Friday, 10th January 2025

Gururaj Gantihole Column: ಪಂಚಾಯತ್‌ ರಾಜ್‌ ವ್ಯವಸ್ಥೆಯ ಜೀವಾಧಾರಕ

ಗಂಟಾಘೋಷ

ಗುರುರಾಜ್‌ ಗಂಟಿಹೊಳೆ

ವಿವಿಧ ಸ್ತರದ ಪಂಚಾಯತಿಗಳು ಉತ್ತಮ ಸಾಧನೆಯನ್ನು ಮೆರೆಯಬೇಕೆಂದರೆ, ಅಲ್ಲಿನ ಜನಪ್ರತಿನಿಧಿಗಳು, ಆಡಳಿತ ವರ್ಗ ಅಷ್ಟೇ ಶ್ರಮದಿಂದ ಮತ್ತು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಉಡುಪಿ ಜಿಲ್ಲಾ ಪಂಚಾಯತಿಯು ಶಿಕ್ಷಣ, ಆರೋಗ್ಯ, ಸ್ವಚ್ಛತೆ ಮೊದಲಾದ ವಿಷಯಗಳಲ್ಲಿ ಇದೀಗ ದೇಶಕ್ಕೆ ಮಾದರಿಯಾಗಿದೆ.

ಅಧಿಕಾರ ವಿಕೇಂದ್ರಿತ ವ್ಯವಸ್ಥೆಯಲ್ಲಿ ಪಂಚಾಯ ತಿಗಳು ಮುಖ್ಯವಾಗಿರುತ್ತವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಕೆಲವು ಯೋಜನೆಗಳು ಪಂಚಾಯತಿ ಮೂಲಕವೇ ನೇರವಾಗಿ ಅನುಷ್ಠಾನಕ್ಕೆ ಬರುತ್ತವೆ. ಪಂಚಾಯತ್ ವ್ಯವಸ್ಥೆ ಸದೃಢವಾದಂತೆ ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯ, ದೇಶ ಸದೃಢವಾಗುತ್ತವೆ. ಹಿಂದೆ ಗ್ರಾಮಗಳಲ್ಲಿ ಪಂಚಾಯತಿ ಕಟ್ಟೆ ವ್ಯವಸ್ಥೆಯಿದ್ದು, ಊರಿನ ಹಿರಿಯರ ಸಮಿತಿಯು ಅಲ್ಲೇ ಬಹುಪಾಲು ಸಮಸ್ಯೆಗಳನ್ನು ಬಗೆಹರಿಸುತ್ತಿತ್ತು, ತೀರ್ಪು ನೀಡುತ್ತಿತ್ತು. ತದನಂತರ ಮಂಡಲ ಪಂಚಾಯತ್ ವ್ಯವಸ್ಥೆ ಜಾರಿಗೆ ಬಂತು. ಈಗ ಗ್ರಾಮ ಪಂಚಾಯತಿಗಳು
ಕಾರ್ಯನಿರ್ವಹಿಸುತ್ತಿದ್ದು ಅವು ಜಿಲ್ಲಾ ಪಂಚಾಯತಿಯ ನೇರ ಅಧೀನದಲ್ಲಿ ಬರುತ್ತವೆ.

ಕರ್ನಾಟಕದಲ್ಲಿ 1983ರ ಘಟ್ಟವನ್ನು ಪಂಚಾಯತ್ ರಾಜ್‌ನ ಹೊಸ ಇತಿಹಾಸದ ಯುಗ ಎಂದು ಗುರುತಿಸಲಾಗಿದೆ. ಅದು ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಮೊದಲ ಬಾರಿಗೆ ಅಧಿಕಾರ ಕಳೆದುಕೊಂಡು ಜನತಾಪಕ್ಷದ ಸರಕಾರ ಗದ್ದುಗೆ ಯೇರಿದ ಘಟ್ಟ. ಈ ಮೂಲಕ 80ರ ದಶಕದ ಮಧ್ಯದಲ್ಲಿ, ಮೊದಲ ಬಾರಿಗೆ ಅದು ‘ಸ್ಥಳೀಯ ಸರಕಾರಿ
ವ್ಯವಸ್ಥೆ’ಯನ್ನು ಅಧಿಕಾರದ ನೈಜಕೇಂದ್ರವಾಗಿ ಮಾಡಲು ದೇಶದಲ್ಲೇ ಮೊದಲ ಹೆಜ್ಜೆ ಇರಿಸಿತು. ನಂತರ ಇದನ್ನು
ಜಾರಿಗೊಳಿಸಿದ ಪಶ್ಚಿಮ ಬಂಗಾಳ ರಾಜ್ಯವು, ಪಂಚಾಯತ್ ರಾಜ್ ವ್ಯವಸ್ಥೆಯ ಮೇಲೆ ಮತ್ತು ಅಧಿಕಾರ
ವಿಕೇಂದ್ರೀಕರಣದಲ್ಲಿ ತನಗೆ ಸಂಪೂರ್ಣ ನಂಬಿಕೆಯಿದೆ ಎಂದು ಹೇಳಿತು.

