ಸಂಪಾದಕರ ಸದ್ಯಶೋಧನೆ
ವಿಶ್ವೇಶ್ವರ ಭಟ್
1888ರಲ್ಲಿ ತಕಾಶಿಚಿ ತವರಾಯ ಎಂಬಾತ ಜಪಾನ್‌ನಲ್ಲಿ ಮೊದಲ ವೆಂಡಿಂಗ್ ಮಷೀನನ್ನು ಕಂಡುಹಿಡಿದ. ಸರಳ
ತಂತ್ರeನವನ್ನು ಬಳಸಿ ತಯಾರಿಸಿದ ಈ ಮಷೀನು ಆಗ ತಂಬಾಕನ್ನು ವಿತರಿಸುತ್ತಿತ್ತು. ತರುವಾಯ ಅದೇ ವರ್ಷ ಅದಕ್ಕೆ ಪೇಟೆಂಟ್ ಸಲ್ಲಿಸಿದ. ಆತ ನಂತರ ಜಪಾನಿನಲ್ಲಿ ಈಗ ಉಳಿದಿರುವ ಅತ್ಯಂತ ಹಳೆಯ ಮಾರಾಟ ಯಂತ್ರ ವನ್ನು ಕಂಡುಹಿಡಿದ. ಅಂಚೆ ಚೀಟಿ ಮತ್ತು ಪೋಸ್ಟ್‌ಕಾರ್ಡ್‌ಗಳನ್ನು ಕೂಡ ಆ ವೆಂಡಿಂಗ್ ಮಷೀನ್ ಮೂಲಕ ಮಾರಾಟ ಮಾಡಲಾಗುತ್ತಿತ್ತು.
ಸೋಜಿಗವೆಂದರೆ, ತವರಾಯ ಸಿದ್ಧಪಡಿಸಿದ ವೆಂಡಿಂಗ್ ಮಷೀನನ್ನು ಮರದಿಂದ ಮಾಡಲಾಗಿತ್ತು. ಅಂದರೆ ಅದು ಅಕ್ಷರಶಃ ಮರದ ಪೆಟ್ಟಿಗೆಯಾಗಿತ್ತು. ಆದರೆ ಚಿಲ್ಲರೆ ನಾಣ್ಯಗಳನ್ನು ವಾಪಸ್ ನೀಡಲು ಮತ್ತು ಸಾಮಾನುಗಳ ಬೆಲೆಗಳನ್ನು ತೋರಿಸುವಷ್ಟು ಸಾಕಷ್ಟು ಮುಂದುವರಿದಿದ್ದವು. 1900 ರಲ್ಲಿ ರೂಪಿಸಿದ ಮತ್ತೊಂದು ವೆಂಡಿಂಗ್ ಮಷೀನು ಇಂದಿಗೂ ಅಸ್ತಿತ್ವದಲ್ಲಿದೆ.
ಅದು ಜಪಾನಿನ ರೈಸ್ ವೈನನ್ನು ವಿತರಿಸುತ್ತದೆ. 1920 ರ ದಶಕದಲ್ಲಿ ಮಿಠಾಯಿ ಮತ್ತು ಸಿಹಿ ತಿಂಡಿಗಳನ್ನು ಮಾರುವ ವೆಂಡಿಂಗ್ ಮಷೀನುಗಳು ನಿಧಾನವಾಗಿ ದೇಶದಲ್ಲಿ ಜನಪ್ರಿಯವಾದವು. 1950 ರ ದಶಕದ ಉತ್ತರಾರ್ಧದಲ್ಲಿ, ವೆಂಡಿಂಗ್ ಮಷೀನುಗಳು ವ್ಯಾಪಕವಾಗಿ ಹರಡಿತು. ಅಮೆರಿಕದ ಪಾನೀಯ ತಯಾರಕರು 1962 ರಲ್ಲಿ ಫೌಂಟೇನ್ -ಸ್ಟೈಲ್ ಜ್ಯೂಸ್ ಡಿಸ್ಪೆನ್ಸರ್‌ನೊಂದಿಗೆ ಜಪಾನಿನ ಮಾರುಕಟ್ಟೆಯನ್ನು ಪ್ರವೇಶಿಸಿದರು. ನಂತರ ಪಾನೀಯ ವೆಂಡಿಂಗ್ ಮಷೀನುಗಳು ಪ್ಯಾಕ್ ಮತ್ತು ಕ್ಯಾನುಗಳಲ್ಲಿ ಮಾರಾಟ ಆರಂಭಿಸಿದವು.
