Friday, 27th December 2024

Vishwavani Editorial: ಸಭ್ಯ ರಾಜಕಾರಣಿಯ ನಿರ್ಗಮನ

ಕರ್ನಾಟಕದ ರಾಜಕಾರಣದಲ್ಲಿ ‘ಕೃಷ್ಣಪರ್ವ’ ಮುಗಿದಿದೆ. ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ‘ಕೃಷ್ಣ ಗಾರುಡಿ’ ಮೆರೆದಿದ್ದ ಸಂಭಾವಿತ ರಾಜಕಾರಣಿ ಎಸ್.ಎಂ.ಕೃಷ್ಣ ಅವರು ಕಾಲನ ಕರೆಗೆ ಓಗೊಟ್ಟು ತಮ್ಮ ಅಪಾರ ಅಭಿಮಾನಿಗಳನ್ನು ಅಗಲಿ ಕಾಣದ ಊರಿಗೆ ತೆರಳಿದ್ದಾರೆ.

“ರಾಜಕಾರಣ ಮತ್ತು ಸಂಭಾವಿತ ನಡೆ ಜತೆಜತೆಯಾಗಿ ಸಾಗಲಾರವು; ವಿದ್ಯೆ-ವಿನಯವಂತಿಕೆ-ಸಂಸ್ಕಾರ-ಶಿಸ್ತು-ಅಚ್ಚುಕಟ್ಟುತನ-ಸಂವಹನಾ ಕಲೆ ಇವೆಲ್ಲವನ್ನೂ ರಾಜಕಾರಣಿಗಳಲ್ಲಿ ಕಾಣುವುದು ದುಸ್ತರ” ಎಂಬ ಗ್ರಹಿಕೆಯನ್ನು ಅಕ್ಷರಶಃ ಸುಳ್ಳು ಮಾಡಿದವರು ಕೃಷ್ಣ. ಕಾರಣ ಈ ಎಲ್ಲ ಗುಣ-ವೈಶಿಷ್ಟ್ಯಗಳ ಆಗರವೇ ಆಗಿದ್ದ ಅಪರೂಪದ ಮುತ್ಸದ್ದಿ ಅವರು. ದಿನದ ೨೪ ಗಂಟೆಯೂ ರಾಜಕಾರಣವನ್ನೇ ಹಾಸಿ ಹೊದ್ದುಕೊಳ್ಳುವ, ರಾಜಕೀಯದ ಕಾರ್ಯತಂತ್ರಗಳ ನೆಪದಲ್ಲಿ ಬೆನ್ನಿಗಿರಿಯುವುದನ್ನೇ ಚಾಳಿಯಾಗಿಸಿಕೊಂಡಿರುವವರ ಮಧ್ಯೆ ಕೃಷ್ಣ ಅವರು ಇಷ್ಟವಾಗುವುದು, ಪ್ರತ್ಯೇಕವಾಗಿ ನಿಲ್ಲುವುದು ಈ ಕಾರಣಗಳಿಗೇ.

ಕಲೆ, ಕ್ರೀಡೆ, ಸಾಹಿತ್ಯ, ಸಂಗೀತ ಹೀಗೆ ವಿವಿಧ ಕ್ಷೇತ್ರಗಳಲ್ಲೂ ಅವರಿಗೆ ಅಭಿರುಚಿಯಿತ್ತು. ಆ ನೆಲೆಯಲ್ಲಿ ಹೇಳುವು ದಾದರೆ, ಕೃಷ್ಣರ ಕಣ್ಮರೆಯು ರಾಜಕಾರಣ ಕ್ಷೇತ್ರಕ್ಕೆ ಮಾತ್ರವಲ್ಲದೆ ಅವರು ಸಂಬಂಧವಿಟ್ಟುಕೊಂಡಿದ್ದ ಇಂಥ ಹಲವು ಕ್ಷೇತ್ರಗಳಿಗೂ ಆದ ನಷ್ಟವೇ. ದೂರದರ್ಶಿತ್ವ ಮತ್ತು ಪರಾನುಭೂತಿ ಶಕ್ತಿಗಳು ರಾಜಕಾರಣಿಗಳಲ್ಲಿ ಇರಲೇ ಬೇಕಾದ ಎರಡು ವೈಶಿಷ್ಟ್ಯಗಳು. ಇವೆರಡೂ ಕೃಷ್ಣರಲ್ಲಿ ಕೆನೆಗಟ್ಟಿದ್ದರಿಂದಲೇ ಮಹಿಳಾ ಸಬಲೀಕರಣ ಮತ್ತು
ಆರ್ಥಿಕ ಸ್ವಾವಲಂಬನೆಯ ಉದ್ದೇಶವಿದ್ದ ‘ಸ್ತ್ರೀ ಶಕ್ತಿ ಸ್ವ-ಸಹಾಯ’ ಸಂಘಗಳಿಗೆ ರಾಜ್ಯದಲ್ಲಿ ಅವರು ಚಾಲನೆ ನೀಡಲು, ಆರ್ಥಿಕ-ಅಸಹಾಯಕರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ನೀಡುವ ‘ಯಶಸ್ವಿನಿ’ ಯೋಜನೆ ಯನ್ನು ಶುರುಮಾಡಲು, – ಓವರ್ ಕಾಮಗಾರಿ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಂಥ ಉಪಕ್ರಮ ಗಳಿಗೆ ಚಾಲನೆ ನೀಡಲು ಸಾಧ್ಯವಾಯಿತು.

ಐಟಿ-ಬಿಟಿ ವಲಯದಲ್ಲಿ ಕರ್ನಾಟಕವು ಹೆಗ್ಗುರುತು ಮೂಡಿಸುವಂತಾಗಿದ್ದಕ್ಕೂ ಕೃಷ್ಣರಿಗೆ ಇದ್ದ ದೂರದೃಷ್ಟಿಯೇ ಕಾರಣ. ಕೃಷ್ಣರ ಇಂಥ ಕಾರ್ಯಕ್ಷಮತೆ, ವಿಷಯಜ್ಞಾನ, ದೂರದರ್ಶಿತ್ವ, ಸಂಭಾವಿತ ನಡೆ, ಸಂಸ್ಕಾರ, ಅಚ್ಚುಕಟ್ಟು ತನದಲ್ಲಿ ಲವಲೇಶ ವನ್ನಾದರೂ ಇಂದಿನ ಕೆಲ ರಾಜಕಾರಣಿಗಳು ರೂಢಿಸಿಕೊಂಡರೆ, ಪ್ರಾಯಶಃ ಅದು ಅವರಿಗೇ ಕೊಟ್ಟುಕೊಳ್ಳಬಹುದಾದ ಉತ್ತಮ ಕೊಡಗೆಯಾದೀತು. ಆಗ ಜನರಿಗೆ ‘ಸುಶಾಸನ’ ದೊರಕುವುದು ದುಸ್ತರವೇನೂ ಆಗದು.

ಇದನ್ನೂ ಓದಿ: Vishwavani Editorial: ಗತವೈಭವಕ್ಕೆ ಮರಳಲಿ ಚಂದನವನ