Wednesday, 25th December 2024

Pushpa 2: ತೆಲುಗು ಸ್ಟಾರ್‌ ನಟ ಅಲ್ಲು ಅರ್ಜುನ್‌ ಬೌನ್ಸರ್‌ ಆಂಥೋನಿ ಬಂಧನ!

Pushpa 2: Allu Arjun’s Bouncer Anthony Arrested Over Sandhya Theatre Stampede During Pushpa 2 Premiere

ಹೈದರಾಬಾದ್‌: ಇಲ್ಲಿನ ಸಂಧ್ಯಾ ಥಿಯೇಟರ್‌ ಬಳಿ ಕಾಲ್ತುಳಿತದಿಂದ ಮಹಿಳಾ ಸಾವಿಗೀಡಾದ ಪ್ರಕರಣ ಸಂಬಂಧ ತೆಲುಗು ಸ್ಟಾರ್‌ ನಟ ಅಲ್ಲು ಅರ್ಜುನ್‌ (Allu Arjun) ಅವರ ಬೌನ್ಸರ್‌ ಆಂಥೋನಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆ ಮೂಲಕ ಪುಷ್ಪಾ-2 (Pushpa 2) ಸಿನಿಮಾ ಹೀರೋ ಅಲ್ಲು ಅರ್ಜುನ್‌ಗೆ ಭಾರಿ ಹಿನ್ನಡೆಯಾಗಿದೆ. ಪುಷ್ಪಾ-2 ಸಿನಿಮಾದ ಪ್ರೀಮಿಯರ್‌ ಶೋ ವೇಳೆ, ಆಂಥೋನಿ ಅವರು ಬೌನ್ಸರ್‌ಗಳನ್ನು ನಿಯೋಜಿಸಿದ್ದರು ಹಾಗೂ ಬೌನ್ಸರ್‌ಗಳು ಅಭಿಮಾನಿಗಳನ್ನು ತಳ್ಳಿದ್ದರು. ಈ ಅವ್ಯವಸ್ಥೆಗೆ ಕಾರಣರಾದ ಕಾರಣ ಆಂಥೋನಿಯನ್ನು ಬಂಧಿಸಲಾಗಿದೆ.

ಡಿಸೆಂಬರ್‌ 4 ರಂದು ಪುಷ್ಪಾ-2 ಸಿನಿಮಾ ಪ್ರದರ್ಶನದ ವೇಳೆ ನಟ ಅಲ್ಲು ಅರ್ಜುನ್‌ ಅವರು ಸಂಧ್ಯಾ ಥಿಯೇಟರ್‌ಗೆ ಬಂದಿದ್ದರು. ಈ ವೇಳೆ ಥಿಯೇಟರ್‌ನಲ್ಲಿ ನೂಕು ನುಗ್ಗಲು ಉಂಟಾಗಿ ಮಹಿಳಾ ಕೆಳಗೆ ಬಿದ್ದು ಕಾಲ್ತುಳಕ್ಕೆ ಒಳಗಾಗಿ ಸಾವಿಗೀಡಾಗಿದ್ದರು ಹಾಗೂ ಇವರ ಮಗ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣ ಸಂಬಂಧ ನಟ ಅಲ್ಲು ಅರ್ಜುನ್‌ ವಿರುದ್ಧ ಏಫ್‌ಐಆರ್‌ ದಾಖಲಾಗಿತ್ತು.

ಇದೀಗ ಹೈದರಾಬಾದ್‌ ಪೊಲೀಸರು ಪ್ರಕರಣ ಸಂಬಂಧ ತನಿಖೆಯನ್ನು ನಡೆಸಿತ್ತಿದ್ದಾರೆ ಹಾಗೂ ನಟ ಅಲ್ಲು ಅರ್ಜುನ್‌ ಮತ್ತು ಇದಕ್ಕೆ ಸಬಂಧಿಸಿದ ವ್ಯಕ್ತಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಸಂಧ್ಯಾ ಥಿಯೇಟರ್‌ ಬಳಿಕ ಅಭಿಮಾನಿಗಳ ಜೊತೆ ಸಂವಾದ ನಡೆಸಲು ಅಲ್ಲು ಅರ್ಜುನ್‌ ಅವರು ಪೊಲೀಸರ ಬಳಿ ಅನುಮತಿ ತೆಗೆದುಕೊಂಡಿದ್ದಾರೆಯೇ ಎಂಬುದನ್ನು ಕೂಡ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ ಅಲ್ಲು ಅರ್ಜುನ್‌ ಭೇಟಿಯ ಸಂದರ್ಭದಲ್ಲಿ ಥಿಯೇಟರ್‌ ಮ್ಯಾನೇಜ್‌ಮೆಂಟ್‌ ಹಾಗೂ ಇಲ್ಲಿನ ಭದ್ರತಾ ಸಿಬ್ಬಂದಿ ಅಭಿಮಾನಿಗಳ ಭದ್ರತೆ ಬಗ್ಗೆ ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆಂಬುದನ್ನು ಕೂಡ ವಿಚಾರಿಸುತ್ತಿದ್ದಾರೆ.

