Saturday, 11th January 2025

Ganesh Bhat Column: ಅರ್ಧಸತ್ಯಗಳು ಸುಳ್ಳಿಗಿಂತಲೂ ಮಹಾ ಅಪಾಯಕಾರಿ

ವಿಚಾರ ವೇದಿಕೆ

ಗಣೇಶ್‌ ಭಟ್‌, ವಾರಣಾಸಿ

ಅರ್ಧಸತ್ಯಗಳ ಸಮಸ್ಯೆಯನ್ನು ನಿಭಾಯಿಸುವ ಕೆಲಸವು ಜನರಿಂದಲೇ ಆಗಬೇಕಿರುವಂಥದ್ದು. ಸುದ್ದಿಯ ಶೀರ್ಷಿಕೆ ನೋಡಿ ಸಾರಾಸಗಟು ನಿರ್ಧಾರಕ್ಕೆ ಬರುವ ಮೊದಲು ಆ ಸುದ್ದಿಯನ್ನು ಆಳವಾಗಿ ಅಧ್ಯಯನ ಮಾಡಿ ಸತ್ಯಾಸತ್ಯತೆಯನ್ನು ಅರಿಯಲು ಯತ್ನಿಸಬೇಕು. ದಾರಿ ತಪ್ಪಿಸುವ ಸುದ್ದಿಯ ಮೂಲವನ್ನು ಪ್ರಶ್ನಿಸಬೇಕು. ಸುದ್ದಿಯಲ್ಲಿ ತಪ್ಪಿಹೋಗಿರುವ ಅಂಶಗಳನ್ನು ಕಲೆ ಹಾಕಬೇಕು, ವಾಸ್ತವಿಕ ಪುರಾವೆಯನ್ನು ಒದಗಿಸಬೇಕು ಮತ್ತು ಸುಳ್ಳು ನಿರೂಪಣೆಗೆ ಸವಾಲೊಡ್ಡಬೇಕು.

ಸುಳ್ಳುಗಳನ್ನು ಹೇಗೋ ಪತ್ತೆ ಹಚ್ಚಬಹುದು, ಆದರೆ ಅರ್ಧಸತ್ಯಗಳನ್ನು ಕಂಡುಹಿಡಿಯುವುದು ಬಹಳ ಕಷ್ಟ. ಅರ್ಧಸತ್ಯಗಳು ಜನರನ್ನು ದಾರಿ ತಪ್ಪಿಸುವ ಅಪಾಯಗಳೇ ಹೆಚ್ಚು. ಅರ್ಧಸತ್ಯಗಳು ಮೇಲ್ನೋಟಕ್ಕೆ ಸತ್ಯದಂತೆಯೇ ಭಾಸವಾಗುತ್ತವೆ, ಏಕೆಂದರೆ ಇವುಗಳನ್ನು ಬಹಳ ಕುಶಲತೆಯಿಂದ ಹೊಸೆಯಲಾಗಿರುತ್ತದೆ. ಕೂಲಂಕಷವಾಗಿ ಪರಿಶೀಲಿಸಿದರೆ ಮಾತ್ರವೇ ‘ಇವು ಸತ್ಯದ ತೊಗಲನ್ನು ಹೊದ್ದಿರುವ ಸುಳ್ಳುಗಳು’ ಎಂಬುದು ಅರ್ಥವಾಗುತ್ತದೆ. ಬಹಳಷ್ಟು ಜನರು ಸುದ್ದಿಯ/ಮಾಹಿತಿಯ ಶೀರ್ಷಿಕೆಯನ್ನಷ್ಟೇ ಓದಿ ನಿರ್ದಿಷ್ಟ ಅಭಿಪ್ರಾಯಕ್ಕೆ ಬರುತ್ತಾರೆ. ಮತ್ತೆ ಕೆಲವರಲ್ಲಿ, ತಾವು ಓದಿದ ವಿಷಯವನ್ನು ವಿಮರ್ಶಿಸಿ, ಅದು ಸತ್ಯವೋ ಸುಳ್ಳೋ ಎಂದು ಗ್ರಹಿಸುವ ವ್ಯವಧಾನ ಕಡಿಮೆ. ‘ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು’ ಎಂಬ ಜಾಣನುಡಿಯಿದ್ದರೂ, ಜನರು ಸುದ್ದಿಯ ಶೀರ್ಷಿಕೆ ಯನ್ನಷ್ಟೇ ಅಥವಾ ಮೊದಲರ್ಧವನ್ನಷ್ಟೇ ನೋಡಿ ಅದೇ ಸತ್ಯವೆಂದು ನಂಬುತ್ತಾರೆ.