ಇಂಥದೊಂದು ಕ್ರಾಂತಿಕಾರಕ ಹೆಜ್ಜೆಯಾದ ‘ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ, 1993’, ರಾಜ್ಯದಲ್ಲಿ
ಮೂರು ಹಂತದ ಆಡಳಿತ ವ್ಯವಸ್ಥೆಯಾಗಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಗ್ರಾಮ
ಪಂಚಾಯತ್ ವ್ಯವಸ್ಥೆಗಳನ್ನು ಜಾರಿಗೆ ತಂದಿತು. ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸುವುದು,
ಗ್ರಾಮೀಣ ಪ್ರದೇಶಗಳಲ್ಲಿ ಪೌರಕಾರ್ಮಿಕ ಕೆಲಸಗಳನ್ನು ಒದಗಿಸುವುದು ಮತ್ತು ಸರಕಾರದಿಂದ ನಿಯೋಜಿಸಲಾದ
ಕರ್ತವ್ಯಗಳನ್ನು ನಿರ್ವಹಿಸುವುದು ಇವುಗಳ ಹೊಣೆ. ಜಿಲ್ಲಾ ಪಂಚಾಯತ್ ಕಚೇರಿಯನ್ನು ನಿರ್ವಹಿಸಲು ರಾಜ್ಯ
ಸರಕಾರವು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ನೇಮಿಸುತ್ತದೆ. ಹೀಗೆ ನೇಮಕಗೊಂಡವರಿಗೆ ಅವರ
ಕರ್ತವ್ಯಗಳಲ್ಲಿ ನೆರವಾಗುವುದು ಜಿಲ್ಲಾ ಪಂಚಾಯತ್‌ನ ಜವಾಬ್ದಾರಿಯಾಗಿದೆ.

ಸದ್ಯ ಕರ್ನಾಟಕದಲ್ಲಿ 30 ಜಿಲ್ಲಾ ಪಂಚಾಯತ್‌ಗಳಿದ್ದು, ಇವುಗಳೊಂದಿಗೆ 176 ತಾಲೂಕು ಮತ್ತು 6025ಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳಿವೆ. ಈ ಮೂರೂ ವಿಭಿನ್ನ ಶ್ರೇಣಿಗಳ ಸಂಸ್ಥೆಗಳ ಚುನಾಯಿತ ಸದಸ್ಯರ ಕುರಿತು
ಅವಲೋಕಿಸಿದರೆ, ಗ್ರಾಮ ಪಂಚಾಯತ್‌ನಲ್ಲಿ 96090 ಮಂದಿ, ತಾಲೂಕು ಪಂಚಾಯತ್‌ನಲ್ಲಿ 3708 ಮಂದಿ
ಮತ್ತು ಜಿಲ್ಲಾ ಪಂಚಾಯತ್‌ನಲ್ಲಿ 1005 ಸದಸ್ಯರಿರುವುದು ಕಂಡುಬರುತ್ತದೆ. ಇಂಥ ಒಂದು ಬಲಿಷ್ಠ ವ್ಯವಸ್ಥೆಗೆ ಕೇಂದ್ರ ಸರಕಾರದ ಬಜೆಟ್‌ನಲ್ಲೂ ಗಣನೀಯ ಬೆಂಬಲ ಸಿಗುತ್ತಿದ್ದು, ಸುಮಾರು 2200 ಕೋಟಿ ರು.ನಷ್ಟು
ಅನುದಾನವನ್ನು ದೇಶದ ಎಲ್ಲಾ ಪಂಚಾಯತ್ ರಾಜ್ ಸಂಬಂಧಿತ ಇಲಾಖೆಗಳಿಗೆ ನೀಡಲಾಗುತ್ತಿದೆ.

