Tuesday, 26th November 2024

ಮಗಳೇಕೆ ಹೀಗೆ ಮಾಡಿದಳು ?

ವೇದಾವತಿ ಹೆಚ್.ಎಸ್.

ಸುಮಳಿಗೆ ಮದುವೆಯಾಗಿ ಇನ್ನೂ ಮೂರು ತಿಂಗಳು ಸಹ ಕಳೆದಿರಲಿಲ್ಲ. ಮೆಹಂದಿಯು ಮಾಸುವ ಮುನ್ನವೇ ಗಂಡನ
ಮನೆಯು ಸಾಕಾಯಿತೆಂದು ತನ್ನ ತೌರು ಮನೆಗೆ ಹಿಂತಿರುಗಿ ಬಂದಿದ್ದಳು. ಅವಳ ಹೆತ್ತ ತಂದೆ ತಾಯಿಯರಿಗೆ ದಿಕ್ಕೇ ತೋಚದಂತಾಯಿತು. ಮಗಳಿಗೆ ಬುದ್ಧಿ ಮಾತುಗಳನ್ನು ಹೇಳಿದರೂ ಕೇಳುವ ಸ್ಥಿತಿಯಲ್ಲಿ ಅವಳಿಲ್ಲ.

ಮದುವೆಗೆ ಮೊದಲು ಗಲ್ಲಿಗಲ್ಲಿಯಲ್ಲೂ ಸುತ್ತಿದ್ದ ಮಗಳು ಮತ್ತು ಅಳಿಯನಿಗೆ ಇಷ್ಟು ಬೇಗ ಸಂಸಾರ ಸಾಕಾಗಿ ಹೋಗಿತ್ತು. ಅವನೊಂದು ಮಾತನಾಡಿದರೆ, ಇವಳೊಂದು ಉತ್ತರ ಕೊಟ್ಟು ಮೂರು ತಿಂಗಳಿಗೆ ತಾಯಿ ಮನೆಗೆ ಮರಳಿ ಬಂದಿದ್ದಳು. ಕಾರಣ ಕೇಳಿದಾಗ ಅದೊಂದು ಸಣ್ಣ ವಿಷಯ!

ಮದುವೆಗೆ ಮೊದಲು ರಮ ಮತ್ತು ಅವಳ ಗಂಡ ಕೈ ಕೈ ಹಿಡಿದು ಊರೆಲ್ಲಾ ಸುತ್ತಿ ಜಾಲಿಯಾಗಿ ದಿನ ಕಳೆದಿದ್ದರು. ಆದರೆ ಮದುವೆಯ ನಂತರ ಹಾಗಿರಲು ಸಾಧ್ಯವಿಲ್ಲವಾಗಿತ್ತು. ಇಬ್ಬರಿಗೂ ಬೆಳಗಾದರೆ ಆಫೀಸ್ ಟೆನ್ಷನ್, ಜತೆಗೆ ಮನೆಯಲ್ಲಿ ಅಡುಗೆ ಕೆಲಸದಲ್ಲಿ ನೆರವಾಗೆಂದು ಗಂಡನ ಅಣತಿ ಪ್ರಾರಂಭವಾದಾಗ ರೆಕ್ಕೆೆ ಬಿಚ್ಚಿ ಹಾರಬೇಕೆಂದುಕೊಂಡಿದ್ದ ರಮಳಿಗೆ ಬೇಸರ ಎನಿಸಿತು.

ದಿನೇ ದಿನೇ ಗಂಡ ಹೆಂಡತಿಯ ಜಗಳ ಹೆಚ್ಚಳಗೊಂಡಿತು. ಸುಮಳ ಹೆತ್ತವರಿಗಾದರೂ ಮಗಳು ಇಷ್ಟು ಚಿಕ್ಕ ಪುಟ್ಟ ವಿಷಯಕ್ಕೆ ಗಂಡನ ಮನೆಬಿಟ್ಟು ಬರುತ್ತಾಳೆಂಬ ಕಲ್ಪನೆಯೇ ಇರಲಿಲ್ಲ. ಇದಕ್ಕೇನು ಕಾರಣ ಇರಬಹುದು ಎಂದು ರಮಳ ಹೆತ್ತವರು ಯೋಚಿಸತೊಡಗಿದರು. ಯೋಚನೆ ಹೀಗಿ ಸಾಗಿತ್ತು.

