Wednesday, 27th November 2024

ನಿಮ್ಮ ಕೈಯಲ್ಲಿದೆ ದಾಂಪತ್ಯದ ಸಂತಸ

ಬಸವನಗೌಡ ಹೆಬ್ಬಳಗೆರೆ ಚನ್ನಗಿರಿ

ಮದುವೆಯಾದ ನಂತರ ನೆಮ್ಮದಿಯಿಂದ ಜೀವಿಸುವುದು ಒಂದು ಕಲೆ. ಕೆಲವರಿಗೆ ಅದು ಸ್ವತಃ ಸಿದ್ಧಿಸಿರುತ್ತದೆ, ಕೆಲವರು ಅದನ್ನು ಕಲಿಯಬೇಕು. ದಾಂಪತ್ಯದಲ್ಲಿ ನೆಮ್ಮದಿಯನ್ನು ಕಾಣಲು ಕೆಲವು ಟಿಪ್ಸ್‌ ಇಲ್ಲಿವೆ.

ಒಬ್ಬ ಸಿರಿವಂತ ವ್ಯಕ್ತಿ ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ಒಂದು ಮನೋರೋಗಿಗಳ ಆಸ್ಪತ್ರೆಗೆ ಹೋದನಂತೆ. ಅಲ್ಲಿ ಒಬ್ಬ ರೋಗಿಯೊಬ್ಬ ‘ರೀಟಾ, ರೀಟಾ!’ ಎಂದು ಹೇಳುತ್ತಿದ್ದನಂತೆ.

ಇದನ್ನು ನೋಡಿದ ಸಿರಿವಂತ ಯಾಕೆ? ಎಂದು ಪ್ರಶ್ನಿಸಲು, ಇವನು ರೀಟಳೆಂಬ ಹುಡುಗಿಯನ್ನು ಪ್ರೀತಿಸುತ್ತಿದ್ದ, ಆದರೆ,
ಅವಳು ಇವನಿಗೆ ಕೈಕೊಟ್ಟು ಅನ್ಯರನ್ನು ವರಿಸಿದಳು, ಅದಕ್ಕೆ ಹೀಗೆ ಆಗಿದ್ದಾನೆ ಎಂದು ತಿಳಿಯಿತು. ಶ್ರೀಮಂತ ವ್ಯಕ್ತಿ ಮುಂದೆ ಸಾಗಲು ಇನ್ನೊಬ್ಬನೂ ಸಹ, ‘ರೀಟಾ, ರೀಟಾ!’ ಎಂದು ಅಳುತ್ತಾ ಕುಳಿತಿದ್ದನಂತೆ.

ಆಶ್ಚರ್ಯವಾದ ಸಿರಿವಂತ ಅವನ ಬಗ್ಗೆಯೂ ವಿಚಾರಿಸಲು, ಇವನೇ ಈ ಹಿಂದಿನ ರೋಗಿಯು ಕೂಗುತ್ತಿದ್ದ ರೀಟಾಳನ್ನು ಮದುವೆ
ಮಾಡಿಕೊಂಡ ವ್ಯಕ್ತಿ ಎಂದು ತಿಳಿದುಬಂತು! ಕುತೂಹಲಕ್ಕಾಗಿ ಹೆಣೆದ ಕಥೆ ಇದಾದರೂ ಜೀವನದ ಸಂಕೀರ್ಣ ವ್ಯವಸ್ಥೆಯಲ್ಲಿ ಹೀಗಾಗುವುದುಂಟು. ದಾಂಪತ್ಯದಲ್ಲಿ ಅನ್ಯೋನ್ಯತೆ ಎಂಬ ಸ್ಥಿತಿಯನ್ನು ಸಾಧಿಸಲು ಸಾಕಷ್ಟು ತಾಳ್ಮೆ, ತಿಳಿವಳಿಕೆ ಬೇಕು. ಕೆಲವರು
ಪ್ರೀತಿಸಿ ಮದುವೆ ಆದರೂ ತಮ್ಮ ದಾಂಪತ್ಯದಲ್ಲಿ ಸುಖ ಜೀವನವನ್ನು ಕಂಡಿರುವುದಿಲ್ಲ.

