Wednesday, 27th November 2024

ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ

ಮೌಲಾಲಿ ಕೆ.ಆಲಗೂರ (ಬೋರಗಿ)

ಈ ಪುಟ್ಟ ಮಗುವಿಗೆ ವಯಸ್ಸು ಏಳು. ಆದರೆ ಚಿಕ್ಕ ವಯಸ್ಸಿನಲ್ಲೇ ಇವಳ ಸಾಧನೆ ಅಪಾರ. ಕಲೆ, ಸಂಗೀತ, ಗಾಯನ, ಭರತನಾಟ್ಯ ಮತ್ತು ನಟನೆ ಹೀಗೆ ಹಲವು ಕ್ಷೇತ್ರಗಳಲ್ಲಿ ವಿಶಿಷ್ಟ ಮತ್ತು ವಿನೂತನ ರೀತಿಯಲ್ಲಿ ಕಲಾ ಪ್ರತಿಭೆಯನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಬಹು ದೊಡ್ಡ ವೇದಿಕೆಗಳಲ್ಲಿ ಪ್ರದರ್ಶಿಸುವ ಮೂಲಕ ಬೇಲೂರಿನ ನಾಟ್ಯ ಶಾಂತಲೆ ಎಂಬ ಪ್ರಖ್ಯಾತ ಪಡೆದಿದ್ದಾಳೆ.

ಹೆಸರು ಕು.ಮೈತ್ರಿ ಎಸ್.ಮಾದಗುಂಡಿ. ತಂದೆ ಡಾ.ಶಿವಕುಮಾರ ಮಾದಗುಂಡಿ. ಸದ್ಯ ಬೇಲೂರು ತಾಲ್ಲೂಕಿನ ಅರೇಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು. ತಾಯಿ ಶೃತಿ ಮಾದಗುಂಡಿ. ಇವರದ್ದು ಮೂಲತಃ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ. ಕಳೆದ 10 ವರ್ಷಗಳಿಂದ ಬೇಲೂರಿನಲ್ಲಿ ನೆಲೆಸಿದ್ದಾರೆ.

2013ರಲ್ಲಿ ಜನಿಸಿದ ಮೈತ್ರಿ, ಬಾಲ್ಯದಲ್ಲೇ ಬಹು ಚಟುವಟಿಕೆಯ ಹುಡುಗಿ. ಈಗ ಒಂದನೆಯ ತರಗತಿ ಓದುತ್ತಿರುವ ಈ ಪುಟ್ಟ ಕಂದ ಓದುವುದರಲ್ಲೂ ತುಂಬಾ ಜಾಣೆ. ಕ್ರೀಡೆಯಲ್ಲೂ ಚತುರೆ. ಭರತನಾಟ್ಯ ಎಂದರೆ ತುಂಬಾ ಇಷ್ಟ ಪಡುವ ಬೇಲೂರಿನ ಈ
ಪುಟಾಣಿ, ಜಾನಪದ, ಕಥೆ, ಗಾಯನ, ನಟನೆ ಹಾಗೂ ಚಿತ್ರ ಕಲೆಯಲ್ಲೂ ಮುುಂದೆ. ಕು.ಮೈತ್ರಿ ಮಾದಗುಂಡಿ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಕಡೆ ತನ್ನ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ಕಲಾ ಪ್ರೇಕ್ಷಕರ ಮನ ರಂಜಿಸಿ ದ್ದಾಳೆ.

ಸದ್ಯ ಬೇಲೂರಿನ ನೃತ್ಯಾಂಜಲಿ ಕಲಾನಿಕೇತನ ನೃತ್ಯ ಶಾಲೆಯ ಶೈಲಜಾ ಕುಮಾರ ಬಳಿ ಭರತನಾಟ್ಯ ಕಲಿಯುತ್ತಿದ್ದು, ಶ್ರೀವಿದ್ಯಾ ಎಂಬುವವರ ಬಳಿ ಸಂಗೀತ ಅಭ್ಯಾಸ ಮಾಡುತ್ತಿದ್ದಾಳೆ. ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ಕನ್ನಡ ಸಂಘ, ಸಂಸ್ಥೆಗಳು, ಶರಣ ಸಂಸ್ಕೃತಿ ಉತ್ಸವ, ಮಹಿಳಾ ಸಾಹಿತ್ಯ ಜಾತ್ರೆ, ಕನ್ನಡ ನುಡಿ ಸಂಭ್ರಮ ಸೇರಿದಂತೆ ರಾಜ್ಯಾದ್ಯಂತ ಸುಮಾರು 150 ಕ್ಕೂ ಅಧಿಕ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿದ ಕೀರ್ತಿ ಮೈತ್ರಿಯದ್ದು.

