ಪ್ರಶಾಂತ್.ಟಿ.ಆರ್
ಚಂದನವನದಲ್ಲಿ ವಿಭಿನ್ನ ಕಥೆಯ ಹಲವು ಚಿತ್ರಗಳು ತೆರೆಗೆ ಬರುತ್ತಿವೆ. ಅಂತಹ ಚಿತ್ರಗಳಲ್ಲಿ ‘ಕತ್ಲೆಕಾಡು’ ಚಿತ್ರವೂ ಒಂದು. ಚಿತ್ರದ ಶೀರ್ಷಿಕೆ ಕೇಳಿದಾಕ್ಷಣ ಇದೊಂದು ಹಾರರ್ ಚಿತ್ರ ಅನ್ನಿಸಬಹುದು. ಇನ್ನು ಸಿನಿಮಾದ ಟ್ರೇಲರ್ ನೋಡಿದರೆ ಇದು ಪಕ್ಕಾ ಕ್ರೈಂ, ಥ್ರಿಲ್ಲರ್ ಕಥೆಯ ಚಿತ್ರವೇ ಎನ್ನಿಸುತ್ತದೆ. ಆದರೆ ಅದಕ್ಕೂ ಹೊರತಾದ ರೋಚಕ ಸ್ಟೋರಿ ಈ ಚಿತ್ರದ ಕಥೆಯಲ್ಲಿದೆ.
ಟೈಟಲ್ ಹೇಳುವಂತೆ ಇದು ಕಾಡಿನಲ್ಲಿ ನಡೆಯುವ ಕಥೆಯಾಗಿದೆ. ವಿಶೇಷ ಎಂದರೆ ಇಲ್ಲಿ ಕಾಡಿನ ರಕ್ಷಣೆಯ ಕುರಿತ ಸಾಮಾಜಿಕ
ಸಂದೇಶವೂ ಇದೆ. ಕಾಡಿನ ರಕ್ಷಣೆ ಹೇಗೆ ಎಂಬುದನ್ನು ಚಿತ್ರ ನೋಡಿದ ಮೇಲೆಯೇ ತಿಳಿಯುತ್ತದೆ. ಇಂದು ಎಲ್ಲೆಡೆ ಕಾಡು
ಬರಿದಾಗುತ್ತಿದೆ. ಅರಣ್ಯಪ್ರದೇಶ ಉಳ್ಳವರ ಪಾಲಾಗುತ್ತಿದೆ. ಈ ಕಟುಸತ್ಯ ತಿಳಿದಿದ್ದರೂ, ಕಾಡುಗಳ್ಳಿರಿಗೆ ಲಂಗು ಲಗಾಮು
ಇಲ್ಲದಂತಾಗಿದೆ.
ಹೀಗಾದರೆ ವನ ಸಂರಕ್ಷಣೆಗೆ ಹೇಗೆ, ಕಾಡೇ ಇಲ್ಲದಿದ್ದರೆ ಕಾಡಿನ ಪ್ರಾಣಿಗಳ ಪಾಡೇನು ಎಂಬ ದೊಡ್ಡ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಹಾಗಾದರೆ ಅರಣ್ಯ ಸಂರಕ್ಷಣೆ ಸಾಧ್ಯವಿಲ್ಲವೆ. ಜವಾ ಬ್ಧಾರಿಯುತ ವ್ಯಕ್ತಿಗಳಾಗಿ ನಾವು ಹೇಗೆ ವನಸಂರಕ್ಷಣೆ ಮಾಡಬಹುದು ಎಂಬ ಸಂದೇಶವನ್ನು ‘ಕತ್ಲೆಕಾಡು’ ಹೊತ್ತು ಬಂದಿದೆ. ಅಷ್ಟಕ್ಕೂ ಆ ಸಂದೇಶವಾದರೂ ಏನು ಎಂಬ ಪ್ರಶ್ನೆಗೆ ತೆರೆಯಲ್ಲಿಯೇ ಉತ್ತರ ಸಿಗಲಿದೆ.
ನಿಗೂಢತೆಯ ವನ:ಅದು ‘ಕತ್ಲೆ ಕಾಡು’. ನಿಗೂಢತೆಯನ್ನು ಒಡಲಲ್ಲಿ ಅಡಗಿಸಿಕೊಂಡ ದಟ್ಟ ವನ. ಈ ಕಾಡಿಗೆ ಬಂದವರು ಮರಳಿ ಹೋಗಲಾರರು ಎಂಬ ವಿಚಾರ ಎಲ್ಲರಲ್ಲೂ ನಡುಕು ಹುಟ್ಟಿಸಿರುತ್ತದೆ. ಹಾಗಾಗಿಯೇ ಅತ್ತ ಯಾರೂ ಸುಳಿಯುವುದಿಲ್ಲ.