ಕರ್ನಾಟಕದಲ್ಲಿ ಮೊದಲ ಬಾರಿಗೆ ಜಾರಿಯಾದ ಈ ಕಾಯ್ದೆಯು, 73ನೇ ಸಾಂವಿಧಾನಿಕ ತಿದ್ದುಪಡಿಯಾದ ನಂತರ ರಾಷ್ಟ್ರಮಟ್ಟದಲ್ಲಿ 1993ರ ಮೇ 10ರಿಂದ (ಕೆಪಿಆರ್ ಕಾಯ್ದೆ 1993) ಜಾರಿಗೆ ಬಂತು. ಡಿಜಿಟಲ್ ಭಾರತದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯು ತಂತ್ರಜ್ಞಾನ ಆಧರಿತ ಪದ್ಧತಿಯನ್ನು ಅಳವಡಿಸಿಕೊಳ್ಳುವತ್ತ ಸಾಗಿದ್ದರಿಂದ ಪಾರದರ್ಶಕತೆ, ಕಾರ್ಯಕ್ಷಮತೆಗಳೂ ಹೆಚ್ಚಾಗಿವೆ. ಇಂಥ ಐತಿಹಾಸಿಕ ಹಿನ್ನೆಲೆಯಿರುವ ಈ ವ್ಯವಸ್ಥೆಗೆ ಸೂಕ್ತ ಮತ್ತು ಪಾರದರ್ಶಕ ಆಡಳಿತದೊಂದಿಗೆ ಜನರನ್ನು ತಲುಪಲೇ ಬೇಕು ಎಂಬ ಆಸ್ಥೆಯಿರುವ ಅಧಿಕಾರಿಗಳ, ಸಮರ್ಪಣಾ ಮನೋಭಾವದ ತಂಡವೂ ಸೇರಿಕೊಂಡರೆ, ಅಸಾಧ್ಯವಾ ದುದನ್ನು ಸಾಧ್ಯವಾಗಿಸಬಹುದು. ಉಡುಪಿಯ ಜಿಲ್ಲಾ ಪಂಚಾಯತ್ ಇದಕ್ಕೆ ಸಾಕ್ಷಿಯಾಗಿದೆ.

ದೇಶದ ಸರಿಸುಮಾರು 2.5 ಲಕ್ಷ ಗ್ರಾಮ ಪಂಚಾಯತಿಗಳು, 7256 ತಾಲೂಕು ಪಂಚಾಯತಿಗಳು ಮತ್ತು 665
ಜಿಲ್ಲಾ ಪಂಚಾಯತಿಗಳನ್ನು ಗುರಿಯಾಗಿಸಿ ನಿಗದಿಪಡಿಸಲಾದ ೯ ಮಾನದಂಡಗಳ ಅಡಿ, ಉತ್ತಮ ಕಾರ್ಯ ನಿರ್ವಹಣೆ ಮೆರೆದ ಪಂಚಾಯತಿಗಳನ್ನು ಗುರುತಿಸಿ ಗೌರವಿಸ ಲಾಗಿದೆ.

