Monday, 23rd December 2024

Pushapa 2: ತೆಲುಗು ನಟ ಅಲ್ಲು ಅರ್ಜುನ್‌ ಮನೆ ಮೇಲೆ ಟೊಮಾಟೊ, ಕಲ್ಲು ತೂರಾಟ!

Pushapa 2: Tomatoes Thrown, Protest Outside Allu Arjun's Home Over Stampede Death

ಹೈದರಾಬಾದ್‌: ಇಲ್ಲಿನ ಸಂಧ್ಯಾ ಥಿಯೇಟರ್ ಬಳಿ ಕಾಲ್ತುಳಿತದಿಂದ ಸಾವನ್ನಪ್ಪಿದ ರೇವತಿ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನಾಕಾರರು, ಪುಷ್ಪಾ-2 (Pushapa 2) ಸಿನಿಮಾ ಹೀರೋ ಹಾಗೂ ತೆಲುಗು ಸ್ಟಾರ್‌ ನಟ ಅಲ್ಲು ಅರ್ಜುನ್‌ ಅವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಮನೆಯ ಮುಂದೆ ಧರಣಿ ಕುಳಿತಿದ್ದ ವಿದ್ಯಾರ್ಥಿಗಳು ಸೇರಿದಂತೆ ಪ್ರತಿಭಟನಾಕಾರರು, ಮೊದಲಿಗೆ ಮನೆಯ ಗೇಟ್‌ ಅನ್ನು ತೆಗೆಯುವಂತೆ ಸೆಕ್ಯೂರಿಟಿ ಗಾರ್ಡ್‌ಗೆ ಧಮ್ಕಿ ಹಾಕಿದ್ದರು. ಇದಕ್ಕೆ ಅವರು ಒಪ್ಪದ ಕಾರಣ ಪ್ರತಿಭಟನಾಕಾರರು ಟೊಮಾಟೊ, ಕಲ್ಲುಗಳನ್ನು ಮನೆಯ ಮೇಲೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನಾಕಾರರನ್ನು ತಡೆಯಲು ಮುಂದಾದ ನಟನ ಮನೆಯ ಸಿಬ್ಬಂದಿಯ ಮೇಲೂ ಹಲ್ಲೆ ನಡೆಸಲಾಗಿದೆ. ಇದರಲ್ಲಿ ಕೆಲವರು ಗೋಡೆ ಹಾರಿ ಒಳ ನುಗ್ಗಿ ಉದ್ಯಾನ ಪ್ರದೇಶದಲ್ಲಿದ್ದ ಹೂವಿನ ಕುಂಡಗಳನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೆ, ತಮ್ಮ ದಾರಿಗೆ ಅಡ್ಡ ಬಂದಿದ್ದ ಭದ್ರತಾ ಸಿಬ್ಬಂದಿಯನ್ನು ಥಳಿಸಿದ್ದದ್ದಾರೆಂದು ವರದಿಯಾಗಿದೆ. ಈ ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಬಂದಿದ್ದ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ಲು ಅರ್ಜುನ್‌ ಅವರ ಮನೆಯ ಮೇಲೆ ದಾಳಿಗೆ ಸಂಬಂಧಿಸಿದ ವಿಡಿಯೊಗಳು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ರೇವತಿ ಕುಟುಂಬಕ್ಕೆ ನ್ಯಾಯ ಕೊಡಿಸುವುದಾಗಿ ಅಲ್ಲು ಅರ್ಜುನ್ ಈಗಾಗಲೇ ಹಲವು ಬಾರಿ ಘೋಷಿಸಿದ್ದಾರೆ. ಅಲ್ಲದೆ, ಕುಟುಂಬಕ್ಕೆ 25 ಲಕ್ಷ ರೂ ನೀಡುತ್ತೇನೆ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೇವತಿ ಅವರ ಪುತ್ರ ಶ್ರೀತೇಜ್‌ಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಸುದ್ದಿಗೋಷ್ಠಿಯಲ್ಲಿ ಅವರು ಭರವಸೆ ನೀಡಿದ್ದರು.

ಅಲ್ಲು ಅರ್ಜುನ್‌ ಫ್ಯಾನ್ಸ್‌ ಕಿಡಿ

ಪುಷ್ಪಾ- 2 ಹೀರೋ ಇಷ್ಟೆಲ್ಲಾ ಭರವಸೆ ನೀಡಿದ ಹೊರತಾಗುಯೂ ಅವರ ಮನೆ ಮೇಲೆ ನಡೆದಿರುವ ಅನಿರೀಕ್ಷಿತ ದಾಳಿಯಿಂದ ಅಭಿಮಾನಿಗಳನ್ನು ಬೆಚ್ಚಿ ಬಿದ್ದಿದ್ದಾರೆ. ಆದರೆ ವಿದ್ಯಾರ್ಥಿ ಸಂಘಟನೆ ಹೆಸರಲ್ಲಿ ಯೋಜನೆ ರೂಪಿಸಿ ಈ ದಾಳಿಯನ್ನು ನಡೆಸಲಾಗಿದೆ ಎಂದು ಅಲ್ಲು ಅರ್ಜುನ್‌ ಅಭಿಮಾನಿಗಳು ಆರೋಪಿಸುತ್ತಿದ್ದಾರೆ. ಏಕೆಂದರೆ ಈ ದಾಳಿಯ ವೀಡಿಯೋಗಳು ಕೇವಲ ಒಂದು ಚಾನೆಲ್‌ನಲ್ಲಿ ಪ್ರಸಾರವಾಗಿವೆ. ಇದು ಕೂಡ ಸಿಎಂ ರೇವಂತ್ ರೆಡ್ಡಿಗೆ ಸಂಬಂಧಿಸಿದ ಟಿವಿ ಚಾನೆಲ್ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ. ಅಲ್ಲು ಅರ್ಜುನ್ ಅವರನ್ನು ಟಾರ್ಗೆಟ್ ಮಾಡಿ ಈ ರೀತಿ ಹಲ್ಲೆ ಮಾಡಲಾಗುತ್ತಿದೆ ಎಂದು ಫ್ಯಾನ್ಸ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಸಿಎಂ ರೇವಂತ್‌ ರೆಡ್ಡಿ ಆರೋಪ ಸುಳ್ಳು ಎಂದಿದ್ದ ಅಲ್ಲು ಅರ್ಜುನ್‌

ಸಿಎಂ ರೇವಂತ್ ರೆಡ್ಡಿ ಅವರು ತಮ್ಮ ವಿರುದ್ಧ ಮಾಡಿರುವ ಆರೋಪಗಳೆಲ್ಲವೂ ಸಂಪೂರ್ಣವಾಗಿ ಸುಳ್ಳು ಎಂದು ಅಲ್ಲು ಅರ್ಜುನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ತಮ್ಮ ವ್ಯಕ್ತಿತ್ವಕ್ಕೆ ಚ್ಯುತಿ ತರಲು ಇಂತಹ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದರು. ಸಂಧ್ಯಾ ಥಿಯೇಟರ್ ಕಾಲ್ತುಳಿತ ಘಟನೆ ಸಂಪೂರ್ಣ ದುರಾದೃಷ್ಟವೇ ಹೊರತು ಉದ್ದೇಶಪೂರ್ವಕವಾಗಿ ನಡೆದ ಘಟನೆಯಲ್ಲ ಎಂದಿದ್ದರು.

ಈ ಸುದ್ದಿಯನ್ನು ಓದಿ: Allu Arjun: ಜೈಲಿನಿಂದ ಹೊರಬಂದ ನಟ ಅಲ್ಲು ಅರ್ಜುನ್‌