Tuesday, 26th November 2024

ವಾಷಿಂಗ್ಟನ್‌ನಲ್ಲಿ ಹಿಂಸಾಚಾರ: ಸ್ಟೆಫನಿ ಗ್ರಿಶಮ್, ಸಾರಾ ಮ್ಯಾಥ್ಯೂಸ್ ರಾಜೀನಾಮೆ

ವಾಷಿಂಗ್ಟನ್‌: ಟ್ರಂಪ್ ಬೆಂಬಲಿಗರಿಂದ ರಾಜಧಾನಿ ವಾಷಿಂಗ್ಟನ್‌ನಲ್ಲಿ ನಡೆಸಿದ ಹಿಂಸಾಚಾರದಿಂದ ಬೇಸರಗೊಂಡು ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರ ಸಿಬ್ಬಂದಿಯ ಮುಖ್ಯಸ್ಥೆ ಸ್ಟೆಫನಿ ಗ್ರಿಶಮ್ ಮತ್ತು ಶ್ವೇತ ಭವನದ ಉಪ ಪತ್ರಿಕಾ ಕಾರ್ಯದರ್ಶಿ ಸಾರಾ ಮ್ಯಾಥ್ಯೂಸ್ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.

ಗ್ರಿಶಮ್ ಅವರು, ಈ ಹಿಂದೆ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು.  ‘ಶ್ವೇತಭವನದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು, ನನಗೆ ದೇಶಕ್ಕೆ ಸೇವೆ ಸಲ್ಲಿಸಲು ದೊರೆತ ಗೌರವವಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.

‘ಮೆಲಾನಿಯಾ ಟ್ರಂಪ್ ಅವರು ಮಕ್ಕಳಿಗೆ ನೆರವಾಗುವಂತಹ ಯೋಜನೆಗಳನ್ನು ರೂಪಿಸಿದ್ದರು. ನಾನೂ ಅವರ ಇಂಥ ಸೇವಾ ಕಾರ್ಯಗಳ ಭಾಗವಾಗಿದ್ದಕ್ಕೆ ತುಂಬಾ ಹೆಮ್ಮೆ ಎನಿಸಿದೆ. ಅವರ ಆಡಳಿತದ ಸಾಧನೆ ಬಗ್ಗೆಯೂ ಗೌರವವಿದೆ’ ಎಂದು ಹೇಳಿದ್ದಾರೆ.

ಮ್ಯಾಥ್ಯೂಸ್‌ ಅವರೂ ಬುಧವಾರ ರಾಜೀನಾಮೆ ಸಲ್ಲಿಸಿದ್ದು, ‘ಟ್ರಂಪ್ ಬೆಂಬಲಿಗರು ನಡೆಸಿದ ದಾಂದಲೆ ನೋಡಿ, ತುಂಬಾ ಬೇಸರ ವಾಯಿತು. ತೀವ್ರ ತೊಂದರೆಯಾಯಿತು’ ಎಂದಿದ್ದಾರೆ.