Thursday, 31st October 2024

ಮತದಾರರಿಗೆ ಹಣ, ಮದ್ಯ, ಬಳುವಳಿಗಳ ಮಹಾಪೂರ

ಶೇಷಗಿರಿಹಳ್ಳಿಯಲ್ಲಿ ಮತದಾರರಿಗೆ ತಲಾ 20 ಸಾವಿರ ರು.

ಎಗ್ಗಿಲ್ಲದೆ ಹಂಚಿದ ಅಭ್ಯರ್ಥಿಗಳು, ಅಧಿಕಾರಿಗಳ ನಿರ್ಲಕ್ಷ್ಯ 

ಮನೆಗಳ ಕದ ಹಾಕದೆ, ಕಾದು ಕುಳಿತಿದ್ದರು ಮತದಾರರು

ಮತ್ತೀಕೆರೆ ಜಯರಾಮ್

ಮಂಡ್ಯ / ರಾಮನಗರ : ಗ್ರಾಮ ಪಂಚಾಯಿತಿಯ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಮತದಾರರ ಮನವೊಲಿಕೆಗೆ ಹುರಿಯಾಳು ಗಳು ಮತ್ತು ಬೆಂಬಲಿಗರು ನಾನಾ ರೀತಿಯ ಕಸರತ್ತು ನಡೆಸಿದ್ದಾರೆ. ಚುನಾವಣಾ ಆಯೋಗದ ನಿರ್ಲಕ್ಷ್ಯದ ಪರಿಣಾಮ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹಣ, ಮದ್ಯ, ಬಳುವಳಿಗಳ ಮಹಾಪೂರವೇ ಹರಿದಿದೆ.

ರಾಜ್ಯದಲ್ಲೇ ಅತಿ ಶ್ರೀಮಂತ ಎನಿಸಿರುವ ಶೇಷಗಿರಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮತದಾರರಿಗೆ ಎರಡೂ ಸಿಂಡಿಕೇಟ್‌ಗಳಿAದ ತಲಾ 10 ಸಾವಿರ ರು. ನಗದು, ಬಳುವಳಿ ಹಂಚಿಕೆಯಾಗಿದೆ. ಮಂಚನಾಯಕನಹಳ್ಳಿ ಸೇರಿದಂತೆ ಬಿಡದಿ ಆಸುಪಾಸಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಭಾರಿ ಮೊತ್ತದ ಹಣ, ಮದ್ಯ, ಬಳುವಳಿಗಳ ಹಂಚಿಕೆ ನಡೆದಿದೆ.

ಶೇಷಗಿರಿಹಳ್ಳಿಯ ಮತಕ್ಷೇತ್ರದಲ್ಲಿ ಮೂರು ಸ್ಥಾನಗಳಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತ ಸಿಂಡಿಕೇಟ್‌ಗಳು ಚುನಾವಣೆ ಗೆಲ್ಲಲು ತಲಾ ಒಂದು ಕೋಟಿ ರು. ಹಂಚಿವೆ. ಉಳಿದೆಡೆ ಪ್ರತಿ ಮತಕ್ಕೆ ಸರಾಸರಿ 500 ರು.ನಿಂದ 5 ಸಾವಿರ ರು.ವರೆಗೂ ಹಂಚಿದ ನಿದರ್ಶನಗಳಿವೆ. ಈ ಬಾರಿ ಚುನಾವಣೆ ಅಭ್ಯರ್ಥಿಗಳಿ ಪಾಲಿಗೆ ದುಬಾರಿ ಎನಿಸಿದರೆ, ಮತದಾರರಿಗೆ ಸುಗ್ಗಿಯೇ ಸರಿ.

ಮತದಾರರಿಗೆ ಹೆಚ್ಚು ಮೊತ್ತ ಹಂಚಿದ ಕಡೆಗಳಲ್ಲಿ ಮತದಾನದ ಪ್ರಮಾಣ ಕೂಡ ಏರಿಕೆಯಾಗಿದೆ. ಒಂದು ಅಥವಾ ಎರಡು ಸ್ಥಾನಗಳಿದ್ದು, ಅವು ಮೀಸಲಾತಿಯ ಸ್ಥಾನಗಳಾಗಿರುವೆಡೆ ಅಷ್ಟಾಗಿ ಹಣ ವೆಚ್ಚವಾಗಿಲ್ಲ. ಅಂತಹ ಕಡೆಗಳಲ್ಲಿ ಮತದಾನಕ್ಕೆ ಮತದಾರರು ನಿರುತ್ಸಾಹ ತೋರಿದ್ದು, ಮತದಾನದ ಪ್ರಮಾಣ ಸಹಜವಾಗಿಯೇ ಕುಸಿದಿರುವುದನ್ನು ಕಾಣಬಹುದಾಗಿದೆ.

