Friday, 10th January 2025

Vaikunta Ekadashi: ಪವಿತ್ರ ವೈಕುಂಠ ಏಕಾದಶಿ, ನಾಡಿನೆಲ್ಲೆಡೆ ದೇವಾಲಯಗಳಲ್ಲಿ ಭಕ್ತಾದಿಗಳ ಸಾಗರ

vaikunta Ekadashi

ಬೆಂಗಳೂರು: ಇಂದು ಪವಿತ್ರವಾದ ವೈಕುಂಠ ಏಕಾದಶಿ (Vaikunta Ekadashi) ದಿನಾಚರಣೆ ಹಿನ್ನೆಲೆಯಲ್ಲಿ, ಖ್ಯಾತ ಮಹಾವಿಷ್ಣು ದೇವಾಲಯಗಳು (Mahavishnu Temple) ಸೇರಿದಂತೆ ನಾಡಿನ ಎಲ್ಲೆಡೆಯ ದೇವಾಲಯಗಳಿಗೆ ಇಂದು ಭಕ್ತಾದಿಗಳು (Devotees) ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡಿ ದೇವರ ದರ್ಶನ ಪಡೆದರು.

ವಿಶೇಷ ದಿನದ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಏರ್ಪಡಿಸಲಾಗಿದೆ. ಮಹಾವಿಷ್ಣು, ಶ್ರೀಕೃಷ್ಣ, ಶ್ರೀನಿವಾಸ, ನಾರಾಯಣ ದೇವಾಲಯಗಳಲ್ಲಿ ವಿಶೇಷ ವೈಕುಂಠ ದ್ವಾರಗಳನ್ನು ಸಿದ್ಧಪಡಿಸಲಾಗಿದ್ದು, ಇವುಗಳ ಮೂಲಕ ಭಕ್ತಾದಿಗಳು ಹಾದುಹೋಗಿ ಪುನೀತರಾದ ಭಾವನೆ ಅನುಭವಿಸಿದರು. ವೈಕುಂಠ ಏಕಾದಶಿಯ ಈ ಶುಭದಿನದಂದು ವೈಕುಂಠದ ದ್ವಾರ ತೆರೆದು ಮಹಾವಿಷ್ಣು ದರ್ಶನ ನೀಡುತ್ತಾನೆ ಎಂಬುದು ಆಸ್ತಿಕರ ನಂಬಿಕೆಯಾಗಿದೆ.

ಭಕ್ತಾದಿಗಳು ಭಾರಿ ಸಂಖ್ಯೆಯಲ್ಲಿ ಭೇಟಿ ನೀಡಿದ ಪರಿಣಾಮ ಹಲವು ದೇವಾಲಯಗಳಲ್ಲಿ ನೂಕುನುಗ್ಗಲು ಉಂಟಾಯಿತು. ಮುಜರಾಯಿ ಹಾಗೂ ಇತರ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ವಿಶೇಷ ವ್ಯವಸ್ಥೆ ಹಾಗೂ ವಿಶೇಷ ಹರಕೆ ಸಲ್ಲಿಕೆಗಳಿಗೆ ವ್ಯವಸ್ಥೆ ಮಾಡಲಾಗಿದೆ. ಇಸ್ಕಾನ್‌ ದೇವಾಲಯಗಳಲ್ಲಿ ವಿಶೇಷ ಭಜನೆ, ಸಂಕೀರ್ತನೆ ಹಾಗೂ ಹರಕೆ ಸಲ್ಲಿಸಲಾಯಿತು. ಇದರ ಜೊತೆಗೆ ಭಕ್ತಾದಿಗಳು ಉಪವಾಸ ವ್ರತ ಕೂಡ ಮಾಡಿದರು.

ಬೆಂಗಳೂರಿನ ಚಾಮರಾಜಪೇಟೆಯ ಕೋಟೆ ವೆಂಕಟರಮಣ ದೇವಾಲಯದಲ್ಲಿ ಬೆಳ್ಳಂಬೆಳಿಗ್ಗೆಯೇ ಸರದಿ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆದರು. ನಸುಕಿನ ಜಾವ 4 ಗಂಟೆಯಿಂದಲೇ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ಮುಂಭಾಗದ ಒಂದು ರಸ್ತೆ ಬಂದ್ ಮಾಡಿ ಭಕ್ತಾದಿಗಳಿಗೆ ಕ್ಯೂ ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿದೆ.