ಇದರಿಂದಾಗಿ ಅವರಲ್ಲಿ ತಪ್ಪುಗ್ರಹಿಕೆಗಳು ತುಂಬಿಕೊಂಡುಬಿಡುತ್ತವೆ. ಒಟ್ಟಾರೆ ಹೇಳುವುದಾದರೆ, ‘ಅರ್ಧಸತ್ಯ’ಗಳು ಸುಳ್ಳಿಗಿಂತಲೂ ಅಪಾಯಕಾರಿಯಾಗಿಬಿಡುತ್ತವೆ. ತಮಿಳುನಾಡಿನ ಪಾನಿಪುರಿ ಮಾರಾಟಗಾರನೊಬ್ಬನಿಗೆ ಜಿಎಸ್‌ಟಿ ನೋಟಿಸ್ ಬಂದ ವಿಚಾರ ಇತ್ತೀಚೆಗೆ ಎಲ್ಲಾ ಮಾಧ್ಯಮಗಳಲ್ಲೂ ವೈರಲ್ ಆಗಿತ್ತು. ಜಿಎಸ್‌ಟಿ ಸಂಬಂಧಿತ ಈ ನಡೆಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಬಹಳ ಟೀಕೆಗಳು ಹೊಮ್ಮಿದ್ದವು. ಪಾನಿಪುರಿ ಮಾರಾಟಗಾರರು ಬಹಳ ಬಡವ ರಿರುತ್ತಾರೆ ಎಂಬ ಕಲ್ಪನೆಯಲ್ಲಿ, ನೋಟಿಸ್ ಪಡೆದಾತನ ಮೇಲೆ ಅನುಕಂಪದ ಹೊಳೆಯೇ ಹರಿದಿತ್ತು. ವಾಸ್ತವವೇ ನೆಂದರೆ, ಕಳೆದೊಂದು ವರ್ಷದ ಅವಧಿಯಲ್ಲಿ ಆತನ ಬ್ಯಾಂಕ್ ಖಾತೆಗೆ ಯುಪಿಐ ಪಾವತಿ ಮೂಲಕ 40 ಲಕ್ಷ ರುಪಾಯಿಗಿಂತ ಹೆಚ್ಚು ಮೊತ್ತ ಸಂದಾಯವಾಗಿತ್ತು. ಬಹುತೇಕರಿಗೆ ಗೊತ್ತಿರುವಂತೆ, ಯುಪಿಐ ಮತ್ತು ಬ್ಯಾಂಕ್‌ ಗಳ ಮೂಲಕ ನಡೆದ ವಹಿವಾಟುಗಳು ಅಽಕೃತವಾಗಿ ದಾಖಲಾಗುತ್ತವೆ.

