Friday, 27th December 2024

Vishweshwar Bhat Column: ಜಪಾನಿನ ರೈಲು ಬೋಗಿಗಳಲ್ಲಿ ನಡೆಯುವ ‘ಏಳು ನಿಮಿಷಗಳ ಪವಾಡ’ ಗೊತ್ತಾ ?

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

ಅಂದು ಜಪಾನಿನ ಕ್ಯೋಟೊ ರೈಲು ನಿಲ್ದಾಣದಲ್ಲಿ ನಾವು ಬುಲೆಟ್ ಟ್ರೇನಿ (ಶಿಂಕನ್ಸೆನ್) ಗಾಗಿ ಕಾಯುತ್ತಿದ್ದೆವು. ಆ ಟ್ರೇನಿನಲ್ಲಿ ಪ್ರವಾಸ ಮಾಡಬೇಕೆಂಬುದು ನನ್ನ ಬಹು ವರ್ಷಗಳ ಆಸೆಯಾಗಿತ್ತು. ಅದು ಇನ್ನೇನು ಈಡೇರುವ ಆ ಕ್ಷಣಗಳಿಗೆ ಎದುರು ನೋಡುತ್ತಿದ್ದೆ. ನಾವು ಅಲ್ಲಿಂದ ಟೋಕಿಯೋಕ್ಕೆ ತೆರಳುವ ಟ್ರೇನು, ಬೆಳಗಿನ ಹತ್ತು ಗಂಟೆ-ಹತ್ತು ನಿಮಿಷ-ಹನ್ನೆರಡು ಸೆಕೆಂಡಿಗೆ ಬರುವುದೆಂದು ಟಿಕೆಟ್ ಮೇಲೆ ಬರೆದಿತ್ತು. ಅದು ನಿಗದಿತ ಸಮಯಕ್ಕೆ ಆಗಮಿಸುವ ಬಗ್ಗೆ ನನಗೆ ಯಾವುದೇ ಅನುಮಾನಗಳಿರಲಿಲ್ಲ.

ಕಾರಣ ಜಪಾನಿನಲ್ಲಿ ಟ್ರೇನು ಮೂರು ನಿಮಿಷ ತಡವಾಗಿ ಬಂದರೆ ರೈಲ್ವೆ ಇಲಾಖೆ ಕ್ಷಮೆಯಾಚಿಸುತ್ತದೆ ಮತ್ತು
ಐದು ನಿಮಿಷಕ್ಕಿಂತ ತಡವಾದರೆ ಮರುದಿನ ಅದು ಮುಖಪುಟದ ಸುದ್ದಿಯಾಗುತ್ತದೆ ಎಂಬುದು ಗೊತ್ತಿತ್ತು. ಕಾಲನ
ಯಾವ ನೆಪಗಳೂ ಜಪಾನಿನ ರೈಲಿಗೆ ಅನ್ವಯಿಸುವುದಿಲ್ಲ. ಊರ ಮೇಲೆ ಊರು, ಮೇಲಿಂದ ಆಕಾಶ ಬಿದ್ದರೂ
ಸರಿಯೇ, ಯಾವ ಸಮಯಕ್ಕೆ ಬರಬೇಕೋ, ಆ ಸಮಯಕ್ಕೆ ಹಾಜರ್, ಸೆಕೆಂಡ್ ಸಹಿತ ಚುಕ್ತಾ!

ಆ ರೈಲಿನ ಸುತ್ತ ಹೆಣೆದುಕೊಂಡಿರುವ ಇತರ ರೋಚಕ ಸಂಗತಿಗಳನ್ನು ಖುದ್ದಾಗಿ ನೋಡಲು ಸುಮಾರು ಇಪ್ಪತ್ತು
ನಿಮಿಷ ಮುಂಚಿತವಾಗಿಯೇ ನಾವು ತೆರಳಬೇಕಾದ ಪ್ಲಾಟ್ ಫಾರ್ಮ್ ಮೇಲೆ ನಿಂತಿದ್ದೆವು. ಬುಲೆಟ್ ಟ್ರೇನುಗಳು ಸರ್ರ್.. ಬರ್ರ್… ಎಂದು ಹಾದು ಹೋಗುತ್ತಿದ್ದವು. ಎಲ್ಲವೂ ಕರಾರುವಾಕ್ಕು.

ಅದರ ಆಗಮನ-ನಿರ್ಗಮನ ನೋಡಿ ನಮ್ಮ ವಾಚನ್ನು ಒಂದು ಸೆಕೆಂಡ್ ಸಹಿತ ಸರಿ ಸಮಯಕ್ಕೆ ಹೊಂದಿಸಿಕೊಳ್ಳ ಬಹುದಿತ್ತು. ಬುಲೆಟ್ ಟ್ರೇನ್ ಏರುವಾಗ ಪ್ರಯಾಣಿಕರನ್ನು ನಿಯಂತ್ರಿಸಲೆಂದು ನಿಲ್ಲಿಸಿದ ಸ್ಟೀಲಿನ ಬೇಲಿಯನ್ನು ನಾನು ಗಮನಿಸುತ್ತಿದ್ದೆ. ಅದು -ಳ-ಳ ಹೊಳೆಯುತ್ತಿತ್ತು. ಅದು ಎಲ್ಲಿಯೂ ತುಕ್ಕು ಹಿಡಿದಿರಲಿಲ್ಲ ಅಥವಾ ಪ್ರಯಾಣಿಕರ ಜಪಾಟಿಗೆ ಸೊಟ್ಟಗಾಗಿರಲಿಲ್ಲ. ಅದರ ಮೇಲೆ ಧೂಳಿನ ಕಣಗಳೂ ಕುಳಿತುಕೊಂಡಿರಲಿಲ್ಲ. ಅಷ್ಟೊತ್ತಿಗೆ ಸಿಬ್ಬಂದಿಯೊಬ್ಬ ಆ ಕಡಕಟ್ಟನ್ನು (ಬೇಲಿ) ಒರೆಸುತ್ತಾ ಮುಂದೆ ಸಾಗಿದ. ಅದು ಅಷ್ಟು ಸ್ವಚ್ಛವಾಗಿರಲು ಏನು ಕಾರಣ ಎಂಬುದು ಗೊತ್ತಾಯಿತು.

