Monday, 23rd December 2024

Sunny Leone: ಸನ್ನಿ ಲಿಯೋನ್‌ಗೂ ಸರ್ಕಾರದಿಂದ ಸಿಗ್ತಿದ್ಯಾ ತಿಂಗಳಿಗೆ 1000 ರೂ. !? ಈತನ ಖತರ್ನಾಕ್‌ ಐಡಿಯಾಗೆ ಅಧಿಕಾರಿಗಳೇ ಶಾಕ್‌

ರಾಯ್‌ಪುರ: ಸ್ಟಾರ್‌ಗಳ(actors) ಹೆಸರಿನಲ್ಲಿ ನಕಲಿ ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಖಾತೆ ತೆರೆಯುವ ಕಿಡಿಗೇಡಿಗಳ ಸಂಖ್ಯೆ ಕಮ್ಮಿ ಏನಿಲ್ಲ. ಕನ್ನಡದ ತಾರೆಯರೂ ಸೇರಿದಂತೆ ಬಾಲಿವುಡ್ ಸೆಲೆಬ್ರೆಟಿಗಳ ಹಲವರ ಹೆಸರಿನಲ್ಲಿ ಫೇಕ್ ಅಕೌಂಟ್ ಗಳು ಸೋಷಿಯಲ್ ಮೀಡಿಯಾದಲ್ಲಿ ಬೇಕಾದಷ್ಟಿವೆ. ಆದರೆ ಇಲ್ಲೊಬ್ಬ ಕಿಡಿಗೇಡಿ ಸರ್ಕಾರದ ಕಣ್ಣಿಗೆ ಮಣ್ಣೆರೆಚಿ, ಬಿಟೌನ್ ಖ್ಯಾತ ನಟಿ(Sunny Leone)ಯ ಹೆಸರಿನಲ್ಲಿ ಗರ್ಭಿಣಿ ಮಹಿಳೆಯರಿಗೆ ಸರ್ಕಾರ ನೀಡುವ ಯೋಜನೆಯ ಸೌಲಭ್ಯವನ್ನು ಪಡೆದುಕೊಂಡಿದ್ದಾನೆ.

ಹೌದು ವಿಶ್ವವೇ ಮೆಚ್ಚುವಂಥ ಮಾದಕ ನಟಿ, ಬಾಲಿವುಡ್‌ (Bollywood) ಸುಂದರಿ ಹಾಗೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅಪ್ಸರೆ ಸನ್ನಿ ಲಿಯೋನ್ (Sunny Leone) ಹೆಸರಿನಲ್ಲಿ ವ್ಯಕ್ತಿಯೊಬ್ಬ ಖಾತೆಯೊಂದನ್ನು ತೆರೆದು ಆ ಯೋಜನೆ ಅಡಿ ಮಾಸಿಕ 1 ಸಾವಿರ ರೂ ಪಡೆದುಕೊಳ್ಳುತ್ತಿದ್ದ ಎನ್ನುವುದು ಬೆಳಕಿಗೆ ಬಂದಿದೆ.

ಛತ್ತೀಸ್‌ಗಢದಲ್ಲಿ ಬಿಜೆಪಿ ಸರ್ಕಾರವು ಮಹ್ತಾರಿ ವಂದನ್ ಯೋಜನೆ ಅಡಿಯಲ್ಲಿ ವಿವಾಹಿತ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಪ್ರತಿ ತಿಂಗಳೂ 1 ಸಾವಿರ ರೂ ಹಣ ಜಮೆ ಮಾಡುತ್ತಿದೆ. ಇದಕ್ಕೆ ಅರ್ಜಿ ಸಲ್ಲಿಸಿದವರು ಹಲವಾರು ಇಲ್ಲಿಯವರೆಗೂ ತಮ್ಮ ಖಾತೆಗೆ ಹಣ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದು, ವಿವಾಹಿತ ಮಹಿಳೆಯರಿಗೆ ಛತ್ತೀಸ್‌ ಗಢ್‌ ಸರ್ಕಾರದ ಯೋಜನೆಯ ಹೆಸರಿನಲ್ಲಿ ನೂರಾರು ಮಹಿಳೆಯರನ್ನು ವಂಚಿಸಿರುವ ಆಘಾತಕಾರಿ ಘಟನೆಯೊಂದು ವರದಿಯಾಗಿದೆ.

