ಶಶಾಂಕ್ ಮುದೂರಿ
ಚಳಿಯ ದಿನಗಳು ಕೊನೆಯಾಗುತ್ತಿವೆ ಎಂದು ಸಾರಲು ಬಂದಿರುವ ಸಂಕ್ರಾಂತಿ ಹಬ್ಬವು ಮನೆ ಮನಗಳಲ್ಲಿ ಸಂತಸ ತುಂಬುವ ಹಬ್ಬ. ಎಳ್ಳು ಬೆಲ್ಲಗಳನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ, ಸ್ನೇಹವನ್ನು, ವಿಶ್ವಾಸವನ್ನು, ಬಾಂಧವ್ಯ ವನ್ನು ಬೆಳೆಸಿ ಕೊಳ್ಳಲು ಉತ್ತೇಜಿಸುವ ಹಬ್ಬವಿದು. ಎಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳು.
ನಮ್ಮ ನಾಡಿನ ಬಹು ದೊಡ್ಡ ಹಬ್ಬಗಳಲ್ಲಿ ಒಂದಾದ ಸಂಕ್ರಾಂತಿ ಇಂದು ಆಚರಣೆ ಗೊಳ್ಳುತ್ತಿದೆ. ವರ್ಷದ ಸಂಕ್ರಮಣ ಕಾಲ ಇದು. ಋತುಮಾನದಲ್ಲಿ ಮಹತ್ತರ ಬದಲಾವಣೆ ಯಾಗುವ ಸಮಯ. ಜನಮಾನಸದಲ್ಲಿ ಉತ್ಸಾಹ ಹೊಮ್ಮುವ ಕಾಲವಿದು. ಚಳಿಯ ದಿನಗಳು ಕಳೆದು, ಬೆಚ್ಚನೆಯ ಬೇಸಿಗೆಯು ದಿನಚರಿಯನ್ನು ಬೆಳಗುವ ಕಾಲವಿದು. ಚಳಿಯ ಮಂಜು ಮಸುಕಿನಲ್ಲಿ ಸಂಚರಿಸುತ್ತಿದ್ದ ಸೂರ್ಯನ ರಥವು, ಪ್ರಖರ ಕಿರಣಗಳನ್ನು ಬೀರುತ್ತಾ ಭೂಮಿನ ಸಮಸ್ತ ಸಸ್ಯಕೋಟಿಗೆ, ಪ್ರಾಣಿ ಸಂಕುಲಕ್ಕೆ ಜೀವಶಕ್ತಿಯನ್ನು ತುಂಬುವ ದಿನಗಳಿವು.
ಪುರಾತನ ಕಾಲದ ನಮ್ಮ ಪ್ರಾಜ್ಞ ಚಿಂತಕರು ಸಂಕ್ರಾಂತಿಯನ್ನು ವರ್ಷದ ಮಹತ್ತರ ದಿನವೆಂದು ಗುರುತಿಸಿರುವುದು ನಿಜಕ್ಕೂ ಅತಿ ಸಮಂಜಸ ಎನಿಸುತ್ತಿದೆ. ಸಂಕ್ರಾಂತಿಯ ದಿನ ಎಳ್ಳು, ಬೆಲ್ಲ, ಕೊಬ್ಬರಿಯನ್ನು ತಿನ್ನುವಂತೆ ಎಲ್ಲರನ್ನೂ ಪ್ರಚೋದಿಸುವ ಆಚರಣೆಯನ್ನು ರೂಢಿಗೆ ತಂದಿರುವುದು ಸಹ ಬಹು ಅರ್ಥಪೂರ್ಣ. ನಮ್ಮ ನಾಡಿನ ಬಯಲು ಸೀಮೆಯ ಜನರಂತೂ, ಒಬ್ಬರ ಮನೆಗೆ ಇನ್ನೊಬ್ಬರು ಹೋಗಿ, ಪರಸ್ಪರ ಎಳ್ಳು ಬೆಲ್ಲವನ್ನು ಹಂಚಿ ಕೊಳ್ಳುವ ಸಡಗರಕ್ಕೆ ಸಾಟಿಯುಂಟೆ!
ಇದರ ನಡುವೆ ಕಬ್ಬು, ಸಕ್ಕರೆ ಅಚ್ಚು, ಕುಸುರೆಳ್ಳು ಮೊದಲಾದ ವಿಶೇಷ ತಿನಿಸುಗಳನ್ನು ಸಹ ಒಬ್ಬರಿಗೆ ಒಬ್ಬರು ನೀಡಿ, ಈ ಸಡಗರಕ್ಕೆ ಮತ್ತಷ್ಟು ಮೆರುಗು ತುಂಬುತ್ತಾರೆ. ನಮ್ಮ ದೇಶದ ದಕ್ಷಿಣ ಭಾಗದವರು ಇಂದು ಪೊಂಗಲ್ ತಯಾರಿಸಲು ಬಹಳ ಪ್ರಾಮುಖ್ಯತೆ ಕೊಡುತ್ತಾರೆ. ಚಳಿಯ ದಿನಗಳು ಮುಗಿಯುವ ಈ ಸಮಯದಲ್ಲಿ ಪೊಂಗಲ್‌ನಂತಹ ಆರೋಗ್ಯ ಪೂರ್ಣ ತಿನಿಸನ್ನು ತಿನ್ನುವ ಮೂಲಕ, ದೇಹಕ್ಕೂ, ಮನಸ್ಸಿಗೂ ಹೊಸ ಶಕ್ತಿಯನ್ನು ತುಂಬು ಆ ಒಂದು ಪದ್ಧತಿಯಲ್ಲಿ ಮನುಕುಲದ ಆರೋಗ್ಯ ಕಾಪಾಡುವ ಕಾಳಜಿಯೂ ಅಡಗಿದೆ.