ನಿಲ್ದಾಣದ ಒಂದು ತುದಿಯಿಂದ ಮತ್ತೊಂದು ತುದಿಗೆ ಕಡಕಟ್ಟನ್ನು ಒರೆಸುವುದೇ ಆತನ ಕೆಲಸ. ನಮ್ಮ ಎದುರಿನ ಮತ್ತೊಂದು ಕಡೆಯ ಪ್ಲಾಟ್-ರ್ಮ್‌ನಲ್ಲೂ ಅದೇ ರೀತಿ ಮತ್ತೊಬ್ಬ ಒರೆಸುತ್ತಿದ್ದ. ಇಡೀ ನಿಲ್ದಾಣದಲ್ಲಿ ಎಲ್ಲೂ ಸಣ್ಣ ಐಬು ಸಹ ಗೋಚರಿಸುತ್ತಿರಲಿಲ್ಲ. ಎಷ್ಟೇ ಹುಡುಕಿದರೂ ಒಂದು ಸಣ್ಣ ತಪ್ಪು, ಅಪಸವ್ಯಗಳು ಕಾಣುತ್ತಿರಲಿಲ್ಲ.
“ರೈಲು ನಿಲ್ದಾಣದಲ್ಲಿ ಮಾತ್ರ ಅಲ್ಲ, ರೈಲಿನೊಳಗೂ ಯಾವ ಸಣ್ಣ-ಪುಟ್ಟ ದೋಷಗಳನ್ನು ಕಾಣಲು ಸಾಧ್ಯವಿಲ್ಲ.
ಅಂಥ ದೋಷಗಳನ್ನು ಕಂಡರೆ, ರೈಲಿನ ಅಧಿಕಾರಿಗಳಿಗೆ ತಿಳಿಸಿದರೆ, ಪ್ರಯಾಣದ ಟಿಕೆಟ್ ಹಣವನ್ನು ಮರಳಿ ಪಡೆಯಬಹುದು. ಜಪಾನಿನ ಬುಲೆಟ್ ಟ್ರೇನ್ ಮತ್ತು ಅವುಗಳ ಬೋಗಿಗಳು ದಿನವಿಡೀ ಸ್ವಚ್ಛತೆಯ ಭೂತಗನ್ನಡಿ ಯಲ್ಲಿ ಪರೀಕ್ಷೆಗೊಳಗಾಗುತ್ತಲೇ ಇರುತ್ತವೆ.

ಬೋಗಿಯೊಳಗೆ ನಡೆಯುವ ‘ಏಳು ನಿಮಿಷಗಳ ಪವಾಡ’ವನ್ನು ಇಡೀ ಜಗತ್ತು ನೋಡಿ ನಿಬ್ಬೆರಗಾಗಿದೆ” ಎಂದು ನಮ್ಮ ಜತೆಯಲ್ಲಿದ್ದ ಗೈಡ್, ಭಾರತೀಯ ಮೂಲದ, ಕಳೆದ ಎರಡೂವರೆ ದಶಕಗಳಿಂದ ಅಲ್ಲಿ ನೆಲೆಸಿರುವ ಮೀನಾ ಹೇಳಿದಾಗ ನನ್ನ ಕುತೂಹಲದ ಆಂಟೆನಾ ಜಾಗೃತವಾಯಿತು. ರೈಲು ನಿಲ್ದಾಣಗಳ ಆಸನ, ತಡೆಬೇಲಿ, ಮೆಟ್ಟಿಲೇರು ವಾಗ ಬಳಸುವ ಸರಳು (ರೇಲಿಂಗ್ಸ್) ಗಳನ್ನೆಲ್ಲ ಉಜ್ಜಿ ಸ್ವಚ್ಛಗೊಳಿಸುವುದನ್ನು ನೋಡಿ ನಿಬ್ಬೆರಗಾಗಿದ್ದ ನನಗೆ, ಬೋಗಿ ಹೇಗಿರಬಹುದು ಎಂಬ ಕುತೂಹಲ ಸಹಜವಾಗಿ ಅರಳಿತ್ತು. ನಾನು ನಿಗದಿತ ಆಸನದಲ್ಲಿ ಕುಳಿತು, ಒಂದು ಕ್ಷಣ ಸಾವರಿಸಿಕೊಂಡು ಸುತ್ತಲೂ ದಿಟ್ಟಿಸಿದೆ. ಇಡೀ ಪರಿಸರವನ್ನು ನನ್ನ ಗ್ರಹಿಕೆಯ ಕಕ್ಷೆಯೊಳಗೆ ಸೆಳೆದುಕೊಳ್ಳಲು ಪ್ರಯತ್ನಿಸಿದೆ. ಎಡೆ ಕಣ್ಣಿಗೆ ಢಾಳಾಗಿ ಗೋಚರಿಸುತ್ತಿದ್ದುದು ಸ್ವಚ್ಛತೆ, ಶಿಸ್ತು ಮತ್ತು ಒಂದು ಆರ್ಡರ್. ಆಸನದ ತಲೆಮಟ್ಟದ ಹಿಂದಿನ, ತೆಗೆದು ಒಗೆಯಬಹುದಾದ ಪೇಪರಿನಿಂದ ಹಿಡಿದು ಇಡೀ ಬೋಗಿಯಲ್ಲಿ ಎಲ್ಲವೂ ವ್ಯವಸ್ಥಿತ, ಅಚ್ಚುಕಟ್ಟು, ಯೋಜಿತ ಮತ್ತು ಕ್ರಮಬದ್ಧ. ಹೀಗಿದ್ದಿದ್ದರೆ ಇನ್ನೂ ಚೆನ್ನಾಗಿತ್ತು ಎಂದು ಅನಿಸದಷ್ಟು ದೋಷರಹಿತ ವ್ಯವಸ್ಥೆ ಯನ್ನು ಅಲ್ಲಿ ನಿರ್ಮಿಸಲಾಗಿತ್ತು.

