Tuesday, 26th November 2024

ಮೌಲ್ಯಗಳು ಬೆಳೆಯಲಿ ಮಕ್ಕಳಲ್ಲಿ

ರಶ್ಮಿ ಹೆಗಡೆ, ಮುಂಬೈ

ಅತಿಯಾದ ಸೌಕರ್ಯಗಳನ್ನು ಕೊಡಿಸಿ, ದುಬಾರಿ ವೆಚ್ಚದ ಶಾಲೆಗಳಲ್ಲಿ ಓದಿಸಿದರೂ, ಕೆಲವರು ಯಶಸ್ಸು ಸಾಧಿಸಲು ತಿಣುಕಾಡುತ್ತಾರೆ. ಏಕೆ? ಕಷ್ಟದ ಅನುಭವ ಇದ್ದರೆ ಮಾತ್ರ ಯಶಸ್ಸಿನ ಶಿಖರ ಏರಲು ಸಾಧ್ಯವೆ? ಅತಿ ಅನುಕೂಲಗಳೇ ಒಮ್ಮೊಮ್ಮೆ ಪತನಕ್ಕೆ ಕಾರಣ ಎನಿಸುತ್ತದೆಯೆ?

ಜನರು ನೀಡುವ ಬಿಡಿಗಾಸಿಗಾಗಿ, ಒಂದು ಹೊತ್ತಿನ ತಂಗಳನ್ನಕ್ಕಾಗಿ ಅಲ್ಲಲ್ಲಿ ಭಿಕ್ಷೆ ಎತ್ತುವ ಮಕ್ಕಳೊಂದೆಡೆಯಾದರೆ, ತಮ್ಮ ಹಾಗೂ ಕುಟುಂಬ ದವರ ಹಸಿವು ನೀಗಿಸಲು ಬಾಲಕಾರ್ಮಿಕರಾಗಿ ಹಗಲಿಡೀ ಮೈ ಬಗ್ಗಿಸಿ ದುಡಿಯುವ ಮಕ್ಕಳು ಇನ್ನೊಂದೆಡೆ.

ತಿಂದ ಅನ್ನ ಕರಗದೆ ಆಲಸ್ಯದಿಂದ ಕುಳಿತು, ಹಿರಿಯರು ಮಾಡಿಟ್ಟ ಆಸ್ತಿಯನ್ನು ಯಾವ ರೀತಿಯಲ್ಲಿ ಖರ್ಚು ಮಾಡಬೇಕೆಂಬ ಅನುಪಯುಕ್ತ ಯೋಚನೆಯಲ್ಲಿಯೇ ಕಾಲಕಳೆಯುತ್ತ ಭವಿಷ್ಯವನ್ನು ಹಾಳುಗೆಡವಿಕೊಳ್ಳುವವರು ಒಂದೆಡೆಯಾದರೆ ಒಂದೊಳ್ಳೆಯ ಭವಿಷ್ಯ ಕಟ್ಟಿಕೊಳ್ಳಲೂ ಪರದಾಡುತ್ತಿರುವವರು ಇನ್ನೊಂದೆಡೆ.

ಬಾಯಲ್ಲಿ ಊಟ ತುರುಕಿಯೂ ಉಣ್ಣದೆ ಉಗುಳುವವರು, ಕಲಿಯಲೆಂದು ಶಾಲೆಗೆ ಕಳುಹಿಸಿದರೆ ಕಲಿಯದೆ ಹಾಳಾಗಿ ಬರುವವರು, ಅಕ್ಷರ ಕಲಿಯಲು ಚಡಪಡಿಸುವವರಷ್ಟು, ಲಕ್ಷಗಟ್ಟಲೆ ದುಡ್ಡು ಸುರಿದು ಕಲಿಸಿಯೂ ಕಲಿಯದಿರುವವರಷ್ಟು ಹೀಗೆ ನಾನಾ
ಥರದ ಮಕ್ಕಳು ಸಮಾಜದಲ್ಲಿ ಸಿಗುತ್ತಾರೆ.

