Friday, 27th December 2024

Vishwavani Editorial: ನೀತಿ ಶಿಕ್ಷಣಕ್ಕೆ ಒತ್ತು ನೀಡಿ

ಹುಟ್ಟುಹಬ್ಬದ ಸಂತೋಷಕೂಟಕ್ಕೆಂದು ಕರೆದ ಮಿತ್ರರು ತನ್ನ ಬಟ್ಟೆ ಬಿಚ್ಚಿಸಿ ಹಲ್ಲೆ ನಡೆಸಿ, ಮೈಮೇಲೆ ಮೂತ್ರ ವಿಸರ್ಜಿಸಿದ್ದಕ್ಕೆ ಮನ ನೊಂದ ಉತ್ತರ ಪ್ರದೇಶದ ಬಾಲಕನೊಬ್ಬ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. ಮತ್ತೊಂದೆಡೆ, ಗುಜರಾತ್‌ನ ಭರೂಚ್ ಜಿಲ್ಲೆಯಲ್ಲಿ ವಯೋವೃದ್ಧೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಬಂಧಿತನಾಗಿದ್ದ 35ರ ಹರೆಯದ ಆರೋಪಿಯೊಬ್ಬ, ಜಾಮೀನಿನ ಮೇಲೆ ಹೊರಬಂದ ಬಳಿಕ ಆ ಸಂತ್ರಸ್ತೆಯನ್ನು ಹುಡುಕಿಕೊಂಡು ಹೋಗಿ ಮತ್ತೆ ಎರಡು ಬಾರಿ ಅತ್ಯಾಚಾರ ಎಸಗಿ ಬರ್ಬರತೆಯನ್ನು ಮೆರೆದಿದ್ದರ ಜತೆಗೆ ಆಕೆಗೆ ಜೀವಬೆದರಿಕೆಯನ್ನೂ ಹಾಕಿರುವುದು ವರದಿಯಾಗಿದೆ.

ದಿನಗಳೆದಂತೆ ಇಂಥ ವಿಕೃತ ಚಟುವಟಿಕೆಗಳು ಹೆಚ್ಚುತ್ತಿರುವುದು ತಲ್ಲಣಗೊಳಿಸುವ ಬೆಳವಣಿಗೆ. ಶಾಂತಿ ಮತ್ತು ಅಹಿಂಸೆಯನ್ನು ಜಗತ್ತಿಗೆ ಸಾರಿ ಹೇಳಿದ ದೇಶದಲ್ಲೇ ಇಂಥ ಪ್ರಕರಣಗಳು ಜರುಗಿದರೆ, ಅದು ತಲೆತಗ್ಗಿಸುವ ಸಂಗತಿ ಯಲ್ಲದೆ ಇನ್ನೇನು? ಶಾಲಾ ಕಾಲೇಜುಗಳಲ್ಲಿ ನೀತಿಶಿಕ್ಷಣದ ತರಗತಿಗಳೂ ನಡೆಯಬೇಕು ಎಂದು ಶಿಕ್ಷಣ ತಜ್ಞರು ಕಾಲಾನುಕಾಲಕ್ಕೆ ಹೇಳಿಕೊಂಡೇ ಬಂದಿರುವುದು ಈ ಕಾರಣಕ್ಕಾಗಿಯೇ.

ಆದರೆ ಬದಲಾದ ಕಾಲಘಟ್ಟದಲ್ಲಿ ಇಂಥ ತರಗತಿಗಳಿಗೆ ಆಸ್ಪದವೇ ಇಲ್ಲದಂತಾಗಿದೆ. ಇನ್ನು, ಪೋಷಕರಲ್ಲಿ ಕೆಲವರು ‘ಮಕ್ಕಳನ್ನು ಶಾಲೆಗೆ ಕಳಿಸುವುದಷ್ಟೇ ನಮ್ಮ ಜವಾಬ್ದಾರಿ; ಅವರನ್ನು ತಿದ್ದಿ-ತೀಡುವುದೇನಿದ್ದರೂ ಶಿಕ್ಷಕ ವೃಂದದ ಹೊಣೆ’ ಎಂಬ ಧೋರಣೆಯಲ್ಲೇ ದಿನ ದೂಡುವುದರಿಂದಾಗಿ ಕೆಲ ಮಕ್ಕಳು ಹೀಗೆ ಅಡ್ಡದಾರಿ ಹಿಡಿಯುತ್ತಿರುವ ನಿದರ್ಶನಗಳು ಹೆಚ್ಚಾಗುತ್ತಿವೆ. ಇಂಥ ದಿಕ್ಚ್ಯುತಿಯನ್ನು ಮೊಳಕೆಯಲ್ಲೇ ಚಿವುಟದಿದ್ದರೆ, ಮುಂದೊಂದು ದಿನ ತಮ್ಮ ಮಕ್ಕಳೇ ಸಮಾಜಘಾತುಕ ಶಕ್ತಿಗಳಾಗಿ ಬೆಳೆಯಬಹುದು, ದೇಶದ್ರೋಹದ ಚಟುವಟಿಕೆಗಳಲ್ಲೂ ತೊಡಗಿಕೊಳ್ಳ ಬಹುದು ಎಂಬ ಕಲ್ಪನೆಯೂ ಇಂಥ ಪಾಲಕರಿಗೆ ಇದ್ದಂತಿಲ್ಲ.

ಕೆಲ ವರ್ಷಗಳ ಹಿಂದೆ ದೆಹಲಿಯಲ್ಲಿ ‘ನಿರ್ಭಯಾ’ಳ ಮೇಲಾದ ಅತ್ಯಾಚಾರ, ತರುವಾಯದಲ್ಲಿ ಆಕೆ ಸತ್ತಿದ್ದು ಮತ್ತು ಮುಂಬೈನ ಆಸ್ಪತ್ರೆಯೊಂದರಲ್ಲಿ ದಾದಿಯಾಗಿದ್ದ ಅರುಣಾ ಶಾನ್‌ಬಾಗ್ ತಮಗಾದ ಆಘಾತದಿಂದಾಗಿ ನರಳಿ ನರಳಿ ಸತ್ತಿದ್ದು ಈ ಎರಡು ಘಟನೆಗಳು ವಿಕೃತರ ಮನಸ್ಥಿತಿಗೆ ಸಾಕ್ಷಿಯೆನ್ನಬಹುದು. ಇಂಥವರ ಪರಂಪರೆ ಮುಂದುವರಿಯ ಬೇಕೇ?

ಇದನ್ನೂ ಓದಿ: Vishwavani Editorial: ಚದುರಂಗ ಬಲದ ಚತುರ