ಈ ಅಚ್ಚುಕಟ್ಟುತನ ಮತ್ತು ಸ್ವಚ್ಛತೆಯನ್ನು ಬೋಗಿಯೊಳಗೆ ಕಾಪಾಡುವುದು ಸಣ್ಣ ಮಾತಲ್ಲ. ಕಾರಣ ಪ್ರತಿದಿನ
ಟೋಕಿಯೋ ನಗರವೊಂದರಿಂದಲೇ ಸುಮಾರು ಇನ್ನೂರು ಬುಲೆಟ್ ಟ್ರೇನುಗಳು ಬರುತ್ತವೆ ಮತ್ತು ಹೋಗುತ್ತವೆ. ಈ
ರೀತಿ ದೇಶದ ಬೇರೆ ಬೇರೆ ನಗರಗಳನ್ನೂ ಸೇರಿಸಿದರೆ ದಿನಕ್ಕೆ ಸುಮಾರು ನಾನೂರು ಟ್ರಿಪ್‌ಗಳಾಗುತ್ತವೆ. 7764 ಕಿ.ಮೀ.
ದೂರದ ಬುಲೆಟ್ ಟ್ರೇನಿನ ಹಳಿಗಳ ಮೇಲೆ, ಗಂಟೆಗೆ 320 ಕಿ.ಮೀ. ವೇಗದಲ್ಲಿ ಪ್ರತಿದಿನ ಸುಮಾರು ನಾಲ್ಕು ಲಕ್ಷ ಜನ
ಪ್ರಯಾಣಿಸುತ್ತಾರೆ. ಹೆಚ್ಚಿನ ನಿಲ್ದಾಣಗಳಲ್ಲಿ ರೈಲು ಒಂದು ನಿಮಿಷಕ್ಕಿಂತ ಹೆಚ್ಚು ಕಾಲ ನಿಲ್ಲುವುದಿಲ್ಲ. ‘ಪೀಕ್ ಅವರ್’ನಲ್ಲಿ ರೈಲಿನ ಎಲ್ಲ ಆಸನಗಳೂ ಭರ್ತಿಯಾಗಿರುತ್ತವೆ. ಯಾವ ರೈಲೂ ಗಮ್ಯಸ್ಥಾನ ತಲುಪಿದ ನಂತರ ಅಲ್ಲಿ ನಿಲ್ಲುವುದು ಹನ್ನೆರಡು ನಿಮಿಷ ಮಾತ್ರ. ಹೀಗಿರುವಾಗ ಇಡೀ ಬೋಗಿಯೊಳಗೆ ಒಂದು ಸ್ವಚ್ಛ ವ್ಯವಸ್ಥೆಯನ್ನು ನಿರ್ಮಿಸುವುದು ಸಣ್ಣ ಮಾತಲ್ಲ.

ದೇಶದ ಪ್ರಮುಖ ಭಾಗಗಳಲ್ಲಿ ದಿನವಿಡೀ, ವರ್ಷದ ಮುನ್ನೂರೈವತ್ತು ದಿನವೂ ಸಂಚರಿಸುವ ಆ ಟ್ರೇನಿನಲ್ಲಿ ಒಂದು ಅಚ್ಚುಕಟ್ಟು ವ್ಯವಸ್ಥೆಯನ್ನು ರೂಪಿಸುವುದು, ಸದಾ ಬೋಗಿಯೊಳಗೆ ಸಣ್ಣ ಲೋಪ-ದೋಷ ಇರದಂಥ ಪರಿಸರ ವನ್ನು ಕಾಯ್ದುಕೊಳ್ಳುವುದು ದೊಡ್ಡ ಸವಾಲೇ. ಅದು ಸಾಧ್ಯವಾಗಿರುವುದು ಆ ‘ಏಳು ನಿಮಿಷಗಳ ಪವಾಡ’ದಿಂದ!