ಕವಿಗೋಷ್ಠಿಯಲ್ಲಿ ಭಾಗಿ ಮಕ್ಕಳ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಭಾವಗೀತೆ ಗಾಯನದ ಮುಖ್ಯ ಅತಿಥಿಯಾಗಿ ಭಾಗವಹಿಸಿ ದ್ದಾಳೆ. ದಾವಣಗೆರೆಯಲ್ಲಿ ನಡೆದ ದೈವಜ್ಞ ಸಂಭ್ರಮ 2020ದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದಾಳೆ. ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವದಲ್ಲಿ ಗೃಹ ಸಚಿವರು ಮೈತ್ರಿಯ ನೃತ್ಯವನ್ನು ಗಮನಿಸಿ ಸನ್ಮಾನಿಸಿ ಗೌರವಿಸಿದ್ದಾರೆ. ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಲ್ಲೂ ತನ್ನ ವಿಶೇಷ ನೃತ್ಯ ಪ್ರದರ್ಶನ ನೀಡಿ ಕನ್ನಡ ಕಂಪನ್ನು ಮತ್ತಷ್ಟು ಪಸರಿಸಿದ್ದಾಳೆ. ಇತ್ತೀಚೆಗೆ ನಡೆದ ಸೂಪರ್ ಸ್ಟಾರ್ ಡ್ಯಾನ್ಸ್ ಆಫ್ ಕರ್ನಾಟಕ ಸೀಸನ್1 ರಲ್ಲಿ ಭಾಗವಹಿಸಿ ತೃತೀಯ
ಸ್ಥಾನ ಪಡೆದಿದ್ದಾಳೆ.

ಸೂಪರ್ 1000 ಸಿಂಗಸರ್ ಆಫ್ ಕರ್ನಾಟಕ ಆನ್ಲೈನ್ ಆಡಿಷನ್ ನಲ್ಲೂ ಭಾಗವಹಿಸಿ ಆಯ್ಕೆಯಾದ ಹೆಗ್ಗಳಿಕೆ ಈ ಬಾಲಕಿಯದ್ದು. ಹಲವು ಸ್ಥಳೀಯ ಸುದ್ದಿವಾಹಿನಿಗಳಲ್ಲಿ ಮೈತ್ರಿಯ ಭರತನಾಟ್ಯ ನೃತ್ಯ, ಜನಪದ ಗೀತೆ, ಭಾವಗೀತೆ, ನೃತ್ಯಗಳು ಪ್ರಸಾರಗೊಂಡಿವೆ. ಮೈತ್ರಿ ತನ್ನ 5ನೇ ವಯಸ್ಸಿನಲ್ಲಿ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ಪಟ್ಟಿಗೆ ಸೇರಿದ ಜಿಲ್ಲೆಯ ಪ್ರಪ್ರಥಮ ಭರತನಾಟ್ಯ ಕಲಾವಿದೆ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

ಅಲ್ಲದೇ ಅತಿ ಕಿರಿಯ ವಯಸ್ಸಿನ ಭರತನಾಟ್ಯ ನೃತ್ಯಗಾರ್ತಿ ಎಂದು ತಮಿಳುನಾಡಿನ ಚೆನ್ನೈ ಯೂನಿವರ್ಸಲ್ ಅಚೀ ವರ್ಸ್ ಬುಕ್ ಆಫ್ ರೆಕಾರ್ಡ್ ಮತ್ತು ಫ್ಯೂಚರ್ ಕಲಾಂ ಬುಕ್ ಆಫ್ ರೆಕಾರ್ಡ್ ನಲ್ಲಿ ಈ ಪುಟಾಣಿ ಹೆಸರು ಸೇರಿಸಲಾಗಿದೆ. ಇತ್ತೀಚಿಗೆ ಗೋಲ್ಡನ್ ಬುಕ್ ಆಫ್ ವಲ್ಡರ್ ರೆಕಾರ್ಡ್ಸ್ ಪಟ್ಟಿಯಲ್ಲಿಯೂ ತನ್ನ ಹೆಸರನ್ನು ದಾಖಲಿಸಿದ್ದಾಳೆ.

ಅತಿ ಕಿರಿದಾದ ವಯಸ್ಸಿನಲ್ಲಿ ಹಿರಿದಾದ ಸಾಧನೆ ಮಾಡುತ್ತಾ ಮುನ್ನುಗ್ಗುತ್ತಿರುವ ಮೈತ್ರಿ ಅಭಿನಂದನಾರ್ಹ. ಮೈತ್ರಿಯ ಈ ಹಲವು ಸಾಧನೆಗಳಿಗೆ ಬೆನ್ನೆಲುಬಾಗಿ ನಿರಂತರ ಪ್ರೋತ್ಸಾಹ, ಮಾರ್ಗದರ್ಶನ ನೀಡುತ್ತಿರುವ ಪಾಲಕರು ಹಾಗೂ ಗುರುಗಳ ಕಾರ್ಯ ಮೆಚ್ಚುವಂತಹದ್ದು. ವಿದ್ಯಾಭ್ಯಾಸದಲ್ಲೂ ಮುಂದಿರುವ ಈ ಪುಟಾಣಿ, ಮುಂದೆ ಜಿಲ್ಲಾಧಿಕಾರಿ ಆಗುವ ಮಹಾದಾಸೆ ಹೊಂದಿ ದ್ದಾಳೆ.