Monday, 23rd December 2024

ಇದು ಖ್ಯಾತ ಸಂಪಾದಕನೊಬ್ಬ ಪಿಯಾನೋ ವಾದಕನಾದ ಕತೆ

 

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್‌

ಸಂಪಾದಕರಾದವರಿಗೆ ಕೈತುಂಬಾ ಕೆಲಸ. ಪ್ರಧಾನಿಯವರಾದರೂ ಕೆಲಕಾಲ ನಿಶ್ಚಿಂತೆಯಿಂದ ಇರಬಹುದು. ಆದರೆ ಸಂಪಾದಕ ನಾದವ ಇಡೀ ಜಗತ್ತನ್ನು ತಾನೇ ಹೊತ್ತುಕೊಂಡಿದ್ದೇನೆ ಎನ್ನುವಂತೆ ವರ್ತಿಸುತ್ತಿರುತ್ತಾನೆ. ಆಫೀಸಿನಲ್ಲಿದ್ದರೂ ಆಫೀಸಿನದೇ ಚಿಂತೆ.
ಮನೆಯಲ್ಲಿದ್ದರೂ ಹಾಗೇ.

ಜಗತ್ತಿನ ಆಗು – ಹೋಗುಗಳಿಗೆ ತಾನೇ ಬಾಧ್ಯಸ್ಥ ಎನ್ನುವ ರೀತಿಯಲ್ಲಿ ಆಡು ತ್ತಿರುತ್ತಾನೆ. ಬೆಳಗ್ಗೆ ಮೂರು ತಾಸು ಪತ್ರಿಕೆ ಓದಿ, ಆಫೀಸಿಗೆ ಹೊರಟು ಹೋದರೆ, ಆ ದಿನದ ಸುದ್ದಿ ಸಂತೆಯೊಳಗೆ ಅಲ್ಲಿಯೇ ಕಳೆದು ಹೋಗುತ್ತಾನೆ. ಪತ್ರಿಕೆಯನ್ನು ಮುದ್ರಣಕ್ಕೆ ಕಳಿಸಿ, ಮನೆಗೆ ಬರುವ ಹೊತ್ತಿಗೆ ಮಧ್ಯರಾತ್ರಿ ಸಮೀಪಿಸಿರುತ್ತದೆ. ಮನೆಗೆ ಬಂದರೂ ನೆಮ್ಮದಿಯಿಲ್ಲ. ಮತ್ತೆ ಹತ್ತಾರು ಫೋನ್ ಕರೆಗಳು.

ಸುಖವಾಗಿ ಊಟ ಮಾಡಲು ಪುರುಸೊತ್ತಿಲ್ಲ. ಈ ಜಗತ್ತು ತನ್ನ   ಸುತ್ತಲೂ ಸುತ್ತುತ್ತಿರುವಂತೆ ವರ್ತಿಸುತ್ತಿದ್ದಾನಲ್ಲ ಎಂದು ಮನೆ ಮಂದಿ ಒಳಗೊಳಗೇ ಅಂದುಕೊಂಡರೂ ಆತ ತಲೆಕೆಡಿಸಿಕೊಳ್ಳುವುದಿಲ್ಲ. ಅವನ ವೃತ್ತಿಯೇ ಹಾಗೋ, ಆತ ಆ ಸ್ವಭಾವ ವನ್ನು ಬೆಳೆಸಿಕೊಳ್ಳುತ್ತಾನೋ, ಸಂಪಾದಕನಾದರೆ ಆ ರೀತಿ ವರ್ತಿಸಬೇಕಾ, ಗೊತ್ತಿಲ್ಲ. ಆದರೆ ಬಹುತೇಕ ಸಂಪಾದಕರು ಅದೇ ರೀತಿ ಇರುತ್ತಾರೆ. ತಮ್ಮ ಜೇಬಿನೊಳಗೆ ಚೇಳು ಇಟ್ಟುಕೊಂಡ ವರಂತೆ ವರ್ತಿಸುತ್ತಾರೆ.

ತಾನಿಲ್ಲದಿದ್ದರೂ ಪತ್ರಿಕೆ ಬರುತ್ತದೆ ಮತ್ತು ಇನ್ನೂ ಚೆನ್ನಾಗಿ ಬರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಒಂದು ಇಡೀ ದಿನ ಕೂಡ ಹೆಂಡತಿ – ಮಕ್ಕಳೊಂದಿಗೆ ಸಮಾಧಾನದಿಂದ ಮನೆಯಲ್ಲಿ ಕಳೆಯುವುದಿಲ್ಲ. ಸೂರ್ಯಾಸ್ತಕ್ಕಿಂತ ಮುನ್ನ ಒಂದು ದಿನವೂ ಮನೆಗೆ ಬರುವುದಿಲ್ಲ. (ಅಪ್ಪಿತಪ್ಪಿ ಸೂರ್ಯಾಸ್ತಕ್ಕಿಂತ ಮನೆಗೆ ಹೋದರೂ, ಯಾರೂ ಬಾಗಿಲು ತೆರೆಯುವುದಿಲ್ಲ ಬಿಡಿ)
ರಜೆಯ ದಿನ ಮನೆಯಲ್ಲಿದ್ದರೂ, ಮನಸ್ಸೆ ಸುದ್ದಿಮನೆ  ಇರುತ್ತದೆ. ಇದನ್ನೇ ಅಭ್ಯಾಸ ಮಾಡಿಕೊಂಡು ಇಡೀ ಜೀವನವನ್ನು ಹೀಗೆ ಯೇ ಕಳೆದುಬಿಡುತ್ತಾನೆ.