ಆದರೆ ಸನ್ನಿ ಲಿಯೋನ್ ಹೆಸರಿನಲ್ಲಿ ತೆರೆದ ಖಾತೆಗೆ ಯೋಜನೆಯ ಹಣ ಕ್ರೆಡಿಟ್ ಆಗಿದ್ದು, ಆ ಖಾತೆಯನ್ನು ವೀರೇಂದ್ರ ಜೋಶಿ ಎಂಬ ಕಿಡಿಗೇಡಿ ನಿರ್ವಹಣೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಸದ್ಯ ವೀರೇಂದ್ರ ಜೋಶಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳುವ ಸಲುವಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಯೋಜನೆಗೆ ಅರ್ಹ ಫಲಾನುಭವಿಗಳ ಮಾಹಿತಿಗಳನ್ನು ಪರಿಶೀಲಿಸಿ ಅನುಮೋದನೆ ನೀಡುವ ಹೊಣೆ ಹೊತ್ತಿರುವ ಸಿಬ್ಬಂದಿಗಳ ಮೇಲೆಯೂ ಕ್ರಮ ಜರುಗಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಛತ್ತೀಸ್‌ಗಡದ ಬಸ್ತಾರ್ ಪ್ರದೇಶದ ತಾಲೂರ್ ಎಂಬ ಗ್ರಾಮದಲ್ಲಿ ಈ ವಂಚನೆ ಘಟನೆ ಬೆಳಕಿಗೆ ಬಂದಿದ್ದು,ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಮತ್ತು ಜಮೆ ಮಾಡಲಾದ ಹಣ ಮುಟ್ಟುಗೋಲು ಹಾಕಿಕೊಳ್ಳಲು ಬ್ಯಾಂಕ್ ಖಾತೆಯನ್ನು ಜಪ್ತಿ ಮಾಡುವಂತೆ ಜಿಲ್ಲಾ ಕಲೆಕ್ಟರ್ ಹ್ಯಾರಿಸ್ ಎಸ್ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೂಚನೆ ನೀಡಿದ್ದಾರೆ. ಮಾಧ್ಯಮ ವರದಿಗಳ ಮೂಲಕ ಈ ವಂಚನೆ ಪ್ರಕರಣ ತಿಳಿದು ಬಂದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಇನ್ನು ಈ ಹಿಂದೆ ಯಾರೋ ಪುಂಡನೋರ್ವ ಇದೇ ಸನ್ನಿ ಲಿಯೋನ್ ಕ್ರೆಡಿಕ್ ಕಾರ್ಡ್‌ ಬಳಸಿಕೊಂಡು, ಸಾಲ ಪಡೆದುಕೊಂಡಿರುವುದಲ್ಲದೇ, ಆಕೆಯ ಖಾತೆಯಲ್ಲಿದ್ದ ಸಿಬಿಲ್ ಸ್ಕೋರ್‌ನ ಉಪಯೋಗ ಮಾಡಿಕೊಂಡಿರುವುದಾಗಿ ವರದಿಯಾಗಿತ್ತು. ಈ ಕುರಿತು ಸನ್ನಿ ಟ್ವೀಟ್ ಮಾಡಿ ತಮ್ಮ ಬೇಸರವನ್ನು ವ್ಯಕ್ತಪಡಿಸಿದರು.

ಸೆಲೆಬ್ರಿಟಿಗಳ ಜೊತೆ ಮಾತನಾಡಬೇಕು ಅಂದ್ರೆ ಎಷ್ಟೆಲ್ಲಾ ಕಷ್ಟ ಪಡಬೇಕು? ಅವರ ಮೊಬೈಲ್‌ ನಂಬರ್ (Mobile Number) ಸಿಗುವುದೇ ಕಷ್ಟ. ಅಂತಹುದ್ರಲ್ಲಿ ಈ ವ್ಯಕ್ತಿ ಆಕೆಯ ಪ್ಯಾನ್‌ ಕಾರ್ಡ್‌ ಕಂಡು ಹಿಡಿದು, ಅದನ್ನು ಬಳಸಿಕೊಂಡಿದ್ದ. ಕೋಟಿಯಲ್ಲಿ ಹಣ ಮಾಡಿರಬಹುದು ಅಂದು ಕೊಂಡರೆ ಬರೀ ಎರಡು ಸಾವಿರ ತೆಗೆದುಕೊಂಡಿದ. ಅದಕ್ಕೆ ಇವನು ನಿಜವಾಗ್ಲೂ ದಡ್ಡನೇ ಇರಬೇಕು, ಎಂದು ನೆಟ್ಟಿಗರು (Netizens) ಕಾಮೆಂಟ್ ಮಾಡಿದರು.

ಈ ಸುದ್ದಿಯನ್ನೂ ಓದಿ: Deepika Padukone: ಮೊದಲ ಜಾಹೀರಾತಿನಲ್ಲಿ ದೀಪಿಕಾ ಪಡುಕೋಣೆ ಮಿಂಚಿದ್ದು ಹೀಗೆ! ಹಳೆಯ ವಿಡಿಯೊ ಈಗ ವೈರಲ್‌