ಸಂಧ್ಯಾ ಎಂ. ಸಾಗರ
ನನ್ನ ಹೃದಯದ ನೋವನ್ನು ಕಟ್ಟಿಕೊಂಡು ಏನಾಗಬೇಕಿದೆ ನಿನಗೆ? ನೀ ಸುಖವಾಗಿರು, ಎಲ್ಲೇ ಇದ್ದರೂ.
ಈ ಪ್ರೀತಿ ಎಂಬುದು ಅವ್ಯಕ್ತ ಭಾವ. ಮನದ ಯಾವುದೋ ಮೂಲೆಯಲ್ಲಿ ಮೊಳಕೆಯೊಡೆಯುತ್ತದೆ. ಒಮ್ಮೊಮ್ಮೆ ಅದೇ ಮೂಲೆ ಯಲ್ಲಿ ಚಿವುಟಿ ಹೋಗುತ್ತದೆ.
ಅವತ್ತು ನನ್ನ ಕಾಲೇಜಿನ ಮೊದಲ ದಿನ. ನೀನು ಗೆಳೆಯರೊಡನೆ ಹರಟುತ್ತಾ ಕಟ್ಟೆಯೊಂದರ ಮೇಲೆ ಕುಳಿತಿದ್ದೆ. ನನಗಿಂತ ಎರಡು ವರ್ಷ ಸೀನಿಯರ್ ನೀನು. ನಮ್ಮನ್ನು ನೋಡಿ ರ್ಯಾಗಿಂಗ್ ಮಾಡುವ ಉದ್ದೇಶದಿಂದ ಕರೆದೆ. ನಿನಗೆ ಕೊಟ್ಟಿದ್ದ ಪ್ರಾಜೆಕ್ಟ್
ಕೆಲಸವನ್ನು ನನಗೆ ಮಾಡೋದಿಕ್ಕೆ ಹೇಳಿದ್ದೆ. ಆ ನಿನ್ನ ಆ್ಯಟಿಡ್ಯೂಟ್ ನನ್ನ ಸೆಳೆದಿತ್ತು. ನೀನು ನನಗೆ ‘ಮೂರು ದಿನದಲ್ಲಿ ಪ್ರಾಜೆಕ್ಟ್ ಮುಗಿಸಿ ಕೊಡಬೇಕು’ ಎಂದು ಹೇಳಿ ಗತ್ತಿನಿಂದ ಅಲ್ಲಿಂದ ತೆರಳಿದ್ದೆ.
ನಿನ್ನೇ ನಾನು ನೋಡುತ್ತಾ ನಿಂತಿದ್ದು ನಿನಗೆ ಗೊತ್ತೇ ಆಗಲಿಲ್ಲ. ಅದೇನೋ ಗೊತ್ತಿಲ್ಲ. ನೀನೊಂತರ ಮನಸಿಗೆ ಹಿಡಿಸಿದ್ದೆ. ಕಾಲೇಜಿ ನಲ್ಲಿ ನನ್ನ ಕಣ್ಣುಗಳು ನಿನ್ನೆೆ ಹುಡುಕುತ್ತಿದ್ದವು. ಆದರೆ ಮೂರು ದಿನ ನೀನು ಕಾಲೇಜಿನತ್ತ ಮುಖವನ್ನೇ ಹಾಕಲಿಲ್ಲ. ಪ್ರಾಜೆಕ್ಟ್ ಕೇಳೋಕೆ ಬಂದ ನಿನ್ನ ನೋಡಿದ ನನ್ನ ಮುಖದ ಸಂತೋಷ ಕೂಡ ನಿನಗೆ ಕಾಣಲಿಲ್ಲ. ಬರೀ ಸಿಡುಕುತನವೇ ನಿನ್ನಲ್ಲಿ. ಅದಕ್ಕೆ ನಾನು ಮನಸಿನಲ್ಲಿ ನಿನಗೆ ಸಿಡುಕು ಮೂತಿ ಸಿದ್ದಪ್ಪ ಅಂತ ನಾಮಕರಣ ಮಾಡಿದ್ದೆ. ಮತ್ತೆ ಮರುದಿನ ಹುಡುಕಿದರೆ ಅಸಾಮಿ ನಾಪತ್ತೆ. ನನ್ನ ಮನಸು ನಿನ್ನ ನೋಡದೆ ನೀರಿನಿಂದ ಹೊರ ಬಿದ್ದ ಮೀನಿನಂತೆ ವಿಲ ವಿಲ ಒದ್ದಾಡುತ್ತಿತ್ತು.
