Wednesday, 27th November 2024

ವಾಹನಗಳಿಗೆ ಚಿಪ್‌ ಕೊರತೆ

– ಅಜಯ್

ಕಾರು ತಯಾರಕರಿಗೂ ಈಗ ಚಿಪ್ ಕೊರತೆ ಉಂಟಾಗಿದೆ! ವಿಶ್ವದ ಎಲ್ಲೆಡೆ ಕಂಡು ಬಂದಿರುವ ಚಿಪ್ ಕೊರತೆಯು ನೇರವಾಗಿ ಪರಿಣಾಮ ಬೀರಿದ್ದು ಸಿಪಿಯು ಮತ್ತು ಜಿಪಿಯು ತಯಾರಿಗೆ.

ಆದರೆ, ಇಂದಿನ ಆಧುನಿಕ ಕಾರುಗಳಿಗೂ ಚಿಪ್ ಕೊರತೆ ಕಂಡುಬಂದಿದ್ದು, ಇದರಿಂದಾಗಿ ಕೆಲವು ಕಾರುಗಳ ತಯಾರಿಕೆಯೇ ನಿಧಾನಗೊಂಡಿದೆ! ಸೆಮಿ ಕಂಡಕ್ಟರ್ ಮತ್ತು ಚಿಪ್ ಕೊರತೆಯನ್ನೇ ಕಾರಣ ಮಾಡಿಕೊಂಡು, ಅಮೆರಿಕ ದಲ್ಲಿ ಫೋರ್ಡ್ ಮತ್ತು ನಿಸ್ಸಾನ್ ಸಂಸ್ಥೆಗಳು ಕೆಲವು ಮಾಡೆಲ್ ಕಾರುಗಳ ಉತ್ಪಾದನೆಯನ್ನು ಕಡಿಮೆಗೊಳಿಸಿವೆ.

ಅಮೆರಿಕದ ಕೆಂಟಕಿಯಲ್ಲಿರುವ ತನ್ನ ಎಸ್‌ಯುವಿ ಕಾರು ಉತ್ಪಾದನಾ ಘಟಕವನ್ನು ಫೋರ್ಡ್ ಸಂಸ್ಥೆಯು ತಾತ್ಕಾಲಿಕವಾಗಿ
ಸ್ಥಗಿತಗೊಳಿಸಿದೆ. ನಿಸ್ಸಾನ್ ಸಂಸ್ಥೆಯು ಜಪಾನ್‌ನಲ್ಲಿರುವ ಒಪ್ಪಾಮಾ ಕಾರು ತಯಾರಿಕಾ ಘಟಕದಲ್ಲಿ ತಯಾರಾಗುವ
ಕಾರು ಗಳ ಸಂಖ್ಯೆಯನ್ನು ಕಡಿಮೆ ಮಾಡಿದೆ.

ಇತರ ಪ್ರಮುಖ ಕಾರು ತಯಾರಿಕಾ ಸಂಸ್ಥೆಗಳು ಸಹ ತಾವು ತಯಾರಿಸುವ ಕಾರುಗಳ ಸಂಖ್ಯೆಯನ್ನು ಕಡಿಮೆ ಮಾಡಿವೆ. ಎಲ್ಲರೂ
ನೀಡಿರುವ ಕಾರಣ ಚಿಪ್ ಕೊರತೆ! ಚಿಪ್ ಮತ್ತು ಸೆಮಿಕಂಡಕ್ಟರ್‌ಗಳ ಕೊರತೆಯು ಉಂಟಾಗಿರುವುದಕ್ಕೆ ಮುಖ್ಯ ಕಾರಣವೆಂದರೆ ಕೋವಿಡ್-19 ವಿಧಿಸಿದ ಲಾಕ್‌ಡೌನ್ ಮತ್ತು ಶಟ್‌ಡೌನ್. ಹಲವು ತಿಂಗಳುಗಳ ಲಾಕ್ ಡೌನ್ ಮತ್ತು ವರ್ಕ್ ಫ್ರಂ ಹೋಮ್
ಸ್ಥಿತಿಯಿಂದ ಇತರ ಹಲವು ಉತ್ಪನ್ನಗಳ ಜತೆಯಲ್ಲೇ ಚಿಪ್ ತಯಾರಿಕೆಯೂ ಕುಂಠಿತಗೊಂಡಿತು.

ಇಂದಿನ ಆಧುನಿಕ ಕಾರುಗಳಂತೂ ಹಲವು ವಿಭಾಗಗಳಲ್ಲಿ ಕಂಪ್ಯೂಟರ್ ಚಿಪ್ ಗಳನ್ನು ಉಪಯೋಗಿಸುತ್ತಿವೆ. ಡ್ರೈವ್ ಮಾಡುವ ಪ್ರಕ್ರಿಯೆಯ ಹಲವು ಹಂತಗಳಲ್ಲಿ, ಇನ್ಫೋಟೈನ್‌ಮೆಂಟ್ ವ್ಯವಸ್ಥೆಯಲ್ಲಿ, ಸ್ಟೀರಿಂಗ್ ತಿರುಗಿಸುವ ಕೆಲಸದಲ್ಲಿ, ಇಂಧನ
ಬಳಸುವ ವಿಧಾನದಲ್ಲಿ ಚಿಪ್‌ಗಳ ಸಹಾಯವನ್ನು ಪಡೆಯುತ್ತಿದೆ. ಚಿಪ್‌ಗಳು ಸಾಕಷ್ಟು ಸಂಖ್ಯೆಯಲ್ಲಿ ಉತ್ಪಾದನೆಯಾಗುವ
ತನಕ, ಕಾರ್ ತಯಾರಿಯು ಕುಂಠಿತಗೊಳ್ಳುವುದು ಒಂದು ಜಾಗತಿಕ ವಿದ್ಯಮಾನ ಎನಿಸಿದೆ.