ಬಾಡೂಟ, ನಿಶಾಬಾಜಿ: ರಾಮನಗರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಮತದಾನದ ಮುನ್ನಾ ದಿನ ರಾತ್ರಿ ಕೋಳಿ ಹಂಚಿಕೆ ಹೊಸದೇನಲ್ಲ. ಈ ಬಾರಿ ಮನೆ ಮನೆಗೂ ಕೋಳಿ ಹಂಚಿಕೆ ಎಗ್ಗಿಲ್ಲದೆ ನಡೆದಿದೆ. ಮತದಾರರಿಗೆ ಕೋಳಿ ಹಂಚಿದ್ದರ ಪರಿಣಾಮ ಹೋಲ್ ಸೇಲ್ ಮತ್ತು ರೀಟೇಲ್ ಮಾರಾಟ ಸ್ಥಳಗಳಲ್ಲಿ ವ್ಯಾಪಾರ ಕುಸಿದಿತ್ತು. ನಗರ, ಪಟ್ಟಣ ಪ್ರದೇಶದಲ್ಲಿ ಕೋಳಿಗಳಿಗೆ ಡಿಮ್ಯಾಂಡ್ ಹೆಚ್ಚಾಗಿತ್ತು.

ಮತದಾನದ ದಿನದಂದು ಬಹುತೇಕ ಮನೆಗಳಲ್ಲಿ ಬಾಡೂಟದ ಘಮಲು ಮೂಗಿಗೆ ತಾಗುತ್ತಿತ್ತು. ಅಭ್ಯರ್ಥಿಗಳ ಕಡೆಯಿಂದ ಮದ್ಯದ ಹೊಳೆಯೇ ಹರಿದಿದ್ದರ ಪರಿಣಾಮ ಅನೇಕರು ನಿಶಾಬಾಜಿಯಲ್ಲಿ ತೇಲುತ್ತಿದ್ದರು. ಪ್ರತಿ ಮತಕ್ಕೂ ಮೌಲ್ಯವಿದ್ದುದರಿಂದ ಅಭ್ಯರ್ಥಿಗಳು ಮತ್ತು ಬೆಂಬಲಿಗರು ನಿಶಾಬಾಜಿಯಲ್ಲಿ ತೇಲುತ್ತಿದ್ದವರನ್ನು ಜೋಪಾನವಾಗಿ ಮತಗಟ್ಟೆಗೆ ಕರೆದೊಯ್ದು, ಮತ ಹಾಕಿಸಿಕೊಳ್ಳುತ್ತಿದ್ದರು.

ಕುಕ್ಕರ್ ವ್ಯಾಪಾರದ ಸುಗ್ಗಿ: ಬಹುತೇಕ ಕಡೆ ಕುಕ್ಕರ್ ಚಿನ್ಹೆಯಡಿ ಸ್ಪರ್ಧಿಸಿದ್ದ ಹುರಿಯಾಳುಗಳು ತಮ್ಮ ಚಿನ್ಹೆಯು ಮತದಾರರ ಮನೆ, ಮನಗಳಲ್ಲಿ ಅಚ್ಚಳಿಯದೆ ಇರಲೆನ್ನುವ ಕಾರಣಕ್ಕೆ ಅದನ್ನೇ ಹಂಚಿದ್ದಾರೆ. 3 ಅಥವಾ 5 ಲೀಟರ್ ಕುಕ್ಕರ್‌ಗಳು ಹಳ್ಳಿಗಳಲ್ಲಿ ಭಾರಿ ಪ್ರಮಾಣದಲ್ಲಿ ಹಂಚಿಕೆಯಾಗಿವೆ. ಹೋಲ್ ಸೇಲ್ ಮತ್ತು ರೀಟೇಲ್ ವ್ಯಾಪಾರಿಗಳ ಬಳಿ ದೀರ್ಘ ಕಾಲದಿಂದ ಉಳಿದು ಕೊಂಡಿದ್ದ ಕುಕ್ಕರ್‌ಗಳೆಲ್ಲವೂ ಈಗ ಖಾಲಿಯಾಗಿವೆ.

ಮತದಾರರಿಗೆ ಚಿನ್ಹೆ ಹಂಚಿಕೆಯಾಗುತ್ತಿದ್ದಂತೆಯೇ ಕುಕ್ಕರ್ ಚಿನ್ಹೆ ಪಡೆದವರು ಅಂಗಡಿಗಳಿಗೆ ಮುಗಿಬಿದ್ದರು. ಬೇಡಿಕೆಯಷ್ಟು ಕುಕ್ಕರ್‌ಗಳನ್ನು ವ್ಯಾಪಾರಿಗಳು ಪೂರೈಸಲು ಆಗಿಲ್ಲ. ಕುಕ್ಕರ್ ತಯಾರಿಕೆ ಕಾರ್ಖಾನೆಗಳಲ್ಲೂ ನೋ ಸ್ಟಾಕ್ ಬೋರ್ಡ್ ತೂಗಿ ಹಾಕಲಾಗಿತ್ತು. ನಿಗದಿಗಿಂತ ಹೆಚ್ಚು ಹಣ ಕೊಡುತ್ತೇವೆ ಎಂದರೂ ಕುಕ್ಕರ್ ಸರಬರಾಜು ಮಾಡುವುದು ಕಾರ್ಖಾನೆಗಳಿಂದಲೂ ಸಾಧ್ಯವಾಗಲಿಲ್ಲ.