ಈ ಪೈಕಿ ಉಡುಪಿಯ ಜಿಲ್ಲಾ ಪಂಚಾಯತಿ ಇದೇ ಮೊದಲ ಬಾರಿಗೆ ದೇಶದಲ್ಲೇ 3ನೇ ಸ್ಥಾನ ಪಡೆದು, ಪಂಚಾಯತ್ ರಾಜ್ ಇಲಾಖೆಯ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನವಾಗಿದೆ. ಕಳೆದ ಡಿಸೆಂಬರ್ 11ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಕೇಂದ್ರ ಪಂಚಾಯತ್ ರಾಜ್ ಸಚಿವ ರಾಜೀವ್ ರಂಜನ್ ಸಿಂಗ್‌ರ ಸಮಕ್ಷಮದಲ್ಲಿ, ಉಡುಪಿ ಜಿಲ್ಲಾ ಪಂಚಾಯತಿಗೆ ‘ನಾನಾಜಿ ದೇಶಮುಖ್ ಸರ್ವೋತ್ತಮ್ ಪಂಚಾಯತ್ ಸತತ ವಿಕಾಸ್’ ಪುರಸ್ಕಾರವನ್ನು ಪ್ರದಾನ ಮಾಡಿ, 2 ಕೋಟಿ ರು. ನಗದನ್ನೂ ನೀಡಿದ್ದಾರೆ. ಈ ವಿಷಯಗಳ ಆಧಾರದಲ್ಲಿ ಸಾಧಕ ಗ್ರಾಮ-ತಾಲೂಕು-ಜಿಲ್ಲಾ ಪಂಚಾಯತ್‌ಗಳನ್ನು
ಗುರುತಿಸಲಾಗಿದೆ: 1. ಬಡತನಮುಕ್ತ ಮತ್ತು ಜೀವನಮಟ್ಟ ಸುಧಾರಣೆ, 2. ಸ್ವಸ್ಥ, 3. ಮಕ್ಕಳಸ್ನೇಹಿ, 4 ನೀರು ನಿರ್ವಹಣೆಯಲ್ಲಿನ ಸುಸ್ಥಿರತೆ, 5. ಹಸಿರು ಮತ್ತು ಸ್ವಚ್ಛತೆ, 6. ಸ್ವಯಂಪೂರ್ಣ ಮೂಲಸೌಕರ್ಯ, 7 ಸಾಮಾಜಿಕ
ಭದ್ರತೆ, 8. ಉತ್ತಮ ಆಡಳಿತ, 9. ಮಹಿಳಾಸ್ನೇಹಿ. ಇಂಥ ಪುರಸ್ಕಾರಕ್ಕೆ ರಾಜ್ಯದ 31 ಜಿಲ್ಲೆಗಳ ಪೈಕಿ ಉಡುಪಿಯ
ಜಿಲ್ಲಾ ಪಂಚಾಯತ್ ಪಾತ್ರವಾಗಿರುವುದು ಹೆಮ್ಮೆಯ ಸಂಗತಿ.

ಈ ಗುರುತರ ಸಾಧನೆಗೆ ಮಹತ್ತರ ಕೊಡುಗೆ ನೀಡಿದ್ದು ಉಡುಪಿ ಜಿಲ್ಲಾ ಪಂಚಾಯತ್‌ನ ನಿಕಟಪೂರ್ವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಪ್ರಸನ್ನ ಅವರು. ನಮ್ಮ ಪ್ರಧಾನಿಯವರ ‘ಡಿಜಿಟಲ್ ಇಂಡಿಯಾ’ ಪರಿಕಲ್ಪನೆ ಮತ್ತು ಆಧುನಿಕ ತಂತ್ರಜ್ಞಾನಗಳ ಒತ್ತಾಸೆಯೊಂದಿಗೆ ಅಭಿವೃದ್ಧಿ ಕಾರ್ಯಕ್ರಮಗಳ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಇವರು, ಸಮರ್ಪಕ ತೆರಿಗೆ ವಸೂಲಿ, ಆನ್ ಲೈನ್ ತೆರಿಗೆ ಪಾವತಿಗೆ ಸೂಕ್ತ ಕ್ರಮ ಕೈಗೊಂಡರು.
ಮಾತ್ರವಲ್ಲದೆ ಘನತ್ಯಾಜ್ಯ ನಿರ್ವಹಣೆ ಮತ್ತು ಎಂಆರ್ ಎಫ್ ಘಟಕಗಳ ಸ್ಥಾಪನೆಯಲ್ಲೂ ಆಸಕ್ತಿ ವಹಿಸಿ ಯಶಸ್ವಿಯಾದರು. ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ‌ ‘ನೀಟ್’, ‘ಸಿಇಟಿ’ ತರಬೇತಿ ಪಡೆದು ಉತ್ತಮ ಅಂಕಗ
ಳೊಂದಿಗೆ ತೇರ್ಗಡೆ ಹೊಂದಲು ಇವರ ವಿವಿಧ ಯೋಜನೆಗಳು ನೆರವಾದವು.

