಲ್ಲಿ ಇಡೀ ಜಗತ್ತನ್ನೇ ಸಮ್ಮೋಹನ ಗೊಳಿಸುವಂತ ಚೆಲುವೆ ನೀನು. ಆಕಸ್ಮಿಕವಾಗಿ ಎದುರಾದ ಆ ಕ್ಷಣ ಇಬ್ಬರೂ ಒಬ್ಬರನ್ನೊಬ್ಬರು ಮಂತ್ರಮುಗ್ಧರಾಗುವಂತೆ ನೋಡುತ್ತ ನಿಂತೇ ಬಿಟ್ಟೇವು.
ಸಂಜೆಯ ಹೊಂಬಿಸಿಲು ಇಬ್ಬರ ಹೃದಯದಲ್ಲೂ ತುಂಬಿದ್ದ ಈ ಅನಿರೀಕ್ಷಿತ ಅಚ್ಚರಿಯನ್ನು ಮುಖಗಳಿಂದ ಹೊರಗೆ ತುಳುಕಿಸು ವಂತೆ ಕೆಂಪಾಗಿತ್ತು. ಮಿತಿ ಮೀರಿದ ನಮ್ಮಿಬ್ಬರ ಭಾವನೆಗಳಿಗೆ ಶೃತಿ ಹಿಡಿಯಲು ಸೋತು ಜಾತ್ರೆಯೇ ನಾಚಿದಂತಿತ್ತು. ಅದೆಂಥ ಸುಂದರ ರೂಪ ನಿಂದು! ಯಾವುದೋ ಕಥೆಗಳಲ್ಲಿ ಬರುವ ಸಾಕ್ಷಾತ್ ಅಪ್ಸರೆ ನೀನು! ಎತ್ತರವಾದ, ಚೆಲುವಾದ ಕಣ್ಣುಗಳಲ್ಲಿ ಹೃದಯವನ್ನು ಕಿತ್ತು ಆಚೆ ತೆಗೆಯುವಂತ ಹರಿತವಾದ ನೋಟ! ಸೇಬಿನಂತ ದುಂಡನೆಯ ಬಿಳುಪಿನ ಮುಖಕ್ಕೆ ದೃಷ್ಟಿಯ
ಗೆರೆ ಎಳೆದಂತೆ ಜಾರಿ ಜಾಲಾಡುತ್ತಿದ್ದ ಆ ಮುಂಗುರುಳು, ನಿಂತ ನಿಲುವು, ಭಾವ- ಭಂಗಿ, ವನಪು- ವಯ್ಯಾರ, ಒಲವು- ಚೆಲುವು, ಆಯಾ- ಆಕೃತಿ, ಅವರ್ಣೀಯ, ಅಸಾಧಾರಣ, ನೋಡಿದವರನ್ನು ತಡೆದು ಅಲ್ಲೆ ನಿಲ್ಲಿಸುವ ನಿಲುವು, ಚಪಲತೆಯನ್ನು ಚಿಗುರಿ ಸುವ ಚಲುವು. ಎಲ್ಲದರಲ್ಲೂ ಕಂಗೋಳಿಸಿಬಿಟ್ಟೆ.
ದೇವಾಲಯದ ಮೇಲಿರುವ ಶಿಲಾಪ್ರತಿಮೆಯೊಂದು ಜೀವತಳೆದು ನನ್ನ ಮುಂದೆ ಬಂದು ನಿಂತಿದೆಯೇನೋ ಎನ್ನುವಷ್ಟು ಭ್ರಮೆ ಹುಟ್ಟಿಸಿದ್ದಂತೂ ದಿಟ. ಕಂಡ ಕ್ಷಣಮಾತ್ರದಲ್ಲೇ ಇಡೀ ದೇಹ ಮನಸ್ಸುಗಳನ್ನೆಲ್ಲಾ ವ್ಯಾಪಿಸಿ ಹುಚ್ಚೆಬ್ಬಿಸುವ ಅಪೂರ್ವ
ಸೌಂದರ್ಯದ ಪುತ್ಥಳಿಯಂತವಳು ನೀನು. ಚೆಲುವೆಯೇ ನಿನ್ನ ಕುಡಿನೋಟದಿಂದಲೇ ನನ್ನ ಪಂಚ ಪ್ರಾಣಗಳನ್ನ ಅಲ್ಲಾಡಿಸಿ ಬಿಟ್ಟಿದ್ದೆ, ಮೈ ಮನಸ್ಸುಗಳೆರಡೂ ನನಗರಿವಿಲ್ಲದಂತೆಯೇ ಪರವಶಗೊಂಡುಬಿಟ್ಟವು. ನಿನ್ನ ನೋಡಿದ ಕೆಲವೇ ಕ್ಷಣಗಳಲ್ಲಿ ಹಲವಾರು ಭಾವನೆಗಳ ಪ್ರವಾಹವೇ ಹರಿದು ಹೋಗಿತ್ತು.
