Friday, 10th January 2025

Girija Lokesh Birthday: ಕಿರುತೆರೆಯಲ್ಲಿ ಹವಾ ಮೂಡಿಸುತ್ತಿರುವ ಗಿರಿಜಮ್ಮ ರಂಗಭೂಮಿ ಕಲಾವಿದೆಯಾಗಿ, ನಟಿಯಾಗಿ ನಡೆದು ಬಂದ ಹಾದಿ ಇದು!

ಬೆಂಗಳೂರು: ಹಿರಿಯ ನಟಿ ಗಿರಿಜಾ ಲೋಕೇಶ್(Girija Lokesh) ಇಂದು ತಮ್ಮ ಹುಟ್ಟುಹಬ್ಬದ(Birthday) ಸಂಭ್ರಮದಲ್ಲಿದ್ದಾರೆ. ಲೋಕೇಶ್ ಕುಟುಂಬದ ಸಾಕಷ್ಟು ಅಭಿಮಾನಿಗಳು ಸಾಮಾಜಿಕ ಜಾಲತಾಣ(Social Media)ಗಳಲ್ಲಿ ಗಿರಿಜಾ ಲೋಕೇಶ್ ಅವರಿಗೆ ವಿಶ್ ಮಾಡುತ್ತಿದ್ದಾರೆ. ನಟಿ ಗಿರಿಜಾ ಲೋಕೇಶ್ ಅವರು ಜನವರಿ 10, 1951 ರಂದು ಜನಿಸಿದ್ದಾರೆ. ರಂಗಭೂಮಿ ಕಲಾವಿದರಾಗಿ, ಸಿನಿಮಾ ಲೋಕದಲ್ಲಿ ಮಿಂಚಿದ್ದಾರೆ. ಹಲವಾರು ಸಿನಿಮಾಗಳನ್ನು ಮಾಡಿದ್ದಾರೆ(Girija Lokesh Birthday).

ರಂಗಭೂಮಿಯಿಂದ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟು, ಇಂದಿಗೂ ನಟನೆಯಲ್ಲಿ ಸಕ್ರಿಯವಾಗಿದ್ದಾರೆ ಗಿರಿಜಾ ಲೋಕೇಶ್.‌ ನೂರಾರು ನಾಟಕಗಳಲ್ಲಿ ಅಭಿನಯಿಸಿದ ಗಿರಿಜಾ ಲೋಕೇಶ್‌ ಅವರು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟರು. ಸುಮಾರು 60 ವರ್ಷಗಳ ಕಾಲ ಬಣ್ಣದ ಲೋಕದಲ್ಲಿ ಮಿಂಚಿದ ಗಿರಿಜಾ ಲೋಕೇಶ್‌ ಅವರು ಇಂದಿಗೂ ನಟಿಸುತ್ತಲೇ ಇದ್ದಾರೆ. ನಟಿ ಗಿರಿಜಾ ಲೋಕೇಶ್‌ ಅವರ ಜೀವನ ಹಾಗೂ ಅವರ ಬಣ್ಣದ ಲೋಕದ ಪಯಣದ ಬಗ್ಗೆ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ಸಂಗತಿಗಳು ಇಲ್ಲಿವೆ.

ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಬೆಳೆದ ಗಿರಿಜಾ ಲೋಕೇಶ್‌ ಅವರು ಚಿಕ್ಕ ವಯಸ್ಸಿಗೆ ಕಷ್ಟದ ಜೀವನವನ್ನೂ ಎದುರಿಸಿದ್ದರು. ಕಷ್ಟ-ಸುಖ ಎರಡನ್ನೂ ಸವಿದ ಗಿರಿಜಮ್ಮನವರು ಇಂದು ಇತರರಿಗೆ ಮಾದರಿಯಾಗಿದ್ದಾರೆ.

ಗಿರಿಜಾ ಲೋಕೇಶ್‌ ಅವರ ತಂದೆ ವ್ಯಾಪಾರ ಮಾಡುತ್ತಿದ್ದರು. ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ಅವರು ಬಹಳ ಕಷ್ಟದ ದಿನಗಳನ್ನು ನೋಡಿದ್ದಾರೆ. ವ್ಯಾಪಾರದಲ್ಲಿ ನಷ್ಟವಾಗಿ ಇಡೀ ಕುಟುಂಬ ಕಷ್ಟಕ್ಕೆ ಸಿಲುಕಿತ್ತು. ಆಗ ಗಿರಿಜಾ ಅವರಿಗೆ ಕೇವಲ 14 ವರ್ಷ. ಆಗ ಹೊಟ್ಟೆ ಪಾಡಿಗಾಗಿ ರಂಗಭೂಮಿಯಲ್ಲಿ ದುಡಿಯಲು ಶುರು ಮಾಡಿದರು. ಸುಭದ್ರೆ, ದ್ರೌಪದಿ ಪಾತ್ರಗಳಲ್ಲಿ ನಟಿಸಿ ಮಿಂಚಿದರು. ನಾಟಕಗಳಲ್ಲಿ ನಟಿಸುವಾಗ ಗಿರಿಜಾ ಲೋಕೇಶ್‌ ಅವರು ತುಂಬಾ ಕಷ್ಟ ಪಟ್ಟಿದ್ದಾರೆ. ಗಿರಿಜಾ ಅವರ ತಾಯಿ ಹಾಡು ಹೇಳುವುದನ್ನು, ಡ್ಯಾನ್ಸ್‌ ಮಾಡುವುದನ್ನು ಕಲಿಸಿದರಂತೆ.