ಅಮಾವಾಸ್ಯೆೆ, ಹುಣ್ಣಿಮೆಯಲ್ಲಿ ವಿಚಿತ್ರ ಘಟನೆಗಳು ನಡೆಯುತ್ತವೆ. ಇದಕ್ಕೆ ದೆವ್ವ ಭೂತಗಳೇ ಕಾರಣ ಎಂಬ ಮೂಢನಂಬಿಕೆ ಸ್ಥಳೀಯರಲ್ಲಿ ಮನೆಮಾಡಿರುತ್ತದೆ.
ಆದರೆ ಅದಕ್ಕೆ ಕಾರಣವೇ ಬೇರೆಯಾಗಿರುತ್ತದೆ. ಹೀಗಿರುವಾಗ ನಗರದ ಮೂವರು ಯುವಕರಿಗೆ ‘ಕತ್ಲೆಕಾಡಿ’ನ ನಿಗೂಢತೆ ಅಚ್ಚರಿ ಮೂಡಿಸುತ್ತದೆ. ಅದನ್ನು ಭೇದಿಸಲೇಬೇಕು ಎಂದು ಹಠ ತೊಟ್ಟು ಕಾನನಕ್ಕೆ ಕಾಲಿಡಲು ನಿರ್ಧರಿಸುತ್ತಾರೆ. ಈ ನಡುವೆ ಮೂವರು
ಯುವತಿಯರು ಕೂಡ ಇವರ ಜತೆಯಾಗುತ್ತಾರೆ. ಅಂತೂ ಕಾಡಿಗೆ ತೆರಳಿದ ಬಳಿಕ ಹಲವು ವಿಚಿತ್ರ ಘಟನೆಗಳು ಇವರನ್ನು ಕಾಡಲು ಶುರು ಮಾಡುತ್ತವೆ. ಅದೆಲ್ಲವನ್ನು ಎದುರಿಸುವ ಈ ತಂಡ, ಕೊನೆಗೂ ಕಾನನದ ನಿಗೂಢತೆಯನ್ನು ಭೇದಿಸುತ್ತದೆಯೇ, ಅಲ್ಲಿ ನಡೆಯುತ್ತಿರುವ ವಿಚಿತ್ರ ಸನ್ನಿವೇಶಕ್ಕೆ ಕಾರಣ ಯಾರು ಎಂಬುದನ್ನು ಹೇಗೆ ಪತ್ತೆ ಹಚ್ಚುತ್ತದೆ ಎಂಬುದನ್ನು ಚಿತ್ರದಲ್ಲಿಯೇ
ನೋಡಬೇಕು ಎನ್ನುತ್ತಾರೆ ನಿರ್ದೇಶಕ ರಾಜು ದೇವಸಂದ್ರ.
ಸಂರಕ್ಷಣೆಯ ಸಂದೇಶ: ನಮ್ಮ ಅರಣ್ಯ ಸಂಪತ್ತನ್ನು ಕಾಯಲು ಅಧಿಕಾರಿಗಳಿರುತ್ತಾರೆ. ಆದರೆ ಕೆಲವೇ ಕೆಲವು ಅಧಿಕಾರಿಗಳು ಪ್ರಾಮಾಣಿಕವಾಗಿ ಕಾಡಿನ ರಕ್ಷಣೆ ಮಾಡುತ್ತಾರೆ. ಕೆಲವರು ಕಾನೂನನ್ನೇ ಗಾಳಿಗೆ ತೂರಿ ಕಾಡಿನ ಸಂಪತ್ತನ್ನು ಕೊಳ್ಳೆ ಹೊಡೆಯು ತ್ತಾರೆ. ಅಂತಹ ದುರುಳರಿಗೆ ಹೇಗೆ ಸೆಡ್ಡು ಹೊಡೆದು, ಕಾಡಿನ ಸಂರಕ್ಷಣೆ ಮಾಡಬಹುದು ಎಂಬುದನ್ನು ಕೂಡ ಚಿತ್ರದಲ್ಲಿ ಹೇಳಲಾಗಿದೆ. ಕಾಡನ್ನು ಸಂರಕ್ಷಿಸುವ ದಕ್ಷ ಅರಣ್ಯಾಧಿಕಾರಿಯಾಗಿ ನಿಯಾಜುದ್ದೀನ್ ಬಣ್ಣಹಚ್ಚಿದ್ದಾರೆ.