ಸಂಪಾದಕನನ್ನು ಕಟ್ಟಿಕೊಳ್ಳುವುದೆಂದರೆ ಅವನ ಪತ್ನಿಗೆ, ಅವನ ಪತ್ರಿಕೆಯನ್ನು ಕಟ್ಟಿಕೊಂಡಂತೆ. ತನ್ನ ಮನೆಯಲ್ಲಿ ಏನು ನಡೆಯುತ್ತಿದೆ ಎಂಬುದು ಅವನಿಗೆ ಗೊತ್ತಿರುವುದಿಲ್ಲ. ಇಡೀ ಊರಿನ, ರಾಜ್ಯದ , ದೇಶದ, ದೇಶ – ದೇಶಗಳ ಉಸಾಬರಿಯ ಬಗ್ಗೆ
ತಲೆಕೆಡಿಸಿಕೊಂಡಿರುತ್ತಾನೆ. ಮುಖ್ಯಮಂತ್ರಿಗೆ ತನ್ನ ಕುರ್ಚಿ, ಹಣೆಬರಹದ ಬಗ್ಗೆ ಗೊತ್ತಿರುತ್ತದೆ. ಆತ ನಿರಾಳವಾಗಿರುತ್ತಾನೆ.
ಆದರೆ ಈ ಮಹಾಶಯ ರಾತ್ರಿಯೆಲ್ಲ ಅವನ ಬಗ್ಗೆಯೇ ಯೋಚಿಸುತ್ತಿರುತ್ತಾನೆ.

ಸಂಪಾದಕನಾದವನಿಗೆ ತನ್ನ ಬಂಧುಗಳು, ಸ್ನೇಹಿತರು, ಆಪ್ತರ ಮನೆಗೆ ಹೋಗಲು ಸಮಯ ಸಿಗುವುದಿಲ್ಲ. ಬಹಳ ಬಿಜಿ. ಅದೇ ಮಂತ್ರಿಗಳು, ಗಣ್ಯರು, ಸಮಾಜದ ಪ್ರಸಿದ್ಧರ ಜತೆಗೆ ಆಯುಷ್ಯವನ್ನೇ ಕಳೆಯುತ್ತಾನೆ. ಒಂದು ದಿನ ಅವರ ಜತೆ ಕಳೆಯದಿದ್ದರೆ, ಏನೋ ಮಹತ್ತರವಾದುದನ್ನು ಕಳೆದುಕೊಂಡೆ ಎಂಬತ್ತಿರುತ್ತದೆ ಅವನ ಧೋರಣೆ. ಈ ಭ್ರಮೆ (hallucination)ಯ ಬಹುತೇಕ ಸಂಪಾದಕರು ತಮ್ಮ ಜೀವನವನ್ನು ಕಳೆದುಬಿಡುತ್ತಾರೆ.

ನಿವೃತ್ತಿಯಾಗಿ ಮನೆಯಲ್ಲಿ ಕುಳಿತುಕೊಂಡಾಗ, ತಾನು ಸಹ ಒಬ್ಬ ನೌಕರನಾಗಿದ್ದೆ ಎಂಬ ಸರಳ ಸತ್ಯ ಅರಿವಾಗುತ್ತದೆ. ಅಷ್ಟೊತ್ತಿಗೆ
ಕಾಲ ಮಿಂಚಿರುತ್ತದೆ. ಹೀಗಾಗಿ ಯಾವ ಸಂಪಾದಕನೂ ತನ್ನ ಇಷ್ಟದಂತೆ ಬದುಕುವುದಿಲ್ಲ. ಆಫೀಸು, ಪತ್ರಿಕೆ, ಮೀಟಿಂಗ್,
ಟೂರ್, ಕಾನರೆನ್ಸ್, ಡಿನ್ನರ್, ಪಾರ್ಟಿ, ಸಿಎಂ, ಮಣ್ಣಂಗಟ್ಟೆ ಎಂದು ದಿನಗಳೆಲ್ಲ ಕಳೆದು ಹೋಗುತ್ತವೆ. ಹೀಗಾಗಿ ಯಾವ ಸಂಪಾ ದಕನಿಗೂ ವೈಯಕ್ತಿಕವಾದ ಹವ್ಯಾಸ, ಅಭಿರುಚಿಗಳನ್ನು ಪೊರೆಯಲು ಆಗುವುದಿಲ್ಲ.

