Monday, 13th January 2025

Vishwavani Editorial: ಪ್ರಕೃತಿಯ ಎದುರು ನಿಲ್ಲಲಾದೀತೇ?

ಪ್ರಕೃತಿಯ ರುದ್ರನರ್ತನದ ಮುಂದೆ ಹುಲುಮಾನವರ ಆಟ ನಡೆಯುವುದಿಲ್ಲ ಎಂಬುದಕ್ಕೆ ಅಮೆರಿಕದಲ್ಲಿ ಅಬ್ಬರ ಮಾಡುತ್ತಿರುವ ಕಾಡ್ಗಿಚ್ಚೇ ಸಾಕ್ಷಿ. ಲಾಸ್‌ಏಂಜಲೀಸ್ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾ ಭಾಗದಲ್ಲಿ ಅಮರಿಕೊಂಡ ಅಗ್ನಿಜ್ವಾಲೆಗೆ ಇದುವರೆಗೆ 11ಕ್ಕೂ ಹೆಚ್ಚು ಜೀವಗಳ ಬಲಿಯಾಗಿದೆ.

ಲಾಸ್‌ಏಂಜಲೀಸ್ ರಾಜ್ಯವೊಂದರಲ್ಲೇ 12 ಸಾವಿರಕ್ಕೂ ಹೆಚ್ಚಿನ ಕಟ್ಟಡಗಳು ಸುಟ್ಟು ಕರಕಲಾಗಿರುವುದು, ಒಟ್ಟಾರೆ ಹಾನಿಯ ಪ್ರಮಾಣ 13 ಲಕ್ಷ ಕೋಟಿ ರು. ಮುಟ್ಟಿರುವುದು ಅಗ್ನಿಯ ರೌದ್ರತೆಗೆ ಸಾಕ್ಷಿ. ಸಾಕಷ್ಟು ವರ್ಷಗಳಿಂದ ಮಳೆಯಾಗದೆ ಗಿಡ-ಮರಗಳೆಲ್ಲ ಒಣಗಿದ್ದರಿಂದ ಬೆಂಕಿ ಹೊತ್ತಿಕೊಂಡು, ಬೀಸುಗಾಳಿಯಿಂದಾಗಿ ಜ್ವಾಲೆ ಕ್ಷಿಪ್ರವಾಗಿ ವ್ಯಾಪಿಸುತ್ತಿದೆ ಎನ್ನಲಾಗಿದೆ. ಈ ಬೆಂಕಿ ಹುಟ್ಟಿಕೊಂಡಿದ್ದಾದರೂ ಹೇಗೆ ಎಂಬುದರ ಕುರಿತು ತನಿಖೆಗೆ ಶುರುವಿಟ್ಟು ಕೊಳ್ಳಲಾಗಿದೆ ಎಂಬುದು ಲಭ್ಯ ವರ್ತಮಾನ.

ಅಮೆರಿಕ ಎಂದಾಕ್ಷಣ, ಅಭಿವೃದ್ಧಿಶೀಲ ದೇಶಗಳ ಜನರ ಮನದಲ್ಲಿ ಮೂಡುವುದು ಅದು ‘ವಿಶ್ವದ ದೊಡ್ಡಣ್ಣ’ ಎಂಬ ಭಾವ. ಎಲ್ಲ ತೆರನಾದ ಸಂಪನ್ಮೂಲಗಳು, ಸಾಧನ-ಸಲಕರಣೆಗಳಿಗೆ ಅಮೆರಿಕ ಮಡಿಲಾಗಿರುವುದರಿಂದ, ಎಂಥದೇ ವಿಪತ್ತನ್ನು ಅದು ಸಮರ್ಥವಾಗಿ ಎದುರಿಸಬಲ್ಲದು ಎಂಬುದು ಇಂಥ ಜನರ ಸರ್ವೇಸಾಮಾನ್ಯ ಗ್ರಹಿಕೆ. ಆದರೆ ಇದು ಎಲ್ಲ ಸಂದರ್ಭಗಳಲ್ಲೂ ಸತ್ಯವಾಗುವುದಿಲ್ಲ, ಅದರಲ್ಲೂ ಪ್ರಾಕೃತಿಕ ವಿಪತ್ತುಗಳ ರೌದ್ರತೆಯ ಮುಂದೆ ಎಂಥ ಬಲಿಷ್ಠರೂ ನಿಸ್ಸಹಾಯಕರಾಗಬೇಕಾಗುತ್ತದೆ ಎಂಬುದಕ್ಕೆ ಈ ದುರಂತ ಸಾಕ್ಷಿ.

ಕಾಡ್ಗಿಚ್ಚು ನಂದಿಸುವ ಕಾರ್ಯ ಸಮರೋ ಪಾದಿಯಲ್ಲಿ ನಡೆಯುತ್ತಿದ್ದರೂ, ಅದಕ್ಕೆ ಅಗತ್ಯವಿರುವ ನೀರಿನ ಕೊರತೆ
ಎದುರಾಗಿ ಈ ಕಾರ್ಯಾಚರಣೆಗೆ ಹಿನ್ನಡೆಯಾಗಿದ್ದು ಈ ಮಾತಿಗೆ ಪುಷ್ಟಿ ನೀಡುತ್ತದೆ. ಒಂದೆಡೆ ಜನರ ಮತ್ತು ಅವರ ಆಸ್ತಿಪಾಸ್ತಿಗಳ ಸಂರಕ್ಷಣೆಗೆ ಆಳುಗ ವ್ಯವಸ್ಥೆಯು ಹೆಣಗುತ್ತಿದ್ದರೆ, ಮತ್ತೊಂದೆಡೆ ಕಾಡ್ಗಿಚ್ಚಿನಿಂದಾಗಿ ಸ್ಥಳಾಂತರ ಗೊಳ್ಳಬೇಕಾದವರ ಮನೆಗೆ ಲೂಟಿಕೋರರು ನುಗ್ಗಿ ಕೈಗೆ ಸಿಕ್ಕಿದ್ದನ್ನು ದೋಚಿದ ಘಟನೆಯೂ ವರದಿಯಾಗಿದೆ. ‘ಬೆಂದ ಮನೆಯಲ್ಲಿ ಗಳ ಹಿರಿಯುವವರು’ ಎಂಬ ಜಾಣನುಡಿ ಹುಟ್ಟಿಕೊಂಡಿದ್ದು ಇಂಥವರನ್ನು ನೋಡಿಯೇ ಇರಬೇಕು.

ಕೋವಿಡ್ ಸಮಯದಲ್ಲಿ ಏನೇನೋ ಖರೀದಿಯ ಹಣೆಪಟ್ಟಿಯಡಿ ಲೂಟಿ ನಡೆಸಿದ ಕಿಡಿಗೇಡಿಗಳಿಗೂ ಅನ್ವಯ ವಾಗುವ ಮಾತಿದು!

ಇದನ್ನೂ ಓದಿ: Vishwavani Editorial: ನವಸಂಕಲ್ಪದ ಪರ್ವಕಾಲ ವಾಗಲಿ

Leave a Reply

Your email address will not be published. Required fields are marked *