ಆನ್ಲೈನ್ ತರಗತಿಗಳನ್ನು ನೋಡುತ್ತಾ, ಪಠ್ಯಕ್ರಮವನ್ನು ಕರಗತ ಮಾಡಿಕೊಳ್ಳುವುದು ಇಂದಿನ ವಿದ್ಯಾರ್ಥಿಗಳಿಗೆ ಒಂದು ಹೊಸ ಸವಾಲು. ಇವರ ಪ್ರಯತ್ನಕ್ಕೆ ಸಹಕಾರಿಯಾಗುವಂತಹ ಜಾಲತಾಣಗಳನ್ನು ಕೆಲವು ಆಸಕ್ತರು ಅಭಿವೃದ್ಧಿಪಡಿಸಿದ್ದಾರೆ. ಅಂತಹವುಗಳಲ್ಲಿ, ಫ್ರೀಗಣಿತ.ಕಾಂ ಸಹ ಒಂದು.
ಶ್ರೀರಂಜನಿ ಅಡಿಗ
ಗಣಿತವೆಂದರೆ ಹೆಚ್ಚಾಗಿ ಮಕ್ಕಳು ಕಬ್ಬಿಣದ ಕಡಲೆಯೆಂದೇ ಭಾವಿಸಿರುತ್ತಾರೆ. ಪ್ರಮೇಯಗಳು, ಸೂತ್ರಗಳು, ದಿನನಿತ್ಯದ ಬದುಕಿನ ಮೇಲಿರುವ ಸಮಸ್ಯೆಗಳನ್ನು ಗ್ರಹಿಸಿಕೊಳ್ಳಲಾಗದೆ ಗಣಿತವೆಂದರೆ ದುಃಸ್ವಪ್ನದಂತೆ ಬೆದರುತ್ತಾರೆ. ಈ ಅಕಾಡೆಮಿಕ್ ವರ್ಷದಲ್ಲಿ ಶಾಲೆಗಳು ಸರಿಯಾಗಿ ಕಾರ್ಯನಿರ್ವಹಿಸಲಾಗದೇ, ಮನೆಯ ಪಾಠವನ್ನು ಕೇಳುವಂತಹ ಪರಿಸ್ಥಿತಿ ಬಂದದ್ದು ಮಕ್ಕಳ ಪಾಲಿಗೆ ನಿಜಕ್ಕೂ ವಿಷಾದನೀಯ.
ಸಣ್ಣ ತರಗತಿಯ ಮಕ್ಕಳ ಪಾಠಗಳಿಗೆ ಹೆತ್ತವರೇ ಪರಿಹಾರ ಸೂಚಿಸುವ ಸಾಧ್ಯತೆ ಇರುವುದಾದರೂ ಹೈಸ್ಕೂಲು ಮಕ್ಕಳಿಗೆ ಗುರು ಮುಖೇನ ನೇರ ಪಾಠದ ಅವಕಾಶ ಸಿಗದೆ ಭವಿಷ್ಯ ಎನ್ನುವುದು ಡೋಲಾಯಮನ ಸ್ಥಿತಿಯತ್ತ ವಾಲುತ್ತಿದೆ. ಆನ್ಲೈನ್ ಕ್ಲಾಸ್
ನಲ್ಲಿ ಎಲ್ಲಾ ಸಮಸ್ಯೆಗಳನ್ನು ಆಲಿಸಲು, ಪರಿಹರಿಸಲು ಕಷ್ಟಸಾಧ್ಯವಾಗುತ್ತದೆ. ಆದರೆ ಕಾರಣಗಳನ್ನು ನೀಡಿ ಕಲಿಯುವಿಕೆ ನಿಲ್ಲಬಾರದು ಅಲ್ಲವೇ? ಈಗಿನ ಆನ್ಲೈನ್ ಕ್ಲಾಸುಗಳನ್ನು ಎದುರಿಸುವ ಮಕ್ಕಳನ್ನೇ ಬಂಡವಾಳವಾಗಿಸಿಕೊಂಡು ಅನೇಕ
ಆಪ್ಗಳು, ಜಾಲತಾಣಗಳು ಹುಟ್ಟಿಕೊಳ್ಳುತ್ತಿವೆಯಾದರೂ, ಅವುಗಳಲ್ಲಿ ಕೆಲವು ಉಪಕ್ರಮಗಳನ್ನು ನೋಡಿದರೆ, ಮಕ್ಕಳ ಭವಿಷ್ಯದ ಹಿತದೃಷ್ಟಿಗಿಂತ ಹಣ ಮಾಡಿಕೊಳ್ಳುವ ಗುರಿಯೇ ಮುಖ್ಯವಾದಂತೆ ಅನ್ನಿಸುತ್ತದೆ. ಕಲಿಸುವಿಕೆಯ ದೃಷ್ಟಿಯಲ್ಲಿ ಉತ್ತಮ ಎಂದೆನಿಸಿದರೂ ದುಬಾರಿ ಫೀಸುಗಳಿಂದ ಮಧ್ಯಮ ಮತ್ತು ಕೆಳಮಧ್ಯಮ ವರ್ಗದವರಿಗೆ ಇವುಗಳು ಗಗನಕುಸುಮವೇ ಸರಿ.