ಶಿಂಕನ್ಸೆನ್ ಎಂಜಿನಿಯರಿಂಗ್ ಮತ್ತು ಕಾರ್ಯಾಚರಣೆಯ ಅದ್ಭುತ ಎಲ್ಲರಿಗೂ ಗೊತ್ತು. ಆದರೆ ರೈಲಿನ ಸಮಯ ಪಾಲನೆಯನ್ನು ಗಮನದಲ್ಲಿರಿಸಿಕೊಂಡರೆ, ಬೋಗಿಯನ್ನು ಸ್ವಚ್ಛಗೊಳಿಸುವುದು ಇನ್ನೊಂದು ಸವಾಲಿನ ಕೆಲಸ. ಕಾರಣ ಯಾವ ರೈಲೂ ಒಂದೆರಡು ಸೆಕೆಂಡ್ ಸಹ ತಡವಾಗಿ ಹೋಗುವಂತಿಲ್ಲ. ಅಷ್ಟರೊಳಗೆ ಇಡೀ ಬೋಗಿಯನ್ನು ಸ್ವಚ್ಛಗೊಳಿಸಿ, ಸಿದ್ಧಗೊಳಿಸಬೇಕು. ಯಾವುದೇ ನಿಲ್ದಾಣದಿಂದ ರೈಲು ನಿರ್ಗಮಿಸುವಾಗ ಬೋಗಿಗಳು ನಳನಳಿಸು ತ್ತಿರಬೇಕು. ಒಂದು ಸಣ್ಣ ದೋಷ ಸಹ ಇರದಂತೆ ನೋಡಿಕೊಳ್ಳಬೇಕು. ಅಂಥ ದೋಷಗಳ ದೂರು ಪ್ರಯಾಣಿಕರಿಂದ ಬಂದರೆ ಅದಕ್ಕೆ ಸಬೂಬು, ಸಮಜಾಯಿಷಿ ನೀಡುವಂತಿಲ್ಲ. ಅದರ ಬದಲು ಪ್ರಯಾಣದ ಹಣವನ್ನು ವಾಪಸ್ ಮಾಡಬೇಕು ಮತ್ತು ಉತ್ತರದಾಯಿತ್ವದ ಹೊಣೆ ಹೊರಬೇಕು. ಇಂಥ ಕಟ್ಟುನಿಟ್ಟಿನ ಪರಿಸ್ಥಿತಿಯಲ್ಲಿ ಬೋಗಿಯೊಳಗೆ ಸ್ವಚ್ಛತೆ, ಅಚ್ಚುಕಟ್ಟುತನ, ಶುದ್ಧ ಪರಿಸರ ಮತ್ತು ಶಿಸ್ತನ್ನು ಕಾಪಾಡಬೇಕು. ಹಾಗಂತ ಈ ಕೆಲಸವನ್ನು ಯಂತ್ರಕ್ಕೆ ಒಪ್ಪಿಸುವಂತಿಲ್ಲ. ಇವನ್ನೆಲ್ಲ ಜನರೇ ಮಾಡಬೇಕು. ಬುಲೆಟ್ ಟ್ರೇನುಗಳಲ್ಲಿ ನಡೆಯುತ್ತಿರುವುದೇ ಈ ಪವಾಡ!


ಬುಲೆಟ್ ಟ್ರೇನು ಬೇರೆ ಊರಿನಿಂದ ಪ್ರಯಾಣ ಮುಗಿಸಿ, ಟೋಕಿಯೋ ನಗರಕ್ಕೆ ಮರಳಿತೆನ್ನಿ. ಟ್ರೇನು ಪುನಃ ಪ್ರಯಾಣ
ಬೆಳೆಸಲು ಕೇವಲ ಹನ್ನೆರಡು ನಿಮಿಷಗಳಿರುತ್ತವೆ. ಬೋಗಿಯಲ್ಲಿರುವ ಪ್ರಯಾಣಿಕರು ಇಳಿಯಲು ಮತ್ತು ಮುಂದಿನ
ಪ್ರಯಾಣಕ್ಕೆ ಹತ್ತಲು, ತಲಾ ಎರಡೂವರೆ ನಿಮಿಷಗಳಂತೆ ಐದು ನಿಮಿಷಗಳು ಬೇಕು. ಅಂದರೆ ಬೋಗಿಯನ್ನು
ಸ್ವಚ್ಛಗೊಳಿಸಲು ಸಿಗುವುದು ಉಳಿದ ಏಳು ನಿಮಿಷಗಳ ಕಾಲಾವಕಾಶ ಮಾತ್ರ. ಆ ಏಳು ನಿಮಿಷಗಳ ಅವಧಿಯಲ್ಲಿ
ಪವಾಡ ನಡೆದುಹೋಗುತ್ತದೆ. ಪ್ರಯಾಣಿಕರು ಇಳಿಯುತ್ತಿದ್ದಂತೆ, ೨೨ ಜನರಿರುವ ತಂಡ ಬೋಗಿಯೊಳಗೆ ವಾಯು ವೇಗದಲ್ಲಿ ಕಾರ್ಯಪ್ರವೃತ್ತವಾಗುತ್ತದೆ. ಅವರು ಆ ಅವಧಿಯಲ್ಲಿ ಎಂಟು ಅಥವಾ ಹತ್ತು ಬೋಗಿಗಳಲ್ಲಿರುವ ಸುಮಾರು ಒಂದು ಸಾವಿರದಿಂದ ಒಂದು ಸಾವಿರದ ನೂರು ಆಸನಗಳನ್ನು ಸ್ವಚ್ಛಗೊಳಿಸಬೇಕು.