ಆಲ್ಕೋಹಾಲ್ ಯುಕ್ತ ಪಾನೀಯ ತಯಾರಕರು ವೆಂಡಿಂಗ್ ಮಷೀನುಗಳ ಮೂಲಕ ತಮ್ಮ ಉತ್ಪನ್ನಗಳನ್ನು ಮಾರಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಇದರ ಪರಿಣಾಮ, 1964 ರಿಂದ 1970 ರ ಅವಧಿಯಲ್ಲಿ, ಜಪಾನ್‌ನಲ್ಲಿ ವೆಂಡಿಂಗ್ ಮಷೀನುಗಳ ಸಂಖ್ಯೆ ಎರಡೂವರೆ ಲಕ್ಷದಿಂದ ಹತ್ತು ಲಕ್ಷಕ್ಕೆ ಏರಿದವು. ಈ ಸಂಖ್ಯೆಯು ಮುಂದಿನ ಮೂರು ವರ್ಷಗಳಲ್ಲಿ (1973 ರಲ್ಲಿ) ಇಪ್ಪತ್ತು ಲಕ್ಷಕ್ಕೆ ನೆಗೆಯಿತು. ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ (1984 ರಲ್ಲಿ) ಜಪಾನಿನಲ್ಲಿ ಐವತ್ತು ಲಕ್ಷ ವೆಂಡಿಂಗ್ ಮಷೀನುಗಳು ಬಂದು ಕುಳಿತಿದ್ದವು.
2000 ರ ಹೊತ್ತಿಗೆ ಇದು ಐವತ್ತಾರು ಲಕ್ಷ ತಲುಪಿತ್ತು. ಡಿಜಿಟಲ್ ತಂತ್ರಜ್ಞಾನ ಮತ್ತು ಆನ್ಲೈನ್ ಶಾಪಿಂಗ್‌ನದ ಸುಧಾರಣೆಗಳು ದೇಶದಲ್ಲಿ ವೆಂಡಿಂಗ್ ಮಷೀನುಗಳ ತ್ವರಿತ ಬೆಳವಣಿಗೆಯನ್ನು ನಿಧಾನಗೊಳಿಸಿತು. ಆದರೂ ಅವು
ಇನ್ನೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಬಗೆಬಗೆಯ ವೆಂಡಿಂಗ್ ಮಷೀನುಗಳ ಆವೃತ್ತಿಗಳು ಸುಧಾರಿತ ತಂತ್ರಜ್ಞಾನವನ್ನು ಹೊಂದಿವೆ.