ಹೋಗಲಿ, ಬೆಳಗ್ಗೆ ಎದ್ದು ನೆಟ್ಟಗೆ ಎರಡು ಮೈಲಿ ನಡೆಯುವುದಿಲ್ಲ. ಫಿಟ್ನೆಸ್ ಕಾಪಾಡಿಕೊಳ್ಳಬೇಕು ಎಂದೂ ಅನಿಸುವುದಿಲ್ಲ. ಟೈಮ್ ಇಲ್ಲವೆಂದು ತನಗಿಷ್ಟವಾದ ಸಂಗೀತ ಕೇಳಲು ಸಹ ಸಮಯವನ್ನು ಹೊಂದಿಸಿಕೊಳ್ಳುವುದಿಲ್ಲ. ಸಾಯಂಕಾಲ ಪತ್ನಿ ಜತೆ ಮನರಂಜನೆ ಕಾರ್ಯಕ್ರಮಕ್ಕೆ ಹೋಗೋಣವೆಂದರೆ, ಪತ್ರಿಕೆಯ ಕೆಲಸ ಶುರುವಾಗುವುದೇ ಸಾಯಂಕಾಲದ ನಂತರ. ಇಡೀ ಜಗತ್ತು ಮನೆಯಲ್ಲಿ ಜಮಾ ಆದಾಗಲೇ, ಇವನಿಗೆ ವಿಪರೀತ ಕೆಲಸದ ಒತ್ತಡ.

ಸದಾ ಡೆಡ್‌ಲೈನ್ ಎಂಬ ತೂಗುಗತ್ತಿಯ ಕೆಳಗೇ ಕೆಲಸ ಮಾಡಬೇಕಾದ ಧಾವಂತ. ಇನ್ನು ವ್ಯಾಯಾಮ, ಸೈಕ್ಲಿಂಗ್, ಫೋಟೋಗ್ರಫಿ, ಹಾಡು – ಸಂಗೀತ, ಈಜು, ಅಡುಗೆ, ಸುತ್ತಾಟ.. ಹೀಗೆ ಯಾವ ಹವ್ಯಾಸವನ್ನು ಕೇಳಲೇಬೇಡಿ. ಉತ್ತಮ ಸಂಪಾದಕನಾದವನು ಹಾಡುಗಾರ, ಸಂಗೀತ ವಾದಕ, ದೇಹದಾಢ್ಯ ಪಟು, ಒಳ್ಳೆಯ ಫೋಟೋಗ್ರಾಫರ್ ಆಗಿರಲು ಸಾಧ್ಯವೇ ಇಲ್ಲ. ಸಂಪಾದಕ ಅಂದರೆ ಬರೀ ಸಂಪಾದಕ ಅಷ್ಟೇ. ಅದೇ ಅವನ ವೃತ್ತಿ ಮತ್ತು ಪ್ರವೃತ್ತಿ.

ಅದೇ ಅವನ ಜೀವನ. ಸಂಪಾದಕನಾಗಿ ಹೆಸರು ಮಾಡಿದಂತೆ, ತನ್ನ ಹವ್ಯಾಸದಿಂದಲೂ ಹೆಸರು ಮಾಡಿದ ಒಬ್ಬೇ ಒಬ್ಬ ಸಂಪಾ ದಕನ ಹೆಸರು ತಟ್ಟನೆ ನೆನಪಾಗುವುದಿಲ್ಲ. ಹಾಗಾದರೆ ಸಂಪಾದಕನಾಗುವುದೆಂದರೆ, ತನ್ನ ಅಭಿರುಚಿ, ಹವ್ಯಾಸಗಳನ್ನು ಬಲಿ ಕೊಡುವುದಾ? ತನಗಿಷ್ಟವಾದ ಒಂದು ಕಲೆ, ಅಭಿರುಚಿಯನ್ನು ಪೋಷಿಸದಷ್ಟು ಆ ಸಂಪಾದಕತನ ಸಮಯವನ್ನು ಬೇಡು ವುದಾ? ಸಂಪಾದಕರಾಗುವುದೆಂದರೆ, ಅದು ಪ್ರವೃತ್ತಿಹೀನತೆಯಾ? ಭಾರತದ ಖ್ಯಾತನಾಮ ಸಂಪಾದಕರೆಲ್ಲ ಸಂಪಾದಕರಷ್ಟೇ.
ಅವರಲ್ಲಿ ಹಲವರು ತಮ್ಮ ಪತ್ನಿಗೆ ಒಳ್ಳೆಯ ಪತಿಯಾಗಲಿಲ್ಲ, ಮಕ್ಕಳಿಗೆ ಒಳ್ಳೆಯ ತಂದೆಯಾಗಲಿಲ್ಲ.

ಇಂಥವರು ಸಂಪಾದಕರಾಗುವುದೇ ಏಳೇಳು ಜನ್ಮದ ಪುಣ್ಯ ಎಂದು ಭಾವಿಸಿ ತೀರಾ ನೀರಸ, ಬರಡು ಜೀವನ ನಡೆಸಿ ಎದ್ದು ಹೋಗಿzರೆ. ಇನ್ನು ಹಲವರಿಗೆ ಕುಡಿಯುವುದೇ ಹವ್ಯಾಸ, ಅದೇ ರುಚಿ ಮತ್ತು ಅಭಿರುಚಿ. ಪತ್ರಿಕೆಯ ಸುದ್ದಿಮನೆಯಾಚೆ ತನಗೊಂದು ಮನೆಯಿದೆ, ತನಗೂ ಸಾಂಸ್ಕೃತಿಕ, ಕಲಾವಂತಿಕೆಯ ಮನಸ್ಸಿದೆ ಎಂದು ಭಾವಿಸಿದವರು ವಿರಳಾತಿವಿರಳ. ಹಾರ್ಮೋನಿಯಂ ಕಲಿಯಲು ಹೋದ, ತಬಲಾ ಕ್ಲಾಸಿಗೆ ಹೋದ, ಜಿಮ್‌ಗೆ ಹೋದ, ಸೈಕಲ್ಲನ್ನೇರಿ ಪ್ರವಾಸಕ್ಕೆ ಸಿದ್ಧರಾದ, ಕಾಡು –
ಮೇಡಿನಲ್ಲಿ ಚಾರಣ ಹೊರಟ ಸಂಪಾದಕರು ಇಲ್ಲವೇ ಇಲ್ಲ.