ಪಾನಿಪುರಿ ವ್ಯಾಪಾರಿಯ ವಿಷಯದಲ್ಲಿ ಆಗಿದ್ದೂ ಅದೇ. ಜಿಎಸ್‌ಟಿ ಕಾನೂನಿನ ಪ್ರಕಾರ, 40 ಲಕ್ಷ ರು.ವರೆಗಿನ ಸರಕು ವ್ಯವಹಾರ ಮತ್ತು 20 ಲಕ್ಷ ರು.ವರೆಗಿನ ಸೇವಾ ವ್ಯವಹಾರಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ಇರುತ್ತದೆ. 40 ಲಕ್ಷ ಕ್ಕಿಂತ ಹೆಚ್ಚು ಮೊತ್ತದ ಆರ್ಥಿಕ ವ್ಯವಹಾರಗಳು ನಡೆಯುವುದಿದ್ದರೆ ಅಂಥ ‘ಸರಕು ವ್ಯವಹಾರದ ಸಂಸ್ಥೆ’ಗಳು ಜಿಎಸ್‌ಟಿ ನೋಂದಣಿ ಮಾಡಿಸಿಕೊಳ್ಳಬೇಕು ಹಾಗೂ ನಿಗದಿತ ಜಿಎಸ್‌ಟಿ ಪಾವತಿಸಬೇಕು. ವಹಿವಾಟು 40 ಲಕ್ಷ ರು.
ಮಿತಿಯನ್ನು ದಾಟಿದಾಗ ನಿಯಮಾನುಸಾರವಾಗಿ ಕಂಪ್ಯೂಟರ್‌ನಿಂದ ಸ್ವಯಂಚಾಲಿತ ನೋಟಿಸ್ ಹೊಮ್ಮುತ್ತದೆ!

ಇದೊಂದು ಸಹಜ ಪ್ರಕ್ರಿಯೆ. ಅಲ್ಲಿಗೆ, ವಹಿವಾಟಿನ ನಿಗದಿತ ಮಿತಿಯನ್ನು ದಾಟಿದ ಪಾನಿಪುರಿ ವ್ಯಾಪಾರಿ ಜಿಎಸ್‌ಟಿ ಯನ್ನು ಪಾವತಿಸಲೇಬೇಕು. ಆದರೆ ಈ ವಿಚಾರವಾಗಿ ಪ್ರಕಟವಾದ ಸುದ್ದಿಶೀರ್ಷಿಕೆಗಳು ಸರಕಾರದ ವಿರುದ್ಧ ಕೊಂಚ ಆಕ್ರೋಶ ಮೂಡಿಸಿದ್ದಂತೂ ಸತ್ಯ.

ಹೀಗೊಬ್ಬ ವ್ಯಾಪಾರಿಗೆ ಜಿಎಸ್‌ಟಿ ನೋಟಿಸ್ ಬಂದಿರುವುದರಿಂದ, ಇನ್ನು ಮುಂದೆ ಅಂಥ ವ್ಯಾಪಾರಿಗಳೆಲ್ಲರೂ ಆನ್‌ಲೈನ್/ಯುಪಿಐ ಮೂಲಕ ಹಣ ಸ್ವೀಕರಿಸಲು ನಿರಾಕರಿಸಬಹುದು ಎಂಬ ಮಾತೂ ಕೇಳಿಬರುತ್ತಿದೆ; ಆದರೆ ಯಾರೇ ವ್ಯಾಪಾರಿ ಹಾಗೆ ನಿರಾಕರಿಸಿದಲ್ಲಿ ಅದು ಆತನ ಪಾಲಿಗೆ ನಷ್ಟದ ದಾರಿಯಾಗಬಹುದು. ಏಕೆಂದರೆ, ನಮ್ಮಲ್ಲಿ ಪ್ರತಿ ಮೂವರಲ್ಲಿ ಇಬ್ಬರಂತೂ ಯುಪಿಐ ಪಾವತಿಗೆ ಮುಂದಾಗುವವರೇ ಆಗಿರುವುದರಿಂದ, ಅಂಗಡಿ ಯಾತ ಅದನ್ನು ನಿರಾಕರಿಸಿದರೆ ಗ್ರಾಹಕನನ್ನು ಕಳೆದುಕೊಳ್ಳಬೇಕಾಗುತ್ತದೆ, ಅಷ್ಟೇ!

ಮುಕೇಶ್ ಅಂಬಾನಿ ಮಾಲೀಕತ್ವದ ‘ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್’ ಕಂಪನಿಯು ನವಿ ಮುಂಬೈ ವಿಮಾನ ನಿಲ್ದಾಣ ಸಮೀಪದ ೫೨೮೬ ಎಕರೆ ಪ್ರದೇಶವನ್ನು 2200 ಕೋಟಿ ರು.ಗಳಿಗೆ ಸ್ವಾಧೀನಪಡಿಸಿಕೊಂಡಿದೆ ಎಂಬ ಸುದ್ದಿಯು ಇತ್ತೀಚೆಗೆ ಮಾಧ್ಯಮಗಳಲ್ಲಿ ಬಂದಿತ್ತು.

