Wednesday, 27th November 2024

ಅಡಿಗಡಿಗೆ ರಂಜಿಸುವ ಅಗಡಿ ತೋಟ

ಕೆ.ಶ್ರೀನಿವಾಸರಾವ್

ಹುಬ್ಬಳ್ಳಿಯಿಂದ 30 ಕಿ.ಮೀ ದೂರದ ತಡಸ-ಹಾನಗಲ್ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಕುಣ್ಣೂರಿನಲ್ಲಿ ಕವಲೊಡೆದು ದಟ್ಟ ಮರಗಳ ಅಂಕು ಡೊಂಕಾದ ದಾರಿಯುದ್ದಕ್ಕೂ ದಾರಿ ತೋರಿಸುವ ಫಲಕಗಳನ್ನನುಸರಿಸಿ ಸಾಗಿದಾಗ ಎದುರಾಗುತ್ತದೆ, 50
ಎಕರೆ ಪ್ರದೇಶದ ‘ಅಗಡಿ ತೋಟ’. ಕಿರು ಹಾದಿಯುದ್ದಕ್ಕೂ ಪಾರಂಪರಿಕ ಸ್ವಾಗತ.

ರಾಜಸ್ತಾನಿ ಕೀಲು ಕುದುರೆ, ಈಚಲ ಟೋಪಿಧಾರಣೆ, ಯಲ್ಲಮ್ಮನ ಪದ ಹೇಳುವ ಜೋಗಿತಿ, ಹಣೆಗೆ ತಿಲಕವಿಡುವ ಗೊರವಯ್ಯ, ಟಿಕೆಟ್ ಕೊಂಡು ಕೈಗೆ ಬಳೆಯಂಥ ಸ್ವಿಕರ್ ಅಂಟಿಸಿ ಒಳಸಾಗಿದರೆ ತುಂಡು ಕೇಕ್ ಹಾಗೂ ವೆಲ್ ಕಮ್ ಜ್ಯೂಸ್ ಕೈಗಿರಿಸುತ್ತಾರೆ. ನಡೆವ ಹಾದಿಯುದ್ದಕ್ಕೂ ಜಾರದಂತೆ ಪುಟ್ಟ ದುಂಡು ನುಣುಪು ಕಲ್ಲುಗಳು, ಅಕ್ಕಪಕ್ಕ ಸಾವಿರಾರು ಗೋಡಂಬಿ, ಅಡಕೆ ಮರ ಗಳು, ಅಲ್ಲಲ್ಲಿ ಸೌತೆ, ಬದನೆ, ಬೀನ್ಸ್‌, ಟೊಮೆ ಟೋ, ತೊಗರಿ, ಜೋಳ, ರಾಗಿ ಬೆಳೆಗಳು, ಸಾವಿರಾರು ಔಷಧೀಯ ಸಸ್ಯಗಳು.

ದಾರಿಯುದ್ದಕ್ಕೂ 20 ಹೆಜ್ಜೆಗೊಂದರಂತೆ ನಮ್ಮ ಉದರವನ್ನು ಸಂತೃಪ್ತಿಗೊಳಿಸಲು ಸಿರಿಧಾನ್ಯದ ದೋಸೆ, ಬೆಲ್ಲ, ಚಟ್ನಿ, ಕಲ್ಲಂಗಡಿ, ಬಾರಿಹಣ್ಣು, ಲೆಮನ್‌ಟೀ, ಜೀರಾ ಸೋಡಾ, ನಾವೇ ಗಾಣ ತಿರುವಿ ನಾವೇ ಕುಡಿಯಬಹುದಾದ ಕಬ್ಬಿನ ಹಾಲು, ಮುದಗೊಳಿಸುತ್ತವೆ. ಮಕ್ಕಳಿಗೆ, ಹದಿಹರೆಯದವರಿಗೆ ಸವಾಲೆಸೆವ ಹಲವು ವಿಧದ ಆಟಿಕೆಗಳಿವೆ. ಸನಾತನ ಮನೆ, ರುಬ್ಬು
ಕಲ್ಲು, ಬೀಸುವ ಕಲ್ಲು, ಲಾಟೀನು, ಪುರಾತನ ಗಡಿಯಾರ, ರೇಡಿಯೋ, ಜೋಲಿಯಲ್ಲಿ ತೂಗುಬಿಟ್ಟ ಮೊಸರಿನ ಮಡಕೆ, ಎಲ್ಲವೂ ಗತಕಾಲದ ನೆನಪನ್ನು ಸ್ಫುರಿಸುತ್ತವೆ.