ಸಂಪಾದಕರಾದವರು ಹೆಚ್ಚೆಂದರೆ ಬರೆಯಬಹುದು ಮತ್ತು ಪುಸ್ತಕ ಬರೆಯಬಹುದು. ಅಲ್ಲಿಗೆ ಖತಂ. ಕೆಲವು ಸಂಪಾದಕರ
ಜತೆ ಮಾತಾಡಲಾಗುವುದಿಲ್ಲ. ಕಾರಣ ಅವರಿಗೆ ತಮ್ಮ ಕೆಲಸ ಬಿಟ್ಟರೆ ಮತ್ತೇನೂ ಗೊತ್ತಿರುವುದಿಲ್ಲ ಅಥವಾ ಅದೇ ಸರ್ವಸ್ವ
ಎಂದು ಭಾವಿಸಿರುತ್ತಾರೆ. ನನಗೇನೋ ಆಸೆಯಿದೆ, ಆದರೆ ಟೈಮ್ ಸಿಗೊಲ್ಲ, ಬಹಳ ಬಿಜಿ, ಏನು ಮಾಡಲಿ ಎಂಬುದು
ಅವರ ಧೋರಣೆ.

ನಾನು ಇತ್ತೀಚೆಗೆ ಒಬ್ಬ ಅಪರೂಪದ, ಖ್ಯಾತನಾಮ ಸಂಪಾದಕ ಬರೆದ ಪುಸ್ತಕವನ್ನು ಓದಿದೆ. ಅವರ ಹೆಸರು ಅಲನ್
ರಸ್ಬ್ರಿಜರ್ ! ಕೇಂಬ್ರಿಜ್‌ನಲ್ಲಿ ಇಂಗ್ಲಿಷ್ ಸಾಹಿತ್ಯವನ್ನು ಓದಿದ ಬಳಿಕ ಸ್ಥಳೀಯ ಪತ್ರಿಕೆಯಲ್ಲಿ ವರದಿಗಾರರಾಗಿ ಕೆಲಸಕ್ಕೆ
ಸೇರಿದರು. ಸುಮಾರು ಇಪ್ಪತ್ತೈದು ವರ್ಷಗಳ ಕಾಲ ಬೇರೆ ಬೇರೆ ಪತ್ರಿಕೆಗಳಲ್ಲಿ ವರದಿಗಾರ, ಅಂಕಣಕಾರ, ವಿಮರ್ಶಕ,
ವಿದೇಶಿ ವರದಿಗಾರ, ಪುರವಣಿ ಸಂಪಾದಕ, ಫೀಚರ್ (ನುಡಿಚಿತ್ರ) ಸಂಪಾದಕರಾಗಿ, ಅನಂತರ 1995 ರಿಂದ ಇಪ್ಪತ್ತು ವರ್ಷಗಳ ಕಾಲ ಬ್ರಿಟನ್ನಿನ ಪ್ರತಿಷ್ಠಿತ ‘ದಿ ಗಾರ್ಡಿಯನ್’ ಪತ್ರಿಕೆಯ ಪ್ರಧಾನ ಸಂಪಾದಕರಾದರು.

ರಸ್ಬ್ರಿಜರ್ ಸಂಪಾದಕರಾದಾಗ ಪತ್ರಿಕೆ ಹಲವು ಉತ್ತುಂಗಗಳನ್ನು ಮುಟ್ಟಿತು. ಪತ್ರಿಕೆಗೆ ಪುಲಿಟ್ಜರ್ ಸೇರಿದಂತೆ ಹಲವು ಪ್ರಶಸ್ತಿಗಳು ಬಂದವು. ಜಗತ್ತಿನ ಮೂರು ಜನಪ್ರಿಯ ಆನ್ ಲೈನ್ ಪತ್ರಿಕೆಗಳಲ್ಲಿ ‘ಗಾರ್ಡಿಯನ್’ ಸಹ ಒಂದು ಎಂಬ ಅಗ್ಗಳಿಕೆಗೆ ಪಾತ್ರವಾಯಿತು. ಪತ್ರಿಕೆ ಒಂದಿಂದು ವೃತ್ತಿ ಸಂಬಂಧಿ ಕಾರಣದಿಂದ ಸದಾ ಸುದ್ದಿಯಲ್ಲಿತ್ತು. ಹಲವಾರು ವಿವಾದಗಳನ್ನು ರಸ್ಬ್ರಿಜರ್ ಮೈಮೇಲೆ ಎಳೆದುಕೊಂಡರು.