ರಿಲಯನ್ಸ್ ಕಂಪನಿಯು ಕಡಿಮೆ ಮೊತ್ತಕ್ಕೆ ಇದನ್ನು ಕಬಳಿಸಿದೆ ಎಂಬ ಅರ್ಥ ಬರುವಂತೆ ಶಿರೋನಾಮೆ ನೀಡಿ ಸುದ್ದಿ ಪ್ರಕಟಿಸಿ ಕೆಲ ಮಾಧ್ಯಮಗಳು ಜನರನ್ನು ದಾರಿತಪ್ಪಿಸುವ ಕೆಲಸವನ್ನು ಮಾಡಿದವು. ಇದನ್ನು ಆಧರಿಸಿ ವಿಪಕ್ಷಗಳು ಸಾಮಾಜಿಕ ಮಾಧ್ಯಮಗಳಲ್ಲಿ, ‘ಕೇಂದ್ರ ಸರಕಾರ ಹಾಗೂ ಮಹಾರಾಷ್ಟ್ರ ರಾಜ್ಯ ಸರಕಾರ ಜತೆಗೂಡಿ ದೇಶದ ಆಸ್ತಿಯನ್ನು ಜುಜುಬಿ ಮೊತ್ತಕ್ಕೆ ಅಂಬಾನಿಗೆ ಮಾರುತ್ತಿವೆ’ ಎಂದು ಹುಯಿಲೆಬ್ಬಿಸತೊಡಗಿದವು. ಚದರಡಿಗೆ 97 ರುಪಾಯಿಗಳನ್ನು ಮಾತ್ರ ಪಡೆಯಲಾಗಿದೆ, ಇದು ‘ಕ್ರೋನಿ ಕ್ಯಾಪಿಟಲಿಸಂ’ ಎಂದೂ ದೂರಲಾಯಿತು. ಆದರೆ ಈ ಸುದ್ದಿಯನ್ನು ಸರಿಯಾಗಿ ವಿಶ್ಲೇಷಿಸಿದರೆ, ಈ ಜಾಗವನ್ನು ಅಂಬಾನಿಗೆ ಮಾರಿದ್ದು ಆನಂದ್ ಜೈನ್ ಮಾಲೀಕತ್ವದ ‘ಜೈ ಕಾರ್ಪ್’ ಎಂಬ ಖಾಸಗಿ ಸಂಸ್ಥೆಯೇ ವಿನಾ ಕೇಂದ್ರ ಅಥವಾ ರಾಜ್ಯ ಸರಕಾರಗಳಲ್ಲ ಎಂಬುದು ತಿಳಿಯುತ್ತದೆ.

ಅದಾನಿ ಸಂಸ್ಥೆಯಂತೂ ಇಂಥ ಅರ್ಧಸತ್ಯಗಳ ದಾಳಿಗೆ ಸಿಲುಕುವುದು ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದೆ. ‘ಭಾರತದ
ಕೆಲ ರಾಜ್ಯಗಳಲ್ಲಿ ಸೋಲಾರ್ ಎನರ್ಜಿ ಸಂಬಂಧಿತ ಚಟುವಟಿಕೆಗಳ ಗುತ್ತಿಗೆ ಪಡೆಯಲು ಅದಾನಿ ಸಂಸ್ಥೆಯವರು
ಆಯಾ ರಾಜ್ಯಗಳ ಸರಕಾರಿ ಅಧಿಕಾರಿಗಳಿಗೆ 265 ಮಿಲಿಯನ್ ಡಾಲರ್‌ನಷ್ಟು ಲಂಚ ನೀಡಿದ್ದಾರೆ’ ಎನ್ನಲಾದ ದೋಷಾರೋಪ ಪಟ್ಟಿಯನ್ನು ನ್ಯೂಯಾರ್ಕಿನ ಜಿಲ್ಲಾ ನ್ಯಾಯಾಲಯವೊಂದು ಕಳೆದ ನವೆಂಬರ್‌ನಲ್ಲಿ ಅಂಗೀಕರಿಸಿತು.