ಕೆಲವರು ತಮ್ಮ ಸಂಗಾತಿಯ ಬಗ್ಗೆ ದೂರುತ್ತಾ, ಕೊರಗುತ್ತಾ ಜೀವನ ಕಳೆಯುವುದುಂಟು. ಮದುವೆಯಾದ ಮಾತ್ರಕ್ಕೆ
ಸಂತೋಷ, ಸುಖ ಸಿಗೋಲ್ಲ! ಔಷಧಿ ಸೇವಿಸಿದರೇನೇ ರೋಗ ಗುಣವಾಗೋದು, ಪುಸ್ತಕ ಓದಿದರೇನೇ ಜ್ಞಾನ ಸಿಗೋದು. ದಾಂಪತ್ಯ  ಜೀವನದಲ್ಲಿ ನೆಮ್ಮದಿ ಕಾಣುವ ಅಷ್ಟಮಾರ್ಗಗಳ ಬಗ್ಗೆ ತಿಳಿಯೋಣ.

1) ಅಹಂಕಾರ ಬೇಡ
ಇಂದಿನ ದುಬಾರಿ ಜೀವನದಲ್ಲಿ ಗಂಡ ಹೆಂಡತಿ ಇಬ್ಬರೂ ಪರಸ್ಪರ ಸಹಕಾರದಿಂದ ಮನೆಗೆಲಸವನ್ನು ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ‘ಕುಟುಂಬವನ್ನು ಸಾಕುತ್ತಿರುವನು ನಾನೇ, ನಾನೇ ಸಂಪಾದ್ನೆ ಮಾಡ್ತಾ ಇರೋದು’ ಎಂದು ಇಬ್ಬರಲ್ಲಿ ಯಾರೊಬ್ಬರೂ ಅಹಂಕಾರ ಪಟ್ಟರೆ ಅದೇ ಮುನಿಸಿಗೆ ಬುನಾದಿ. ಗಂಡ ಹೆಂಡತಿ ಮಧ್ಯೆ ಸಂಬಳದ ವಿಷಯವಾಗಿಯೋ, ತಮ್ಮ ಪ್ರತಿಭೆಯ ವಿಷಯವಾಗಿಯೋ, ವಿದ್ಯಾರ್ಹತೆಯ ವಿಷಯವಾಗಿಯೋ ಅಹಂಕಾರ ಬರಬಾರದು. ಒಬ್ಬರು ಇನ್ನೊಬ್ಬರನ್ನು ಗೌರವಿಸುವ ಮನೋಸ್ಥಿತಿ ಇರಬೇಕು.

2) ಮುಕ್ತವಾಗಿ ಮಾತಾಡಿ
ಕೆಲವರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು, ಕಛೇರಿಯ ವಿಷಯಗಳನ್ನು ಸ್ನೇಹಿತರೊಂದಿಗೆ ಹಂಚಿಕೊಂಡಷ್ಟು ತಮ್ಮ
ಸಂಗಾತಿಯೊಂದಿಗೆ ಹಂಚಿಕೊಳ್ಳುವುದಿಲ್ಲ! ಕಾರಣ ಕೇಳಿದರೆ ಸಂಗಾತಿಗೆ ತಮ್ಮ ಕಛೇರಿಯ ವಿಷಯಗಳು ಅರ್ಥವಾಗುವುದಿಲ್ಲ ಎಂದು ಉತ್ತರಿಸುತ್ತಾರೆ. ಇದರಿಂದಾಗಿ ಅವರ ಬೇಸರಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ. ಎಲ್ಲಾ ವಿಷಯಗಳ ಕುರಿತು
ಕುರಿತು ಸಂಗಾತಿಯೊಂದಿಗೆ ಹಂಚಿಕೊಂಡರೆ ಒಳಿತು.