ನಟನೆಯಲ್ಲಿ ಆಸಕ್ತಿಯಿದ್ದ ನಿಯಾಜುದ್ದೀನ್ ಈ ಚಿತ್ರಕ್ಕೂ ಬಂಡವಾಳ ಹೂಡಿದ್ದು, ಕಾಡಿನ ಸಂರಕ್ಷಣೆ ಸಾರುವ ನಿಟ್ಟಿನಲ್ಲಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಷ್ಟೇ ಅಲ್ಲ, ಚಿತ್ರದಲ್ಲಿ ಎರಡು ಹಾಡುಗಳಿದ್ದು, ಆ ಹಾಡುಗಳು ಇವರ ದನಿಯಲ್ಲಿಯೇ ಮೂಡಿಬಂದಿವೆ. ಈ ಹಿಂದೆ ‘ಗೋಸಿಗ್ಯಾಂಗ್’, ‘ಅಕ್ಷತೆ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ರಾಜು ದೇವಸಂದ್ರ ಈ
ಬಾರಿ ಕಾಡಿನ ರಕ್ಷಣೆಯ ಸಂದೇಶ ಸಾರುವ ಚಿತ್ರವನ್ನು ತೆರೆಗೆ ತಂದಿದ್ದಾರೆ.
ಮನರಂಜನೆಗೆ ಪೂರಕವಾಗಿ ಅದಕ್ಕೊಂದಿಷ್ಟು, ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳನ್ನು ಹದವಾಗಿ ಬೆರೆಸಿದ್ದಾರೆ. ಚಿತ್ರದಲ್ಲಿ ಕಥೆಯೇ ಪ್ರಧಾನ ವಾಗಿದ್ದು, ಶಿವಾಜಿನಗರ ಲಾಲ್, ಸಜೀವ್ ಕುಮಾರ್, ಕಿರಣ್ ಮಂಗಳೂರು, ಪ್ರಮುಖ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ. ಇವರಿಗೆ ಜತೆಯಾಗಿ ಸಿಂಧೂರಾವ್, ಸಂಹಿತಾ ಷಾ, ಸಿಂಚನಾ ನಟಿಸಿದ್ದಾರೆ.
ಕೋಟ್ಸ್
ಕೌರವ ವೆಂಕಟೇಶ್ ಹಾಗೂ ಅಲ್ಟಿಮೇಟ್ ಶಿವು ಅವರ ಸಾಹಸ ನಿರ್ದೇಶನವಿದೆ. ಚಿತ್ರದಲ್ಲಿ ಹಾರರ್, ಸಸ್ಪೆನ್ಸ್ ಎಲ್ಲವೂ
ಇದೆ. ಮನರಂಜನಯೇ ಚಿತ್ರದ ಉದ್ದೇಶವಾಗಿದೆ. ಮೊದಲಾರ್ಧದಲ್ಲಿ ಪ್ರತಿ ಹಂತದಲ್ಲೂ ಕುತೂಹಲ ಕೆರಳಿಸುವ ಸನ್ನಿವೇಶ ಗಳಿವೆ. ಒಬ್ಬ ಅರಣ್ಯಾಧಿಕಾರಿ ಪ್ರಾಮಾಣಿಕವಾಗಿ ಹೇಗೆ ಅರಣ್ಯ ಸಂಪತ್ತನ್ನು ರಕ್ಷಿಸಬಹುದು. ಅದಕ್ಕೆ ನಾಗರೀಕರಾದ
ನಾವೆಲ್ಲರೂ ಹೇಗೆ ಸಾಥ್ ನೀಡಬೇಕು ಎಂಬುದನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ.
– ರಾಜು ದೇವಸಂದ್ರ ನಿರ್ದೇಶಕ
ಈ ಹಿಂದೆಯೂ ಕೆಲವು ಚಿತ್ರಗಳಲ್ಲಿ ನಟಿಸಿದ್ದೇನೆ. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಚಿತ್ರವನ್ನು ಮಾಡಬೇಕು ಎಂಬುದು ನನ್ನ ಬಹುದಿನಗಳ ಕನಸಾಗಿತ್ತು. ಅದು ಈ ಚಿತ್ರದ ಮೂಲಕ ಈಡೇರಿದೆ. ಚಿತ್ರದಲ್ಲಿ ನನ್ನದು ಅರಣ್ಯಾಧಿಕಾರಿಯ ಪಾತ್ರ. ಅಂದುಕೊಂಡಂತೆ ಚಿತ್ರ ಮೂಡಿಬಂದಿದೆ. ಚಿತ್ರದಲ್ಲಿ ಗಾಯನಕ್ಕೂ ನನಗೆ ಅವಕಾಶ ಸಿಕ್ಕಿದ್ದು ಸಂತಸ ತಂದಿದೆ.
-ನಿಯಾಜುದ್ದೀನ್ ನಿರ್ಮಾಪಕ