ಆರೋಪವು ಸಾಬೀತಾಗುವವರೆಗೂ ಸಂಸ್ಥೆಯವರನ್ನು ನಿರಪರಾಧಿಗಳೆಂದೇ ಪರಿಗಣಿಸಬೇಕೆಂದೂ ಅದೇ ಕೋರ್ಟ್
ಹೇಳಿತ್ತು. ಆದರೆ ಭಾರತದ ಒಂದಷ್ಟು ಮಾಧ್ಯಮಗಳ ಮುಖಪುಟದಲ್ಲಿ ‘ಅಮೆರಿಕದ ನ್ಯಾಯಾಲಯದಿಂದ
ಗೌತಮ್ ಅದಾನಿಯ ಮೇಲೆ ಅರೆಸ್ಟ್ ವಾರಂಟ್’ ಎಂಬರ್ಥದ ಸುದ್ದಿ ಪ್ರಕಟವಾಗಿತ್ತು. ‘ದೋಷಾರೋಪಣೆ’ಯನ್ನೇ
‘ಅರೆಸ್ಟ್ ವಾರಂಟ್’ ಎಂಬುದಾಗಿ ತಿರುಚಿ ಹರಿಬಿಡಲಾದ ಸುದ್ದಿಯಿದು. ಇದಕ್ಕೂ ಸಾಕಷ್ಟು ತಿಂಗಳು ಮೊದಲು
ಅಮೆರಿಕದ ಹಿಂಡನ್‌ಬರ್ಗ್ ಸಂಸ್ಥೆಯು ಅದಾನಿಯವರನ್ನು ಗುರಿಯಿಟ್ಟುಕೊಂಡು ಮಾಡಿದ್ದ ಆರೋಪವು ಸುಳ್ಳೆಂಬುದು ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾಬೀತಾಗಿತ್ತು. ಅಮೆರಿಕದ ಜೋ ಬೈಡನ್ ಸರಕಾರದ ಮೇಲೆ ಬಹಳ ಪ್ರಭಾವವನ್ನು ಹೊಂದಿದ್ದ ಜಾರ್ಜ್ ಸೊರೋಸ್ ಎಂಬ ಜಾಗತಿಕ ಆರ್ಥಿಕ ಭಯೋತ್ಪಾದಕನು, ನರೇಂದ್ರ ಮೋದಿ ಸರಕಾರದ ಮತ್ತು ಅದಾನಿ ಸಂಸ್ಥೆಯ ವಿರುದ್ಧ ನಿರಂತರ ಮಸಲತ್ತು ನಡೆಸುತ್ತಿರುವ ವಿಚಾರ ಗೊತ್ತಿದ್ದರೂ ಕೆಲ ಮಾಧ್ಯಮಗಳು ಅದಾನಿ ಬಗೆಗಿನ ನಕಾರಾತ್ಮಕ ವರದಿಗಳನ್ನು ಪ್ರಕಟಿಸಿದ್ದವು.

