Thursday, 9th January 2025

Wooden Chopping Board: ಮರದ ಚಾಪಿಂಗ್‌ ಬೋರ್ಡ್‌ ಬಳಸುತ್ತೀರಾ? ಇದು ತಿಳಿದಿರಲಿ!

Wooden Chopping Board

ಬೆಂಗಳೂರು: ಅಡುಗೆ ಮನೆಯಲ್ಲಿ ಹಣ್ಣು, ತರಕಾರಿ ಅಥವಾ ಏನನ್ನೇ ಕತ್ತರಿಸುವುದಕ್ಕೆ ಪ್ರಧಾನವಾಗಿ ಬೇಕಾಗುವುದು ಒಳ್ಳೆಯ ಚಾಕು ಮತ್ತು ಸರಿಯಾದ ಚಾಪಿಂಗ್‌ ಬೋರ್ಡ್‌. ಹಳೆಯ ಕಾಲದಂತೆ ಈಳಿಗೆ ಮಣೆ ಅಥವಾ ಮೆಟ್ಟುಕತ್ತಿಯನ್ನು ಈಗ ಯಾರೂ ಬಳಸುವವರಿಲ್ಲ. ಹೆಚ್ಚಿವರು ಇದನ್ನು ನೋಡಿಯೂ ಇರುವುದಿಲ್ಲ. ಕತ್ತರಿಸಲು ಹಲಗೆ ಅಥವಾ ಚಾಪಿಂಗ್‌ ಬೋರ್ಡ್‌ ಮಾತ್ರವೇ ಈಗ ಬಳಕೆಯಲ್ಲಿ ಇರುವುದು. ಮೊದಲಿನಿಂದ ಪ್ಲಾಸ್ಟಿಕ್‌ ರೀತಿಯ ಹಲಗೆಯನ್ನು ಬಳಸುತ್ತಿದ್ದ ಹೆಚ್ಚಿನವರು ಮರದ ಬೋರ್ಡ್‌ಗೆ ಬದಲಾಗಿದ್ದಾರೆ (Wooden Chopping Board). ಪ್ಲಾಸ್ಟಿಕ್‌ ಹಲಗೆಗಳನ್ನು ದೀರ್ಘ ಕಾಲ ಬಳಸುವುದರಿಂದ ತಿನ್ನುವ ಆಹಾರಕ್ಕೂ ಅದರದ್ದೇ ಅಂಶ ಸೇರುತ್ತದೆ ಎಂಬ ವಾದದಲ್ಲೂ ಹುರುಳಿಲ್ಲದಿಲ್ಲ. ಹಾಗೆಂದು ಮರದ ಹಲಗೆಗಳು ಪೂರ್ಣ ಸುರಕ್ಷಿತವೇ? ಅದರಿಂದ ಯಾವುದೇ ತೊಂದರೆ ಇಲ್ಲವೇ?

ಮರದ ಚಾಪಿಂಗ್‌ ಬೋರ್ಡ್‌ಗಳನ್ನಾದರೂ ಸರಿಯಾಗಿ ನಿರ್ವಹಿಸದಿದ್ದರೆ ತೊಂದರೆ ತಪ್ಪಿದ್ದಲ್ಲ ಎನ್ನುತ್ತಾರೆ ಆಹಾರ ವಿಜ್ಞಾನಿಗಳು. ಏನು ತೊಂದರೆಯಿದೆ ಅದರಲ್ಲಿ? ಪ್ಲಾಸ್ಟಿಕ್‌ ಅಂಶವೇನೂ ಇರುವುದಿಲ್ಲವಲ್ಲ, ಇದು ಪೂರಾ ನೈಸರ್ಗಿಕವಾದ ವಸ್ತುವೇ ತಾನೇ? ನಿಜ, ಆದರೆ ಸಮಸ್ಯೆಯ ಹೆಚ್ಚಿನಾಂಶ ಇರುವುದೇ ಅದರ ನಿರ್ವಹಣೆಯಲ್ಲಿ.