ಆಂಧ್ರದಲ್ಲಿ ರಂಗೋಲಿಗಳನ್ನು ಬೀದಿ ತುಂಬಾ ತುಂಬಿ, ಇಡೀ ಪರಿಸರವನ್ನು ಚಿತ್ತಾರಮಯವನ್ನಾಗಿಸುವ ಪರಿಯಂತೂ ಬಹು ವಿಶೇಷ. ಮಕ್ಕಳು ಗಾಳಿಪಟ ಹಾರಿಸುವುದು, ವನಭೋಜನ, ಉಯ್ಯಾಲೆ ಆಟ, ಕೋಲಾಟ ಎಲ್ಲವೂ ಸಂಕ್ರಾಂತಿ ಆಚರಣೆಯ ಸಂಭ್ರಮದಲ್ಲಿ ಸೇರಿ ಹೋಗಿದೆ. ಸಂಕ್ರಾಂತಿಯ ಆಚರಣೆಯಲ್ಲಿ ಅಡಕಗೊಂಡಿರುವ ಒಂದು ಆಚರಣೆಯು ಆಚರಿಸುವವರ ಜತೆಯಲ್ಲೇ, ನೋಡುಗರ ಮನದಲ್ಲೂ ಬಹಳಷ್ಟು ಉಲ್ಲಾಸ ತುಂಬುವುದಂತೂ ನಿಜ. ಅದೇ ಎಳ್ಳು ಬೀರುವುದು!
ಪುಟಾಣಿಗಳು ಎಳ್ಳು ಬೆಲ್ಲವನ್ನು ತಮ್ಮ ಗೆಳೆಯ ಗೆಳತಿಯರಿಗೆ ಹಂಚಲು ಸಂಕ್ರಾಂತಿಯ ದಿನ ಸಂಜೆಯ ಸಮಯದಲ್ಲಿ ಬೀದಿ ಬೀದಿ ಸುತ್ತುವ ಪರಿಯನ್ನು ವರ್ಣಿಸಲು ಪದಗಳು ಸಾಲದು. ಬಣ್ಣ ಬಣ್ಣದ ಲಂಗ ಧರಿಸಿ, ಕೈಯಲ್ಲೊಂದು ಬಟ್ಟಲು ಹಿಡಿದು, ಪುಟು ಪುಟು ನಡಿಗೆ ನಡೆಯುತ್ತಾ ಅಕ್ಕ ಪಕ್ಕದ ಮನೆಗೆ ಹೋಗಿ, ಎಳ್ಳು ಬೆಲ್ಲ ನೀಡಿ, ‘ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡಿ’ ಎನ್ನುತ್ತಾ ಸಂಭ್ರಮಿಸುವ ಸಂಕ್ರಾಂತಿಯು ಎಲ್ಲರ ಮನದಲ್ಲೂ ಸಂತಸದ, ಉಲ್ಲಾಸದ ಹೊಳೆಯನ್ನೇ ಹರಿಸುತ್ತದೆ.
ಇದೇ ದಿನ ಪರಸ್ಪರ ವಿನಿಮಯ ಮಾಡಿಕೊಳ್ಳುವ ಸಕ್ಕರೆ ಅಚ್ಚು, ಕಬ್ಬು, ಜೀರಿಗೆ ಪೆಪ್ಪರ್ ಮಿಂಟ್‌ಗಳನ್ನು ತಿನ್ನುವುದೆಂದರೆ ಪುಟಾಣಿಗಳಿಗೂ, ದೊಡ್ಡವರಿಗೂ ಬಹು ಆಸ್ಥೆ. ಕೆಲವು ಊರುಗಳಲ್ಲಿ ಸಂಕ್ರಾಂತಿಯ ದಿನ ಕಬ್ಬಿನ ರಸವನ್ನು ಸಾರ್ವಜನಿಕವಾಗಿ ಹಂಚುವ ಸಂಪ್ರದಾಯವೂ ಉಂಟು. ಅರ್ಥಪೂರ್ಣ ಸಂದೇಶ ಮತ್ತು ಆಚರಣೆ ಹೊಂದಿರುವ ಸಂಕ್ರಾಂತಿ ಹಬ್ಬವನ್ನು ಆಚರಿಸುವುದೆಂದರೆ ಅದೊಂದು ವಿಶೇಷ ಅನುಭೂತಿ.
ಬನ್ನಿ, ಎಲ್ಲರಿಗೂ ಎಳ್ಳು ಬೆಲ್ಲ ಹಂಚೋಣ, ಅದನ್ನು ತಿಂದು ಒಳ್ಳೆಯ ಮಾತನಾಡೋಣ, ಮನದ ತುಂಬಾ ಒಳ್ಳೆಯದನ್ನೇ ಯೋಚಿಸೋಣ, ಹೊಸ ಹರ್ಷಕೆ ಅಣಿಯಾಗೋಣ.