ಅವು ಆಂತರಿಕ ಸೆನ್ಸರ್ (ಸಂವೇದಕಗಳು), ರೆಫ್ರಿಜರೇಟರ್‌ಗಳು ಮತ್ತು ಹೀಟರ್‌ಗಳೊಂದಿಗೆ ಬರುತ್ತಿವೆ. ಇದು
ವಿತರಿಸುವ ವಸ್ತುಗಳ ಪ್ರಕಾರವನ್ನು ಅವಲಂಬಿಸಿರುತ್ತದೆ. ಇಂದಿನ ವೆಂಡಿಂಗ್ ಮಷೀನುಗಳು ಮಿನಿ-ಮಾರ್ಟ್ ಗಳಂತೆ ಕಾರ್ಯನಿರ್ವಹಿಸುತ್ತವೆ, ಅಲ್ಲಿ ಜನರು ಅಸಂಖ್ಯ ವಿಧಗಳ ಉತ್ಪನ್ನಗಳನ್ನು ಖರೀದಿಸಬಹುದು. ಈ
ಮಾನವರಹಿತ ಯಂತ್ರಗಳು ಮಾರಾಟ ಮಾಡದ ವಸ್ತುಗಳಿಲ್ಲ. ಕೆಲವು ವೆಂಡಿಂಗ್ ಮಷೀನುಗಳು 300ಕ್ಕೂ ಅಧಿಕ ವಿವಿಧ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡಿರುತ್ತವೆ. ಕೇವಲ ಒಂದು ಬಟನ್ ಒತ್ತಿದರೆ, ನೀವು ಅರಸುವ ವಸ್ತು ತಕ್ಷಣ ವೆಂಡಿಂಗ್ ಮಷೀನು ಪರದೆ ಮೇಲೆ ಕಾಣಿಸಿಕೊಳ್ಳುತ್ತದೆ.
ಒಮ್ಮೊಮ್ಮೆ ನೀವು ಹುಡುಕುವ ವಸ್ತು ಒಂದು ವೆಂಡಿಂಗ್ ಮಷೀನಿನಲ್ಲಿ ಇಲ್ಲವೆನ್ನಿ, ಅದು ಹತ್ತಿರದ ಯಾವ ಮಷೀನಿ ನಲ್ಲಿ ಸಿಗುತ್ತದೆ, ಅದು ಎಷ್ಟು ದೂರದಲ್ಲಿದೆ ಎಂಬ ಮಾಹಿತಿಯನ್ನೂ ನೀಡುತ್ತದೆ. ವೆಂಡಿಂಗ್ ಮಷೀನು ಗಳಲ್ಲಿ ಮಾಡುವ ಸಿದ್ಧ ಆಹಾರಗಳ ಗುಣಮಟ್ಟದ ಬಗ್ಗೆ ಯಾವ ಸಂದೇಹವನ್ನಿಟ್ಟುಕೊಳ್ಳಬೇಕಿಲ್ಲ. ಅದರ ಗುಣಮಟ್ಟ ಮತ್ತು ತಾಜಾತನ ನಿರೀಕ್ಷಿತ ಮಟ್ಟವನ್ನು ಕಾಯ್ದುಕೊಳ್ಳುತ್ತವೆ. ಆ ಮಷೀನುಗಳಲ್ಲಿರುವ ಎಲ್ಲ ಆಹಾರಗಳನ್ನು ಸರಿಯಾಗಿ ಸೀಲ್ ಮಾಡಲಾಗಿರುತ್ತದೆ. ಬೇಗನೆ ಕೆಡುವ ಆಹಾರಗಳನ್ನು ಒಂದು ದಿನಕ್ಕಿಂತ ಹೆಚ್ಚು ಕಾಲ ಮಷೀನು ಗಳಲ್ಲಿ ಇಟ್ಟುಕೊಳ್ಳುವುದಿಲ್ಲ. ಆಹಾರ ಪದಾರ್ಥಗಳು ಕೆಟ್ಟರೆ, ಮಾಲೀಕರಿಗೆ ಕೆಲವು ಮಷೀನುಗಳು ಸೂಚನೆಯನ್ನು ಕಳಿಸುತ್ತವೆ. ಪ್ರತಿ ದಿನ ವೆಂಡಿಂಗ್ ಮಷೀನುಗಳನ್ನು ಆಪರೇಟರುಗಳು ಬಂದು ತಪಾಸಣೆ ಮಾಡುತ್ತಾರೆ. ಆಹಾರಗಳ ಗುಣಮಟ್ಟದ ಬಗ್ಗೆಯೂ ಪರೀಕ್ಷೆ ಮಾಡುತ್ತಾರೆ.
ಇದನ್ನೂ ಓದಿ: @vishweshwarbhat