ಒಂದೇ ಒಂದು ದಿನ ನೀರಸ ಎಂದೆನಿಸದಂತೆ ಪತ್ರಿಕೆಯನ್ನು ಶ್ರದ್ಧೆಯಿಂದ, ಆಸಕ್ತಿದಾಯಕವಾಗಿ ರೂಪಿಸಿದರು. ಈ ಇಪ್ಪತ್ತು ವರ್ಷಗಳು ಬ್ರಿಟಿಷ್ ಬ್ರಾಡ್ ಶೀಟ್ ಪತ್ರಿಕೋದ್ಯಮದ ಮಹತ್ವದ, ನಿರ್ಣಾಯಕ ಅವಧಿ ಎಂದೂ ಪರಿಗಣಿಸುತ್ತಾರೆ. ಅದಕ್ಕೆ ರಸ್ಬ್ರಿಜರ್ ಯೋಗದಾನ ಸಿಂಹಪಾಲು. ಪತ್ರಿಕೆಯ ವರದಿ ಮಾತಾಡಿದಂತೆ, ಪತ್ರಿಕೆಯ ಬಗ್ಗೆಯೂ ಜನ ಮಾತಾಡುವಂತೆ ಮಾಡಿ ದರು. ತನಿಖಾ ಪತ್ರಿಕೋದ್ಯಮ ಗತಿಸಿ ಹೋಯಿತು ಎಂದು ಓದುಗರು ಮಾತಾಡಿಕೊಳ್ಳುತ್ತಿದ್ದ ದಿನಗಳಲ್ಲಿ ಸ್ಪೋಟಕ ವರದಿ ಗಳಿಂದ, ಇನ್ನೂರು ವರ್ಷಗಳ ಇತಿಹಾಸವಿರುವ ತಮ್ಮ ಪತ್ರಿಕೆಯ ವರ್ಚಸ್ಸನ್ನು ಹೆಚ್ಚಿಸಿದರು.

ರಹಸ್ಯ ವಿಕಿಲೀಕ್ಸ್ ಪ್ರಕರಣದ ವರದಿಗಾರಿಕೆ ಜಗತ್ತನ್ನು ಬೆಚ್ಚಿಬೀಳಿಸಿತು. ಹಲವು ದೇಶಗಳಲ್ಲಿ ಇದರ ಪ್ರತಿಧ್ವನಿ ಮೊಳಗಿತು. ಫೋನ್ ಹ್ಯಾಕಿಂಗ್ ಪ್ರಕರಣ ಬಯಲಿಗೆಳೆದಾಗ, ಹಲವರು ರಾಜೀನಾಮೆ ನೀಡಬೇಕಾಗಿ ಬಂದಿತು. ಇದರಿಂದ ಸುಮಾರು 168 ವರ್ಷಗಳ News Of The World  ಪತ್ರಿಕೆ ಮುಚ್ಚಬೇಕಾಗಿ ಬಂತು. ಬ್ರಿಟಿಷ್ ಪತ್ರಿಕೋದ್ಯಮದ ಸಂಸ್ಕೃತಿ, ಆಚರಣೆ ಮತ್ತು ನೀತಿ ಕುರಿತಂತೆ ನಿರ್ಧರಿಸಲು ಲೆವೆಸನ್ ವಿಚಾರಣೆಯನ್ನು ನೇಮಿಸಲಾಯಿತು. ಪ್ರಸ್ತುತ, ರಸ್ಬ್ರಿಜರ್ ರಾಯಿಟರ್ಸ್ ಪತ್ರಿಕೋದ್ಯಮ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ.

ಇಂತಿಪ್ಪ ರಸ್ಬ್ರಿಜರ್‌ಗೆ 2010ಲ್ಲಿ, ಬಹಳ ವರ್ಷಗಳಿಂದ ಮನಸ್ಸಿನಲ್ಲಿಯೇ ಉಳಿದ ಮಹತ್ವಾಕಾಂಕ್ಷೆಯೊಂದು ಇದ್ದಕ್ಕಿದ್ದಂತೆ ಚಿಗುರೊಡೆಯಿತು. ತಾನು ಪಿಯಾನೋ ವಾದಕ ನಾಗಬೇಕು ಎಂದು ಅವರಿಗೆ ಬಲವಾಗಿ ಅನಿಸಿತು! ಈಜುಗಾರನಾಗಬೇಕೆಂದರೆ ನೀರಿಗಿಳಿಯಲೇಬೇಕು, ಪರ್ವತಾರೋಹಿಯಾಗಬೇಕೆನಿಸಿದರೆ ಮೊದಲು ಬೆಟ್ಟವನ್ನು ಏರಬೇಕು, ಸೈಕಲ್ ಕಲಿಯಲು ಬಯಸು ವವನು, ಬಿದ್ದು ಗಾಯ ಮಾಡಿಕೊಳ್ಳಲು ಹಿಂಜರಿಯಬಾರದು. ಪಿಯಾನೋ ಕಲಿಯಬೇಕು ಎಂದು ಬಯಸುವವನು ಮೊದಲು
ಪಿಯಾನೋ ನುಡಿಸಬೇಕಿಲ್ಲ, ಅದರ ಮುಂದಿನ ಸ್ಟೂಲಿನ ಮೇಲೆ ಪ್ರತಿದಿನ ಕನಿಷ್ಠ ಮೂರು ತಾಸಿನಂತೆ ಆರು ತಿಂಗಳು ಸರಿ ಯಾಗಿ ಕುಳಿತುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು, ನಂತರ ಪಿಯಾನೋ ಮೇಲೆ ಬೆರಳಾಡಿಸುವುದು. ಪಿಯಾನೋ ಕಲಿಯಲು ಬಯಸುವ ಅವೆಷ್ಟೋ ಜನರಿಗೆ ಅದರ ಮುಂದೆ ಕುಳಿತುಕೊಳ್ಳಲು ಬರುವುದಿಲ್ಲ.