ಸೀರೆ ವ್ಯಾಪಾರವೂ ಜೋರು: ಈ ಭಾಗದಲ್ಲಿ ಚುನಾವಣೆ ಬಂತೆಂದರೆ ಮಹಿಳಾ ಮತದಾರರಿಗೆ ತಲುಪುವ ಬಹುಮುಖ್ಯ ಬಳುವಳಿಯೇ ಸೀರೆ. ಸರಾಸರಿ 100 ರಿಂದ  500 ರು.ವರೆಗಿನ ಸೀರೆಗಳು ಬಹುತೇಕರಿಗೆ ಹಂಚಿಕೆಯಾಗಿವೆ. ಬಹುತೇಕ ಅಭ್ಯರ್ಥಿಗಳು ಬೆಂಗಳೂರು ಇಲ್ಲವೇ ಮೈಸೂರಿನ ಮಾರುಕಟ್ಟೆಗಳಿಂದ ಕೊಂಡು ತಂದ ಸೀರೆಗಳನ್ನು ಹಂಚಿಕೆ ಮಾಡಿದ್ದರೆ, ಕೆಲವರು ಸ್ಥಳೀಯ ಅಂಗಡಿಗಳಲ್ಲೇ ಖರೀದಿ ಮಾಡಿ ತಂದಿದ್ದು ಉಂಟು.

ಹಣ, ಮದ್ಯ, ಬಳುವಳಿಗಳ ಯಥೇಚ್ಚ ಹಂಚಿಕೆಯನ್ನು ಉಭಯ ಜಿಲ್ಲಾಡಳಿತಗಳು ಕಂಡೂ ಕಾಣದಂತಿದ್ದವು. ಪ್ರತಿ ಮತಕ್ಷೇತ್ರ ದಲ್ಲೂ ಹಂಚಿಕೆ ಸಾಮಾನ್ಯವಾಗಿತ್ತು. ಬೆರಳೆಣಿಕೆ ಕಡೆಗಳಲ್ಲಿ ಮಾತ್ರವೇ ಪೊಲೀಸರು ವಶಪಡಿಸಿಕೊಂಡು, ಪ್ರಕರಣ ದಾಖಲಿಸಿ ದ್ದಾರೆ. ಮತದಾನದ ಹಿಂದಿನ ರಾತ್ರಿ ಊರಿಗೆ ಊರೇ ಎಚ್ಚರವಿತ್ತು. ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಹಂಚುವುದರಲ್ಲಿ ಬ್ಯುಸಿಯಾಗಿದ್ದರೆ, ಮತದಾರರು ಕದ ತೆರೆದು ಸ್ವೀಕರಿಸಲು ಸಜ್ಜಾಗಿದ್ದರು.

ಪಾಂಡವಪುರದಲ್ಲೇ ಅಧಿಕ ಮತದಾನ: ಮಂಡ್ಯ ಜಿಲ್ಲೆಯಲ್ಲಿ ಶೇಕಡ 88.13 ಮತ್ತು ರಾಮನಗರ ಜಿಲ್ಲೆಯಲ್ಲಿ ಶೇಕಡ 88.27 ರಷ್ಟು ಮತದಾನವಾಗಿದೆ. ತಾಲೂಕುವಾರು ಮತದಾನದ ಪ್ರಮಾಣದಲ್ಲಿ ಉಳಿದೆಡೆಗಿಂತ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲೇ ಅಧಿಕ. ಈ ತಾಲೂಕಿನಲ್ಲಿ ಶೇಕಡ 90.63ರಷ್ಟು ಮತಗಳು ಚಲಾವಣೆಗೊಂಡಿವೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿ ನಲ್ಲಿ ಶೇಕಡ 89.99ರಷ್ಟು ಮತ್ತು ಮಾಗಡಿ ತಾಲೂಕಿನಲ್ಲಿ 86.54ರಷ್ಟು ಮತದಾನ ನಡೆದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣದಲ್ಲಿ ಶೇಕಡ 84.31, ಕೆ.ಆರ್.ಪೇಟೆಯಲ್ಲಿ ಶೇಕಡ 88.87, ನಾಗಮಂಗಲದಲ್ಲಿ ಶೇಕಡ 88.38ರಷ್ಟು ಮತಗಳು ಚಲಾವಣೆ ಯಾಗಿವೆ. ಒಟ್ಟಾರೆ 4,90,255 ಮಂದಿ ಮತದಾನ ಮಾಡಿದ್ದಾರೆ.