3) ಪ್ರತಿಯೊಬ್ಬರೂ ಭಿನ್ನ
ಜಗದಲ್ಲಿ ಒಬ್ಬರಂತೆ ಮತ್ತೊಬ್ಬರಿಲ್ಲ. ಭಿನ್ನ ಭಿನ್ನ ಆಲೋಚನೆ, ಅಭಿರುಚಿ ಹೊಂದಿರುತ್ತಾರೆ. ಗಂಡ ಹೆಂಡತಿಯೂ ಇದಕ್ಕೆ
ಹೊರತಲ್ಲ. ಗಂಡನಿಗೆ ಹೊರಗಡೆ ತಿರುಗುವುದು ಇಷ್ಟವಾದರೆ, ಹೆಂಡತಿಗೆ ಮನೆಯಲ್ಲಿರುವುದು ಇಷ್ಟವಾಗಬಹುದು. ಇದಕ್ಕೆ ತದ್ವಿರುದ್ಧ ಇದ್ದರೂ ಇರಬಹುದು. ಆಗ ಸಂಗಾತಿಗೆ ಇಷ್ಟವಿಲ್ಲದ ವಿಷಯಕ್ಕೆ ಒತ್ತಡ ಹಾಕದೇ ಅವರ ಪಾಡಿಗೆ ಅವರನ್ನು ಇರಲು ಬಿಡಬೇಕು.

4) ಸಂತೋಷ ಕಲ್ಪಿಸಿಕೊಡಿ
ನಮ್ಮನ್ನು ಕೈ ಹಿಡಿದವರಿಂದ ಸಂತೋಷವನ್ನು ಬಯಸದೆಯೇ ನಾವೇ ಸಂತೋಷ ಕೊಡುವಂತವರಾಗಬೇಕು. ನಮ್ಮ ಸಂಗಾತಿಯ ಆಸೆ ಆಕಾಂಕ್ಷೆಗ೦ಳಿಗೆ ಬೆಲೆ ಕೊಡಬೇಕು. ಆಗ ಮಾತ್ರ ಅವರು ನಿಮ್ಮನ್ನು ಹೆಚ್ಚೆಚ್ಚು ಇಷ್ಟಪಡಲು ಶುರು ಮಾಡುತ್ತಾರೆ. ನಮ್ಮ ಸಂಗಾತಿಯು ನಾವು ಬರುವುದನ್ನು ಕಾಯುತ್ತಾ ಇರುವಂತಾಗಬೇಕೇ ಹೊರತು ಮನೆಗೆ ಯಾಕಾದ್ರೂ ಬರುತ್ತಾರೆ ಎನ್ನವಂತಾಗಬಾರದು!

5) ವ್ಯಕ್ತಿಗೆ ಬೆಲೆ ಕೊಡಬೇಕು
ಒಬ್ಬನು ದುಬಾರಿ ಬೆಲೆಯ ಮೊಬೈಲನ್ನು ಖರೀದಿಸಿ ತಂದ ನಂತೆ. ಹೆಂಡತಿ ಅದನ್ನು ನೋಡುವಾಗ, ಕೈ ಜಾರಿ ಅದು
ಬಿದ್ದು ಹಾಳಾಯಿತಂತೆ. ಆಗ ಗಂಡ ಕೋಪೋದ್ರಿಕ್ತನಾಗಿ ಅವಳ ಕೆನ್ನೆಗೆ ಜೋರಾಗಿ ಬಾರಿಸಲು, ಅವಳ ಶ್ರವಣ ಶಕ್ತಿಯೇ ಕಡಿಮೆಯಾಯಿತಂತೆ! ಇಂದು ಅನೇಕರು ವಸ್ತುಗಳನ್ನು ಪ್ರೀತಿಸುತ್ತಾರೆ, ವ್ಯಕ್ತಿಗಳನ್ನು ಉಪಯೋಗಿಸಿಕೊಳ್ಳುತ್ತಾರೆ! ಇದರ ಬದಲು ವಸ್ತುಗಳಿರುವುದು ಉಪಯೋಗಿಸಲು, ವ್ಯಕ್ತಿಗಳಿರುವುದು ಪ್ರೀತಿಸಲು ಎಂಬುದನ್ನು ಅರಿಯಬೇಕು. ಸಂಗಾತಿಯ ವ್ಯಕ್ತಿತ್ವಕ್ಕೆ ಬೆಲೆ ಕೊಡಬೇಕು. ಅವರನ್ನು ಪ್ರೀತಿಸಬೇಕು. ಅವರ ಮುಂದೆ ಬೆಲೆ ಬಾಳುವ ವಸ್ತುಗಳೂ ಗೌಣ!