ಪ್ರಯಾಣಿಕರ ಹೆಡ್ ರೆಸ್ಟ್‌ ಕವರ್‌ಗಳನ್ನು ತೆಗೆದು ಹೊಸ ಕವರ್‌ಗಳನ್ನು ಹಾಕಬೇಕು, ಆಸನದ ಮುಂದಿನ ಟ್ರೇ ಬಲ್ ಒರೆಸಬೇಕು, ಆಸನಗಳನ್ನು ವಿರುದ್ಧ ದಿಕ್ಕಿಗೆ 180 ಡಿಗ್ರಿಗೆ ತಿರುಗಿಸಬೇಕು, ಬೋಗಿಯ ಬಾತ್‌ರೂಮ್ ಮತ್ತು ಫ್ಲೋರ್ ಅನ್ನು ಸ್ವಚ್ಛಗೊಳಿಸಬೇಕು, ಆಸನದ ಮುಂದಿನ ಪೌಚ್‌ನಲ್ಲಿ ಹಿಂದಿನ ಪ್ರಯಾಣಿಕರು ಬಿಟ್ಟ ಕಾಗದ, ಆಹಾರ ಪೊಟ್ಟಣಗಳನ್ನು ತೆಗೆಯಬೇಕು, ಕಸದಬುಟ್ಟಿಗಳನ್ನು ಬರಿದು ಮಾಡಿ ಅದಕ್ಕೆ ಹೊಸ ಪ್ಲಾಸ್ಟಿಕ್ ಕವರ್ ಹೊದಿಸ ಬೇಕು, ಬೋಗಿಯ ಕಿಟಕಿಗಳ ಮೇಲೆ ಯಾವುದೇ ಬೆರಳಚ್ಚು ಇರದಂತೆ ನೀಟಾಗಿ ಒರೆಸಬೇಕು ಮತ್ತು ಅದರ ಶಟರ್ ಅನ್ನು ಓಪನ್ ಮಾಡಬೇಕು, ಹಿಂದಿನ ಪ್ರಯಾಣಿಕರು ಪತ್ರಿಕೆ-ಮ್ಯಾಗಜಿನ್‌ಗಳನ್ನು ಎಸೆದು ಹೋಗಿದ್ದರೆ ಅವನ್ನು ತೆಗೆಯಬೇಕು, ಸೀಟ್ ಬೆಲ್ಟ ಅನ್ನು ಸೀಟಿನ ಮೇಲೆ ಹಾರದ ಆಕೃತಿಯಲ್ಲಿ ಜೋಡಿಸಿಡಬೇಕು, ಆ ರೈಲು ಹೋಗುವ ಮಾರ್ಗ, ನಿಲ್ಲುವ ನಿಲ್ದಾಣಗಳ ಮಾಹಿತಿಯುಳ್ಳ ಕೈಪಿಡಿಯನ್ನು ಎಲ್ಲ ಸೀಟಿನ ಮುಂದಿನ ಪೌಚಿನಲ್ಲಿ ಇಡಬೇಕು, ಪ್ರಯಾಣಿಕರ ಸೀಟಿನ ಹ್ಯಾಂಡ್‌ರೆಸ್ಟ್‌ ಅನ್ನು ಒರೆಸಿ ಸ್ವಚ್ಛಗೊಳಿಸಬೇಕು, ಆಸನದ ಪೌಚಿನಲ್ಲಿ ಅಥವಾ ಮೇಲಿನ ಕ್ಯಾಬಿನ್ (ನಾಗಂತಿಕೆ)ನಲ್ಲಿ ಪ್ರಯಾಣಿಕರು ಯಾವುದಾದರೂ ವಸ್ತುಗಳನ್ನು ಮರೆತು ಬಿಟ್ಟು ಹೋದರೆ ಅವನ್ನು ಸಂಗ್ರಹಿಸಿ ಆಸನದ ನಂಬರ್ ಸಹಿತ Lost and Found ವಿಭಾಗಕ್ಕೆ ಹಸ್ತಾಂತರಿಸಬೇಕು. ಇವೆಲ್ಲವೂ ಕೇವಲ ಆ ಏಳು ನಿಮಿಷಗಳಲ್ಲಿ ನಡೆದುಹೋಗಬೇಕು. ಮತ್ತು ಇವೆಲ್ಲವೂ ಒಂದೇ ಒಂದು ಸಣ್ಣ ದೋಷವೂ ಇಲ್ಲದಂತೆ ನಡೆದು ಹೋಗುತ್ತವೆ!

ಕ್ಲೀನರ್‌ಗಳು ಎಲ್ಲವನ್ನೂ ನಿಷ್ಠೆ, ದಕ್ಷತೆ, ಮಗ್ನತೆ ಮತ್ತು ಪ್ರೀತಿಯಿಂದ ಮಾಡುತ್ತಾರೆ. ಇದರಲ್ಲಿ ಕಾಟಾಚಾರ
ಲವಲೇಶವೂ ಇಣುಕುವುದಿಲ್ಲ. ಆ ಕೆಲಸದಲ್ಲಿ ಒಬ್ಬ ಕರಕುಶಲ ಕರ್ಮಿಯ ಅಥವಾ ಶಿಲ್ಪಿಯ ಕಾರ್ಯಮಗ್ನ ಗುಣ,
ಏಕಾಗ್ರತೆ, ತಲ್ಲೀನ ಭಾವ ಮನೆಮಾಡಿರುತ್ತದೆ. ಆ ಏಳು ನಿಮಿಷಗಳಲ್ಲಿ ಅವರು ತಮ್ಮ ಕೆಲಸ ಮಿಗಿಸಿ ಏಕಕಾಲದಲ್ಲಿ
ಬೋಗಿಯಿಂದ ಹೊರಬಂದು ಪ್ಲಾಟ್ ಫಾರ್ಮಿನಲ್ಲಿ ಸಾಲಾಗಿ ನಿಂತು ನಡು ಬಗ್ಗಿಸಿ ಕೃತಜ್ಞತಾಪೂರ್ವಕವಾಗಿ ನಮಸ್ಕಾರ ಮಾಡುತ್ತಿದ್ದಂತೆ, ಪ್ರಯಾಣಿಕರು ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿ ಬೋಗಿಯನ್ನೆರಲಾರಂಭಿಸುತ್ತಾರೆ. ಟ್ರೇನು ತನ್ನ ಪ್ರಯಾಣವನ್ನು ಮುಂದುವರಿಸುತ್ತದೆ. ಈ ಎಲ್ಲ ಕೆಲಸಗಳ ಪೈಕಿ ಯಾವುದನ್ನೂ ಮಾಡದೇ ಇರು ವಂತಿಲ್ಲ. ಒಂದು ಕೆಲಸ ಮಾಡದಿದ್ದರೂ ಅದು ಪ್ರಯಾಣಿಕರ ದೂರಿನಲ್ಲಿ ಕೊನೆಗೊಳ್ಳಬಹುದು ಮತ್ತು ಇದನ್ನು ಮಾಡಿ ಮುಗಿಸಲು ಒಂದು ಸೆಕೆಂಡ್ ಸಹ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವಂತಿಲ್ಲ. ಆ ಟ್ರೇನು ನಿರ್ಗಮಿಸಿ ಹತ್ತು ನಿಮಿಷಗಳಲ್ಲಿ ಇನ್ನೊಂದು ಆಗಮಿಸುತ್ತದೆ. ಅದನ್ನು ಮುಂದಿನ ಪ್ರಯಾಣಕ್ಕೆ ಸಜ್ಜುಗೊಳಿಸಲು ಆ 22 ಕ್ಲೀನರುಗಳ ತಂಡ ಸನ್ನದ್ಧವಾಗಿರುತ್ತದೆ !