ಅಲ್ಲು ಅರ್ಜುನ್‌ ಮನೆ ಮೇಲೆ ಪ್ರತಿಭಟನಾಕಾರರಿಂದ ದಾಳಿ

ಕಾಲ್ತುಳಿತದಿಂದ ಸಾವನ್ನಪ್ಪಿದ ರೇವತಿ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನಾಕಾರರು, ಪುಷ್ಪಾ-2 (Pushapa 2) ಸಿನಿಮಾ ಹೀರೋ ಹಾಗೂ ತೆಲುಗು ಸ್ಟಾರ್‌ ನಟ ಅಲ್ಲು ಅರ್ಜುನ್‌ ಅವರ ಮನೆಯ ಮೇಲೆ ದಾಳಿ ನಡೆಸಿದ್ದರು. ಒಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ ಪ್ರತಿಭಟನಾಕಾರರು, ಮೊದಲಿಗೆ ನಟನ ಮನೆಯ ಗೇಟ್‌ ಅನ್ನು ತೆಗೆಯುವಂತೆ ಸೆಕ್ಯೂರಿಟಿ ಗಾರ್ಡ್‌ಗೆ ಧಮ್ಕಿ ಹಾಕಿದ್ದರು. ಇದಕ್ಕೆ ಅವರು ಒಪ್ಪದ ಕಾರಣ ಪ್ರತಿಭಟನಾಕಾರರು ಟೊಮಾಟೊ, ಕಲ್ಲುಗಳನ್ನು ಮನೆಯ ಮೇಲೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರತಿಭಟನಾಕಾರರನ್ನು ತಡೆಯಲು ಮುಂದಾದ ನಟನ ಮನೆಯ ಸಿಬ್ಬಂದಿಯ ಮೇಲೂ ಹಲ್ಲೆ ನಡೆಸಲಾಗಿದೆ. ಇದರಲ್ಲಿ ಕೆಲವರು ಗೋಡೆ ಹಾರಿ ಒಳ ನುಗ್ಗಿ ಉದ್ಯಾನ ಪ್ರದೇಶದಲ್ಲಿದ್ದ ಹೂವಿನ ಕುಂಡಗಳನ್ನು ಧ್ವಂಸಗೊಳಿಸಿದ್ದರು. ಅಲ್ಲದೆ, ತಮ್ಮ ದಾರಿಗೆ ಅಡ್ಡ ಬಂದಿದ್ದ ಭದ್ರತಾ ಸಿಬ್ಬಂದಿಯನ್ನು ಥಳಿಸಿದ್ದದ್ದಾರೆಂದು ವರದಿಯಾಗಿದೆ. ಈ ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಬಂದಿದ್ದ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಸಂಧ್ಯಾ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ

ಕಾಲ್ತುಳಿತದಿಂದ ಸಾವಿಗೀಡಾಗಿದ್ದ ಸಂಧ್ಯಾ ಅವರ ಕುಟುಂಬಕ್ಕೆ ನಟ ಅಲ್ಲು ಅರ್ಜುನ್‌ ಅವರು ಮೊದಲಿಗೆ 25 ಲಕ್ಷ ರೂಗಳನ್ನು ಪರಿಹಾರ ಹಾಗೂ ಮೃತ ಸಂಧ್ಯಾ ಅವರ ಪುತ್ರನ ಚಿಕಿತ್ಸೆಗೆ ನೆರವು ನೀಡಲಾಗುವುದು ಎಂದು ಹೇಳಿದ್ದರು. ಇದೀಗ ತಮ್ಮ ವಿರುದ್ದ ಪ್ರತಿಭಟನೆ ಜೋರಾದ ಕಾರಣ ಪರಿಹಾರದ ಮೊತ್ತವನ್ನು 50 ಲಕ್ಷ ರೂ. ಗಳಿಗೆ ಏರಿಸಲಾಗಿದೆ.

ಈ ಸುದ್ದಿಯನ್ನು ಓದಿ: Pushapa 2: ತೆಲುಗು ನಟ ಅಲ್ಲು ಅರ್ಜುನ್‌ ಮನೆ ಮೇಲೆ ಟೊಮಾಟೊ, ಕಲ್ಲು ತೂರಾಟ!