ಒಬ್ಬಳೇ ಮಗಳೆಂದು ಮುದ್ದಿನಿಂದ ಸಾಕಿದ ಪರಿಣಾಮವೆ?
*ಇಂದಿನ ಯುವ ಪೀಳಿಗೆಗೆ ಪುಸ್ತಕ ಜ್ಞಾನ ಚೆನ್ನಾಗಿದೆ, ಆದರೆ ಹೊರಗಿನ ಪ್ರಪಂಚದ ಜ್ಞಾನ ಇಲ್ಲ. ಹೊಂದಾಣಿಕೆಯನ್ನು ಕಲಿಯಲು ಅವಕಾಶ ಅವಳಿಗೆ ದೊರಕಿಲ್ಲವೆ? ಮದುವೆ ಎಂಬುದು ಹೊಂದಾಣಿಕೆಯ ತಳಹದಿಯಲ್ಲಿ ನಿಂತಿದೆ.
*ಇಂದಿನ ತಲೆಮಾರಿನ ಯುವತಿಯರಲ್ಲಿ ಸಹನೆ ಕಡಿಮೆಯಾಗಿದೆ. ಮದುವೆಗೂ ಮೊದಲಿನ ಜೀವನ ಶೈಲಿ ಬೇಕಾಬಿಟ್ಟಿಯಾಗಿದ್ದು, ಮದುವೆಯ ನಂತರ ಸಂಸಾರ ಜೀವನಕ್ಕೆ ಹೊಂದಿಕೊಂಡು ಹೋಗಲು ಸಾಧ್ಯವಿಲ್ಲವಾಗುತ್ತದೆ.
*ಚಿಕ್ಕಪುಟ್ಟ ವಿಷಯಗಳಿಗೂ ತಂದೆ ತಾಯಿಗಳು ಸಂಸಾರದ ಮಧ್ಯೆ ಹಸ್ತಕ್ಷೇಪ ಮಾಡುವುದು ಒಂದಷ್ಟು ವಿವಾಹಗಳು ಮುರಿಯಲು ಕಾರಣವಾಗುತ್ತದೆ.

*ಇಂದಿನ ಹೆಣ್ಣು ಮಕ್ಕಳು ಮದುವೆಗಿಂತಲೂ ಹೆಚ್ಚಿನ ಪ್ರಾಮುಖ್ಯತೆಯನ್ನು ತಮ್ಮ ಕೆರಿಯರ್‌ಗೆ ಕೊಡುವುದರಿಂದ ಮದುವೆ ನಂತರ ಕುಟುಂಬದ ನಿರ್ವಹಣೆ, ಅತ್ತೆ ಮನೆಯಲ್ಲಿ ಕೆಲಸ ಕಾರ್ಯಕ್ಕೆ ಸಮಯ ಮೀಸಲಿಡುವುದು ಕಷ್ಟವಾಗುತ್ತಿದೆ.

*ಇಂತಹ ಸೂಕ್ಷ್ಮ ಸನ್ನಿವೇಶಗಳನ್ನು ಪರಿಹರಿಸಲು ತಂದೆ ತಾಯಿ ತಮ್ಮ ಮಕ್ಕಳನ್ನು ಬೆಳೆಸುವಾಗ ಎಚ್ಚೆತ್ತುಕೊಳ್ಳಬೇಕು.
*ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರಿಗೂ ಮನೆಗೆಲಸವನ್ನು ಚಿಕ್ಕಂದಿಂದಲೇ ಹೇಳಿಕೊಡಬೇಕು. ಹೆಣ್ಣು ಮಕ್ಕಳು ಇಂದಿನ ಕಾಲದಲ್ಲಿ ಹೊರಗೆ ದುಡಿಯುವುದರಿಂದ ಮದುವೆಯಾದ ಮೇಲೆ ಒಬ್ಬರಿಗೊಬ್ಬರು ಮನೆಗೆಲಸದಲ್ಲಿ ನೆರವಾಗುವುದು ಒಳ್ಳೆಯದು.