ಕಳೆದ ಇಪ್ಪತ್ತು ವರ್ಷಗಳಿಂದ ಈ ವ್ಯವಸ್ಥೆಯಲ್ಲಿ ಒಂದೇ ಒಂದು ಸಣ್ಣ ಲೋಪ-ದೋಷವೂ ಕಂಡುಬಂದಿಲ್ಲ. ಈ
ಸಿಬ್ಬಂದಿಯಿಂದ ಟ್ರೇನು ವಿಳಂಬವಾದ ನಿದರ್ಶನವೂ ಇಲ್ಲ. ಸಮಯವನ್ನು ಸರಿಹೊಂದಿಸಲು ಬೋಗಿಯನ್ನು
ಸ್ವಚ್ಛಗೊಳಿಸದ ಉದಾಹರಣೆಯೂ ಇಲ್ಲ. ಅಷ್ಟೇ ಅಲ್ಲ, ಈ ಕಾರಣಕ್ಕೆ ಪ್ರಯಾಣಿಕರಿಗೆ ಪ್ರಯಾಣದ ಹಣವನ್ನು ಮರಳಿ ಪಾವತಿಸಿದ ನಿದರ್ಶನವೂ ಇಲ್ಲ. ಬುಲೆಟ್ ಟ್ರೇನಿನ ಹಾಗೆ ಇದೂ ದೋಷರಹಿತ, ಲೋಪರಹಿತ. ಈ ‘ಪವಾಡ’ ಅಲ್ಲಿ ನಿತ್ಯವೂ ನಡೆಯುತ್ತಲೇ ಇರುತ್ತವೆ. ಬಿಬಿಸಿ, ಸಿಎನೆನ್ ಸೇರಿದಂತೆ ವಿಶ್ವದ ಪ್ರಮುಖ ಚಾನೆಲ್ಲುಗಳು ಈ ‘ಏಳು ನಿಮಿಷಗಳ ಪವಾಡ’ದ ಬಗ್ಗೆ ಕಾರ್ಯಕ್ರಮ ಮಾಡಿವೆ.

ಸಾವಿರಾರು ವಿದ್ಯಾರ್ಥಿಗಳು, ಆಸಕ್ತರು ಇದರ ಬಗ್ಗೆ ಅಧ್ಯಯನ ಮಾಡಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾಲಯ ಈ
‘ಪವಾಡ’ ವನ್ನು ನೋಡಲು ಪ್ರತಿ ವರ್ಷ ತನ್ನ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳನ್ನು ಕಳಿಸಿಕೊಡುತ್ತದೆ.

ಈ ವ್ಯವಸ್ಥೆಯನಾದರೂ ದೋಷಗಳು ಕಂಡುಬಂದರೆ ಆ ಬಗ್ಗೆ ವರದಿ ಮಾಡಲು, ಅಂದರೆ ನೆಗೆಟಿವ್ ಸ್ಟೋರಿ ಮಾಡಲು ಬಂದ ಅವೆಷ್ಟೋ ಚಾನೆಲ್ಲುಗಳು ನಿರಾಸೆಯಿಂದ ಮರಳಿವೆ. ಆದರೆ ವರ್ಷದಿಂದ ವರ್ಷಕ್ಕೆ ಈ ಸಿಬ್ಬಂದಿ
ಮತ್ತಷ್ಟು ಪರಿಣತಿಯನ್ನು ಸಾಽಸುತ್ತಿzರೆಯೇ ಹೊರತು, ಅವರ ಕೆಲಸದಲ್ಲಿ ಅಪ್ಪಿತಪ್ಪಿಯೂ ನಿರ್ಲಕ್ಷ್ಯ, ಏಕಾಗ್ರತೆಯ
ಕೊರತೆ ಕಂಡಿಲ್ಲ. ಜಗತ್ತಿನ ಅನ್ಯದೇಶಗಳ ರೈಲು ಇಲಾಖೆಗಳು ಈ ಮಾದರಿಯನ್ನು ನಕಲು ಮಾಡಿದ್ದರೂ ಯಶಸ್ವಿ ಯಾಗಿಲ್ಲ.