ಕ್ಯಾರಮಲ್ ಪಾಪ್‌ಕಾರ್ನ್ ಮತ್ತು ಸೆಕೆಂಡ್‌ಹ್ಯಾಂಡ್ ಕಾರುಗಳ ಮಾರಾಟದ ಮೇಲೆ ಶೇ.18ರಷ್ಟು ಜಿಎಸ್‌ಟಿ ಹೇರಲಾಗಿದೆ ಎಂದು ಇತ್ತೀಚೆಗೆ ಸುದ್ದಿಗಳು ಪ್ರಕಟವಾಗಿದ್ದುಂಟು ಮತ್ತು ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ರ ಕುರಿತು ಟೀಕೆಗಳು ಹೊಮ್ಮುವುದಕ್ಕೂ ಅವು ಕಾರಣವಾಗಿದ್ದುಂಟು. ‘ಉಪ್ಪು ಸೇರಿಸಲಾಗಿರುವ ಪಾಪ್‌ಕಾರ್ನ್ ಮೇಲೆ ಕೇವಲ ಶೇ.12ರಷ್ಟು ಜಿಎಸ್‌ಟಿ ಇರುವಾಗ, ಕ್ಯಾರಮಲ್ ಪಾಪ್‌ಕಾರ್ನ್‌ಗೆ ಶೇ.18ರಷ್ಟು ತೆರಿಗೆ ವಿಽಸಿದ್ದು ಎಷ್ಟು ಸರಿ?’ ಎಂಬ ಪ್ರಶ್ನೆ ಈ ವೇಳೆ ಉದ್ಭವಿಸಿದ್ದುಂಟು. ಆದರೆ, ಕ್ಯಾರಮಲ್ ಪಾಪ್‌ಕಾರ್ನ್‌ಗೆ ಜಿಎಸ್‌ಟಿ ನಿಯಮದ ಪ್ರಕಾರವೇ ಶೇ.18ರ ತೆರಿಗೆ ವಿಧಿಸಲಾಗಿದೆ ಎಂಬ ವಿಷಯವನ್ನು ಕೆಲ ಮಾಧ್ಯಮಗಳು ಮುಚ್ಚಿಟ್ಟಿವೆ.

ಜಿಎಸ್‌ಟಿ ನಿಯಮದಂತೆ ಹಾಲಿನಪುಡಿ, ಸಕ್ಕರೆ ಮೊದಲಾದ ಪದಾರ್ಥಗಳ ಸೇರ್ಪಡೆಯೊಂದಿಗೆ ತಯಾರಾಗುವ ಸಂಸ್ಕರಿತ ಆಹಾರವಸ್ತುಗಳು ಶೇ.18ರ ತೆರಿಗೆಗೆ ಒಳಗಾಗುತ್ತವೆ. ಕ್ಯಾರಮಲ್ ಪಾಪ್ ಕಾರ್ನ್ ಕೂಡ ಈ ವರ್ಗಕ್ಕೆ ಸೇರಿದೆ ಎಂಬುದು ಗಮನಾರ್ಹ. ಇನ್ನು, ಜನರು ವೈಯಕ್ತಿಕ ನೆಲೆಯಲ್ಲಿ ಸೆಕೆಂಡ್‌ಹ್ಯಾಂಡ್ ಕಾರುಗಳನ್ನು ಮಾರುವಾಗ ಯಾವುದೇ ಜಿಎಸ್‌ಟಿ ಹೇರಲ್ಪಡುವುದಿಲ್ಲ; ಇಂಥ ಮಾರಾಟದಲ್ಲಿ ತೊಡಗಿರುವ ಕಂಪನಿಯೊಂದು ಹಾಗೆ ಕಾರನ್ನು ಮಾರಿದಾಗ, ಗಳಿಸಿದ ಲಾಭದ ಮೇಲೆ ಶೇ.18ರ ಜಿಎಸ್‌ಟಿ ಅನ್ವಯವಾಗುತ್ತದೆ. ಕಾರಿನ ಬೆಲೆಯ ಆಧಾರದಲ್ಲಿ ಹೇರಲ್ಪಡುವ ತೆರಿಗೆಯಲ್ಲ ಇದು. ಇನ್ನು ‘ಕೆಟ್ಟ ಸಾಲ’ಗಳನ್ನು ಬ್ಯಾಂಕುಗಳು ‘ರೈಟ್-ಆಫ್’ ಮಾಡುವ ಪ್ರಕ್ರಿಯೆ ಯನ್ನೂ, ‘ಕೇಂದ್ರ ಸರಕಾರವು ಉದ್ಯಮಿಗಳ ಸಾಲವನ್ನು ಮನ್ನಾ ಮಾಡುತ್ತಿದೆ’ ಎಂದು‌ ಅಪಪ್ರಚಾರ ಮಾಡುವುದುಂಟು.