6) ವಿಶೇಷ ದಿನಗಳನ್ನು ನೆನಪಿಡಿ
ದಂಪತಿಗಳಾದವರು ತಮ್ಮ ಸಂಗಾತಿಯ ಹುಟ್ಟು ಹಬ್ಬ, ಮಕ್ಕಳ ಹುಟ್ಟಿದ ದಿನಗಳನ್ನು ನೆನಪಿನಲ್ಲಿಟ್ಟುಕೊಂಡು ಆ ದಿನ ತಮ್ಮ ಶಕ್ತಿಗನುಸಾರವಾಗಿ ಗಿಫ್ಟ್‌ ಗಳನ್ನು ಕೊಡಬೇಕು. ವಿಶ್ ಮಾಡುವವರಲ್ಲಿಯೂ ತಾವೇ ಮೊದಲಿಗರಾಗಬೇಕು. ಕೆಲಸದ ಒತ್ತಡದಲ್ಲಿ ಇವನ್ನು ಮರೆಯಬಾರದು.

7) ತ್ಯಾಗದ ಅರಿವಿರಲಿ
ದಾಂಪತ್ಯದಲ್ಲಿ ಇಬ್ಬರೂ ತ್ಯಾಗಮಯಿಗಳಾಗಿರಬೇಕು. ಒಬ್ಬರು ಮತ್ತೊಬ್ಬರಿಗಾಗಿ ಮಾಡಿದ ತ್ಯಾಗವನ್ನು ನೆನಪಿನಲ್ಲಿಟ್ಟು ಕೊಳ್ಳಬೇಕು. ನಮ್ಮ ಕಷ್ಟದ ದಿನಗಳಲ್ಲಿ ಸಹಕರಿಸಿದ ಸಂಗಾತಿಯನ್ನು ಕೈ ಬಿಡಬಾರದು. ತ್ಯಾಗವು ಪ್ರೀತಿಯ ಬುನಾದಿ ಎನಿಸಬೇಕು.

8) ಬಾಹ್ಯ ಸೌಂದರ್ಯ ಕ್ಷಣಿಕ 
ಬಾಹ್ಯ ಸೌಂದರ್ಯವು ಶಾಶ್ವತವಲ್ಲ. ಮದುವೆಯಾದಾಗ ಇದ್ದ ಸೌಂದರ್ಯ ನಂತರ ಕಡಿಮೆಯಾಗಬಹುದು. ಮಕ್ಕಳಾಗು ತ್ತಿದ್ದಂತೆ ಹಾರ್ಮೋನ್ ವ್ಯತ್ಯಾಸದಿಂದಾಗಿ ಅವರು ಮೊದಲಿನಷ್ಟು ಸುಂದರವಾಗಿ ಇಲ್ಲದಿರಬಹುದು. ಇದನ್ನೇ ಕಾರಣವಾಗಿಟ್ಟು ಕೊಂಡು ಬೇಸರ ಮಾಡಬಾರದು. ಸಂಗಾತಿಯ ಆಂತರಿಕ ಸೌಂದರ್ಯಕ್ಕೆ ಬೆಲೆ ಕೊಡಬೇಕು. ನಮ್ಮ ದಾಂಪತ್ಯ ಜೀವನವನ್ನು ಸುಂದರಗೊಳಿಸಲು ಈ ನಿಯಮಗಳನ್ನು ಓದಿ ತಿಳಿದುಕೊಂಡರಷ್ಟೇ ಸಾಲದು!

ಜೀನವದಲ್ಲಿ ಇವನ್ನು ಅನ್ವಯಿಸಿಕೊಳ್ಳಲು ಪ್ರಯತ್ನಿಸಬೇಕು. ಒಬ್ಬನು ಕೈಯಲ್ಲಿ ಪಕ್ಷಿಯನ್ನಿಟ್ಟುಕೊಂಡು ‘ಅದು ಬದುಕಿದೆಯಾ
ಸತ್ತಿದೆಯಾ?’ ಎಂದು ಪ್ರಶ್ನಿಸಿದನಂತೆ. ಆಗ ಇನ್ನೊಬ್ಬನು ‘ಅದರ ಜೀವ ನಿನ್ನ ಕೈಯಲ್ಲೇ ಇದೆ’ ಎಂದನಂತೆ! ಇದೇ ರೀತಿ ದಾಂಪತ್ಯದ ಸುಂದರ ಜೀವನ ನಿಮ್ಮ ಕೈಯಲ್ಲೇ ಇದೆ.