*ಮಕ್ಕಳು ಹೆತ್ತವರಿಂದ ದೂರದಲ್ಲಿದ್ದರೂ ಅವರಿಗೆ ಸಂಬಂಧಗಳ ಬಗ್ಗೆ ಸಂವೇದನಾಶೀಲರಾಗಲು ಕಲಿಸಿಕೊಡಬೇಕಾಗುತ್ತದೆ. ಸಂಬಂಧಿಕರ ಮನೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಆಗಾಗ ಭಾಗವಹಿಸುವಂತೆ ಮಕ್ಕಳಿಗೆ ತಿಳಿಹೇಳಬೇಕು.

*ಮಕ್ಕಳು ಕೇಳಿದ ಎಲ್ಲಾ ವಸ್ತುಗಳನ್ನು ಕೊಡಿಸಿ ಅವರಿಗೆ ವಸ್ತುವಿನ ಬೆಲೆ ಗೊತ್ತಾಗದಂತೆ ಬೆಳಸಬಾರದು.

*ಹೆಣ್ಣು ಮಕ್ಕಳಿಗೆ ಓದಿನ ಜೊತೆಗೆ ನೌಕರಿ, ವೈವಾಹಿಕ ಜೀವನವನ್ನು ಸಮರ್ಪಕವಾಗಿ ಹೇಗೆ ನಡೆಸಿಕೊಂಡುಹೋಗಬೇಕೆಂದು ಮನವರಿಕೆ ಮಾಡಿಕೊಡಬೇಕು.

*ಅತ್ತೆ ಮಾವರಿಂದ ದೂರವಾಗಿ ಉಳಿಯುವ ಬದಲು, ಅವರೂ ತಮ್ಮೊಂದಿಗಿದ್ದರೆ ಅವರಿಂದಾಗುವ ಲಾಭಗಳ ಬಗ್ಗೆ ತಿಳಿ ಹೇಳಬೇಕು.
*ಸೊಸೆಯು ಬಂದಳೆಂದು ಅತ್ತೆಯಾದವಳು ತಕ್ಷಣ ಅಡುಗೆ ಮನೆಯ ಜವಾಬ್ದಾರಿಯನ್ನು ಸೊಸೆಗೆ ಹೊರಿಸಬಾರದು. ಅವಳಿಗೂ ಅತ್ತೆಯ ಮನೆಯಲ್ಲಿ ಹೊಂದಾಣಿಕೆ ಕಂಡುಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ.
*ಹೊಸದಾಗಿ ಮದುವೆಯಾದ ಸೊಸೆ ಮತ್ತು ಮಗ ಪರಸ್ಪರ ಅರಿತುಕೊಳ್ಳಲು, ಒಂದಷ್ಟು ಸಮಯವನ್ನು ಆ ಮನೆಯಲ್ಲಿರುವ ಹಿರಿಯರು ಅವರಿಗೆ ಕೊಡಬೇಕಾಗುತ್ತದೆ.

*ಅತ್ತೆ ಮಾವಂದಿರು, ಹಿಂದಿನ ಕಾಲವನ್ನು ಹೋಲಿಸಿಕೊಂಡು ಸೊಸೆಯನ್ನು ಕಾಣುವ ಬದಲು, ಇಂದಿನ ಕಾಲಕ್ಕೆ ತಕ್ಕಂತೆ ಜೀವನವನ್ನು ರೂಢಿಸಿಕೊಂಡರೆ ಉತ್ತಮ. ಇಂದಿನ ಆಧುನಿಕ ಸೊಸೆಯು ಸ್ವಾವಲಂಬಿಯಾಗಿರುವ ಕಾರಣದಿಂದ ಅವಳಿಗೆ ತನ್ನದೇ ಆದ ಯೋಚನೆಗಳಿರುತ್ತದೆ. ಅವಳ ವಿಚಾರಗಳಿಗೆ ಗೌರವ ನೀಡಬೇಕು.