ಪಿಯಾನೋ ಕಲಿಯುವುದೆಂದರೆ ಸಹನೆಯನ್ನು ಕಲಿಯುವುದು. ಮಾಡಿದ ತಪ್ಪನ್ನೇ ಪದೇ ಪದೆ ಮಾಡುವುದು, ತಾನು ತಪ್ಪು ಮಾಡುತ್ತಿದ್ದೇನೆ ಎಂದು ಅರ್ಥ ಮಾಡಿಕೊಳ್ಳುವುದು. ಸರಿಯಾದ ಮಾರ್ಗ ವನ್ನು ಹುಡುಕಿಕೊಳ್ಳುವುದು. ರಸ್ಬ್ರಿಜರ್ ಪಿಯಾನೋ ಖಯಾಲಿಯನ್ನು ತಲೆಯಲ್ಲಿ ತುಂಬಿಕೊಂಡಾಗ, ಅವರ ಸ್ನೇಹಿತನೊಬ್ಬ ನಕ್ಕುಬಿಟ್ಟ. ‘ನಿನ್ನಲ್ಲಿ ಹತ್ತು ಸಾವಿರ ಗಂಟೆಗಳಷ್ಟು ಸಮಯವಿದ್ದರೆ, ಪಿಯಾನೋ ಕಲಿಯಬಹುದು. ಅಷ್ಟು ಸಮಯ ವಿನಿಯೋಗಿಸಿದ ನಂತರವೂ ನಿನಗೆ ಪಿಯಾನೋ ವಾದನ ಕೈಹಿಡಿಯುತ್ತದೆ ಎನ್ನುವ ಗ್ಯಾರಂಟಿ ಇಲ್ಲ’ ಎಂದು ಆತ ರಸ್ಬ್ರಿಜರ್‌ಗೆ ಹೇಳಿದ.

ಆದರೆ ಅವರು ತಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿಯಲಿಲ್ಲ. ‘ನಾನು ನಿರ್ಧಾರ ಮಾಡಿದ್ದೇನೆ. ಪಿಯಾನೋ ಕಲಿಯಲೇ
ಬೇಕು. ಅಷ್ಟೇ ಅಲ್ಲ, ಚಾಪಿನ್ ಬಡ್ ಜಿ ಮೈನರ್ ನಂ.1, ಒಪ್ 23 ರಾಗವನ್ನು ನುಡಿಸುವುದರಲ್ಲಿ ನಿಷ್ಣಾತನಾಗಬೇಕು. ಇದು ನನ್ನ ಸಂಪಾದಕತ್ವಕ್ಕೆ ಸವಾಲು ಎಂದು ತೀರ್ಮಾನಿಸಿದ್ದೇನೆ’ ಎಂದು ಹೇಳಿದಾಗ ಅವರ ಸ್ನೇಹಿತ ಕ್ಯಾಕರಿಸಿ ನೋಡಿದ್ದ. ಕಾರಣ ಚಾಪಿನ್ ಬಡ್ ಜಿ ಮೈನರ್ ನಂ.1, ಒಪ್ 23 ಅತ್ಯಂತ ಕ್ಲಿಷ್ಟವಾದದ್ದು. ಪಾಂಗಿತರಾದ  ಪಿಯಾನೋವಾದಕರಿಗೇ ಅದು ಒಲಿಯು ವಂಥದ್ದಲ್ಲ.

ಪೋಲ್ಯಾಂಡಿನ ಪ್ರಸಿದ್ಧ ಪಿಯಾನೋ ವಾದಕ ಫ್ರೆಡರಿಕ್ ಚಾಪಿನ್‌ನ ಆ ರಾಗವನ್ನು ನುಡಿಸುವುದೆಂದರೆ, ಬೆಟ್ಟವೇರುವ
ಸಾಮರ್ಥ್ಯವಿರುವವನು ಹಿಮಾಲಯ ಪರ್ವತ ಏರುವ ಕನಸು ಕಂಡಂತೆ. ಬಾಲ್ಯದಲ್ಲಿ ರಸ್ಬ್ರಿಜರ್ ಪಿಯಾನೋ ನುಡಿಸಲು ಹೋಗಿ ಇದು ತನಗೆ ಕೈಹಿಡಿಯದ ವಿದ್ಯೆ ಎಂದು ಬಿಟ್ಟು ಬಿಟ್ಟಿದ್ದರು. ಆಸೆ ಪಟ್ಟು ತಂದೆಯನ್ನು ಪೀಡಿಸಿ, ಪಿಯಾನೋ ಖರೀದಿಸಿ,
ಕೆಲ ದಿನಗಳ ನಂತರ, ಅಷ್ಟಕ್ಕೇ ಕೈಚೆಲ್ಲಿದ್ದರು. ಧೂಳು ತಿನ್ನುತ್ತಿದ್ದ ಪಿಯಾನೋವನ್ನು ನೋಡಿದಾಗ ಗರಿಗೆದರಿದ ಆಸೆಗಳೆಲ್ಲ
ಅಲ್ಲಿಯೇ ಕಮರಿ ಹೋಗುತ್ತಿದ್ದವು. ಅಷ್ಟಾದರೂ ತಾನು ಒಂದಲ್ಲ ಒಂದು ದಿನ, ಒಬ್ಬ ವಿಶಿಷ್ಟ ಪಿಯಾನೋ ವಾದಕನಾಗಬೇಕು ಎಂಬ ಆಸೆಯನ್ನು ಮಾತ್ರ ಜೀವಂತವಾಗಿಟ್ಟುಕೊಂಡಿದ್ದರು.