ಇದೇ ವೇಳೆ, ಸಂಜೀವಿನಿ ಸಂಘಗಳ ಮೂಲಕ ‘ಹಡಿಲು ಭೂಮಿ ಕೃಷಿ’ಯಂಥ ವಿನೂತನ ಪ್ರಯತ್ನಗಳಿಂದಾಗಿ ವ್ಯಾಪಕ ಪ್ರಶಂಸೆಗೂ ಪಾತ್ರರಾದರು. ತನ್ಮೂಲಕ, ಸರಕಾರಿ ವ್ಯವಸ್ಥೆಯೂ ಒಂದು ಉತ್ತಮ ತಂಡದಂತೆ ಕೆಲಸ ಮಾಡಬಹುದು ಎಂಬುದಕ್ಕೆ ಉಡುಪಿ ಜಿಲ್ಲಾ ಪಂಚಾಯತ್ ಮಾದರಿಯಾಯಿತು ಎನ್ನಬಹುದು. 155 ಗ್ರಾಮ ಪಂಚಾಯತ್‌ಗಳನ್ನು ಒಳಗೊಂಡಿರುವ ಉಡುಪಿ ಜಿಲ್ಲಾ ಪಂಚಾಯತಿಯು, ನೀರು ಪೂರೈಕೆ ಸೇರಿದಂತೆ ಪ್ರಗತಿ ಪರಿಶೀಲನೆ, ಜಿಲ್ಲಾಧಿಕಾರಿಗಳ ಜತೆಗಿನ ಸಭೆ, ಇತರ ಇಲಾಖೆಗಳೊಂದಿಗಿನ ಸಮನ್ವಯ ಸಭೆ, ವಾರ್ಡ್ ಸಭೆ, ಗ್ರಾಮಸಭೆ, ಜಮಾಬಂದಿ ಮತ್ತು ಬಜೆಟ್ ತಯಾರಿಕೆ, ಕಾರ್ಯಕ್ರಮ ಅನುಷ್ಠಾನ, ಶಾಲಾಭಿವೃದ್ಧಿಗೆ ಪ್ರತ್ಯೇಕ ಸಮಿತಿ ರಚನೆ, ಶೈಕ್ಷಣಿಕ ಕಾರ್ಯಕ್ರಮ ಅನುಷ್ಠಾನ ಮತ್ತು ಗುಣಮಟ್ಟ ಪರಿಶೀಲನೆ, ಶಿಶು ಮತ್ತು ಗರ್ಭಿಣಿಯರ ಮರಣ ಸಂಭವಿಸದಂತೆ ನಿಗಾ ವಹಿಸುವಿಕೆ, ಅಪೌಷ್ಟಿಕತೆ ನಿವಾರಣೆ, ಸಾಂಕ್ರಾಮಿಕ ರೋಗಗಳ ಸಮರ್ಥ ನಿರ್ವಹಣೆ ಇತ್ಯಾದಿ ಕ್ರಮಗಳಿಗಾಗಿ ಈ ಪ್ರಶಸ್ತಿಯನ್ನು ಪಡೆದಿದೆ ಎಂಬುದು ಗಮನಾರ್ಹ ಸಂಗತಿ.

ಇಂಥದೊಂದು ಸುಸ್ಥಿರ ಸಾಧನೆಯಲ್ಲಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸಂಬಂಧಿತ ಎಲ್ಲಾ ಇಲಾಖೆಗಳ ಅನುಷ್ಠಾನಾಧಿಕಾರಿಗಳ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಅಭಿವೃದ್ಧಿ ಅಧಿಕಾರಿಗಳ ಮತ್ತು ಸಿಬ್ಬಂದಿ ವರ್ಗದವರ ಮಹತ್ತರ ಪಾತ್ರವಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಉಡುಪಿ ಜಿಲ್ಲಾ ಪಂಚಾಯತಿಯು ಮುಂದಿನ ಬಾರಿ ತನ್ನ ಸ್ಥಾನವನ್ನು ಇನ್ನೂ ಉತ್ತಮಪಡಿಸಿಕೊಳ್ಳಲಿ, ರಾಜ್ಯದ
ಇನ್ನಷ್ಟು ಪಂಚಾಯತಿಗಳು ಹೀಗೆಯೇ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಲಿ. ದೇಶದ ಸಂವಿಧಾನವು
ಸ್ಥಳೀಯ ಸಂಸ್ಥೆಗಳಿಗೆ ಕೊಡಮಾಡಿದ ಅಧಿಕಾರ ಹಾಗೂ ವಿಕೇಂದ್ರೀಕರಣದ ನೈಜ ಉದ್ದೇಶವು ಜನರಿಗೆ ತಲುಪಿ,
ಅದರ ಪ್ರತಿ-ಲವು ಪುರಸ್ಕಾರದ ರೂಪದಲ್ಲಿ ಸಿಗುವಂತಾದರೆ ಅದುವೇ ಸಾರ್ಥಕ ಜನಸೇವೆ, ಅಲ್ಲವೇ? ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳ ಕನಸಿನ ಕೂಸಾದ ‘ಸಮರ್ಥ ಭಾರತ, ಸದೃಢ ಭಾರತ’ವು ಆಧುನಿಕ ತಂತ್ರಜ್ಞಾನ ಗಳನ್ನು ಅಳವಡಿಸಿಕೊಂಡು ಜನರಿಗೆ ಪೂರಕವಾಗುತ್ತ ಸಾಗುವಲ್ಲಿ, ದೇಶದ ಮೂಲೆಮೂಲೆಯ ಗ್ರಾಮಗಳಿಂದ ಹಿಡಿದು ರಾಜ್ಯಗಳು ‘ವಿಕಸಿತ ದೇಶ’ದ ಕನಸಿನ ಸಸಿಗೆ ವಿಶಿಷ್ಟವಾಗಿ ನೀರೆರೆಯುತ್ತಿವೆ.