ಆಸಕ್ತ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ www.freeganitha.com /ganitha8910 ಎಂಬ ಜಾಲತಾಣವನ್ನು ಗಣಿತಜ್ಞ ರಾಜಶೇಖರ ಸೋಮಯಾಜಿ ಎಂಬುವವರು 8,9, 10ನೇ ತರಗತಿಯ ಮಕ್ಕಳ ಗಣಿತ ಪಾಠದ ಎನ್ ಸಿಇಆರ್ಟಿ ಕ್ರಮಕ್ಕನುಸಾರ ವಾಗಿ ಉಚಿತವಾಗಿ ಅಭಿವೃದ್ಧಿಪಡಿಸಿದ್ದಾರೆ. ಸರಕಾರಿ ಕನ್ನಡ ಮಾಧ್ಯಮದ ಶಾಲೆಗಳ ವಿದ್ಯಾರ್ಥಿಗಳಿಗೂ ಅರ್ಥವಾಗುವಂತೆ ನಿರೂಪಿಸ ಲಾಗಿದೆ. ಕನ್ನಡದ ಜೊತೆಗೆ ಇಂಗ್ಲಿಷಿನಲ್ಲಿಯೂ ಇರುವುದರಿಂದ ಮಾಧ್ಯಮ ಬದಲಾಯಿಸಿದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಿದೆ.
ಪುಸ್ತಕದಲ್ಲಿನ ಎಲ್ಲಾ ಪಾಠಗಳಲ್ಲಿನ ಎಲ್ಲಾ ಅಧ್ಯಾಯಗಳ ಸಮಸ್ಯೆಗಳಿಗೆ ನುರಿತ ಐವರು ಅಧ್ಯಾಪಕರು ಪರಿಹರಿಸಿದ್ದಾರೆ. ಪರಿಸರ ಸಂರಕ್ಷಣೆ, ನೀರಿಂಗಿಸುವಿಕೆ, ಮಿತ ಬಳಕೆ, ಮಾಹಿತಿ ಹಕ್ಕು, ಗ್ರಾಹಕರ ಹಕ್ಕು ಮುಂತಾದ ಹಲವು ಪಠ್ಯೇತರ ವಿಷಯಗಳ ಮೇಲಿನ ಪ್ರಾತ್ಯಕ್ಷಿಕೆಯ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗಾಗಿಯೇ ಗಣಿತದ ಮೇಲಿನ ಪಾಠಗಳೂ ಇವೆ. ಇವುಗಳನ್ನು ಪಿಡಿಎಫ್ ರೂಪದಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಇದು ಉಚಿತ ಎಂಬುದು ವಿಶೇಷ.
ಕೆಲವೊಮ್ಮೆ ತರಗತಿಯಲ್ಲಿ ಅರ್ಥವಾಗದ ಸಂದರ್ಭಗಳಲ್ಲಿ ಅಥವಾ ಕೇಳಲು ಸಂಕೋಚವಾದ ಪಕ್ಷದಲ್ಲಿ ಅಥವಾ ತರಗತಿಯಲ್ಲಿ
ಗೈರುಹಾಜರಾದರೆ ಸೋಮಯಾಜಿಯವರೇ ಸ್ವತಃ ಮಕ್ಕಳ ಸಮಸ್ಯೆಗಳನ್ನು ನೇರವಾಗಿ ತಾವೇ ಉತ್ತರಿಸುವ ವ್ಯವಸ್ಥೆಯನ್ನು
ಇದರಲ್ಲಿ ಮಾಡಿzರೆ. ತಮ್ಮಲ್ಲಿರುವ ಸಮಸ್ಯೆಯನ್ನು ಸೈಟಿನಲ್ಲಿ ನಮೂದಿಸಿದ ನಂತರ ಯಾವುದರ ಮುಖಾಂತರ ಪರಿಹಾರ
ನೀಡಬೇಕೆಂದು (ಫೋನ್, ಮೈಲ) ಎಂಬುದನ್ನು ಸೂಚಿಸಿದರೆ, ಮಕ್ಕಳೇ ತಿಳಿಸಿದ ಸಮಯದಲ್ಲಿ ಸಮಸ್ಯೆಗೆ ಪರಿಹಾರವನ್ನು ಚರ್ಚಿಸುತ್ತಾರೆ.
ಕೇವಲ ಮಕ್ಕಳಿಗೆ ಸಹಾಯದ ದೃಷ್ಟಿಯಿಂದ ನಿರ್ಮಿಸಿದ ಈ ಜಾಲತಾಣವನ್ನು ಸದುಪಯೋಗಗೊಳಿಸಿಕೊಂಡಾಗ ಮಾತ್ರ ಸಾರ್ಥಕ್ಯ ಲಭಿಸುವುದು ಎಂಬುದು ಸೋಮಯಾಜಿಯವರ ಕಳಕಳಿ.