ಮಕ್ಕಳು ಆಗಲಿ ಆಸ್ತಿ
ಅದೇನೇ ಇರಲಿ, ಇವರೆಲ್ಲ ಸಮಾಜದ ಕುಡಿಗಳು. ಕುಂಬಾರನ ಕೈಗೆ ಸಿಕ್ಕಿ ಸುಂದರ ಮಡಿಕೆಯಾಗಲು ಹವಣಿಸುತ್ತಿರುವ ಎಳೆ ಮಣ್ಣಿ
ನಂತೆ. ಮಣ್ಣು ನಮ್ಮ ಕೈಯಲ್ಲಿದೆ, ಸುಂದರ ಆಕೃತಿಯನ್ನು ರೂಪಿಸುವುದು ನಮ್ಮೆಲ್ಲರ ಕರ್ತವ್ಯ. ಮಕ್ಕಳು ದೇಶದ ಆಸ್ತಿ ಎಂಬ ನಾಣ್ಣುಡಿ ಎಷ್ಟು ಸತ್ಯವೋ, ‘ಮಕ್ಕಳಿಗಾಗಿ ಆಸ್ತಿಯನ್ನು ಮಾಡಬೇಡಿ, ಅವರನ್ನೇ ಆಸ್ತಿಯನ್ನಾಗಿ ಮಾಡಿ’ ಎನ್ನುವ ನುಡಿಯೂ ಅಷ್ಟೇ ಸತ್ಯ.

ಒಮ್ಮೆ ನೊಂದ ತಂದೆಯೊಬ್ಬ ಗುರೂಜಿಯ ಎದುರು ತನ್ನ ನೋವನ್ನು ತೋಡಿಕೊಂಡು ಅವರಿಂದ ಸಾಂತ್ವನದ ಮಾತು ಗಳನ್ನೂ, ಸಲಹೆಯನ್ನೂ ಬಯಸಿದ. ‘ಗುರೂಜಿ, ನನಗೆ ಇರುವವನು ಒಬ್ಬನೇ ಮಗ. ಅತಿಯಾದ ಪ್ರೀತಿ, ಮುದ್ದಿನಿಂದ ಯಾವ ಕೊರತೆಯೂ ಹತ್ತಿರ ಸುಳಿಯದಂತೆ ಬೆಳೆಸಿದೆ. ತುಟಿ ಬಿಚ್ಚುವುದರೊಳಗೆ ಅವನಿಗೆ ಬೇಕಾದ್ದನ್ನು ತಂದುಕೊಟ್ಟೆ. ಒಳ್ಳೆಯ ಶಿಕ್ಷಣ ಪಡೆದು, ಉನ್ನತ ಹುದ್ದೆ ಗಿಟ್ಟಿಸಿ ಗೌರವದ ಜೀವನ ನಡೆಸುತ್ತಾನೆ ಅಂದುಕೊಂಡಿದ್ದೆ. ಅಲ್ಪ ಸ್ವಲ್ಪ ಬರುತ್ತಿದ್ದ ಲಂಚದ ಹಣದಲ್ಲಿ ಅವನಿಗೋಸ್ಕರ ಕೋಟಿಗಟ್ಟಲೆ ಆಸ್ತಿ ಮಾಡಿಟ್ಟೆ.

ಲಕ್ಷಗಟ್ಟಲೆ ದುಡ್ಡು ಸುರಿದು ನಮ್ಮ ಡಿಗ್ನಿಟಿಗೆ ಧಕ್ಕೆ ಬರದಂತೆ ಒಳ್ಳೆಯ ಶಾಲೆ, ಕಾಲೇಜಿನಲ್ಲಿ ಓದಿಸಿದೆ. ಆದರೆ ಆಗಿದ್ದೇನು? ಹೇಗಿದ್ದರೂ ತನ್ನ ಅಪ್ಪ ತನ್ನ ಮುಂದಿನ ತಲೆಮಾರಿನವರೂ ಕುಳಿತು, ತಿಂದು ತೇಗಿದರೂ ಕರಗದಷ್ಟು ಆಸ್ತಿ ಅಂತಸ್ತನ್ನು ಮಾಡಿಟ್ಟಿದ್ದಾರೆ ಎಂದ ಮೇಲೆ ತಾನು ಕಷ್ಟ ಪಟ್ಟು ಓದಬೇಕಾದ ಅವಶ್ಯಕತೆ ಇಲ್ಲ ಅಂದುಕೊಂಡು, ಕೆಟ್ಟ ಹುಡುಗರ ಸಹವಾ ಸಕ್ಕೆ ಬಿದ್ದು, ಬೇಡದ ಚಟ ಕಲಿತು ತನ್ನ ಭವಿಷ್ಯವನ್ನೇ ಹಾಳುಮಾಡಿಕೊಂಡಿದ್ದಾನೆ.

