ಚಿಕ್ಕಬಳ್ಳಾಪುರ : ಜಿಲ್ಲಾದ್ಯಂತ ಯೇಸು ಕ್ರಿಸ್ತನ ಆರಾಧನೆ ಮತ್ತು ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ಬುಧವಾರ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಪ್ರತಿ ವರ್ಷದಂತೆ ಹಬ್ಬದ ಹಿನ್ನೆಲೆಯಲ್ಲಿ ನಗರದ ಬಿ.ಬಿ.ರಸ್ತೆಯಲ್ಲಿನ ಪೆಟ್ರೋಲ್ ಬಂಕ್ ಸಮೀಪದ ಸೆಂಟ್ ಕ್ಸೇವಿಯರ್ ಪ್ರಾನ್ಸಿಸ್ ಚರ್ಚಿನ ಆವರಣದಲ್ಲಿ ಕಲಾವಿದರು ನಿರ್ಮಿಸಿದ್ದ ಕುರಿದೊಡ್ಡಿಯಲ್ಲಿ ಮಲಗಿರುವ ಬಾಲ ಯೇಸುವನ್ನು ಪ್ರತಿಷ್ಠಾಪಿಸಿ, ವಿಶೇಷ ಹೂವುಗಳಿಂದ ಅಲಂಕರಿಸಲಾಗಿತ್ತು. ತದ ನಂತರ ಶಿಲುಬೆಯೊಂದಿಗೆ ಯೇಸುವಿನ ಮೂರ್ತಿಯ ಮೆರವಣಿಗೆ ನಡೆಸಲಾಯಿತು.
ಬೆಳಗ್ಗೆಯಿಂದಲೇ ಭಕ್ತರು ಚರ್ಚುಗಳಿಗೆ ಬಂದು ಮೇಣದ ಬತ್ತಿ ಹೊತ್ತಿಸಿ, ಪ್ರಾರ್ಥಿಸಿದರು. ಪ್ರತಿ ವರ್ಷದಂತೆ ಅನ್ಯ ಧಮೀರ್ಯರು ಸಹ ಪ್ರಾರ್ಥನೆಯಲ್ಲಿ ಭಾಗವಹಿಸಿ ಭಾವೈಕ್ಯತೆ ಮೆರೆದರು. ಕೇಂದ್ರ ಬಸ್ ನಿಲ್ದಾಣದ ಸಮೀಪ ಇರುವ
ಸಿಎಸ್ಐ ಚರ್ಚಿನಲ್ಲಿ ಶಿಲುಬೆ ಮತ್ತು ಯೇಸು ಸಾರಿರುವ ಸಂದೇಶದ ಮಾಹಿತಿ ಫಲಕಗಳನ್ನು ಪ್ರದರ್ಶಿಸಲಾಯಿತು. ಯೇಸುವಿನ ಜೀವನ ಚರಿತ್ರೆಯನ್ನು ಮುನ್ನ ಮಾಡುವ ಮೂಲಕ ಅವರ ತತ್ವ ಸಂದೇಶಗಳನ್ನು ಜೀವನದಲ್ಲಿ ಪಾಲಿಸಬೇಕು ಎಂದು ಧರ್ಮ ಪಾಲಕರು ತಮ್ಮ ಸಂದೇಶದಲ್ಲಿ ಸಾರಿದರು.ಪ್ರಾರ್ಥನಾ ಮಂದಿರಗಳಲ್ಲಿ ದೀಪಗಳ ಆರಾಧನೆ ಎಲ್ಲರ ಗಮನ ಸೆಳೆಯಿತು.
ಆತಿಥ್ಯ ಭೋಜನ
ಚರ್ಚುಗಳ ಆವರಣದಲ್ಲಿ ಪ್ರಾರ್ಥನಾ ಮಂದಿರಕ್ಕೆ ಬಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದವರಿಗೆ ಕೇಕು, ಸಿಹಿ ತಿಂಡಿ ತಿನಿಸು ವಿತರಿಸಲಾಯಿತು. ಅಲ್ಲಲ್ಲಿ ಸಾಂತ ಕ್ಲಾಸ್ ವೇಷಧಾರಿಗಳು ಮಕ್ಕಳಿಗೆ ಉಡುಗೊರೆ ನೀಡಿದರು. ಅಲ್ಲದೇ ಯೇಸುವಿನ ಬಗ್ಗೆ ತಿಳಿಸುತ್ತ ಮಕ್ಕಳನ್ನು ಖುಷಿಪಡಿಸುವುದರ ಜತೆಗೆ ಹಲವರೊಂದಿಗೆ ಪೋಟೋಗಳನ್ನು ತೆಗೆಸಿ ಕೊಂಡರು. ಇನ್ನು ಕ್ರಿಸ್ಮಸ್ ಭೋಜನ ಕೂಟಗಳು ಜೋರಾಗಿ ನಡೆದವು .ಹಲವರು ತಮ್ಮ ಮನೆಗಳಿಗೆ ಬಂಧು ಬಳಗದ ಜತೆಗೆ ಗೆಳೆಯರನ್ನು ಆಹ್ವಾನಿಸಿ, ಹಬ್ಬದ ಊಟ ಉಣಬಡಿಸಿದರು.