Thursday, 19th September 2024

ಭಾರತ – ಆಸ್ಟ್ರೇಲಿಯಾ ಎ ಅಭ್ಯಾಸ ಪಂದ್ಯ ಡ್ರಾ

ಸಿಡ್ನಿ: ಸಿಡ್ನಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ಮುಕ್ತಾಯಗೊಂಡ ಭಾರತ ಹಾಗೂ ಆಸ್ಟ್ರೇಲಿಯಾ ಎ ತಂಡ ನಡುವಿನ ಅಭ್ಯಾಸ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಮೊದಲ ಎರಡು ಇನಿಂಗ್ಸ್‌ನಲ್ಲಿ ಭರ್ಜರಿ ನಿರ್ವಹಣೆ ತೋರಿದ್ದ ಭಾರತೀಯ ಬೌಲರ್‌ಗಳು ಎರಡನೇ ಇನಿಂಗ್ಸ್‌ನಲ್ಲಿ ನಿಸ್ತೇಜ ನಿರ್ವಹಣೆಯಿಂದ ಗೆಲುವು ಕೈಚೆಲ್ಲಿದರು.

ಅಂತಿಮ ದಿನದಾಟ ಭಾರತ ನೀಡಿದ 473 ರನ್ ಗೆಲುವಿನ ಗುರಿ ಬೆನ್ನಟ್ಟಿದ ಆತಿಥೇಯ ತಂಡ, ಆರಂಭಿಕ ವೈಫಲ್ಯದ ನಡುವೆಯೂ ದಿಟ್ಟ ಹೋರಾಟ ತೋರಲು ಯಶಸ್ವಿಯಾಯಿತು. ಭಾರತದ ವೇಗಿ ಮೊಹಮದ್ ಶಮಿ (58ಕ್ಕೆ 2) ಮಾರಕ ದಾಳಿಯಿಂದಾಗಿ ಆರಂಭಿಕರಾದ ಮಾರ್ಕಸ್ ಹ್ಯಾರಿಸ್ (5) ಹಾಗೂ ಜೋ ಬರ್ನ್ಸ್ (1) ವಿಕೆಟ್ ಕಬಳಿಸಿದರು. ಇದರೊಂದಿಗೆ ಭಾರತಕ್ಕೆ ಉತ್ತಮ ಆರಂಭ ಒದಗಿಸಿದರು. ಬಳಿಕ ನಿಕ್ ಮ್ಯಾಡಿನ್‌ಸನ್ (14) ಕೂಡ ಸಿರಾಜ್ ಎಸೆತದಲ್ಲಿ ನವದೀಪ್ ಸೈನಿಗೆ ವಿಕೆಟ್ ನೀಡಿದರು. ಇದರೊಂದಿಗೆ 25 ರನ್‌ಗಳಿಗೆ 3 ವಿಕೆಟ್ ಕಬಳಿಸಿದ ಭಾರತ ತಂಡ ಗೆಲುವಿನ ಅವಕಾಶ ಹೆಚ್ಚಿಸಿಕೊಂಡಿತು.

ಬಳಿಕ ಜತೆಯಾದ ಬೆನ್ ಮೆಕ್‌ಡೆರ್‌ಮೊಟ್ (107*ರನ್, 167 ಎಸೆತ, 16 ಬೌಂಡರಿ) ಹಾಗೂ ಅಲೆಕ್ಸ್ ಕ್ಯಾರಿ (58ರನ್, 111 ಎಸೆತ, 7 ಬೌಂಡರಿ) ಜೋಡಿ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 4ನೇ ವಿಕೆಟ್‌ಗೆ 117 ರನ್ ಜತೆಯಾಟವಾಡಿತು. ಹನುಮ ವಿಹಾರಿ ಎಸೆತದಲ್ಲಿ ಅಲೆಕ್ಸ್ ಕ್ಯಾರಿ, ಬದಲಿ ಫೀಲ್ಡರ್ ಕಾರ್ತಿಕ್ ತ್ಯಾಗಿಗೆ ಕ್ಯಾಚ್ ನೀಡಿದರು. ಬಳಿಕ ಜತೆಯಾದ ಜಾಕ್ ವಿಲ್ಡೆರ್‌ಮತ್ (111*ರನ್, 119 ಎಸೆತ, 12 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಮೂಲಕ ಗಮನಸೆಳೆದರು.

ಬೆನ್ ಮೆಕ್‌ಡೆರ್‌ಮೊಟ್ – ಜಾಕ್ ವಿಲ್ಡೆರ್‌ಮತ್ ಜೋಡಿ ಮುರಿಯದ 5ನೇ ವಿಕೆಟ್‌ಗೆ 165 ರನ್ ಜತೆಯಾಟವಾಡಿ ತಂಡವನ್ನು ಸೋಲಿನಿಂದ ಪಾರು ಮಾಡಿದ್ದಲ್ಲದೇ, ಭಾರತೀಯ ಬೌಲರ್‌ಗಳಿಗೆ ತಿರುಗೇಟು ನೀಡಿತು.

ಮೊದಲ ಟೆಸ್ಟ್ ಆರಂಭ: ಡಿ.17ರಿಂದ, ಎಲ್ಲಿ : ಅಡಿಲೇಡ್, ಆರಂಭ: ಬೆಳಗ್ಗೆ 9.30ಕ್ಕೆ,

Leave a Reply

Your email address will not be published. Required fields are marked *