ಜಗತ್ತಿನ ಹತ್ತು ಪ್ರಮುಖ ಪತ್ರಿಕೆಗಳಂದಾದ ‘ಗಾರ್ಡಿಯನ್’ ಸಂಪಾದಕನಾದರೆ, ಕಂಪ್ಯೂಟರ್ ಕೀಬೋರ್ಡ್ ಮೇಲೆ ಕೈಯಾಡಿಸ ಬಹುದೇ ಹೊರತು, ಪಿಯಾನೋ ಮೈದಡವಲೂ ಆಗುವುದಿಲ್ಲ. ಹೀಗಿರುವಾಗ, ಇಂಥ ಕನಸನ್ನು ಕಟ್ಟಿಕೊಂಡು ಪಿಯಾನೋ
ಮುಂದೆ ಕುಳಿತಾಗ, ಯಾರೂ ಅವರನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಧೂಳು ತಿನ್ನುವ ಪಿಯಾನೋ ಕೆಲ ದಿನ ಸ್ವಚ್ಛ ವಾಗಿರಬಹುದು, ನಂತರ ಧೂಳು ಇದ್ದಿದ್ದೇ ಎಂದು ಮನೆ ಮಂದಿಯೂ ಅಂದುಕೊಂಡರು.

ರಸ್ಬ್ರಿಜರ್ ತಮ್ಮ ಕನಸಿನ ಮೊಟ್ಟೆಗೆ ಕಾವು ಕೊಡಲಾರಂಭಿಸಿದರು. ಪ್ರತಿದಿನ ಅರ್ಧ ಗಂಟೆ ಇದಕ್ಕಾಗಿಯೇ ಮೀಸಲಿಟ್ಟರು.
ಬಿಡುವಿನ ದಿನಗಳಲ್ಲಿ ಇದಕ್ಕಾಗಿ ಮೂರು – ನಾಲ್ಕು ಗಂಟೆ ಮೀಸಲು. ಗುರುವಿಲ್ಲದೇ ಗುರಿ ಸಾಧ್ಯವಿಲ್ಲ. ಪ್ಯಾರಿಸ್ ಗೆ ಹೋಗಿ ಗುರುವನ್ನು ಭೇಟಿ ಮಾಡಿ ಬಂದರು. ವಾರ ವಾರ ಅದಕ್ಕಾಗಿಯೇ ಲಂಡನ್ನಿನಿಂದ ಪ್ಯಾರಿಸ್ ಗೆ ಹೋಗಿ ಪಿಯಾನೋ ಅಭ್ಯಾಸ ಮಾಡಿ ಬರುತ್ತಿದ್ದರು. ಮನೆಯಲ್ಲಿರಲಿ, ವಿದೇಶ ಪ್ರಯಾಣದಲ್ಲಿರಲಿ, ಪಿಯಾನೋ ನುಡಿಸುವುದನ್ನು ತಪ್ಪಿಸುತ್ತಿರಲಿಲ್ಲ.

ಹಾಗೆಂದು ದೈನಂದಿನ ಪತ್ರಿಕೆಯ ಕೆಲಸ – ಕಾರ್ಯಗಳಲ್ಲಿ ಸ್ವಲ್ಪವೂ ರಾಜಿ ಮಾಡಿಕೊಳ್ಳುವಂತಿಲ್ಲ. ಈ ಅವಧಿಯಲ್ಲಿ ಜಗತ್ತಿ ನಾದ್ಯಂತ ಮಹತ್ವದ ಘಟನೆಗಳು ಜರುಗುತ್ತಿದ್ದವು. ಜಪಾನಿನಲ್ಲಿ ಸುನಾಮಿ, ಅರಬ್ ಕ್ರಾಂತಿ, ಒಸಾಮಾ ಬಿನ್ ಲಾಡೆನ್ ಹತ್ಯೆ, ಇಂಗ್ಲಿಷ್ ಕ್ಷೋಭೆ, ವಿಕಿಲೀಕ್ಸ್ ಪ್ರಕರಣ… ಈ ಘಟನೆಗಳು ಅವರ ಸಮಯವನ್ನು ಮೊದಲಿಗಿಂತ ಹೆಚ್ಚು ಅಪೇಕ್ಷಿಸುತ್ತಿದ್ದವು. ಈ ಹೊಣೆಗಾರಿಕೆಯಿಂದ ಸ್ವಲ್ಪವೂ ವಿಮುಖರಾಗುವಂತಿರಲಿಲ್ಲ. ಈ ಮಧ್ಯೆ, ಲಿಬಿಯಾದಲ್ಲಿ ಪತ್ರಿಕೆಯ ವರದಿಗಾರನ ಅಪಹರಣ ವಾಯಿತು.