ಭರತನಾಟ್ಯದಲ್ಲಿ ಪರಿಣಿತಿ ಪಡೆದ ಗಿರಿಜಾ ಲೋಕೇಶ್‌ ಅವರು ನಟಿಸಿದ ಮೊದಲ ನಾಟಕ ‘ಸಾಮ್ರಾಟ್ ಅಶೋಕ್ ಕುಮಾರ್’. ಈ ಸಂದರ್ಭದಲ್ಲೇ ನಟ ಲೋಕೇಶ್ ಅವರ ಪರಿಚಯವಾಯಿತು. ಹಲವು ನಾಟಕಗಳಲ್ಲಿ ಜೊತೆಯಾಗಿ ನಟಿಸುತ್ತಿದ್ದ ಲೋಕೇಶರ ಜೊತೆ ಪ್ರೇಮಾಂಕುರವಾಗಿ ನಂತರ ಈ ಜೋಡಿ ಮದುವೆಯಾಯಿತು. ಈ ಮೂಲಕ ಮದುವೆಯಾದ ದಿನವೆ ‘ಕಾಕನಕೋಟೆ’ ನಾಟಕದಲ್ಲಿ ನಟಿಸಬೇಕಿತ್ತು. ಸುಬ್ಬಯ್ಯ ನಾಯ್ಡು ಕುಟುಂಬದ ಸೊಸೆಯಾದರು. ನಾಟಕಗಳಲ್ಲಿ ಮಾಡುತ್ತಾ ಬಳಿಕ ಸಿನಿಮಾ ಕ್ಷೇತ್ರಕ್ಕೂ ಈ ಜೋಡಿ ಎಂಟ್ರಿ ಕೊಟ್ಟಿತು. ಸಿನಿಮಾ ಕ್ಷೇತ್ರದಲ್ಲಿ ಲೋಕೇಶ್‌ ಅವರ ಸಾಧನೆಯ ಬಗ್ಗೆ ಮಾತನಾಡುವಂತಿಲ್ಲ. ಇಂದಿಗೂ ಜನ ಲೋಕೇಶ್‌ ಅವರನ್ನು ಮರೆತಿಲ್ಲ.

ಗಿರಿಜಾ ಲೋಕೇಶ್ ಕನ್ನಡ ಚಿತ್ರರಂಗದ ಕಲಾತ್ಮಕ ನಟಿ ಮತ್ತು ರಂಗಭೂಮಿ ಕಲಾವಿದೆ. ಇವರು ನಟಿಸಿದ ‘ಭುಜಂಗಯ್ಯನ ದಶಾವತಾರಗಳು’ ಮತ್ತು ‘ಸಿದ್ಲಿಂಗು’ ಚಿತ್ರಗಳಿಗೆ ಕರ್ನಾಟಕ ರಾಜ್ಯದ ಅತ್ತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿವೆ. ಕನ್ನಡ ಚಿತ್ರರಂಗದಲ್ಲಿ ಟಾಕಿಂಗ್ ಸ್ಟಾರ್ ಎಂದೇ ಗುರುತಿಸಿಕೊಂಡಿರುವ ಸೃಜನ್ ಲೋಕೇಶ್ ಇವರ ಮಗ. ಪುತ್ರಿ ಪೂಜಾ ಲೋಕೇಶ್ ಕೂಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದು ತಮ್ಮದೇ ಛಾಪು ಮೂಡಿಸಿದ ಕಲಾವಿದೆ.

ಚಿತ್ರರಂಗ ಮಾತ್ರವಲ್ಲದೇ ಕಿರುತೆರೆಯಲ್ಲೂ ಸಕ್ರಿಯವಾಗಿ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕ್ರೇಜಿ ಕರ್ನಲ್, ಮುತ್ತಿನ ತೋರಣ ಇವರು ನಟಿಸಿದ ಪ್ರಮುಖ ಟೆಲಿ ಸೀರಿಯಲ್‌ಗಳು. ಇಷ್ಟೇ ಅಲ್ಲದೇ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸತ್ಯ ಎಂಬ ಧಾರಾವಾಹಿಯಲ್ಲಿ ಗಿರಿಜಾ ಲೋಕೇಶ್‌ ಅವರು ನಟಿಸಿ ಮತ್ತಷ್ಟು ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಿದ್ದರು. ಇದೀಗ ನೂರು ಜನ್ಮಕ್ಕೂ ಸೀರಿಯಲ್ ನಲ್ಲಿ ಜಯಮ್ಮ ಪಾತ್ರವನ್ನು ಮಾಡುತ್ತಿದ್ದಾರೆ. ಗಿರಿಜಾ 75 ವರ್ಷ ವಯಸ್ಸಾದರೂ ಎಲ್ಲಾ ಪಾತ್ರಕ್ಕೂ ಸೈ ಎನ್ನುವ ಗಿರಿಜಮ್ಮ ಅವರು, ತುಂಬಾ ಆಕ್ಟೀವ್‌ ಆಗಿರುತ್ತಾರೆ. ಸೀರಿಯಲ್‌ ಅಷ್ಟೇ ಅಲ್ಲದೇ, ಅಡುಗೆ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಳ್ಳುತ್ತಾರೆ. ಗಿರಿಜಾ ಲೋಕೇಶ್‌ ಅವರು ತುಂಬಾ ತಮಾಷೆಯಾಗಿ, ತಾವು ನಗುತ್ತಾ ಎಲ್ಲರನ್ನೂ ನಗಿಸುತ್ತಿರುತ್ತಾರೆ.

ಈ ಸುದ್ದಿಯನ್ನು ಓದಿ: MahaKumbh 2025: ಮಹಾಕುಂಭ 2025ರಲ್ಲಿ ಭಾಗವಹಿಸುವ ‘ಅಖಾರಾಗಳು’ ಯಾವುವು? ಇದರ ಮಹತ್ವವೇನು!

Leave a Reply

Your email address will not be published. Required fields are marked *