ವಿವಿಧ ಸ್ತರದ ಪಂಚಾಯತಿಗಳು ಉತ್ತಮ ಸಾಧನೆಯನ್ನು ಮೆರೆಯಬೇಕೆಂದರೆ, ಅಲ್ಲಿನ ಜನಪ್ರತಿನಿಧಿಗಳು, ಆಡಳಿತ ವರ್ಗ ಅಷ್ಟೇ ಶ್ರಮದಿಂದ ಮತ್ತು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಉಡುಪಿ ಜಿಲ್ಲಾ ಪಂಚಾ ಯತಿಯು ಶಿಕ್ಷಣ, ಆರೋಗ್ಯ, ಸ್ವಚ್ಛತೆ ಮೊದಲಾದ ವಿಷಯಗಳಲ್ಲಿ ಇದೀಗ ದೇಶಕ್ಕೆ ಮಾದರಿಯಾಗಿದೆ. ಇಂಥ ದೊಂದು ಮಾದರಿ ಸಾಧನೆಯ ಹಿಂದೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಾಂಕ ಯತ್ನವಿದೆ, ಜತೆಗೆ ಸಾರ್ವ ಜನಿಕರ ಸಹಕಾರವೂ ಇದೆ. ಯಾವುದೇ ಯೋಜನೆ, ಕಾರ್ಯಕ್ರಮದ ಅನುಷ್ಠಾನವಾದರೂ ಜನರ ಸಹಭಾಗಿತ್ವ ಚೆನ್ನಾಗಿದ್ದರೆ ಮಾತ್ರವೇ ಅದು ಯಶ ಕಾಣಲು ಸಾಧ್ಯ.

ಹೀಗಾಗಿಯೇ, ನರೇಗಾ ಯೋಜನೆಯಡಿ ಸುಮಾರು 10 ಲಕ್ಷ ಮಾನವ ದಿನಗಳ ಸೃಷ್ಟಿಯಂಥ ಸಾಧನೆಯು ಉಡುಪಿ
ಜಿಲ್ಲೆಯಲ್ಲಿ ಸಾಧ್ಯವಾಗಿದೆ. ಬೇರೆ ಜಿಲ್ಲೆಗಳಲ್ಲಿ ಜನಸಂಖ್ಯೆ ಹೆಚ್ಚಿರಬಹುದು, ಆದರೆ ಉದ್ಯೋಗ ಸೃಷ್ಟಿಯಲ್ಲಿ ಉಡುಪಿ
ಮುಂದಿದೆ. ಇದೀಗ ಕೇಂದ್ರ ಸರಕಾರದಿಂದ ದಕ್ಕಿರುವ ಪ್ರಶಸ್ತಿಯ ಕಿರೀಟವು, ಜಿಲ್ಲೆಯನ್ನು ಇನ್ನಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲು, ತನ್ಮೂಲಕ ಇತರ ಜಿಲ್ಲೆಗಳಿಗೂ ಮಾದರಿಯಾಗಲು ಸ್ಪೂರ್ತಿ ನೀಡಲಿ.

ಇದನ್ನೂ ಓದಿ: Gururaj Gantihole Column: ಸರ್ವರ್‌ ಸಮಸ್ಯೆ: ನಂಗೂ ಫ್ರೀ, ನಿಂಗೂ ಫ್ರೀ…!

Leave a Reply

Your email address will not be published. Required fields are marked *