ಒಂದೊಳ್ಳೆ ಮಾತು
ರೂಪಾ ಗುರುರಾಜ್
ಒಮ್ಮೆ ಭಗವಂತ ವೈಕುಂಠದಲ್ಲಿರುವ ಎಲ್ಲ ಸಂಪತ್ತನ್ನು ಖಾಲಿ ಮಾಡಬೇಕೆಂದು ನಿರ್ಧರಿಸಿದನು. (ಮನುಷ್ಯನೂ ಹಾಗೆ ಮನಸ್ಸಿನ ವಿಷಯಗಳನ್ನು ಖಾಲಿ ಮಾಡುವುದರ ಜೊತೆಗೆ, ಗಳಿಸಿದ ಸಂಪತ್ತನ್ನು ಖಾಲಿ ಮಾಡಿದಾಗ ಕಲಿತ ಜ್ಞಾನ ಮಾತ್ರ ಉಳಿಯುವುದು) ಹಾಗೆ ದಾನ ಮಾಡಲು ಒಂದು ಯಾಗವನ್ನು ಕೈಗೊಂಡನು. ಈ ಯಜ್ಞದ ಮುಖ್ಯ ಉದ್ದೇಶ ತನ್ನಲ್ಲಿರುವ ಸಕಲ ಸಂಪತ್ತು- ವಸ್ತುಗಳನ್ನು ಖಾಲಿ ಮಾಡುವುದೇ ಆಗಿತ್ತು.
ಯಾಗದ ದಿನವನ್ನು ಗೊತ್ತು ಮಾಡಿ, ಚಕ್ರವರ್ತಿಗಳು, ಋಷಿಮುನಿಗಳು ಮತ್ತು ಬ್ರಾಹ್ಮಣರಿಗೆ ವೈಕುಂಠಕ್ಕೆ ಬರಲು ಆಹ್ವಾನ ಕಳಿಸಿದನು. ಯಾಗದ ದಿನ ಮಹರ್ಷಿಗಳಾದ ಭೃಗು- ವಿಶ್ವಾಮಿತ್ರ- ಭಾರದ್ವಾಜ- ವಸಿಷ್ಠರು – ಅಗಸ್ತ್ಯ ಕಶ್ಯಪ- ಜಮದಗ್ನಿ- ವಸಿಷ್ಠ- ಗೌತಮ ಮಹರ್ಷಿ, ಚಕ್ರವರ್ತಿಗಳು, ಬ್ರಾಹ್ಮಣರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಯಜ್ಞಕ್ಕೆ ಬಂದರು. ಯಜ್ಞ ಮುಗಿಯಿತು ಪೂರ್ಣಾವತಿ ಕೊಟ್ಟು. ಎಲ್ಲರಿಗೂ ಭಗವಂತನೇ ಮುಂದೆ ನಿಂತು ಅತಿಥಿ ಸತ್ಕಾರ ಮಾಡಿ, ಸತ್ಕರಿಸಿ ಅತಿಥಿಗಳಿಗೆ ಹೇಳಿದ, ಈ ವೈಕುಂಠದಲ್ಲಿರುವ ಸಂಪತ್ತನ್ನು ಯಾರಿಗೆ ಏನೇನು ಬೇಕೋ ತೆಗೆದುಕೊಂಡು ಹೋಗಿ, ಇಲ್ಲಿ ಅಪ್ಸರೆಯರು ಆನೆ, ಕುದುರೆ, ಗೋವು, ರಥ, ಚಿನ್ನ, ವಜ್ರ -ವೈಡೂರ್ಯ, ಸಿಂಹಾಸನ, ರತ್ನ- ಧನ- ಕನಕ ಪಿತಾಂಬರ ಮುತ್ತು ರತ್ನಗಳಿಂದ ಕಟ್ಟಿದ ವೈಕುಂಠದ ಕಂಬ ತೊಲೆ ಬಾಗಿಲು ಎಲ್ಲವನ್ನು ಅತಿಥಿಗಳು ತೆಗೆದುಕೊಂಡು ಹೋದರು.
ಕೊನೆಗೆ ದ್ವಾರಪಾಲಕರಾದ ಜಯ -ವಿಜಯರ ಕೈಲಿದ್ದ ಬೆಳ್ಳಿ ದಂಡವನ್ನು ತೆಗೆದುಕೊಂಡು ಹೋದರು. ವೈಕುಂಠ
ಖಾಲಿ. ಖಾಲಿಯಾದ ವೈಕುಂಠದಲ್ಲಿ ಭಗವಂತ ಒಬ್ಬನೇ ಕುಳಿತಿದ್ದಾನೆ. ಯಜ್ಞ ಕಾರ್ಯಕ್ಕೆ ಬಂದವರೆಲ್ಲ ಸ್ಮೃತಿ
ಪಟಲದಲ್ಲಿ ಬಂದರು. ಆದರೆ ಅತ್ರಿ ಮಹರ್ಷಿಗಳು ಬಂದಿಲ್ಲ ಎಂಬುದು ಗಮನಕ್ಕೆ ಬಂದು ಅವರನ್ನು ಕರೆ
ತರಲು ಜಯ ವಿಜಯರನ್ನು ಕಳಿಸಿದನು.