ಒಂದೆಡೆ ವಿವಿಧ ರಾಜ್ಯಗಳ ದಿರಿಸು ಬಾಡಿಗೆಗೆ ದೊರೆಯುತ್ತವೆ. ಲಂಬಾಣಿ, ರಾಜಸ್ತಾನಿ, ಮಣಿಪುರಿ ಇತರೆಡೆಯ ಸಾಂಸ್ಕೃತಿಕ ವೇಷ ಧರಿಸಿ ಫೋಟೋ ತೆಗೆಸಿಕೊಳ್ಳಬಹುದು. (ದರ 100ರೂ, 200ರೂ) ಮುಂದೆ ವಿಶಾಲ ಊಟದ ಕರ್ನಾಟಕದ ಕವಳ. ಎರಡು ಬಗೆ ರೊಟ್ಟಿ, ಚಪಾತಿ, ಬುತ್ತಿ, ಪಾಯಸ, ಚಿತ್ರಾನ್ನ, ಹೋಳಿಗೆ, ಗಂಜಿ, ಎಣ್ಣೆೆಗಾಯಿ, ಶೇಂಗಾ ಹಾಗೂ ಗುರೆಳ್ಳು ಚಟ್ನಿಪುಡಿ,  ಮೆಣಸಿನ ಕಾಯಿ ಹಿಂಡಿ, ಹಪ್ಪಳ, ಸಂಡಿಗೆ, ತರಕಾರಿ ಸಲಾಡ್, ಅನ್ನ, ಸಾರು, ಸಾಂಬಾರ್, ಕರಿ. ಏಕೆ ಬಾಯಲ್ಲಿ ನೀರು ಬಂತೇ? ಒಂಥರಾ ವಿವಾಹ ಭೋಜನವಿದು!

ಎಷ್ಟು ಬೇಕಾದರೂ ತಿನ್ನಬಹುದು, ತಿಂದು ಸುಸ್ತಾಗಿದ್ದವರಿಗೆ ಮಲಗಲು ಮರಗಳ ನೆರಳಿನಲ್ಲಿ ಚಾಪೆ ಹಾಸಿಟ್ಟಿರುತ್ತಾರೆ. ಹೊರಬದಿ ಗಟ್ಟಿ ಮಜ್ಜಿಗೆ, ಬಾಳೆಹಣ್ಣು, ಎಲೆ ಅಡಿಕೆ ಕೈಗಿಡುತ್ತಾರೆ. ಈಗ ಮತ್ತೆ ಸುತ್ತಾಟ, ಒಂದೆಡೆ ಕುಂಬಾರರು ಚಕ್ರದಲ್ಲಿ ಕುಡಿಕೆ, ಮಡಕೆ ಹೇಳಿಕೊಡುತ್ತಾರೆ, ನಾವೇ ಮಣ್ಣು ಹಾಕಿ ತಿರುಗಿಸಿ ತಯಾರಿಸಿ ಕುಡಿಕೆಯನ್ನು ತೆಗೆದುಕೊಂಡು ಹೋಗಬಹುದು. ಅಲ್ಲಿಯೇ ಪಕ್ಕದಲ್ಲಿ ‘ವರ್ಚುಯಲ್ 3ಡಿ’ ಹಣ ನೀಡಿ ನೋಡಿದರೆ ಅದ್ಭುತ ಅನುಭವ! ಗೊಂಬೆ ಆಟ, ಮ್ಯಾಜಿಕಲ್ ಶೋ, ಎಲ್ಲರನ್ನೂ ಆಕರ್ಷಿಸುತ್ತವೆ.