ನಿನ್ನನ್ನು ನಾ ಹುಡುಕದ ಕ್ಷಣವಿರಲಿಲ್ಲ. ಕೊನೆಗೂ ನೀನು ಒಮ್ಮೆ ಕಾಲೇಜಿಗೆ ಬಂದೆ, ಆದರೆ ಮಾತನಾಡಿಸುವ ಅಂದರೆ ಮಾತು ಗಳೇ ಹೊರ ಬರದ ಪರಿಸ್ಥಿತಿ. ಹೀಗೆಯೇ ದಿನ ಕಳೆಯಿತು. ಕಾಲೇಜು ಸಮಾರಂಭದಲ್ಲಿ ಶಕ್ತಿ ತುಂಬಿಕೊಂಡು ನಿನ್ನ ಮಾತನಾಡಿ ಸಿದ್ದೆ. ನಿನ್ನ ಮಾತನಾಡಿಸಿದ ಆ ಸವಿಘಳಿಗೆ ಇನ್ನು ಮನದಲ್ಲಿ ಅಚ್ಚು ಒತ್ತಿದ ಹಾಗಿದೆ. ದಿನ ಕಳೆದಂತೆ ನಾವಿಬ್ಬರು ಒಳ್ಳೆಯ ಸ್ನೇಹಿತರಾಗಿ, ಪ್ರತಿಯೊಂದು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೆವು.
ನನಗೆ ಮಾತ್ರ ಮನದಲ್ಲಿ ಏನೋ ಕಳವಳ, ಅದೇನೋ ಅವ್ಯಕ್ತ ಭಾವ. ನಾನು ಅರಿಯದೇ ನಿನ್ನ ಪ್ರೇಮ ಪಾಶದಲ್ಲಿ ಬಂಧಿ ಯಾಗಿದ್ದೆ. ಆದರೂ ನಿನಗೆ ಹೇಳುವ ಧೈರ್ಯ ಮಾಡಲಿಲ್ಲ. ಅದು ನಿನ್ನ ಕೊನೆಯ ವರ್ಷ, ಕಾಲೇಜು ಮುಗಿಸಿ, ನಿನ್ನ ಕನಸುಗಳಿಗೆ ರೆಕ್ಕೆೆ ಕಟ್ಟಿ ವಿದೇಶಕ್ಕೆ ಹಾರಿದ್ದೆ. ಆಗೊಮ್ಮೆ ಇಗೊಮ್ಮೆ ಮಾತು ಕತೆ. ಅದೆಷ್ಟೋ ಬಾರಿ ನನ್ನ ಮನದ ಭಾವನೆಗಳನ್ನು ನಿನ್ನ
ಮುಂದೆ ಹೇಳುವ ಪ್ರಯತ್ನ ಮಾಡಿದ್ದೆ. ಆದರೆ ಅದ್ಯಾವುದು ಸಫಲವಾಗಲಿಲ್ಲ. ನೀನು ವಾಪಾಸ್ ಭಾರತಕ್ಕೆ ಬಂದ ಮೇಲೆ
ಹೇಳುವ ಎಂದು ಸುಮ್ಮನಾದೆ. ಆ ಸಮಯ ಕೊನೆಗೂ ಬಂದಿತ್ತು.
ಸುಮಾರು ಎರಡು ವರ್ಷಗಳ ನಂತರ ನಿನ್ನ ನನ್ನ ಭೇಟೆ. ಅಂತಿಮ ವರ್ಷದ ಪರೀಕ್ಷೆಗೆ ಸಿದ್ಧರಾಗುತ್ತೇವಲ್ಲ. ಹಾಗೇ ಮುತುವರ್ಜಿ ಯಿಂದ ಸಿದ್ಧವಾಗಿದ್ದೆ. ಆದರೆ ಆ ದಿನ ನನ್ನ ಮಾತುಗಳು ಹೇಳದೆಯೇ ಉಳಿದು ಹೋಗುತ್ತದೆ ಎಂದು ಭಾವಿಸಿರಲಿಲ್ಲ. ನೀನು ಬಂದೆ, ಜತೆಗೆ ನಿನ್ನ ಮನ ಗೆದ್ದವಳನ್ನು ಕರೆ ತಂದಿದ್ದೆ. ಆಕೆಯನ್ನು ನೀನು ‘ನನ್ನವಳು’ ಎಂದು ಪರಿಚಯ ಮಾಡಿ ಕೊಡುವಾಗ ನನ್ನ ಹೃದಯದಲ್ಲಿ ಅದೇನೋ ಒಂದು ತೀವ್ರವಾದ ನೋವು, ಯಾತನೆ, ವೇದನೆ.
ಬಹಳ ಕಷ್ಟಪಟ್ಟುಕೊಂಡು ಆ ನೋವನ್ನು ತಡೆದುಕೊಂಡೆ. ನೀನು ಹೇಳಿದ ಆ ಕಟು ಸತ್ಯವನ್ನು ಒಪ್ಪಿ ಕೃತಕ ನಗು ಬೀರಿದ್ದೆ. ಇಂದು ನಿನ್ನ ಮದುವೆ. ಯಾಕೊ ಇದನ್ನೆಲ್ಲಾ ಹೇಳಬೇಕು ಎನಿಸಿತ್ತು. ನನ್ನ ಮನದ ಮೂಲೆಯಲ್ಲಿ ಇನ್ನಷ್ಟು ಮಾತು ಮತ್ತು ಪ್ರೀತಿಯನ್ನು ಚಿವುಟಿ ಹಾಕುತ್ತಿದ್ದೇನೆ. ನೀ ಎಲ್ಲೇ ಇರು, ಸುಖವಾಗಿರು.