ದ್ವಾರಪಾಲಕರು ಅತ್ರಿ ಮಹರ್ಷಿಗಳನ್ನು ಕರೆಯಲು ಬಂದಾಗ, ಅತ್ರಿಗಳು ಜಪ -ತಪ ನಿತ್ಯಾನುಷ್ಟಾನಗಳಲ್ಲಿ
ತೊಡಗಿದ್ದು, ಇನ್ನೂ ಮುಗಿದಿರಲಿಲ್ಲ. ಅಹ್ನಿಕ ಮಾಡುವುದು ಬಾಕಿ ಇತ್ತು ಅವರು ಅನುಷ್ಠಾನಗಳನ್ನು ಮುಗಿಸಿ ಬರುತ್ತೇನೆ, ಎಂದು ಕೈ ಸನ್ನೆ ಮಾಡಿ ಹೇಳಿ, ನೀವು ಹೋಗಿ ಎಂದರು. ಮಹರ್ಷಿಗಳು ಎಲ್ಲ ಮುಗಿಸಿ ವೈಕುಂಠಕ್ಕೆ ಬಂದರು. ದ್ವಾರಪಾಲಕರು, ‘ಮಹರ್ಷಿಗಳೇ ಈಗ ಬಂದಿರಲ್ಲ ಇಲ್ಲಿ ಏನೂ ಉಳಿದಿಲ್ಲ ಎಲ್ಲ ಖಾಲಿ’ ಎಂದರು.
ಅತ್ರಿಗಳು ಹೇಳಿದರು ‘ನಾನು ಬಂದಿರುವ ವಿಷಯ ಭಗವಂತನಿಗೆ ಹೇಳು’ ಎನ್ನುತ್ತಿದ್ದಂತೆ. ಸ್ವತಃ ಭಗವಂತನೇ ಎದ್ದು ಬಂದು ಅತ್ರಿ ಮಹರ್ಷಿಗಳನ್ನು ಒಳಗೆ ಕರೆದೊಯ್ದು ಹೇಳಿದ, ‘ಮಹರ್ಷಿಗಳೇ ನಿಮ್ಮನ್ನು ಕೂರಿಸಲು ಒಂದು
ಆಸನವೂ ಇಲ್ಲ. ನಿಮಗೆ ಏನು ಕೊಡಲಿ? ಮಹರ್ಷಿಗಳೇ’ ಎಂದನು. ‘ಏಕೆ ಹಾಗೆ ಹೇಳುವೆ ನಾರಾಯಣ, ಎಲ್ಲ ಖಾಲಿಯಾದರೆ ಆಗಲಿ ನನಗೆ ನೀನಿರುವೆಯಲ್ಲ’ ಎಂದರು.
ಭಗವಂತನಿಗೆ ಅದೇ ಬೇಕಾಗಿತ್ತು ಅವರ ಮಾತನ್ನು ಒಪ್ಪಿ ಹೇಳಿದ, ನನ್ನ ‘ವಿನಃ ನಿಮಗೆ ಕೊಡಲು ಬೇರೆ ಏನೂ ಇಲ್ಲ. ನಾನು ನಿಮ್ಮ ನಿಷ್ಠೆ- ಅನುಷ್ಠಾನವನ್ನು ಮೆಚ್ಚಿದ್ದೇನೆ. ಆದ್ದರಿಂದ ನಾನೇ ಸ್ವತಃ ನನ್ನನ್ನೇ ನಿಮಗೆ ದಾನ ಕೊಡುವೆ’ ಎಂದನು. ಭಗವಂತ ತನ್ನನ್ನು ತಾನೇ ಅತ್ರಿ ಮಹರ್ಷಿಗಳಿಗೆ ದಾನ ಕೊಟ್ಟನು. ಹೀಗೆ ಅತ್ರಿಗಳಿಗೆ ತಾನೇ ದಾನವಾಗಿ ಕೊಟ್ಟುಕೊಂಡ ಕಾರಣ ‘ದತ್ತ’ ಎಂಬ ಹೆಸರು ಬಂದಿತು. ಮುಂದೆ ಅತ್ರಿ- ಅನುಸೂಯಾ ದಂಪತಿಗಳ ಮಗನಾಗಿ ಭಗವಂತನೇ ದತ್ತಾತ್ರೇಯನಾಗಿ ಅವತರಿಸಿದನು.
ಎಂಥ ಅದ್ಭುತವಾದ ಕಥೆ. ಭಗವಂತನಲ್ಲಿ ಈ ರೀತಿಯ ಭಕ್ತಿ ಸಮರ್ಪಣಾ ಭಾವ ಇದ್ದಾಗ ಭಗವಂತನೇ ನಮ್ಮೊಂದಿಗೆ ಸದಾ ಇರುತ್ತಾನೆ ಎನ್ನುವುದಕ್ಕೆ ಈ ಕಥೆ ಅತ್ಯುತ್ತಮ ಉದಾಹರಣೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರಪಂಚಿಕ ವಸ್ತುಗಳ ಮೋಹ ಇದ್ದಾಗ, ನಾವು ಅವುಗಳನ್ನು ಮಾತ್ರ ಜೀವನದಲ್ಲಿ ಪಡೆಯುತ್ತೇವೆ. ಅದಕ್ಕೆ ಮಿಗಿಲಾಗಿ ಭಗವಂತನಲ್ಲಿ
ನಮ್ಮ ಭಕ್ತಿಯನ್ನು ಸಮರ್ಪಿಸಿಕೊಂಡಾಗ ಮುಕ್ತಿಯ ಮಾರ್ಗ ನಮ್ಮದಾಗುತ್ತದೆ.
ಇದನ್ನೂ ಓದಿ: #RoopaGururaj