Friday, 20th September 2024

ಮುಷ್ಕರ; ಬೇಡ ತಾತ್ಸಾರ

ಭಾರತದಂಥ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಹಲವು ಬಗೆಯ ಸ್ವಾತಂತ್ರ್ಯಗಳುಂಟು. ಹೋರಾಟವೂ ಇದರ ಒಂದು ಭಾಗ. ತಮ್ಮ ಬೇಡಿಕೆಗಳ ಈಡೇರಿಕೆಗೆ ಸರಕಾರಿ ಹಾಗೂ ಖಾಸಗಿ ನೌಕರರು, ಸಂಘಟನೆಗಳು ಆಗಾಗ ಹೋರಾಟಕ್ಕಿಳಿಯುವುದು ಸಹಜ. ಇದು ಧರಣಿ, ಚಳವಳಿ, ಉಪವಾಸ ಮೊದಲಾದ ರೂಪದಲ್ಲಿರಬಹುದು.

ಇದು ಮಾತ್ರವಲ್ಲದೆ ಪರಿಸರ ರಕ್ಷಣೆಗಾಗಿ, ಯಾವುದೋ ಯೋಜನೆಯನ್ನು ವಿರೋಧಿಸಿ -ಹೀಗೆ ಬೇರೆ ಇತರ ಕಾರಣಗಳನ್ನು ಮುಂದಿಟ್ಟುಕೊಂಡು ಕೂಡ ನಾನಾ ರೀತಿಯ ಹೋರಾಟಗಳು ನಡೆಯುತ್ತವೆ. ಆದರೆ ಇಂಥ ಹೋರಾಟಗಳನ್ನು ಸರಕಾರಗಳು ನಿಭಾಯಿಸುವ ರೀತಿ ಪ್ರಶ್ನಾರ್ಹ. ರಾಜ್ಯದ ಸಾರಿಗೆ ಸಂಸ್ಥೆಯ ನೌಕರರ ಮುಷ್ಕರ ಇದಕ್ಕೆ ತಾಜಾ ಉದಾಹರಣೆ. ತಮ್ಮನ್ನು ಸರಕಾರಿ
ನೌಕರರೆಂದು ಪರಿಗಣಿಸಬೇಕೆಂಬುದು ಈ ನೌಕರರರ ಪ್ರಮುಖ ಬೇಡಿಕೆ.

ಹಾಗೆಂದು ಇದು ಹೊಸ ಬೇಡಿಕೆ ಏನಲ್ಲ. ಲಾಗಾಯ್ತಿನಿಂದಲೂ ಇದನ್ನು ಅವರು ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಆದರೆ ಈಗ ಹೋರಾಟ ನಿರ್ಣಾಯಕ ಘಟ್ಟ ತಲುಪಿದಂತೆ ಕಾಣುತ್ತದೆ. ಈಗಾಗಲೇ ಹೇಳಿರುವಂತೆ ಹೋರಾಟ ಎಲ್ಲರ ಹಕ್ಕು. ಆದರೆ ಸರಕಾರ ಇಂಥ ಹೋರಾಟಗಳಿಗೆ ಸ್ಪಂದಿಸುವ ಪರಿಯು ಸಮಸ್ಯೆ ಇನ್ನಷ್ಟು ಬಿಗಡಾಯಿಸಲು ಅನೇಕ ಸಲ ಕಾರಣವಾಗುತ್ತದೆ. ಎಲ್ಲಕ್ಕೂ ಒಂದೇ ಧೊರಣೆ ಅನುಸರಿಸಿದರೆ ಏನಾಗುತ್ತದೆ ಎಂಬುದಕ್ಕೆ ಸಾರಿಗೆ ನೌಕರರರ ಹೋರಾಟ ಒಂದು ಜ್ವಲಂತ ನಿದರ್ಶನ.

ಮೂರು ದಿನಗಳಿಂದಲೂ ಹೋರಾಟ ನಡೆಯುತ್ತಿತ್ತು. ಸಾರಿಗೆ ಮುಷ್ಕರದಂಥ ಪ್ರಸಂಗಗಳಲ್ಲಿ ಕೂಡಲೇ ಏನಾದರೂ ಕ್ರಮ ಕೈಗೊಳ್ಳಬೇಕಾಗುತ್ತದೆ. ಸರಕಾರ ಇದನ್ನು ಪ್ರಾರಂಭದಿಂದಲೇ ಅಷ್ಟು ಗಂಭಿರವಾಗಿ ಪರಿಗಣಿಸದ ಕಾರಣ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಸಾರಿಗೆ ಸೌಲಭ್ಯ ಸ್ಥಗಿತವಾದ ಕಾರಣ ಜನರು ಪರದಾಡುವಂತಾಯಿತು. ಎಲ್ಲ ಬೇಡಿಕೆಗಳನ್ನು ಒಪ್ಪಬೇಕೊ
ಬೇಡವೋ ಎಂಬುದು ಬೇರೆ ಮಾತು. ಆದರೆ ಪ್ರತಿಭಟನೆಕಾರರರ ಜತೆ ಮಾತುಕತೆ, ಸಂಧಾನ ನಡೆಸುವುದರಲ್ಲಿ ತಪ್ಪೇನಿಲ್ಲ. ಪ್ರತಿಷ್ಠೆಗೆ ಬಿದ್ದರೆ ಏನಾಗುತ್ತದೆ ಎಂಬುದಕ್ಕೆ ಈ ಪ್ರಕರಣ ನಿದರ್ಶನ.

ಇದೊಂದೇ ಅಲ್ಲ, ಅಂಗನವಾಡಿ ಕಾರ‍್ಯಕರ್ತೆಯರು ಆಗಾಗ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಾರೆ. ಆಗೆಲ್ಲ ತಾತ್ಕಾಲಿಕವಾಗಿ ಒಂದಷ್ಟು ಭರವಸೆ ನೀಡಿ ಮುಷ್ಕರವನ್ನು ನಿಲ್ಲಿಸಲಾಗುತ್ತದೆ. ನೀಡಿದ ಭರವಸೆಗಳನ್ನು ಸರಿಯಾಗಿ ಈಡೇರಿಸದೆ ನಿರ್ಲಕ್ಷಿಸಿದ ಕಾರಣಕ್ಕೆ ಸ್ವಲ್ಪ ಸಮಯದ ಬಳಿಕ ಅವರು ಮತ್ತೆ ಮುಷ್ಕರಕ್ಕೆ ಇಳಿಯುತ್ತಾರೆ.