Sunday, 24th November 2024

ಎರಡನೆ ಹಂತದ ಗ್ರಾಮ ಪಂಚಾಯಿತಿ ಚುನಾವಣೆ: ಮತದಾನಕ್ಕೆ ಕ್ಷಣಗಣನೆ

ಕೆಲವು ಗ್ರಾಪಂಗಳಲ್ಲಿ ಮತ ಹಾಕದಂತೆ ತಡೆಯುವ ಪ್ರಯತ್ನ

ಮಹಿಳೆಯರಿಗೆ ಮೂಗುಬೊಟ್ಟು, ಸೀರೆ ಮತ್ತಿತರ ಆಮಿಷ

ಪಟ್ಟಣ ಪ್ರದೇಶಗಳಿಗೆ ಹೊಂದಿಕೊಂಡಂತಿರುವ ಗ್ರಾಪಂಗಳಲ್ಲಿ ಚುನಾವಣೆ ಕಾವು

ಬೆಂಗಳೂರು: ಎರಡನೆ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹಣ, ಹೆಂಡದ ಹೊಳೆಯೇ ಹರಿಯುತ್ತಿದೆ. ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಮತದಾರರ ಮನವೊಲಿಕೆ ಮತ್ತಷ್ಟು ತೀವ್ರಗೊಂಡಿದೆ.

ಮಹಿಳೆಯರಿಗೆ ಮೂಗುಬೊಟ್ಟು, ಸೀರೆ ಮತ್ತಿತರ ಆಮಿಷಗಳನ್ನು ಒಡ್ಡಿ ಮತಗಳಿಸುವ ತಂತ್ರಗಳನ್ನು ಅಭ್ಯರ್ಥಿಗಳು ಮಾಡು ತ್ತಿದ್ದಾರೆ.ಎಣ್ಣೆ, ಕೋಳಿ ಹಾಗೂ ಹಣ ನೀಡಿ ಮತದ ಖಾತ್ರಿ ಮಾಡಿಕೊಳ್ಳುವ ಕಾರ್ಯಾಚರಣೆ ತಡರಾತ್ರಿವರೆಗೂ ನಡೆದಿದೆ.

ತಮ್ಮ ಎದುರಾಳಿಗೆ ಹೆಚ್ಚು ಮತಗಳು ಬಂದರೆ ತಾವು ಸೋಲುವುದು ಗ್ಯಾರಂಟಿ ಎಂಬ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ಕೆಲವು ಗ್ರಾಪಂಗಳಲ್ಲಿ ಮತ ಹಾಕದಂತೆ ತಡೆಯುವ ಪ್ರಯತ್ನಗಳು ನಡೆದಿವೆ.

ಹಾಸನ ಜಿಲ್ಲೆಯ ಕೆಲವು ಗ್ರಾಪಂಗಳಲ್ಲಿ ಚಿನ್ನದ ಮೂಗುಬೊಟ್ಟು ನೀಡುವ ಆಮಿಷ ಒಡ್ಡಲಾಗಿದೆ. ನೂರಾರು ಚಿನ್ನದ ಮೂಗು ಬೊಟ್ಟು ಖರೀದಿಸಿರುವ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮೂಗುಬೊಟ್ಟು ನೀಡಿ ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಪಟ್ಟಣ ಪ್ರದೇಶಗಳಿಗೆ ಹೊಂದಿಕೊಂಡಂತಿರುವ ಗ್ರಾಪಂಗಳಲ್ಲಿ ಚುನಾವಣೆ ಕಾವು ಜೋರಾಗಿದೆ.

ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ಧಾರವಾಡ, ಬೆಳಗಾವಿ, ಹುಬ್ಬಳ್ಳಿ ಮುಂತಾದ ಪಟ್ಟಣ ಪ್ರದೇಶಗಳಲ್ಲಿರುವ ಗ್ರಾಪಂಗಳಲ್ಲಿ ಚುನಾವಣಾ ಆರ್ಭಟ ಜೋರಾಗಿದ್ದು, ಮತದಾರರ ಮನವೊಲಿಕೆಗೆ ಬಾಡೂಟಗಳನ್ನು ಆಯೋಜಿಸಿರುವುದು ಕಂಡುಬಂದಿದೆ.

ನಾಳೆ ನಡೆಯಲಿರುವ ಎರಡನೆ ಹಂತದ ಗ್ರಾಪಂ ಚುನಾವಣೆಗೆ ಆಯೋಗ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಮತಪೆಟ್ಟಿಗೆ, ಬ್ಯಾಲೆಟ್ ಪೇಪರ್, ಮತ್ತಿತರ ಚುನಾವಣಾ ಪರಿಕರಗಳೊಂದಿಗೆ ಮತಗಟ್ಟೆಗಳಿಗೆ ಚುನಾವಣಾ ಸಿಬ್ಬಂದಿ ತೆರಳಿದರು. 109 ತಾಲ್ಲೂಕುಗಳ 2709 ಗ್ರಾಪಂಗಳ 39,378 ಸದಸ್ಯ ಸ್ಥಾನಗಳಿಗೆ ನಾಳೆ ಚುನಾವಣೆ ನಡೆಯಲಿದ್ದು, ಮತಗಟ್ಟೆ ಸಿಬ್ಬಂದಿ ಇಂದು ಚುನಾವಣೆ ನಡೆಯುವ ಗ್ರಾಮಗಳಿಗೆ ಮತಪೆಟ್ಟಿಗೆಗಳನ್ನು ಹಿಡಿದು ಹೊರಟರು.

ಮೊದಲ ಹಂತದ ಚುನಾವಣೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಯಶಸ್ವಿಯಾಗಿ ಮುಗಿದಿದ್ದು, ಎರಡನೆ ಹಂತದ ಚುನಾವಣೆಯನ್ನು ಯಶಸ್ವಿಯಾಗಿ ನಿರ್ವಹಿಸಲು ಆಯೋಗ ಎಲ್ಲ ಕ್ರಮಗಳನ್ನೂ ಕೈಗೊಂಡಿದೆ.

ಬೀದರ್ ಜಿಲ್ಲೆಯಲ್ಲಿ ಮಾತ್ರ ವಿದ್ಯುನ್ಮಾನ ಮತಯಂತ್ರ ಬಳಕೆಯಾಗುತ್ತಿದ್ದು, ಉಳಿದೆಲ್ಲೆಡೆ ಬ್ಯಾಲೆಟ್ ಪೇಪರ್ ಮೂಲಕ ಮತ ದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದ್ದು, ಕೊರೊನಾ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲ ಮತಗಟ್ಟೆಗಳ ಬಳಿ ಸ್ಯಾನಿಟೈಜರ್ ಇಡಲಾಗಿದೆ. ಮತದಾನ ಮಾಡಲು ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರಬೇಕು. ಸ್ಯಾನಿಟೈಜರ್‍ನಿಂದ ಕೈ ತೊಳೆದು ಒಳಗೆ ಹೋಗಬೇಕು.