Wednesday, 8th January 2025

Vishwavani Editorial: ನಾಡೋಜನ ನುಡಿ ನಮ್ಮ ಆದ್ಯತೆಗಳಾಗಲಿ

ಸಕ್ಕರೆ ನಗರಿ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕಾಫಿನಾಡು ಚಿಕ್ಕಮಗಳೂರಿನ 94ರ ಹಿರಿಯಜ್ಜ , ನಾಡೋಜ ಗೊಂಡೆದಹಳ್ಳಿ ರುದ್ರಪ್ಪ ಚನ್ನಬಸಪ್ಪ ಅವರು ಪ್ರಧಾನ ವೇದಿಕೆ ಯಿಂದ ಆಡಿದ ಮಾತುಗಳು ಕನ್ನಡಿಗರು ಮತ್ತು ಕರ್ನಾಟಕವನ್ನು ಆಳುವ ಸರಕಾರದ ಮುಂದಿರುವ ಆದ್ಯತೆಗಳನ್ನು ತೆರೆದಿಟ್ಟಿವೆ. ಪ್ರತಿಯೊಂದು ಸಾಹಿತ್ಯ ಸಮ್ಮೇಳನದಲ್ಲೂ ಕನ್ನಡ ನಾಡು, ನುಡಿಯ ಕುರಿತಂತೆ ಹಲವು ನಿರ್ಣಯ ಗಳನ್ನು ಮಂಡಿಸಲಾಗುತ್ತದೆ. ಈ ಬಾರಿ ಅಧ್ಯಕ್ಷರು ತಮ್ಮ 48 ಪುಟಗಳ ಅಧ್ಯಕ್ಷರ ಭಾಷಣದಲ್ಲಿಯೇ 21 ಹಕ್ಕೊತ್ತಾಯಗಳನ್ನು ಮಂಡಿಸಿದ್ದಾರೆ.

ಇವು ಕನ್ನಡಿಗರೆಲ್ಲರ ಆಗ್ರಹ ಮತ್ತು ಎಚ್ಚರಿಕೆಯೂ ಹೌದು. ಈ ಸಾಹಿತ್ಯ ಸಮ್ಮೇಳನವೂ ಹತ್ತರಲ್ಲಿ ಹನ್ನೊಂದು ಆಗದೇ ಇರಬೇಕಾದರೆ, ಸಮ್ಮೇಳನಾಧ್ಯಕ್ಷರ ಕಾಳಜಿ, ಕಳಕಳಿಯನ್ನು ಸರಕಾರ ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ಸ್ಪಂದಿಸಬೇಕಿದೆ. ರಾಜ್ಯದಲ್ಲಿ ಒಂದನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೆ ಬೋಧನೆಯಲ್ಲಿ ಕನ್ನಡ ಮಾಧ್ಯಮವೇ ಕಡ್ಡಾಯವಾಗಬೇಕು. ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಸರಕಾರ ತೆರೆಯುವುದನ್ನಾಗಲಿ, ಖಾಸಗಿ ಶಾಲೆಗಳಿಗೆ ಅನುಮತಿ ಕೊಡುವುದನ್ನಾಗಲೀ ಕೂಡಲೇ ನಿಲ್ಲಿಸಬೇಕು ಎಂದು ಗೊರುಚ ಆಗ್ರಹಿಸಿದ್ದಾರೆ.

ಪ್ರತಿ ಗ್ರಾಮ ಪಂಚಾಯಿತಿಗೊಂದರಂತೆ ಆಂಗ್ಲ ಮಾಧ್ಯಮ ಕರ್ನಾಟಕ ಪಬ್ಲಿಕ್ ಸ್ಕೂಲ್ ತೆರೆಯಲು ಹೊರಟಿರುವ ಸರಕಾರ ಮತ್ತು ಕನ್ನಡ ಓದಲು ಪರದಾಡುವ ಶಿಕ್ಷಣ ಸಚಿವರು ಈ ಮಾತಿನ ಮಹತ್ವವನ್ನು ಅರಿತುಕೊಳ್ಳಬೇಕಾಗಿದೆ. ಇರುವ ಕನ್ನಡ ಶಾಲೆಗಳಲ್ಲಿಯೇ ಆಂಗ್ಲಭಾಷೆಯನ್ನು ಚೆನ್ನಾಗಿ ಕಲಿಯಲು ಪ್ರತ್ಯೇಕ ವ್ಯವಸ್ಥೆ ಮಾಡಿ, ಬೋಧನೆಗೆ ತರಬೇತಿ ಪಡೆದ ಶಿಕ್ಷಕರನ್ನು ನೇಮಿಸಿ, ಗ್ರಾಮೀಣ ಭಾಗದ ಕನ್ನಡ ಶಾಲೆಗಳನ್ನು ಎಲ್ಲ ಸೌಲಭ್ಯಗಳಿಂದ ಪೂರ್ಣ ವಾಗಿ ಸಜ್ಜುಗೊಳಿಸಬೇಕೆಂಬ ಗೊರುಚ ಅವರ ಹಕ್ಕೊತ್ತಾಯ ಕನ್ನಡ ನಾಡು ನುಡಿಯ ಬಗ್ಗೆ ಕಳಕಳಿ ಉಳ್ಳ ಪ್ರತಿ ಯೊಬ್ಬರ ಅಭಿಲಾಷೆಯೂ ಹೌದು.

ಕನ್ನಡ ಭಾಷೆ ಸಾಹಿತ್ಯಿಕವಾಗಿ ಮಾತ್ರವಲ್ಲ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲೂ ಅಗತ್ಯ ಭಾಷೆಯಾಗಿ ಮುನ್ನಡೆ ಯಬೇಕಾದ ಅಗತ್ಯವನ್ನು ಅಧ್ಯಕ್ಷರು ಪ್ರತಿಪಾದಿಸಿದ್ದಾರೆ. ‘ಗೂಗಲ್ ಗುರು’ವಿಗೆ ಕನ್ನಡ ಕಲಿಸಬೇಕಾದ ಅಗತ್ಯವನ್ನೂ ಪ್ರತಿಪಾದಿಸಿದ್ದಾರೆ. ಶಿಕ್ಷಣ ಮಾಧ್ಯಮ, ಅಂತಾರಾಜ್ಯ ಗಡಿ, ಜಲ ಮತ್ತು ವಲಸೆ ಸಮಸ್ಯೆಗಳನ್ನು ಪರಿಹರಿಸಲು ರಾಷ್ಟ್ರೀಯ ನೀತಿಯನ್ನು ರೂಪಿಸಲು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು ಮತ್ತು ತೆರಿಗೆ ಹಣ ಮತ್ತು ಅನು
ದಾನ ವಿಚಾರದಲ್ಲಿ ರಾಜ್ಯಕ್ಕಾಗುವ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕೆಂಬ ಗೊರುಚ ಅವರ ಹಕ್ಕೊತ್ತಾಯವೂ ನಮ್ಮ ಪಾಲಿನ ಆದ್ಯತೆಗಳಾಗಬೇಕಿವೆ.

ಇದನ್ನೂ ಓದಿ: Vishwavani Editorial: ಚದುರಂಗ ಬಲದ ಚತುರ