‘ನಾನ್ ಪರ್ಫಾಮಿಂಗ್ ಅಸೆಟ್’ (ಎನ್‌ಪಿಎ) ಮೇಲಿನ ಅನವಶ್ಯಕ ತೆರಿಗೆಯನ್ನು ತಪ್ಪಿಸಲಿಕ್ಕಾಗಿ ಬ್ಯಾಂಕುಗಳು ಕೆಟ್ಟ ಸಾಲವನ್ನು ತಮ್ಮ ಬ್ಯಾಲೆನ್ಸ್ ಶೀಟ್‌ನಿಂದ ಹೊರತೆಗೆದು ಪ್ರತ್ಯೇಕವಾಗಿ ತೋರಿಸುವ ಪ್ರಕ್ರಿಯೆಯನ್ನು ‘ರೈಟ್-ಆಫ್’ ಎನ್ನಲಾಗುತ್ತದೆ. ಇದು ‘ಸಾಲ ಮನ್ನಾ’ ಅಲ್ಲ. ರೈಟ್-ಆಫ್ ಆದ ಸಾಲವೂ‌ ಮರುಪಾವತಿ ಅಥವಾ ವಸೂಲಾತಿ ಯಿಂದ ವಿನಾಯಿತಿ‌ ಪಡೆಯುವುದಿಲ್ಲ; ಕೆಟ್ಟ ಸಾಲಗಳನ್ನೂ ಸರಕಾರವು ವಸೂಲಿ ಮಾಡಿಯೇ ಮಾಡುತ್ತದೆ. 2016ರಲ್ಲಿ ಸರಕಾರವು, Insolvency and Bankruptcy Code, 2016 ಎಂಬ ಕಾನೂನನ್ನು ಜಾರಿಗೆ ತಂದು, ಕೆಟ್ಟ ಸಾಲಗಾರರ ಆಸ್ತಿಯನ್ನು ಮಾರಾಟಮಾಡಿ ಅಥವಾ ಪರಭಾರೆ ಮಾಡಿ, ಸಾಲದ ಮೊತ್ತವನ್ನು ವಸೂಲಿ ಮಾಡುತ್ತಿದೆ. ಈ ಕಾನೂನಿನ ಸಹಾಯದಿಂದ ಕಳೆದ 8 ವರ್ಷಗಳಲ್ಲಿ 10 ಲಕ್ಷ ಕೋಟಿ ರುಪಾಯಿಯಷ್ಟು ಕೆಟ್ಟ ಸಾಲಗಳ ವಸೂಲಿಯಾಗಿದೆ. 2013-14ರಲ್ಲಿ ಭಾರತದ ಬ್ಯಾಂಕುಗಳ ಎನ್‌ಪಿಎ ಪ್ರಮಾಣವು ಶೇ.5.32ರಷ್ಟಿದ್ದುದು ಪ್ರಸ್ತುತ ಶೇ.2.6ಕ್ಕೆ ಇಳಿದಿದೆ. ಆದರೆ ‘ರೈಟ್ ಆಫ್’ ಪ್ರಕ್ರಿಯೆಯನ್ನು ‘ಸಾಲ ಮನ್ನಾ’ ಎಂದು ಬಿಂಬಿಸಿ ಜನರಲ್ಲಿ ಭಾರತೀಯ ಬ್ಯಾಕಿಂಗ್‌ ವ್ಯವಸ್ಥೆಯ ಬಗ್ಗೆ ಕೆಟ್ಟಭಿಪ್ರಾಯ ತರಿಸುವ ಯತ್ನಗಳಾಗುತ್ತಿವೆ.