ಅವನನ್ನು ಬಿಡಿಸಿಕೊಂಡು ಬರಲು ರಸ್ಬ್ರಿಜರ್ ಅಲ್ಲಿಗೆ ದೌಡಾಯಿಸಿದರು. ತಾವು ಉಳಿದುಕೊಂಡ ಹೋಟೆಲಿನಲ್ಲಿ ಒಂದು ಪಿಯಾನೋ ಇತ್ತು. ರಸ್ಬ್ರಿಜರ್ ಅಲ್ಲಿಯೂ ತಮ್ಮ ಪಿಯಾನೋ ವಾದನ ಅಭ್ಯಾಸವನ್ನು ಮುಂದುವರಿಸಿದರು. ಎಲ್ಲಿಗೆ ಹೋದರೂ, ಪಿಯಾನೋ ಇರುವ ಹೋಟೆಲನ್ನೇ ಹುಡುಕಿ ಅಲ್ಲಿಯೇ ಉಳಿದುಕೊಳ್ಳುತ್ತಿದ್ದರು. ತಮ್ಮ ಹೊಸ ಖಯಾಲಿ ಬೇರೆಯವರಿಗೆ ಗೊತ್ತಾಗದಂತೆ, ಸುದ್ದಿಮನೆಯಲ್ಲಿರುವ ಸಹೋದ್ಯೋಗಿಗಳಿಗೆ ತಿಳಿಯದಂತೆ ಎಚ್ಚರವಹಿಸಿದ್ದರು.

ಕಚೇರಿಯಲ್ಲಿ ಸಮಯ ಸಿಕ್ಕರೆ ಮೊಬೈಲ್ ಅಥವಾ ಕಂಪ್ಯೂಟರನ್ನು ಪಿಯಾನೋವಾಗಿ ಪರಿವರ್ತಿಸಿಕೊಂಡು ಅಭ್ಯಾಸ ಮಾಡು ತ್ತಿದ್ದರು. ತಮ್ಮಂತೆ ಪಿಯಾನೋ ಗೀಳಿರುವ ಹತ್ತು ಮಂದಿ ಸ್ನೇಹಿತರ ತಂಡವನ್ನು ಕಟ್ಟಿ ತಮ್ಮ ಬಿಡುವಿನ ವೇಳೆಯನ್ನು ಹೆಚ್ಚಾಗಿ ಅವರ ಜತೆ ಕಳೆಯಲಾರಂಭಿಸಿದರು. ಇದರಿಂದ ಅವರಲ್ಲಿ ಅಸಾಧಾರಣ ಪರಿವರ್ತನೆಯಾಯಿತು. ನಿಧಾನವಾಗಿ ಪಿಯಾನೋ ಮೈಮನಗಳಲ್ಲಿ ಇಳಿಯಲಾರಂಭಿಸಿತು. ಹದಿನಾರು ತಿಂಗಳುಗಳ ಸತತ ಅಭ್ಯಾಸ ಮತ್ತು ಪರಿಶ್ರಮದ ಫಲವಾಗಿ ಅಂದುಕೊಂಡಿ ದ್ದನ್ನು ಸಾಧಿಸಿದರು. ಚಾಪಿನ್ ಬಡ್ ಜಿ ಮೈನರ್ ನಂ.1, ಒಪ್ 23 ನುಡಿಸುವ ಮೂಲಕ ಅಸಾಧ್ಯವನ್ನು ಸಾಧ್ಯವಾಗಿಸಿದ್ದರು!

ಅಷ್ಟಾಗಿಯೂ ಈ ಅಸಾಧಾರಣ ಸಾಧನೆಗೆ ಅವರು ಹೇಳಿದ್ದು – ‘Now I have moved from very mediocre’ to mediocre’ pionist !’ ತಾವು ಪಿಯಾನೋ ನುಡಿಸುವುದನ್ನು ಕಲಿತ ಅನುಭವವನ್ನು ರಸ್ಬ್ರಿಜರ್  … “Play It Again : An Amateur Against The Impossible’ ಎಂಬ ಪುಸ್ತಕದಲ್ಲಿ ಬಹಳ ಸೊಗಸಾಗಿ ಬರೆದಿದ್ಧಾರೆ. ಇದು ಎಂಥವರಿಗಾದರೂ ಪ್ರೇರಣಾದಾಯಕ (motiva tional) ಕೃತಿ. ಕೈತುಂಬಾ ಕೆಲಸವಿರುವ ವಿಶ್ವದ ಪ್ರಮುಖ ಪತ್ರಿಕೆಯ ಸಂಪಾದಕನೊಬ್ಬ ಪಿಯಾನೋವಾದಕನಾಗಿದ್ದು ಸಣ್ಣ ಸಂಗತಿಯಲ್ಲ.