Saturday, 11th January 2025

Vishwavani Editorial: ಆಶಾ ಕಾರ‍್ಯಕರ್ತೆಯರಲ್ಲಿ ಆಶಾವಾದ

ಕಳೆದ ಎಂಟು ವರ್ಷಗಳಿಂದ ಒಂದೇ ಬೇಡಿಕೆ ಇಟ್ಟುಕೊಂಡು ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಕೊನೆಗೂ ಒಂದು ಹಂತದ ಜಯ ಸಿಕ್ಕಿದೆ. 10000 ರು. ಮಾಸಿಕ ಗೌರವ ಧನ ನಿಗದಿ ಸೇರಿದಂತೆ ಆಶಾ ಸಂಘಟನೆಯ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರಕಾರ ತಾತ್ವಿಕ ಒಪ್ಪಿಗೆ ನೀಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ನಿಟ್ಟಿನಲ್ಲಿ ಆಶಾ ಸಂಘಟನೆ ಮುಖಂಡರ ಜತೆ ನಡೆಸಿದ ಸಂಧಾನ ಯಶಸ್ವಿಯಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯದ ನಾನಾ ಭಾಗಗಳಿಂದ ಬಂದ ಸಾವಿರಾರು ಆಶಾ ಕಾರ‍್ಯಕರ್ತೆಯರು ಕಳೆದ ಆರು ದಿನಗಳಿಂದ ಕೊರೆಯುವ ಚಳಿ ನಡುವೆಯೂ ಅನಿರ್ದಿಷ್ಟಾವಧಿ ಹೋರಾಟ
ಆರಂಭಿಸಿದ್ದರು. ಆರೋಗ್ಯ ಇಲಾಖೆಯ ಆಯುಕ್ತರಾದ ಶಿವಕುಮಾರ್ ಮತ್ತು ಹಿರಿಯ ಅಧಿಕಾರಿ ಡಾ. ಪ್ರಭುದೇವ್ ಗೌಡ ಮುಷ್ಕರ ನಡೆಸುತ್ತಿದ್ದ ಫ್ರೀಡಂ ಪಾರ್ಕ್‌ಗೆ ಭೇಟಿ ಸರಕಾರದ ನಿರ್ಧಾರವನ್ನು ತಿಳಿಸವುದರೊಂದಿಗೆ
ಮುಷ್ಕರಕ್ಕೆ ತೆರೆ ಎಳೆದಿದ್ದಾರೆ.

ಇಲಾಖೆಯ ಪ್ರಧಾನ ಕೊಂಡಿಯಾದ ಆಶಾ ಕಾರ‍್ಯಕರ್ತರನ್ನು ಆರಂಭದಲ್ಲಿ 2 ಗಂಟೆ ಕೆಲಸಕ್ಕೆಂದು ನೇಮಿಸಿಕೊಳ್ಳ ಲಾಗಿತ್ತು. ನಂತರ ಒಂದೊಂದೇ ಹೆಚ್ಚುವರಿ ಕೆಲಸಗಳೊಂದಿಗೆ 14 ಗಂಟೆಗಳ ದುಡಿಮೆ ನೀಡಲಾಗಿತ್ತು. ಆರಂಭದಲ್ಲಿ ಬಾಣಂತಿ ಮಹಿಳೆಯರನ್ನು ಆಸ್ಪತ್ರೆಗೆ ತಲುಪಿಸುವ ಕೆಲಸಕ್ಕೆಂದು ನೇಮಿಸಿಕೊಂಡು ಈಗ ಅವರಿಂದ 32 ರೀತಿಯ ಕೆಲಸಗಳನ್ನು ಮಾಡಿಸಲಾಗುತ್ತಿದೆ. ಕೆಲಸದ ಅವಧಿ ಆರು ಪಟ್ಟು ಹೆಚ್ಚಾದರೂ, ಗೌರವಧನ ಮಾತ್ರ ಹೆಚ್ಚಾಗಿಲ್ಲ ಎನ್ನುವುದು ಕಾರ‍್ಯಕರ್ತರ ಆರೋಪವಾಗಿತ್ತು.

ಬೆಲೆ ಏರಿಕೆಗಳ ಹೊಡೆತದ ನಡುವೆಯೂ ಅತೀ ಕಡಿಮೆ ಕೂಲಿಗೆ ಆಶಾ ಕಾರ್ಯಕರ್ತೆಯರು ದುಡಿಯುತ್ತಿದ್ದರು. ತಮಗೆ ನೀಡಲಾಗುತ್ತಿರುವ ಗೌರವಧನವನ್ನು 15 ಸಾವಿರ ರು.ಗಳಿಗೆ ಹೆಚ್ಚಿಸಬೇಕೆನ್ನುವುದು ಅವರ ಪ್ರಧಾನ ಬೇಡಿಕೆ ಯಾಗಿತ್ತು. ಇದೀಗ ಮಾಸಿಕ ರೂ.10000 ನಿಶ್ಚಿತ ಗೌರವಧನದ ಜೊತೆಗೆ ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ಪ್ರೋತ್ಸಾಹ ಧನ, ನಿವೃತ್ತಿ ಪರಿಹಾರ ನೀಡುವ ಕುರಿತು ಮುಂದಿನ ದಿನಗಳಲ್ಲಿ ಪರಿಶೀಲನೆ, ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ಗಾಗಿ ಆಸ್ಪತ್ರೆಯಲ್ಲಿ ದಾಖಲಾದ ಸಂದರ್ಭದಲ್ಲಿ ಮೂರು ತಿಂಗಳ ವೇತನ ಸಹಿತ ರಜೆ ಕುರಿತು ಪರಿಶೀಲನೆ ಬಗ್ಗೆ ಮುಖ್ಯ ಮಂತ್ರಿಗಳ ಸಮ್ಮುಖದಲ್ಲಿ ಜರುಗಿದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಆರೋಗ್ಯ ಮೂಲಭೂತ ಹಕ್ಕು. ಈ ಹಕ್ಕು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ದೊರಕಿಸುವಲ್ಲಿ ಆಶಾ ಕಾರ‍್ಯಕರ್ತೆ ಯರ ಪಾತ್ರ ಹಿರಿದು. ಈ ನಿಟ್ಟಿನಲ್ಲಿ ಇವರ ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಶೀಲಿಸಿ ಸರಕಾರ ಸೂಕ್ತ ನಿರ್ಧಾರಕ್ಕೆ ಬರಬೇಕಿದೆ.

ಇದನ್ನೂ ಓದಿ: Vishwavani Editorial: ಏಕಿಂಥ ಮಲತಾಯಿ ಧೋರಣೆ !

Leave a Reply

Your email address will not be published. Required fields are marked *