ಮಳೆ ಮಜ್ಜನ
ಒಂದು ಗಂಡಸರಿಗೆ, ಒಂದು ಹೆಂಗಸರಿಗೆಂದು ಪ್ರತ್ಯೇಕ 2 ಶೆಡ್ ಮಾಡಿದ್ದಾರೆ. ಮೇಲಿನ ಶವರ್‌ನಿಂದ ಬೀಳುವ ನೀರಿನಲ್ಲಿ ಎಗ್ಗು ಸಿಗ್ಗಿಲ್ಲದೆ ರೈನ್ ಡಾನ್ಸ್ ಅಥವಾ ‘ಮಳೆ ಮಜ್ಜನ’ ಮಾಡಲು ಭಾರೀ ನೂಕು ನುಗ್ಗಲು! ಮಕ್ಕಳಿಗಂತೂ ಇಲ್ಲಿ ಮಜವೋ ಮಜ!
ಮುಂದೆ ಸಾಗಿದರೆ ಎಮೋ ಪಕ್ಷಿಗಳು, ಮೊಲಗಳು, ಕುದುರೆಗಳು ಕಣ್ಣಿ ಗೆ ಬೀಳುತ್ತವೆ. ಕುದುರೆ ಸವಾರಿ, ಒಂಟೆ ಸವಾರಿ, ಜೋಡೆತ್ತಿನ ಗಾಡಿ ಸವಾರಿ, ಸೈಕಲ್, ಬೈಕ್, ಟ್ರಾಕ್ಟರ್ ಸವಾರಿ ಎಲ್ಲವನ್ನೂ ಉಚಿತವಾಗಿ ಮಾಡಬಹುದು.

ಪಕ್ಕದ ಸರೋವರದಲ್ಲಿ ಬೋಟಿಂಗ್ ಕೂಡಾ ಇದೆ. ಕೊನೆಯದಾಗಿ ವಿಶಾಲ ಮೈದಾನದಲ್ಲಿ ಸುತ್ತುವರಿದ ಜನರ ನಡುವೆ ನಾಲ್ಕಾರು ಯುವಕರು ಗಂಡಸರಿಗೆ ಯೋಗ ಹೇಳಿಕೊಡುತ್ತಾರೆ. ಮಕ್ಕಳಿಗೆ ‘ಮ್ಯೂಸಿಕಲ್ ಛೇರ್’ ಆಡಿಸುತ್ತಾರೆ.  ಮಹಿಳೆಯ ರೊಂದಿಗೆ ಮಡಕೆ ಹಿಡಿದು ಜಾನಪದ ಗೀತೆಗೆ ತಾವೂ ನರ್ತಿಸುತ್ತಾರೆ. ಅತಿಥಿಗಳ ಮನಸ್ಸು ಅದಾಗಲೇ ಪ್ರಫುಲ್ಲತೆಯ ಭಂಡಾರ ವಾಗಿರುತ್ತದೆ. ಗಿರಮಿಟ್ ಹಾಗೂ ಮಿರ್ಚಿ, ಟೀ ಕೊಟ್ಟು ವಿದಾಯ ಹೇಳುತ್ತಾರೆ.

2000ನೇ ಇಸವಿಯಲ್ಲಿ ಸ್ಥಳೀಯ ಜಯದೇವ ಅಂಗಡಿಯವರು ಸಾವಯವ ಬೇಸಾಯದ ಮಹತ್ವವನ್ನು ಸಾರಲು ಆರಂಭಿಸಿದ ಈ ತೋಟ, ಇಂದು ಅಸಂಖ್ಯ ನಾಗರಿಕರ ಆಮೋದದ ತಹತಹ ತಣಿಸುವ ತಾಣವಾಗಿದೆ. ಧೂಮಪಾನ, ಸುರಾಪಾನ ನಿಷೇಧಿಸಿರುವ ಈ ಭೂ ಸ್ವರ್ಗ ನಗರದ ಕರ್ಕಶತೆಗೆ ಬೇಸತ್ತ ಜನರಿಗೆ ಒಂದು ದಿನದ ಮನೋಲ್ಲಾಾಸದ ಪಿಕ್‌ನಿಕ್‌ಗೆ ಪ್ರಶಸ್ತ ಸ್ಥಳ. ಪ್ರವೇಶ ಬೆಳಿಗ್ಗೆೆ 10-30 ರಿಂದ ಸಂಜೆ 6-00. ಟಿಕೆಟ್ ದರ- ದೊಡ್ಡವರಿಗೆ-600 ರೂ, ಮಕ್ಕಳಿಗೆ -300 ರೂ.