ಯಾವ ಕೆಲಸ ಬೊಗಸೆಯೂ ಇಲ್ಲ. ದಿನವಿಡೀ ಮೋಜು, ಮಸ್ತಿ, ಮೊಬೈಲ್, ಪಾರ್ಟಿ ಎನ್ನುವುದರಲ್ಲೇ ಸಮಯ ವ್ಯರ್ಥ ಮಾಡು ತ್ತಾನೆ. ಮದುವೆ ಮಾಡಿದ್ರಾದ್ರೂ ಸರಿಹೋಗಬಹುದೆಂದು ಒಳ್ಳೆಯ ಹುಡುಗಿಯ ಜೊತೆ ವಿವಾಹ ಮಾಡಿಸಿದೆ. ಮಾಡುವುದಕ್ಕೆ ಉದ್ಯೋಗವಿಲ್ಲ, ಜೀವನ ಸಾಗಿಸಲು ಒಳ್ಳೆಯ ಗುಣವಿಲ್ಲ.

ಆಕೆಯ ಜೀವನವೂ ಹಾಳಾಯಿತು. ಸಂಸಾರ ಹೂಡಿ ಒಬ್ಬ ಮಗ ಹುಟ್ಟಿದ ಮೇಲೂ ನನ್ನ ಮಗನಿಗೆ ಬುದ್ಧಿ ಬಂದಿಲ್ಲ. ಮುಪ್ಪಿ ನಲ್ಲಿ ನನ್ನ ಹಾಗೂ ನನ್ನ ಪತ್ನಿಯ ಅನಾರೋಗ್ಯಕ್ಕೆಂದು ಕೂಡಿಟ್ಟ ಸ್ವಂತ ಹಣವೂ, ದುಡಿಮೆ ಇಲ್ಲದ ನನ್ನ ಮಗನ ಸಂಸಾರ ಹಾಗೂ ಆತನ ಅನವಶ್ಯಕ ಖರ್ಚುಗಳಿಗೆ ಬಲಿಯಾಗುತ್ತಿದೆ.

ಬೇಜವಾಬ್ದಾರಿತನದ ನನ್ನ ಮಗ ತಂದೆ ತಾಯಿಗೆ ಒಳ್ಳೆಯ ಮಗನೂ ಆಗಲಿಲ್ಲ, ಹೆಂಡತಿಗೆ ಒಳ್ಳೆಯ ಗಂಡನೂ ಆಗಲಿಲ್ಲ, ಅಷ್ಟೇ ಅಲ್ಲ ತಾ ಹೆತ್ತ ಮಗನಿಗೆ ಒಳ್ಳೆಯ ಅಪ್ಪನೂ ಆಗಿಲ್ಲ. ಇಳಿ ವಯಸ್ಸಿನ, ಎಪ್ಪತ್ತು ದಾಟಿರುವ ನಾನೇ ಇವನ ಸಂಸಾರದ ಹೊಟ್ಟೆ
ಹೊರೆಯಬೇಕು. ಅವನಿಗೆ ಆಸ್ತಿ ಮಾಡಿಡುವ ಬದಲು, ಶಿಕ್ಷಣಕ್ಕೆ ಒತ್ತು ಕೊಟ್ಟು , ಕಷ್ಟದ ಅರಿವು ಮೂಡಿಸಿ, ಸಮಾಜದ ಆಗು ಹೋಗುಗಳನ್ನು ಪರಿಚಯಿಸಿ, ಒಳ್ಳೆಯ ಸಂಸ್ಕಾರವಂತ ನಾಗರಿಕನನ್ನಾಗಿ ಮಾಡಬೇಕಿದ್ದ ನಾನು ತಪ್ಪು ಮಾಡಿದೆ’ ಎಂದು ಗೋಗರೆದರು.