ರಂಧ್ರಗಳಿವೆ: ಮರದ ನೈಸರ್ಗಿಕ ಮೇಲ್ಮೈ ರಂಧ್ರಮಯ. ಆದರೆ ಕಣ್ಣಿಗೆ ಕಾಣುವುಂಥದ್ದಲ್ಲ, ಸೂಕ್ಷ್ಮ ರಂಧ್ರಗಳವು. ಅವುಗಳ ಮೇಲೆ ಹೆಚ್ಚಿದ ಬಹಳಷ್ಟು ಹಣ್ಣು-ತರಕಾರಿಗಳ ರಸವನ್ನು ದೀರ್ಘಕಾಲ ಅಲ್ಲಿಯೇ ಬಿಟ್ಟರೆ, ಅದನ್ನು ಹಲಗೆ ಹೀರಿಕೊಳ್ಳಬಲ್ಲದು. ಟೊಮೇಟೊ ರಸ, ಬೀಟ್‌ರೂಟ್‌ ರಸ, ಮಾವಿನ ಹಣ್ಣ ಅಥವಾ ದಾಳಿಂಬೆಯ ರಸ, ಬೆಳ್ಳುಳ್ಳಿ ಅಥವಾ ಇನ್ನಾವುದಾದರೂ ತೈಲದಂಶ ಇರುವಂಥ ವಸ್ತುಗಳನ್ನು ಹೆಚ್ಚು ಸಮಯ ಹಾಗೆಯೇ ಬಿಟ್ಟರೆ, ಅವುಗಳು ಮರದ ಮೇಲ್ಮೈಯೊಳಗೆ ಪ್ರವೇಶಿಸಬಲ್ಲವು.

ಸಮಸ್ಯೆ ಇರುವುದೇ ಇಲ್ಲಿ. ಹಾಗೆ ಹಲಗೆಯಿಂದ ಹೀರಲ್ಪಟ್ಟ ಆಹಾರದಂಶಗಳಲ್ಲಿ ಸೂಕ್ಷ್ಮಾಣು ಜೀವಿಗಳು, ರೋಗಾಣುಗಳು ಯಥೇಚ್ಛವಾಗಿ ಬೆಳೆಯುತ್ತವೆ. ಕಾರಣ, ಭಾರತದಂಥ ದೇಶಗಳ ವಾತಾವರಣದಲ್ಲಿ ಸಹಜವಾಗಿಯೇ ತೇವದಂಶ ಹೆಚ್ಚಿದೆ. ಇದು ವರ್ಷದ ಎಲ್ಲ ದಿನಗಳಲ್ಲೂ ಸೂಕ್ಷ್ಣಾಣು ಜೀವಿಗಳ ಸಂತಾನೋತ್ಪತ್ತಿಗೆ ಸೂಕ್ತ ವಾತಾವರಣವನ್ನು ಸೃಷ್ಟಿಸುತ್ತದೆ.

ಹಾಗಾಗಿ ಮರದ ಹಲಗೆಯ ಮೇಲೆ ಏನನ್ನೇ ಕತ್ತರಿಸಿದರೂ ಬಹಳ ಹೊತ್ತಿನವರೆಗೆ ಶುಚಿ ಮಾಡದೆ ಬಿಡುವಂತಿಲ್ಲ. ರಾತ್ರಿ ಒಂದು ಆಮ್ಲೆಟ್‌ಗಾಗಿ ಈರುಳ್ಳಿ, ಟೊಮೇಟೊ ಮಾತ್ರವೇ ಕತ್ತರಿಸಿದ್ದು, ಹಾಗೆಯೇ ಇರಿಸಿ ಬೆಳಗ್ಗೆ ಚಾಪಿಂಗ್‌ ಬೋರ್ಡ್‌ ಬಳಕೆಯನ್ನು ಮುಂದುವರಿಸಿದರಾಯ್ತು ಎನ್ನುವ ಆಲೋಚನೆಯಿದ್ದರೆ, ಕೆಲಸ ಕೆಡಬಹುದು.

