ದಾಸ ಶ್ರೇಷ್ಠರಲ್ಲಿ ಒಬ್ಬರಾದ ಜಗನ್ನಾಥದಾಸರ ಜೀವನ ಚರಿತ್ರೆ ಬೆಳ್ಳಿ ತೆರೆಗೆ ಬರಲಿದೆ. ಸಿನಿಮಾದ ಜತೆಗೆ ಧಾರಾವಾಹಿಯ
ರೂಪದಲ್ಲಿಯೂ ಜಗನ್ನಾಥ ದಾಸರ ಚರಿತ್ರೆ ಪ್ರಸಾರವಾಗಲಿದೆ.
ಮಂತ್ರಾಲಯದ ರಾಘವೇಂದ್ರ ಸ್ವಾಮಿ ಸನ್ನಿಧಾನದಲ್ಲಿ ಚಿತ್ರದ ಮಹೂರ್ತ ನೆರವೇರಿದೆ. ಮಂತ್ರಾಲಯ ಮಠಾಧೀಶರಾದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮಿಗಳು ಚಿತ್ರದ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡುವುದರ ಮೂಲಕ ಚಿತ್ರ ಹಾಗೂ ಧಾರಾವಾಹಿ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಚಿತ್ರತಂಡಕ್ಕೆ ಹಾಗೂ ಕಲಾವಿದರಿಗೆ ಆಶೀರ್ವದಿಸಿ, ಶುಭಕೋರಿದರು.
ಮಾತಾಂಬುಜಾ ಮೂವೀಸ್ ಲಾಂಛನದಲ್ಲಿ ಮಧುಸೂದನ್ ಹವಾಲ್ದಾರ್ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ‘ಜಗನ್ನಾಥ ದಾಸರು’ ಚಿತ್ರ ಮೂಡಿಬರುತ್ತಿದೆ. ‘ಜಗನ್ನಾಾಥದಾಸರು’ ರಾಘವೇಂದ್ರ ಸ್ವಾಮಿಗಳ ಅನುಯಾಯಿಗಳು. ಅವರ ಬಾಲ್ಯ ಜೀವನ, ಯೌವ್ವನ ಹಾಗೂ ಆಧ್ಯಾತ್ಮಿಕ ಜೀವನದ ಕುರಿತಂತೆ ರಚಿಸಲಾಗಿರುವ ಕಥಾಸಾರವನ್ನು ಈ ಚಿತ್ರದ ಮೂಲಕ ಹೇಳ ಹೊರಟಿದ್ದಾರೆ ನಿರ್ದೇಶಕ ಮಧುಸೂದನ್.
ಪುರಂದರದಾಸರು, ಕನಕದಾಸರು, ರಾಘವೇಂದ್ರ ಸ್ವಾಮಿಗಳ ಕುರಿತಂತೆ ಚಲನಚಿತ್ರಗಳು ಈಗಾಗಲೇ ನಿರ್ಮಾಣವಾಗಿವೆ. ಆದರೆ ಮಹಾನ್ ಕೃತಿಗಳನ್ನು ರಚಿಸಿದಂತಹ ‘ಜಗನ್ನಾಥದಾಸರ’ ಜೀವನ ಕುರಿತಂತೆ ಯಾರೂ ಸಹ ಚಲನಚಿತ್ರ ಮಾಡಿಲ್ಲ. ಈ ಕುರಿತಂತೆ ಜೆ.ಎಂ.ಪ್ರಹ್ಲಾದ್ ಅವರ ಜತೆ ಚರ್ಚಿಸಿ ಸಂಪೂರ್ಣ ಚಿತ್ರಕಥೆಯನ್ನು ಸಿದ್ದಪಡಿಸಿಕೊಂಡು, ಅದಕ್ಕೆ ಸರಿಯಾದ ಪಾತ್ರಧಾರಿ ಗಳನ್ನು ಹುಡುಕಿ ಈಗ ಚಿತ್ರೀಕರಣಕ್ಕೆ ಹೊರಟಿದ್ದೇವೆ.
ರಾಯರ ಮಠದಲ್ಲಿ ಮೂರು ದಿನಗಳ ಕಾಲ ಚಿತ್ರೀಕರಿಸಿ, ಬಳಿಕ ಬೆಂಗಳೂರಿನ ಹನುಮಂತನಗರದಲ್ಲಿ ಸಂಪೂರ್ಣ ಚಿತ್ರವನ್ನು ಸುಮಾರು 90 ದಿನಗಳ ಕಾಲ ಚಿತ್ರೀಕರಿಸಬೇಕೆಂದು ನಿರ್ಧರಿಸಿದ್ದೇವೆ. ಅಂದಿನ ಕಾಲದ ಗತವೈಭವವನ್ನು ಪ್ರೇಕ್ಷಕರಿಗೆ ಕಟ್ಟಿ ಕೊಡುವ ನಿಟ್ಟಿನಲ್ಲಿ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿಕೊಳ್ಳುತ್ತಿದ್ದೇವೆ ಎನ್ನುತ್ತಾರೆ ನಿರ್ದೇಶಕರು.
ನೀನಾಸಂ ಪ್ರತಿಭೆ ಶರತ್ ಜೋಷಿ ‘ಜಗನ್ನಾಥದಾಸರ’ ಪಾತ್ರದಲ್ಲಿ ಬಣ್ಣಚ್ಚುತ್ತಿದ್ದಾರೆ. ಗವಿಸಿದ್ದಯ್ಯ ರಾಘವೇಂದ್ರಸ್ವಾಮಿಗಳ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿಠಲನ ಪಾತ್ರದಲ್ಲಿ ಅಜಿತ್ ಕುಮಾರ್ ಅಭಿನಯಿಸುತ್ತಿದ್ದಾರೆ.