ಒಂದೊಳ್ಳೆ ಮಾತು
ರೂಪಾ ಗುರುರಾಜ್
ಸಂತ ಕವಿಯೊಬ್ಬರು ತತ್ವ ಪದಗಳನ್ನು ಹಾಡಿಕೊಂಡು ಪುಟ್ಟ ಗುಡಿಸಲೊಂದರಲ್ಲಿ ಭಿಕ್ಷಾಟನೆ ಮಾಡಿಕೊಂಡು ಜೀವನ ನೆಡೆಸುತ್ತಿದ್ದರು. ಅವರು ಹೇಳುತ್ತಿದ್ದ ತತ್ವ ಪದಗಳು ತುಂಬಾ ಅರ್ಥವತ್ತಾಗಿದ್ದು ಸತ್ಯದಿಂದ ಕೂಡಿರುತ್ತಿತ್ತು.
ಊರಿನ ಜನರೆಲ್ಲ ಅವರ ತತ್ವ ಪದಗಳನ್ನು ಕೇಳಲು ಯಾವಾಗಲೂ ಕಾತುರರಾಗಿರುತ್ತಿದ್ದರು.
ಈ ಸಂತರ ವಿಚಾರ ಆ ಊರಿನ ರಾಜನ ಕಿವಿಗೂ ಬಿದ್ದು ಅವರ ತತ್ವ ಪದಗಳನ್ನು ಕೇಳಲು ಕಾತುರನಾಗಿ ಸಂತರಿ ದ್ದಲ್ಲಿಗೆ ಬಂದನು. ಅವರು ಹೇಳುತ್ತಿದ್ದ ತತ್ವ ಪದಗಳು ರಾಜನ ಮನಸ್ಸಿಗೆ ಬಹಳವಾಗಿ ಹಿಡಿಸಿ ನಿಮ್ಮಂಥ ಜ್ಞಾನಿಗಳು ನನ್ನ ಆಸ್ಥಾನದಲ್ಲಿರುವುದೇ ನನಗೊಂದು ಹೆಮ್ಮೆಯವಿಷಯ. ನೀವು ಕೃಪೆಮಾಡಿ ನನ್ನ ಆಸ್ಥಾನಕ್ಕೆ ಬರಬೇಕೆಂದು ಒತ್ತಾಯ ಮಾಡಿದನು. ರಾಜನ ಒತ್ತಾಯಕ್ಕೆ ಕಟ್ಟುಬಿದ್ದು ಸಂತರು ಅವನೊಂದಿಗೆ ಅರಮನೆಗೆ ಹೋಗಲು ಒಪ್ಪಿ ಕೊಂಡರು. ರಾಜ ಸಂತರನ್ನು ಸಕಲರಾಜ ಮರ್ಯಾದೆಯಿಂದ ಅರಮನೆಗೆ ಸ್ವಾಗತಿಸಿದ.
ರಾಜನ ಆಸ್ಥಾನದಲ್ಲಿ ಸಂತರ ತತ್ವ ಪದಗಳನ್ನು ದಿನ ದಿನವು ಎಲ್ಲರೂ ಕೇಳಿ ಸಂತೋಷ ಪಟ್ಟರು. ಅಷ್ಟೇ ಅಲ್ಲದೇ ಹೊರ ರಾಜ್ಯದ ರಾಜನ ಅನೇಕ ಸ್ನೇಹಿತರು ಕೂಡಾ ಸಂತರ ತತ್ವ ಪದಗಳನ್ನು ಕೇಳಲೆಂದೇ ಇವನ ಆಸ್ಥಾನಕ್ಕೆ ಬರಲು ಶುರುಮಾಡಿದರು. ಈ ಕವಿ ಸಂತರಿಂದ, ರಾಜ ಬಹಳ ಪ್ರಸಿದ್ಧನಾದನು. ರಾಜನಿಗೆ ಈಗ ಸ್ವಲ್ಪ ಅಹಂಕಾರ ಶುರುವಾಯಿತು. ಯಾರಾದರೂ ಸಂತರ ತತ್ವ ಪದಗಳನ್ನು ಕೇಳಲು ಬಂದಾಗ, ರಾಜ ಆ ತತ್ವಪದ ಬೇಡ ಇದು ಹೇಳಿ, ಅದು ಹೇಳಿ ಎಂದು ಸಂತರಿಗೆ ಒತ್ತಾಯದಿಂದ ಆಜ್ಞೆ ಮಾಡಲು ಶುರುಮಾಡಿದ.
ಒಂದೆರಡು ಸಲ ಸಂತರಿಗೆ ಮುಜುಗರವಾದರೂ ರಾಜ ತಮಗೆ ಆಶ್ರಯ ಕೊಟ್ಟಿರುವುದನ್ನು ನೆನೆದು ಸುಮ್ಮನಾದರು. ಆದರೆ ರಾಜನ ಅಹಂಕಾರ ಮಿತಿಮೀರಿತು ಸಂತರ ಮೇಲೆ ದಬ್ಬಾಳಿಕೆ ದಿನದಿಂದ ದಿನಕ್ಕೆ ಜಾಸ್ತಿಯಾಗತೊಡಗಿತು. ಇದು ಕವಿ ಸಂತರಿಗೆ ಕಿರಿ ಕಿರಿಯಾಗಿ ತುಂಬಾ ಚಿಂತಿಸುವಂತೆ ಮಾಡಿತು. ಅವರು ತಮಗೆ ತಾವೇ ಹಳಿದುಕೊಂಡು ‘ಇದು ನನ್ನದೇ ತಪ್ಪು ನಾನೆಂಥಾ ಮೂರ್ಖ ರಾಜ ಕರೆದನೆಂದು ನಾನೂ ರಾಜಾಶ್ರಯವನ್ನು ಬಯಸಿ ಬಂದೆ. ಬಹುಶಃ ನನಗೂ ಎಲ್ಲಾ ಅರಮನೆಯ ರುಚಿ ನೋಡಬೇಕೆಂಬ ಆಸೆ ಬಂದಿರಬೇಕು, ಅದಕ್ಕೆ ಈಗ ನನಗೆ ತಕ್ಕ ಶಾಸ್ತಿಯೇ ಆಯಿತು.