ಇಂದಿಗೂ ವಿಶ್ವದೆಡೆ ಇರುವ ಬಹುತೇಕ ವಿಮಾನಯಾನ ಸಂಸ್ಥೆಗಳಿಗೆ ‘ಏಳು ನಿಮಿಷಗಳ ಪವಾಡ’ ಮಾದರಿಯೇ
ಪ್ರೇರಣೆ. ಅವರಿಗೆ ಸಾಧ್ಯವಾಗಿದ್ದು ನಮಗೇಕೆ ಸಾಧ್ಯವಿಲ್ಲ ಎಂದು ಅವೆಲ್ಲ ಯೋಚಿಸಿದ್ದೇನೋ ನಿಜ. ಆದರೆ ಪವಾಡ
ಸೃಷ್ಟಿಸುವ ನಿಟ್ಟಿನಲ್ಲಿ ಸಂಪೂರ್ಣ ಯಶಸ್ಸು ಕಂಡಿಲ್ಲ. ಈ ‘ಏಳು ನಿಮಿಷಗಳ ಪವಾಡ’ಕ್ಕೆ ಕಾರಣವಾಗಿರುವ
ಕಂಪನಿ ಹೆಸರು ಟೆಸ್ಸಿ. ಇದು ಜಪಾನಿನ ರೈಲು ಇಲಾಖೆಯ ಅಂಗಸಂಸ್ಥೆ. ಇದು ತನ್ನ ಸಿಬ್ಬಂದಿಯಲ್ಲಿ ಮೂಡಿಸಿದ ಪ್ರೇರಣೆ ಸೈನಿಕರ ಸಮರ್ಪಣೆಗೆ ಸಮನಾದುದು ಎಂದು ಹೆಸರುವಾಸಿ. ಒಬ್ಬ ಸೈನಿಕನಲ್ಲಿ ಕಾಣುವ ದೇಶಭಕ್ತಿಯ ಒರತೆಯನ್ನು ಈ ಕ್ಲೀನರುಗಳಲ್ಲೂ ಕಾಣಬಹುದಾಗಿದೆ. ಹಾಗೆ ನೋಡಿದರೆ ಟೆಸ್ಸಿ ಸ್ಥಾಪನೆಯಾಗಿದ್ದು ೧೯೫೨ರಲ್ಲಿ. ಜಪಾನ್ ರೈಲಿನ ಏಕಸ್ವಾಮ್ಯದ ಶುಚಿಗೊಳಿಸುವ ಅಂಗಸಂಸ್ಥೆಯಾಗಿ ಆರಂಭವಾಯಿತಾದರೂ ಅದು ಅಲ್ಲಿನ ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿರುವ ಕೆಲವು ಗುಣದೋಷಗಳನ್ನು ಹೊಂದಿತ್ತು.

ಈ ಶತಮಾನದ ಆರಂಭದಲ್ಲಿ ಆ ಸಂಸ್ಥೆಯ ನೇತೃತ್ವವನ್ನು ತೆರುವ್ ಯಾಬೇ ಎಂಬಾತ ವಹಿಸಿಕೊಂಡ. ಆತ ಟೆಸ್ಸಿಯ ದಿಕ್ಕು-ದೆಸೆಯನ್ನೇ ಬದಲಿಸಿಬಿಟ್ಟ. ಯಾವುದು ಸಾಧ್ಯವಿಲ್ಲವೆಂದು ಕೈಬಿಟ್ಟಿದ್ದರೋ, ಅವೆಲ್ಲವನ್ನೂ ಸಾಧ್ಯ ಮಾಡಿ ತೋರಿಸಿದ. ಆತ ಸಿಬ್ಬಂದಿಯ ಸಮವಸ ಗಳನ್ನು ಬದಲಿಸುವುದರಿಂದ ಆರಂಭಿಸಿ ಇಡೀ ಕಾರ್ಯಸಂಸ್ಕೃತಿ ಯನ್ನೇ ಬದಲಿಸಿದ.

ಕೆಲಸದಲ್ಲಿ ಸಿಬ್ಬಂದಿಯು ಏಕಾಗ್ರತೆ ಮತ್ತು ಸಮರ್ಪಣಾ ಭಾವವನ್ನು ತಳೆಯುವಂತೆ ಮಾಡಿದ. ಇದಕ್ಕಾಗಿ ಅವರು ಎಂಥ ಪರಿಶ್ರಮ ಮತ್ತು ತ್ಯಾಗಕ್ಕಾದರೂ ಸಿದ್ಧರಾಗುವ ಮನೋಭಾವವನ್ನು ಮೂಡಿಸಿದ. ಮನೆಯಲ್ಲಿ ಹೆಂಡತಿ-ಮಕ್ಕಳು ಅನಾರೋಗ್ಯಕ್ಕೆ ತುತ್ತಾದರೂ ರಜೆ ಹಾಕದೇ ತುರ್ತು ಮತ್ತು ಅನಿವಾರ್ಯ ಸಂದರ್ಭಗಳಲ್ಲಿ ಕೆಲಸಕ್ಕೆ ಹಾಜರಾಗುವ ಜರೂರತ್ತನ್ನು ಅವರಲ್ಲಿ ತುಂಬಿದ. ಇದಕ್ಕಾಗಿ ಸಿಬ್ಬಂದಿಗೆ ನಿರಂತರವಾಗಿ ತರಬೇತಿ ನೀಡಿದ. ನಿರಂತರ ಸುಧಾರಣೆಯನ್ನು ಉತ್ತೇಜಿಸುವ ಜಪಾನಿಯರ ‘ಕೈಜನ್’ ತತ್ವವನ್ನು ಎಲ್ಲ ಸ್ತರಗಳಲ್ಲೂ ಅಳವಡಿಸಿದ. ಆ ಸಿಬ್ಬಂದಿ ತಮ್ಮ ಕೆಲಸದ ಬಗ್ಗೆ ಅಗಾಧ ಹೆಮ್ಮೆ, ಅಭಿಮಾನ ಕಾಣುವ ಮನಸ್ಥಿತಿಯನ್ನು ಬೆಳೆಸಿದ.