ರೋಗಾಣುಗಳು, ಜೋಕೆ!: ಹಲಗೆಗಳ ಬಳಕೆ ಹೆಚ್ಚಿದಂತೆ ಅವುಗಳ ಮೇಲೆ ಸೂಕ್ಷ್ಮ ತರಚುಗಳು, ಗೆರೆಗಳು, ಕೊರೆದ ಗುರುತುಗಳು ಮೂಡುವುದು ಸಾಮಾನ್ಯ. ಇವುಗಳನ್ನು ಸ್ವಚ್ಛ ಮಾಡುವುದು ಸ್ವಲ್ಪ ಕಷ್ಟ. ಆದರೆ ಇವುಗಳಲ್ಲಿ ಆಹಾರದ ಅಂಶಗಳು ಹುದುಗಿ ಕೂರುವುದು ಹೊಸದಲ್ಲ. ಇಂಥ ಸಂದರ್ಭದಲ್ಲಿ ಸಾಲ್ಮೊನೆಲ್ಲಾ, ಇ-ಕೋಲಿ, ಲಿಸ್ಟೇರಿಯದಂಥ ಬ್ಯಾಕ್ಟೀರಿಯಗಳು ಬೆಳೆಯಬಹುದು. ಶಿಲೀಂಧ್ರಗಳು ಕಾಣಬಹುದು. ಇವು ಆಹಾರ ಸೇರಿದರೆ, ಅಹಾರವೇ ಕಲುಷಿತಗೊಂಡು, ಸೋಂಕು ಉಂಟಾಗಬಹುದು. ಜ್ವರ, ಹೊಟ್ಟೆನೋವು, ವಾಂತಿ, ಡಯರಿಯಾ ಇವೆಲ್ಲ ಗಂಟು ಬೀಳಬಹುದು.

ಮರದ ಚಾಪಿಂಗ್‌ ಬೋರ್ಡ್‌ಗಳನ್ನು ಖರೀದಿಸುವಾಗ, ಅವುಗಳ ಮೇಲ್ಮೈಗೆ ಯಾವುದಾದರೂ ರಾಸಾಯನಿಕಗಳನ್ನು ಬಳಿಯಲಾಗಿದೆಯೇ ಎಂಬುದನ್ನು ಪರೀಕ್ಷಿಸಿ. ಹೌದಾದರೆ, ಅಂಥವು ಬಳಕೆಗೆ ಯೋಗ್ಯ ಅಲ್ಲದೆಯೂ ಇರಬಹುದು. ಮರದ ಪುಡಿ ಅಥವಾ ಹೊಟ್ಟಿನಿಂದ ಮಾಡಿದ ಹಲಗೆಗಳಾಗಿದ್ದರೆ, ದೀರ್ಘ ಬಳಕೆಯ ನಂತರ, ಮೇಲ್ಮೈಗೆ ಹಾನಿಯಾಗಿ, ಆ ಪುಡಿಗಳು ಆಹಾರವನ್ನೂ ಸೇರಬಹುದು. ಹಾಗಾಗಿ ಹಲಗೆಗಳ ಸ್ಥಿತಿಗತಿಯನ್ನು ಆಗಾಗ ಪರಿಶೀಲಿಸಿಕೊಳ್ಳಿ.

ಯಾವುದು ಸೂಕ್ತ?: ಬಿದಿರಿನಿಂದ ಮಾಡಿದ ಚಾಪಿಂಗ್‌ ಬೋರ್ಡ್‌ಗಳು ಪರಿಸರದ ಮಿತ್ರನೂ ಹೌದು, ಬಳಕೆಗೆ ಸುರಕ್ಷಿತವೂ ಹೌದು. ಉಳಿದ ಮರದಷ್ಟು ಕ್ಷಿಪ್ರವಾಗಿ ಇದು ತೇವಾಂಶವನ್ನು ಹೀರುವುದಿಲ್ಲ. ಗ್ಲಾಸ್‌ ಮಾದರಿಯ ಬೋರ್ಡ್‌ಗಳು ಸಹ ಲಭ್ಯವಿದ್ದು, ಸ್ವಚ್ಛತೆಯನ್ನು ಸುಲಭ ಮಾಡಿವೆ. ಆದರೆ ಕೊಂಚ ನಾಜೂಕಾಗಿ ಬಳಸಬೇಕಷ್ಟೆ. ಸ್ಟೀಲಿನ ಬೋರ್ಡ್‌ಗಳು ಇತ್ತೀಚೆಗೆ ಜನಪ್ರಿಯವಾಗುತ್ತಿದ್ದು, ಎಲ್ಲ ರೀತಿಯಲ್ಲೂ ಸುರಕ್ಷಿತ ಎನಿಸಿವೆ.

ಈ ಸುದ್ದಿಯನ್ನೂ ಓದಿ: Health Tips: ಅರಶಿನವನ್ನು ದಿನಕ್ಕೆ ಎಷ್ಟು ಸೇವಿಸಬಹುದು?