ನನ್ನ ಪುಟ್ಟ ಗುಡಿಸಲಿನಲ್ಲಿ ಎಷ್ಟು ಆನಂದವಾಗಿ ಸ್ವಚ್ಚಂದವಾಗಿ ನನ್ನ ಪಾಡಿಗೆ ನಾನು ಇದ್ದೆ. ಇಲ್ಲಿ ಅಕ್ಕಿ
ಒಂದನ್ನು ಚಿನ್ನದ ಪಂಜರದಲ್ಲಿ ಇರಿಸಿದಂತೆ ನನ್ನ ಸ್ಥಿತಿಯಾಗಿದೆ. ಅದೆಷ್ಟೇ ಉಪಚಾರ ಮಾಡಿ ನನ್ನನ್ನು
ನೋಡಿಕೊಂಡರೂ ಈ ಬಂಧನ ಉಸಿರು ಕಟ್ಟುತ್ತಿದೆ. ಇನ್ನೊಂದು ಕ್ಷಣವೂ ಈ ರಾಜನ ಅಥವಾ ಇನ್ಯಾರ
ಹಂಗಿನಲ್ಲೂ ಇರಕೂಡದೆಂದು ತೀರ್ಮಾನಿಸಿ ಯಾರಿಗೂ ಹೇಳದಂತೆ, ಅರಮನೆಯನ್ನು ತ್ಯಜಿಸಿ ಅಲ್ಲಿಂದ ಬಹುದೂರ ಹೊರಟುಹೋದರು.
ಬದುಕಿನಲ್ಲಿ ವೈಭೋಗಗಳ ಆಸೆಗೆ ನಾವು ಅನೇಕ ಬಾರಿ ಕೆಲವರ ಹಂಗಿನಲ್ಲಿ ಬೀಳುತ್ತೇವೆ. ನೆನಪಿರಲಿ ಯಾರೂ ಕೂಡ ನಮಗೆ ಅನಗತ್ಯವಾಗಿ ಸಹಾಯ ಮಾಡುವುದಿಲ್ಲ. ಅವರಿಗೆ ನಮ್ಮಿಂದ ಏನೂ ಅನುಕೂಲವಾಗುತ್ತಿರುತ್ತದೆ.
ಆದ್ದರಿಂದಲೇ ಅವರು ನಮ್ಮನ್ನು ಅತಿಯಾಗಿ ಹೊಗಳಿ, ಉಡುಗೊರೆಗಳನ್ನು ನೀಡುತ್ತಾ ನಮಗೆ ವಿಶೇಷ ಮರ್ಯಾದೆ ನೀಡುತ್ತಾರೆ. ನಾವು ಅವರ ಈ ನಡವಳಿಕೆಯನ್ನು ಕಂಡು ಅವರು ನಮ್ಮ ಗುಣವನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಉಬ್ಬಿ ಹೋಗಿ ಅವರಿಗೆ ಅತಿ ಹತ್ತಿರದವರಾಗಿ ಬಿಡುತ್ತೇವೆ. ಆದರೆ ನಿಧಾನವಾಗಿ ಉಡುಗೊರೆಗಳನ್ನು ನೀಡುತ್ತಾ ನಮ್ಮನ್ನು ಅವರ ಹಿಡಿತದಲ್ಲಿ ಇರಿಸಿಕೊಳ್ಳುತ್ತಾರೆ. ಅವರಿಂದ ಅನಗತ್ಯವಾಗಿ ಬಹಳ ಸಹಾಯಗಳನ್ನು ಪಡೆದ ನಾವು ಒಂದು ರೀತಿ ಅವರ ಹಂಗಿನಲ್ಲಿ ಇರುತ್ತೇವೆ. ನಂತರ ಅವರು ಕೇಳಿದ ಚಿಕ್ಕ ಪುಟ್ಟ ವಿಷಯಕ್ಕೂ ಕೂಡ ಮನಸಿರಲಿ ಇಲ್ಲದಿರಲಿ ಒಪ್ಪಿಕೊಳ್ಳಬೇಕಾಗುತ್ತದೆ.
ದಯವಿಟ್ಟು ಅನಗತ್ಯವಾಗಿ ಸಹಾಯ, ಉಡುಗೊರೆಗಳನ್ನು ಪಡೆಯಬೇಡಿ. ಒಂದಲ್ಲ ಒಂದು ದಿನ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಸ್ವತಂತ್ರ ಮನೋಭಾವ, ಆತ್ಮವಿಶ್ವಾಸದ ಬದುಕು ಇದು ನಾವೇ ನಮ್ಮ ಬದುಕಿಗೆ ಕೊಟ್ಟುಕೊಳ್ಳುವ ದೊಡ್ಡ ಉಡುಗೊರೆ.
ಇದನ್ನೂ ಓದಿ: #RoopaGururaj