ಜೀವನದ ಕಟುಸತ್ಯ ಗುರೂಜಿಯ ಎದುರು ಜೀವಂತ ಉದಾಹರಣೆಯಾಗಿ ನಿಂತಿತ್ತು. ಹೊಟ್ಟೆ ತುಂಬಿದವನು ಆಹಾರಕ್ಕೆ
ಪರದಾಡಲಾರ, ಅಂತೆಯೇ ಆಸ್ತಿ, ದುಡ್ಡು ಹೆಚ್ಚಾದವನು ವಿದ್ಯೆಗೆ ಹವಣಿಸಲಾರ. ಕೆಲವಷ್ಟು ಇದಕ್ಕೆ ಹೊರತಾಗಿರುವವರೂ
ಇದ್ದಾರೆ, ಇಲ್ಲವೆಂದಲ್ಲ.

ಕಷ್ಟ ಪಟ್ಟು ಕಲಿಯಲಿ
ಮಕ್ಕಳು ತಾವೇ ಕಷ್ಟ ಪಟ್ಟು ಓದಿ, ಜೀವನದ ಮೌಲ್ಯಗಳನರಿತು, ಸಂಸ್ಕಾರವಂತರಾಗಲಿ. ಕಷ್ಟದ ಅರಿವು ಅವರಿಗೂ ಇರಲಿ, ಆಗಷ್ಟೇ ಒಬ್ಬ ವ್ಯಕ್ತಿ ಪರಿಪಕ್ವವಾಗಲು ಸಾಧ್ಯ. ಮಕ್ಕಳ ಮೇಲಿನ ಅತಿಯಾದ ಪ್ರೀತಿ, ವ್ಯಾಮೋಹ ಎಂದಿಗೂ ಒಳ್ಳೆಯದಲ್ಲ. ಅತಿಯಾದರೆ ಅಮೃತವೂ ವಿಷವೇ. ಬಾಲ್ಯದಲ್ಲಿ ಐಷಾರಾಮಿ ಜೀವನ ನಡೆಸಿದ ಅದೆಷ್ಟೋ ಮಕ್ಕಳು ಮುಂದೆ ದೊಡ್ಡವರಾಗಿ ದಾರಿ ತಪ್ಪಿದ ಎಷ್ಟು ಉದಾಹರಣೆಗಳಿವೆಯೋ, ಅಷ್ಟೇ ಉದಾಹರಣೆಗಳು ದಾರಿ ದೀಪದ ಕೆಳಗೆ ಓದಿ, ಒಂದು ಹೊತ್ತಿನ ಊಟಕ್ಕೂ ಪರದಾಡಿ ,ಕಷ್ಟಪಟ್ಟು ಓದಿ ದೊಡ್ಡ ಸಾಧಕರಾಗಿ ಮೆರೆದವರೂ ನಮ್ಮ ನಿಮ್ಮೆಲ್ಲರ ನಡುವೆ ಇದ್ದಾರೆ.

ಆಸ್ತಿ, ಅಂತಸ್ತು, ಹಣ ಮಾಡಿಡುವ ಬದಲು, ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ತುಂಬಿ, ಅವರ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು, ಒಳ್ಳೆಯವರಾಗಿ ಮುಂದೆ ಬರಲು ಹುರಿ ದುಂಬಿಸೋಣ. ಮನೆಯಲ್ಲಿ ಉತ್ತಮ ವಾತಾವರಣ ಸೃಷ್ಟಿಸಿ, ಉತ್ತಮ ಪಾಲಕರಾಗೋಣ. ಮಕ್ಕಳು ಕಷ್ಟ ಪಟ್ಟು ಕಲಿತು, ಜೀವನದರ್ಥವನರಿತು ಸಮಾಜಕ್ಕೊಳಿತು ಮಾಡಿದರೆ ಅದೇ ದೊಡ್ಡ ಆಸ್ತಿಯಲ್ಲವೇ? ವಿವೇಕಾನಂದರು ನುಡಿದಂತೆ ಶಿಕ್ಷಣವೆಂಬುದು ಮಾನವೀಯತೆಯ ವಿಕಾಸ ಎಂಬುದಕ್ಕೆ ಕುರುಹಾಗೋಣ.
ಮಾನವೀಯ ಮೌಲ್ಯಗಳನ್ನು ಬೆಳೆಸಿ ಉಳಿಸೋಣ.