ಇಡೀ ಸಿಬ್ಬಂದಿ ವರ್ಗದಲ್ಲಿ ಈ ರೀತಿಯ ಜಾಗೃತಿಯನ್ನು ಮೂಡಿಸಿದ್ದು ಇನ್ನೊಂದು ಪವಾಡ. ಯಾಬೇ ಇಡೀ ಕಾಯಕ ಸಂಸ್ಕೃತಿಯನ್ನೇ ಸುಧಾರಿಸಿಬಿಟ್ಟ. ಬಿಜಿನೆಸ್ ಮ್ಯಾನೇಜ್ಮೆಂಟ್ ಕ್ಲಾಸುಗಳಲ್ಲಿ ಯಾಬೇ ಮಾಡಿದ ಪವಾಡ ಇಂದಿಗೂ ಚರ್ಚೆಯ ವಸ್ತು. ಆತ ಜಾರಿಗೆ ತಂದ ಸಣ್ಣ ಸಣ್ಣ ಸುಧಾರಣಾ ಕ್ರಮಗಳಿಂದ ಆದ ಬದಲಾವಣೆ ಮಾತ್ರ ಅಗಾಧ. ಟೆಸ್ಸಿಯ ಈ ಎಲ್ಲ ಆಡಳಿತ ಸುಧಾರಣಾ ಆವಿಷ್ಕಾರಗಳು ತಂತ್ರಜ್ಞಾನ ಅಥವಾ ಹೊಸ ಪ್ರಕ್ರಿಯೆಗಳನ್ನು ಆಧರಿಸಿಲ್ಲ ಎಂಬುದು ಗಮನಾರ್ಹ. ಇದು ಜನರು ಪರಸ್ಪರ ಹೇಗೆ ಸಂವಹನ ನಡೆಸುತ್ತಾರೆ ಮತ್ತು ಅವರೆಲ್ಲರೂ ಏನಾಗಬೇಕೆಂದು ಬಯಸುತ್ತಾರೆ ಎಂಬುದರ ತಿಳಿವಳಿಕೆಯನ್ನು ಆಧರಿಸಿದೆ.

ಇದು ಇಡೀ ಕಾರ್ಯಾಚರಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಿತು. ಇದು ವೆಚ್ಚವನ್ನು ಕಡಿಮೆ
ಮಾಡಿತು, ನೈತಿಕತೆಯನ್ನು ಎತ್ತಿ ಹಿಡಿಯಿತು, ಉತ್ತರದಾಯಿತ್ವವನ್ನು ವೃದ್ಧಿಸಿತು ಮತ್ತು ರೈಲ್ವೆ ಶುಚಿಗೊಳಿಸುವ
ಸಿಬ್ಬಂದಿಯನ್ನು ಅಂತಾರಾಷ್ಟ್ರೀಯ ಸಂವೇದನೆಯ ಪ್ರತೀಕಗಳನ್ನಾಗಿ ಪರಿವರ್ತಿಸಿತು. ಇಂದು ಶಿಕನ್ಸೆನ್ ಪ್ರಯಾ ಣಿಕರು ಆ ಸ್ವಚ್ಛತಾ ಸಿಬ್ಬಂದಿಯನ್ನು ಅತ್ಯಂತ ಗೌರವದಿಂದ ಕಾಣುತ್ತಾರೆ.

ಆ ಸಿಬ್ಬಂದಿ ಬಗ್ಗೆ ದೇಶದ ಪ್ರಧಾನಿಯೂ ಪ್ರಶಂಸೆಯ ಮಾತುಗಳನ್ನು ಹೇಳುತ್ತಾರೆ. ಬಹುರಾಷ್ಟ್ರೀಯ ಕಂಪನಿಗಳ
ಮುಖ್ಯಸ್ಥರು ‘ಏಳು ನಿಮಿಷಗಳ ಪವಾಡ’ಕ್ಕೆ ಕಾರಣರಾದ ಸಿಬ್ಬಂದಿಯ ಉದಾಹರಣೆ ಕೊಡುತ್ತಾ, ನಮಗೂ ಅಂಥ
ಸಿಬ್ಬಂದಿ ಬೇಕು ಎಂದು ಬಯಸುತ್ತಾರೆ, ತಮ್ಮ ಸಿಬ್ಬಂದಿಯಲ್ಲಿ ಅಂಥ ಕಾರ್ಯನಿಷ್ಠ ಗುಣವನ್ನು ಕಾಣಲು ಬಯಸುತ್ತಾರೆ. ಇದಕ್ಕಿಂತ ಮಿಗಿಲಾದ ಆತ್ಮತೃಪ್ತಿ ಇನ್ನೇನಿದೆ? ಜಪಾನಿನ ರೈಲು ನಿಲ್ದಾಣಗಳಲ್ಲಿ ಪ್ರತಿನಿತ್ಯ ‘ಪವಾಡ’ ಗಳು ಜರುಗುತ್ತಲೇ ಇರುತ್ತವೆ. ಪವಾಡವೇ ವಾಸ್ತವವಾಗಿದೆ.

ಇದನ್ನೂ ಓದಿ: @vishweshwarbhat