ಮೈಸೂರು: ಮೈಸೂರು ಮೈಸೂರು ನಗರದ ಹಲವು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಿತು. ಮೈಸೂರಿನ ಗಣಪತಿ ಆಶ್ರಮದಲ್ಲಿ ಸಂಭ್ರಮ ಮನೆ ಮಾಡಿದ್ದು, ದತ್ತ ವೆಂಕಟೇಶ್ವರ ಉತ್ಸವಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಆಶ್ರಮದ ಕಿರಿಯ ಸ್ವಾಮೀಜಿ ವಿಜಯಾನಂದ ತೀರ್ಥರು ಪೂಜೆ ಸಲ್ಲಿಸಿದರು. ವೈಕುಂಠ ದ್ವಾರದ ಮೂಲದ ದತ್ತ ಶ್ರೀನಿವಾಸನ ದರ್ಶನಕ್ಕೆ ಅವಕಾಶ ನೀಡಲಾಯಿತು.

ಮೈಸೂರಿನ ಒಂಟಿಕೊಪ್ಪಲು ಬಡಾವಣೆಯಲ್ಲಿರುವ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲೂ ಸಂಭ್ರಮ ಮನೆ ಮಾಡಿದೆ. ದೇಗುಲದ ಆವರಣದಲ್ಲಿ ಭಕ್ತರ ಪ್ರವೇಶಕ್ಕೆ ವೈಕುಂಠ ದ್ವಾರ ನಿರ್ಮಾಣ ಮಾಡಲಾಗಿದ್ದು, ಲಕ್ಷ್ಮೀ ವೆಂಕಟೇಶ್ವರ ಮೂರ್ತಿಗೆ ಅಭಿಷೇಕ ಸೇರಿ ವಿವಿಧ ಪೂಜಾ ಕೈಂಕರ್ಯ ಸಲ್ಲಿಸಲಾಗಿದೆ. ಮೈಸೂರಿನ ಇಸ್ಕಾನ್ ಸೇರಿ ಎಲ್ಲಾ ಶ್ರೀನಿವಾಸ ದೇಗುಲಗಳಲ್ಲೂ ಪೂಜೆ ಸಲ್ಲಿಸಲಾಗಿದೆ.

ಬಳ್ಳಾರಿ: ಬಳ್ಳಾರಿಯ ಎಸ್‌ಎನ್‌ ಪೇಟೆಯಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಏಕಾದಶಿ ಸಂಭ್ರಮ ಮೇಳೈಸಿತು. ಏಕಾದಶಿ ಹಿನ್ನೆಲೆ ದೇಗುಲದಲ್ಲಿ ವಿಶೇಷ ಅಲಂಕಾರ ಮಾಡಲಾಗಿದ್ದು, ಭಕ್ತರು ಸರತಿ ಸಾಲಿನಲ್ಲಿ ನಿಂತು ಶ್ರೀ ಲಕ್ಷ್ಮೀ ವೆಂಕಟೇಶ್ವರನ ದರ್ಶನ ಪಡೆದರು. ಪುಷ್ಪ ಅಲಂಕಾರ, ತುಳಸಿ ಮಾಲೆಯಿಂದ ವೆಂಕಟೇಶ್ವರ ಮೂರ್ತಿ ಕಂಗೊಳಿಸಿತು. ಭಕ್ತರಿಗೆ ಹಾಲು ಹಣ್ಣು ಪ್ರಸಾದ ವಿತರಿಸಲಾಯಿತು.

ಇದನ್ನೂ ಓದಿ: ವೈಕುಂಠ ಏಕಾದಶಿ: ವೆಂಕಟೇಶ್ವರನಿಗೆ ವಿಶೇಷಾಲಂಕಾರ

Leave a Reply

Your email address will not be published. Required fields are marked *