ಇದೇ ರೀತಿಯಲ್ಲಿ, ‘ಭಾರತ ಸರಕಾರವು 2 ಟ್ರಿಲಿಯನ್ ಡಾಲರ್‌ನಷ್ಟು ಸಾಲದ ಸುಳಿಯಲ್ಲಿ ಸಿಲುಕಿದೆ’ ಎಂಬ ಸುದ್ದಿಗೆ
ಬರೋಣ. ಇಷ್ಟು ಸಾಲವಿರುವುದು ನಿಜವೇ, ಆದರೆ ಈ ಸುದ್ದಿಯ ಜತೆಗೆ ಇನ್ನೊಂದಿಷ್ಟು ವಿವರಗಳಿವೆ. ಈ ಒಂದಿಡೀ
ಮೊತ್ತಕ್ಕೆ ಕೇಂದ್ರ ಸರಕಾರವಷ್ಟೇ ಬಾಧ್ಯಸ್ಥನಲ್ಲ, ರಾಜ್ಯ ಸರಕಾರಗಳೂ ಸೇರಿವೆ. ಅಂದರೆ, ಕೇಂದ್ರ ಮತ್ತು ರಾಜ್ಯ
ಸರಕಾರಗಳು, ದೇಶಿ-ವಿದೇಶಿ ವಿತ್ತ ಸಂಸ್ಥೆಗಳಿಂದ ಮಾಡಿದ ಸಾಲಗಳು ಇದರಲ್ಲಿ ಸೇರಿವೆ. 2 ಟ್ರಿಲಿಯನ್ ಸಾಲವು
ಭಾರತದ ಪ್ರಸಕ್ತ ವಾರ್ಷಿಕ ಜಿಡಿಪಿಯ (4 ಟ್ರಿಲಿಯನ್) ಅರ್ಧದಷ್ಟು ಮಾತ್ರ ಇದೆ. ಜಪಾನ್‌ನ ಸಾಲವು, ಆ ದೇಶದ
ಜಿಡಿಪಿಗಿಂತ 2.5 ಪಟ್ಟು ಹೆಚ್ಚಿದೆ. ಅಮೆರಿಕ ಮತ್ತು ಐರೋಪ್ಯ ದೇಶಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಈ ದೇಶಗಳ ಸಾಲದ ಪರಿಸ್ಥಿತಿಯನ್ನು ಅವಲೋಕಿಸಿದರೆ ಭಾರತದ ಸಾಲವು ಒಂದು ಗಂಭೀರ ವಿಷಯವೇ ಅಲ್ಲ!

‘ಅರ್ಧಸತ್ಯಗಳ ಸಮಸ್ಯೆ’ಯನ್ನು ನಿಭಾಯಿಸುವ ಕೆಲಸವು ಜನರಿಂದಲೇ ಆಗಬೇಕಿರುವಂಥದ್ದು. ಸುದ್ದಿಯ ಶೀರ್ಷಿಕೆ
ನೋಡಿ ಸಾರಾಸಗಟು ನಿರ್ಧಾರಕ್ಕೆ ಬರುವ ಮೊದಲು ಆ ಸುದ್ದಿಯನ್ನು ಆಳವಾಗಿ ಅಧ್ಯಯನ ಮಾಡಿ ಸತ್ಯಾಸತ್ಯತೆ
ಯನ್ನು ಅರಿಯಲು ಯತ್ನಿಸಬೇಕು. ದಾರಿ ತಪ್ಪಿಸುವ ಸುದ್ದಿಯ ಮೂಲವನ್ನು ಪ್ರಶ್ನಿಸಬೇಕು. ಸುದ್ದಿಯಲ್ಲಿ ತಪ್ಪಿ ಹೋಗಿರುವ ಅಂಶಗಳನ್ನು ಕಲೆಹಾಕಬೇಕು, ವಾಸ್ತವಿಕ ಪುರಾವೆಯನ್ನು ಒದಗಿಸಬೇಕು ಮತ್ತು ಸುಳ್ಳು ನಿರೂಪಣೆಗೆ ಸವಾಲೊಡ್ಡಬೇಕು. ಹೀಗೆ ಮಾಡಿದರೆ ಮಾತ್ರವೇ ನಾವು ಅರ್ಧಸತ್ಯಗಳನ್ನು ಸಮರ್ಥವಾಗಿ ನಿಭಾಯಿಸಬಹುದು.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)

ಇದನ್ನೂ ಓದಿ: Ganesh Bhat Varanasi Column: ಪ್ರಾಚೀನ ವಸ್ತುಗಳನ್ನು ಮರಳಿ ತರುವ ತಪಸ್ಸು

Leave a Reply

Your email address will not be published. Required fields are marked *