ಆಗಸದಿಂದ ಉದುರಿದ ನಕ್ಷತ್ರ
ಇಬ್ಬರೂ ನೋಡುತ್ತ ನಿಂತೇ ಇದ್ದೆೆವು. ಅಷ್ಟರಲ್ಲಿ ಯಾರೋ ಬಂದು ನಿನ್ನ ಕರೆದಾಗ, ನೀ ಬೆಚ್ಚಿದೆ. ಆಕಾಶದ ನಕ್ಷತ್ರವೊಂದು
ಕೆಳಗೆ ಉದುರಿದಂತೆ ನಿನ್ನ ಪರವಶತೆಯ ಸ್ಥಿತಿಯಿಂದ ವಾಸ್ತವಕ್ಕೆ ಮರಳಿದೆ, ನಾನೂ ಕೂಡ. ನೀ ಚಡಪಡಿಸಿದ್ದು, ಏನೋ ಹೇಳ ಬೇಕೆಂಬತೆ ನಿನ್ನ ತುಟಿಗಳು ಹೊರಳಾಡಿದ್ದು, ಕಣ್ಣುಗಳು ವೇಗವಾಗಿ ಅತ್ತಿತ್ತ ಹರಿದಾಡಿದ್ದು, ಉಸಿರಿನ ರಭಸ ಹೆಚ್ಚಾಗಿ ಹೃದಯ ಡಬ್ ಡಬ್ ಸದ್ದು ಮಾಡಿದ್ದು, ಕೈಕಾಲು ಕಂಪಿಸಿದ್ದು ನಾ ಗಮನಿಸಿದೆ.
ಅಷ್ಟೆ ಯಾಕೆ ನನ್ನ ಮುಖವನ್ನೊಮ್ಮೆ ನೇರವಾಗಿ ನೋಡಿ, ಒಂದು ಕ್ಷಣ ನೀ ನಾಚಿದ್ದೂ ಕೂಡ ನಾ ನೋಡಿದೆ ಹುಡುಗಿ… ಆಗ ನೀ ನನ್ನನ್ನು ಮತ್ತೊಮ್ಮೆ ನೋಡಿ, ಮಲ್ಲಿಗೆ ಅರಳಿದಂತೆ ಒಂದು ಮೃದುವಾದ ಮಂದಹಾಸ ಬೀರಿ ನಡೆದುಬಿಟ್ಟೆ. ಆ ಕ್ಷಣ ನನಗೆ ಆಕಾಶದಲ್ಲಿ ಮಿಂಚೊಂದು ಕಣ್ಣು ಕೊರೈಸಿ ಮರೆಯಾದಂತೆನಿಸಿತು. ಚಡಪಡಿಸಿದ ಮನಸ್ಸು ವಿಲವಿಲ ಒದ್ದಾಡಿಬಿಟ್ಟಿತ್ತು.
ನೀ ಮರೆಯಾದ ಆ ಕ್ಷಣ ಇಡೀ ಜಾತ್ರೆಯೇ ಸ್ತಬ್ಧ ಎನ್ನಿಸಿದ್ದಂತೂ ನಿಜ. ನಿನ್ನಂಥ ಸೌಂದರ್ಯ ಸುಕೋಮಲೆ ಜಗತ್ತಿನಲ್ಲೇ
ಮತ್ಯಾರೂ ಇರಲಿಕ್ಕಿಲ್ಲ ಎಂದು ನನ್ನ ಭಾವುಕ ಮನಸ್ಸು ಭಾವಲೋಕಕ್ಕೆ ಕೊಂಡೊಯ್ದಿತ್ತು. ಅವಳೊಂದಿಗೆ ಮಾತಾಡಬೇಕಿತ್ತು,
ಗುಲಾಬಿ ದಳಗಳಂತೆ ಕಂಪಿಸಿದ ಆ ತುಟಿಗಳಿಂದ ಹೊರ ಬರುವ ಮಾತುಗಳನ್ನೊಮ್ಮೆ ಆಲಿಸಬೇಕಿತ್ತು, ಆ ದುಂಡು ಕೆನ್ನೆ ಯನ್ನೊಮ್ಮೆ ಸ್ಪರ್ಶಿಸಬೇಕಿತ್ತು, ಈಗ ತಾನೇ ಹುಟ್ಟಿ ಬರುತ್ತಿರುವ ತಾವರೆಯ ಮೊಗ್ಗಿನಂತಿರುವ ಕಣ್ಣಿನಲ್ಲೊಮ್ಮೆ ನನ್ನ ಕಣ್ಣು ಸೇರಿಸಿ ಮಂದಹಾಸ ಬೀರಬೇಕಿತ್ತು, ಎಂಬ ಭ್ರಮಾಲೋಕದಲ್ಲಿ ಪೇಚಾಡಿಬಿಟ್ಟಿದ್ದೆ ಹುಡುಗಿ.
ಇನ್ನು ಯಾವಾಗ ನಾ ನಿನ್ನ ನೋಡಲಿ, ಎಂದು ನಿನ್ನ ಆ ಸುಂದರ ನೋಟವನ್ನು ಕಣ್ತುಂಬಿಸಿಕೊಳ್ಳಲಿ? ಹೇಳುವೆಯಾ?